ಇಯು ಹವಾಮಾನ ಶೃಂಗಸಭೆ ಆಯೋಜಿಸುವುದಕ್ಕೆ ತಡೆ: ರಶ್ಯ ನಿರ್ಧಾರ

Update: 2023-06-08 15:19 GMT

ಮಾಸ್ಕೋ : ಮುಂದಿನ ವರ್ಷ ನಡೆಯಲಿರುವ ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಹವಾಮಾನ ಶೃಂಗಸಭೆಯನ್ನು ಯುರೋಪಿಯನ್ ಯೂನಿಯನ್(ಇಯು) ದೇಶಗಳು ಆಯೋಜಿಸದಂತೆ ತಡೆಯಲು ರಶ್ಯ ನಿರ್ಧರಿಸಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.

ಇದರಿಂದ ಶೃಂಗಸಭೆಯ ಆತಿಥ್ಯ ವಹಿಸಲು ಉತ್ಸುಕತೆ ತೋರಿರುವ ಇಯು ಸದಸ್ಯ ಬಲ್ಗೇರಿಯಾಕ್ಕೆ ಹಿನ್ನಡೆಯಾಗಿದೆ. ಅಝರ್ಬೈಜಾನ್ ಮತ್ತು ಅರ್ಮೇನಿಯಾ ದೇಶಗಳೂ ಶೃಂಗಸಭೆ ಆಯೋಜನೆಗೆ ಸ್ಪರ್ಧೆಯಲ್ಲಿವೆ. ಇದೀಗ ಈ ವಿಷಯದಲ್ಲಿ ರಶ್ಯ ಮಧ್ಯಪ್ರವೇಶಿಸಿರುವುದು, ಉಕ್ರೇನ್ ಯುದ್ಧದ ನಂತರದ ಭೌಗೋಳಿಕ ರಾಜಕೀಯ ವಿವಾದಗಳು ಹವಾಮಾನ ಬದಲಾವಣೆಯನ್ನು ಎದುರಿಸುವ ಜಾಗತಿಕ ಪ್ರಯತ್ನಗಳನ್ನು ಹೇಗೆ ಸಂಕೀರ್ಣಗೊಳಿಸುತ್ತದೆ ಎಂಬುದನ್ನು ತೋರಿಸುತ್ತದೆ.

ಈ ಬೆಳವಣಿಗೆಯು ಶೃಂಗಸಭೆಯ ಆತಿಥೇಯ ರಾಷ್ಟ್ರದ ಆಯ್ಕೆಯನ್ನು ವಿಳಂಬಗೊಳಿಸುವ, ಶೃಂಗಸಭೆ ಆಯೋಜನೆಯ ಸಿದ್ಧತೆಗೆ ಕಡಿಮೆ ಸಮಯಾವಕಾಶದ ಸಮಸ್ಯೆಗೆ ಕಾರಣವಾಗಲಿದೆ.

ವಿಶ್ವಸಂಸ್ಥೆಯ ಉಸ್ತುವಾರಿಯಲ್ಲಿ ನಡೆಯುವ ಹವಾಮಾನ ಶೃಂಗಸಭೆಯನ್ನು ಆಯೋಜಿಸುವುದರಿಂದ ಆತಿಥೇಯ ದೇಶಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಟೆಯ ಜತೆಗೆ, ಹವಾಮಾನ ಬದಲಾವಣೆಯನ್ನು ಎದುರಿಸಲು ದೇಶೀಯ ಪ್ರಯತ್ನಗಳನ್ನು ಉತ್ತೇಜಿಸುವ ಅವಕಾಶ ದೊರಕುತ್ತದೆ.

ಯುರೋಪಿಯನ್ ಯೂನಿಯನ್ ಸದಸ್ಯನಲ್ಲದ ಅರ್ಮೇನಿಯಾದ ಉಮೇದುವಾರಿಕೆಗೆ ರಶ್ಯದ ಬೆಂಬಲ ದೊರಕುವ ನಿರೀಕ್ಷೆಯಿದೆ. ಯುರೋಪಿಯನ್ ಯೂನಿಯನ್ ದೇಶವು ಹವಾಮಾನ ಶೃಂಗಸಭೆಯ ಆತಿಥೇಯ ವಹಿಸುವುದಕ್ಕೆ ತನ್ನ ಬೆಂಬಲವಿಲ್ಲ ಎಂದು ವಿಶ್ವಸಂಸ್ಥೆಯ ಹವಾಮಾನ ಏಜೆನ್ಸಿಯ ರಶ್ಯ ನಿಯೋಗವು ಪೂರ್ವ ಯುರೋಪಿಯನ್ ದೇಶಗಳಿಗೆ ಕಳೆದ ತಿಂಗಳು ಇ-ಮೇಲ್ ರವಾನಿಸಿದೆ.

ರಾಜಕೀಯ ಪ್ರೇರಿತ ನಿರ್ಧಾರ ಕೈಗೊಳ್ಳುವ ಯುರೋಪಿಯನ್ ಯೂನಿಯನ್ ಸದಸ್ಯ ದೇಶಗಳು ಜಾಗತಿಕ ಹವಾಮಾನ ಶೃಂಗಸಭೆಯಲ್ಲಿ ಪ್ರಾಮಾಣಿಕ, ನಿಷ್ಪಕ್ಷಪಾತ ಮತ್ತು ಪರಿಣಾಮಕಾರಿ ನಿರ್ಧಾರ ಕೈಗೊಳ್ಳುತ್ತವೆ ಎಂಬುದನ್ನು ಖಂಡಿತಾ ನಿರೀಕ್ಷಿಸಲಾಗದು ಎಂದು ರಶ್ಯ ಪ್ರತಿಪಾದಿಸಿದೆ

Similar News