ಶ್ರೀನಗರ ಶಾಲೆಯಲ್ಲಿ ‘ಅಬಯಾ’ ನಿಷೇಧದ ವಿರುದ್ಧ ವಿದ್ಯಾರ್ಥಿನಿಯರ ಪ್ರತಿಭಟನೆ

Update: 2023-06-08 16:40 GMT

ಶ್ರೀನಗರ: ಶಾಲೆಯಲ್ಲಿ ‘ಅಬಯಾ’ಗಳನ್ನು ಧರಿಸಲು ಅಧಿಕಾರಿಗಳು ತಮಗೆ ಅವಕಾಶ ನೀಡುತ್ತಿಲ್ಲವೆಂದು ಆರೋಪಿಸಿ ಶ್ರೀನಗರದ ವಿಶ್ವಭಾರತಿ ಹೈಯರ್ ಸೆಕೆಂಡರಿ ಸ್ಕೂಲ್ ನ ಹಲವಾರು ವಿದ್ಯಾರ್ಥಿನಿಯರು ಶಾಲಾಡಳಿತದ ವಿರುದ್ಧ ಪ್ರತಿಭಟನೆಯನ್ನು ನಡೆಸಿದರು.

ಅಬ ಮುಸ್ಲಿಮ್ ಮಹಿಳೆಯರು ಧರಿಸುವ ಸಡಿಲವಾದ ಮೇಲುಡುಪು ಆಗಿದ್ದು, ಅದು ಶತಮಾನಗಳಿಂದಲೂ ಅವರ ಉಡುಪಿನ ಭಾಗವಾಗಿದೆ.

‘ನಮಗೆ ಅಬಾಯಾ ಧರಿಸಲು ಶಾಲೆಯು ಅವಕಾಶ ನೀಡದ ಕಾರಣ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಶಾಲೆಯ ಪ್ರವೇಶದ್ವಾರದವರೆಗೆ ಮಾತ್ರ ನಾವು ಅಬಾಯಾ ಧರಿಸಬಹುದು,ಆದರೆ ಶಾಲೆಯ ಒಳಗಲ್ಲ ಎಂದು ನಮಗೆ ಸೂಚಿಸಲಾಗಿದೆ. ಇಲ್ಲಿ ಬಹಳಷ್ಟು ಪುರುಷ ವಿದ್ಯಾರ್ಥಿಗಳಿದ್ದಾರೆ,ಹೀಗಾಗಿ ಅಬಯಾ ಧರಿಸದೆ ನಾವು ಶಾಲೆಗೆ ಬರಲು ಸಾಧ್ಯವಿಲ್ಲ ’ ಎಂದು ಓರ್ವ ವಿದ್ಯಾರ್ಥಿನಿ ತಿಳಿಸಿದಳು.

‘ನಾವು ಪರೀಕ್ಷೆಗಳಲ್ಲಿ ಅಗ್ರಸ್ಥಾನಗಳನ್ನು ಗಳಿಸಿದಾಗ ನಮ್ಮನ್ನು ಹೊಗಳಲಾಗುತ್ತದೆ, ಆದರೆ ಈಗ ನಮ್ಮನ್ನು ನಮ್ಮ ಹಕ್ಕುಗಳಿಂದ ವಂಚಿಸಲಾಗುತ್ತಿದೆ ’ ಎಂದು ಹೇಳಿದ ವಿದ್ಯಾರ್ಥಿನಿಯರು, ಇದು ಕೇವಲ ಹೆಣ್ಣುಮಕ್ಕಳಿಗಾಗಿರುವ ಶಾಲೆಯಾಗಿದ್ದರೂ ಶಾಲಾಧಿಕಾರಿಗಳು ಶಾಲೆಯಲ್ಲಿ ಸಹಶಿಕ್ಷಣವನ್ನು ಆರಂಭಿಸಿದ್ದಾರೆ ಎಂದರು.

ವರದಿಗಳಂತೆ ಶಾಲಾ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ‘ಸೂಕ್ತ ಉಡುಪು ಸಂಹಿತೆ ’ಗಾಗಿ ಒತ್ತಾಯಿಸಿದ್ದರು. ಅಬಯಾಗಳನ್ನು ಧರಿಸಲು ಬಯಸುವ ವಿದ್ಯಾರ್ಥಿನಿಯರಿಗಾಗಿ ಅವುಗಳ ಬಣ್ಣ ಮತ್ತು ಮಾದರಿಯನ್ನು ಶಾಲೆಯು ಪ್ರಕಟಿಸಲಿದೆ ಎಂದು ನಂತರ ತಿಳಿಸಿರುವ ಅವರು,ವರ್ಣರಂಜಿತ ಅಬಯಾಗಳನ್ನು ನಿಷೇಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Similar News