ಐಐಟಿ ಖರಗ್ಪುರ ವಿದ್ಯಾರ್ಥಿ ಫೈಝಾನ್ ಅಹ್ಮದ್ ಸಾವು ʼನರಹತ್ಯೆʼ: ಎರಡನೇ ಮರಣೋತ್ತರ ಪರೀಕ್ಷೆ ವರದಿ

Update: 2023-06-07 17:20 GMT

ಕೋಲ್ಕತಾ: ಐಐಟಿ ಖರಗ್ಪುರ ವಿದ್ಯಾರ್ಥಿ ಫೈಝನ್ ಅಹ್ಮದ್ ಅವರ ಸಾವು ತಲೆಯ ಹಿಂಬಾಗಕ್ಕೆ ಆಗಿರುವ ಗಾಯದಿಂದ ಸಂಭವಿಸಿರುವ ಸಾಧ್ಯತೆ ಇದೆ ಎಂದು ಎರಡನೇ ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿದೆ.

ಫೈಝನ್ ಅಹ್ಮದ್ ಅವರ ಮೃತದೇಹವನ್ನು ಹೊರ ತೆಗೆಯಲು ಹಾಗೂ ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸಲು ಆದೇಶಿಸಿದ್ದ ಕೋಲ್ಕತ್ತಾ ಉಚ್ಚ ನ್ಯಾಯಾಲಯ, ಮೊದಲ ಮರಣೋತ್ತರ ಪರೀಕ್ಷೆಯು ಫೈಝನ್ ಅಹ್ಮದ್ ಅವರ ತಲೆಯ ಹಿಂಭಾಗಕ್ಕೆ ಆದ ಗಾಯವನ್ನು ಗುರುತಿಸದೇ ಇರುವುದು ಅಚ್ಚರಿ ಉಂಟು ಮಾಡಿದೆ ಎಂದು ಹೇಳಿದೆ.

ಫೈಝನ್ ಅಹ್ಮದ್ ಅವರ ಮೃತದೇಹ 2022 ಅಕ್ಟೋಬರ್ 14ರಂದು ಹಾಸ್ಟೆಲ್ ಕೊಠಡಿಯೊಂದರಲ್ಲಿ ಪತ್ತೆಯಾಗಿತ್ತು. ಬಳಿಕ ಅವರ ತಂದೆ ತನ್ನ ಪುತ್ರನ ಸಾವಿನ ಪ್ರಕರಣವನ್ನು ತನಿಖೆ ನಡೆಸಲು ವಿಶೇಷ ತನಿಖಾ ತಂಡ ರೂಪಿಸುವಂತೆ ಉಚ್ಚ ನ್ಯಾಯಾಲಯವನ್ನು ಕೋರಿದ್ದರು. ಮೇ 27ರಂದು ನಡೆಸಲಾದ ಫೈಝನ್ ಅಹ್ಮದ್ ಅವರ ಎರಡನೇ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ವಿಧಿವಿಜ್ಞಾನ ತಜ್ಞರು, ‘‘ತಲೆಯ ಹಿಂಭಾಗಕ್ಕೆ ಆದ ಗಾಯದಿಂದ ಸಾವು ಸಂಭವಿಸಿರುವ ಸಾಧ್ಯತೆ ಇದೆ.

ಇದು ನರಹತ್ಯೆಯ ಸ್ವರೂಪದಲ್ಲಿದೆ’’ ಎಂದು ಹೇಳಿದ್ದಾರೆ. ಈ ಪ್ರಮುಖ ಆಯಾಮ ಮೊದಲನೇ ಮರಣೋತ್ತರ ಪರೀಕ್ಷೆಯಲ್ಲಿ ಗೈರಾಗಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ರಾಜಶೇಖರ ಮಹಾಂತ, ಯಾವ ಸಂದರ್ಭದಲ್ಲಿ ಈ ಲೋಪ ಸಂಭವಿಸಿದೆ ಎಂಬ ಬಗ್ಗೆ ತನಿಖೆ ನಡೆಸುವಂತೆ ವಿಧಿವಿಜ್ಞಾನ ಪ್ರಯೋಗಾಲಯ (ಸಿಎಫ್ಎಸ್ಎಲ್)ದ ನಿರ್ದೇಶಕ ರಾಜರಥ್ ಅವರಿಗೆ ತಿಳಿಸಿದೆ. ಇದರಲ್ಲಿ ಪೊಲೀಸರು ಹಾಗೂ ತನಿಖಾಧಿಕಾರಿಗಳು ಉತ್ತರಿಸಬೇಕಾದ ಗಂಭೀರ ಪ್ರಶ್ನೆಗಳಿವೆ ಎಂದು ಅಭಿಪ್ರಾಯಿಸಿದ ನ್ಯಾಯಾಲಯ, ಈ ಪ್ರಕರಣವನ್ನು ಈಗ ಕೊಲೆ ಪ್ರಕರಣವೆಂದು ಪರಿಗಣಿಸಿ ತನಿಖೆ ನಡೆಸಬೇಕು ಎಂದು ಹೇಳಿದೆ.

Similar News