ಶೈಕ್ಷಣಿಕ ಕ್ಯಾಂಪಸ್ ಮತ್ತು ಕೋಮುವಾದದ ರಹಸ್ಯ ಸ್ವರೂಪ

Update: 2023-06-09 06:49 GMT

ಶೈಕ್ಷಣಿಕ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಪೋಷಿಸಲು ಅತ್ಯುತ್ತಮವಾದ ಸಂಪನ್ಮೂಲಗಳು, ಅಮೂಲ್ಯವಾದ ಮಾರ್ಗದರ್ಶನ ಮತ್ತು ಸಮೃದ್ಧ ವಾತಾವರಣವನ್ನು ಒದಗಿಸುವ ಇಂಥ ಸಂಸ್ಥೆಗಳ ವಾತಾವರಣ ಹೀಗೆ ಹದಗೆಡುತ್ತಿರುವುದು ನಿಜಕ್ಕೂ ಆತಂಕಕಾರಿ. ದೇಶದಾದ್ಯಂತ ಪ್ರಮುಖ ಶೈಕ್ಷಣಿಕ ಕ್ಯಾಂಪಸ್‌ಗಳ ವಾತಾವರಣವನ್ನು ಹಾಳುಮಾಡಲು ವ್ಯವಸ್ಥಿತ ಪ್ರಯತ್ನ ಇಂಥ ವಿದ್ಯಾರ್ಥಿ ಗುಂಪುಗಳ ಹೆಸರಿನಲ್ಲಿ ಆಗುತ್ತಿರುವುದು ಆಘಾತ ಮೂಡಿಸುತ್ತದೆ.

ಶಿಕ್ಷಣ ಸಂಸ್ಥೆಗಳ ಉದ್ದೇಶವೇ ಎಲ್ಲರನ್ನೂ ಬೆಸೆಯುವಂಥ ವಾತಾವರಣವನ್ನು ಮೂಡಿಸುವುದು. ವಿಭಿನ್ನ ಹಿನ್ನೆಲೆಯ ಜನರು ಪರಸ್ಪರ ಸಂವಹನ, ಸಂವಾದದಲ್ಲಿ ತೊಡಗಿಸಿಕೊಳ್ಳಲು ಮತ್ತು ಪರಸ್ಪರ ಸಹಾನುಭೂತಿ, ಗೌರವವನ್ನು ತೋರಿಸಲು ಅವು ಪೂರಕವಾಗಬೇಕು. ಅಂಥ ಶಿಕ್ಷಣ ಸಂಸ್ಥೆಗಳೇ ದ್ವೇಷ ಬೆಳೆಸುವ ವಿಷಮಯ ನೆಲೆಯಾಗಿಬಿಟ್ಟರೆ?

ಇತ್ತೀಚಿನ ದಿನಗಳಲ್ಲಿ ಅಂಥ ಆತಂಕಕಾರಿ ಸನ್ನಿವೇಶಗಳು ಕಾಣಿಸುತ್ತಿವೆ. ಬಾಂಬೆ ಐಐಟಿಯಂಥಲ್ಲಿ ಕೂಡ ನಮ್ಮ ನೆಲದ ಅಂತರ್ಗತ ಮೌಲ್ಯಗಳನ್ನು ದುರ್ಬಲಗೊಳಿಸುವ ಪ್ರಭಾವಗಳು ಶುರುವಾಗಿವೆ.

ಬಾಂಬೆ ಐಐಟಿಯಲ್ಲಿ ‘ಐಐಟಿ ಬಿ ಫಾರ್ ಭಾರತ್’ ಎಂಬ ವಿದ್ಯಾರ್ಥಿ ಗುಂಪಿನ ವಿಚಾರವನ್ನು ಹೇಳಬೇಕು. ಈ ಗುಂಪು ‘ದಿ ಕೇರಳ ಸ್ಟೋರಿ’ ವೀಕ್ಷಿಸಲು ಮಹಿಳಾ ವಿದ್ಯಾರ್ಥಿಗಳಿಗೆ ಉಚಿತ ಟಿಕೆಟ್‌ಗಳನ್ನು ಬಹಿರಂಗವಾಗಿ ವಿತರಿಸುತ್ತಿರುವುದು ಕಂಡುಬಂತು. ಸ್ಪಷ್ಟವಾಗಿ ಹೇಳಬೇಕೆಂದರೆ, ಇದು ಹೀಗೆ ಟಿಕೆಟ್‌ಗಳನ್ನು ವಿತರಿಸುವ ಯಾವುದೇ ಗುಂಪಿನ ಹಕ್ಕಿನ ಬಗೆಗಿನ ಪ್ರಶ್ನೆಯಲ್ಲ. ಆದರೆ ಅದರ ಇಂಥ ನಡೆಗಳು ಐಐಟಿ ಬಾಂಬೆಯಲ್ಲಿನ ವಿವಿಧ ಹಿನ್ನೆಲೆಯ ವಿದ್ಯಾರ್ಥಿ ಸಮುದಾಯದಲ್ಲಿ ದ್ವೇಷವನ್ನು ಬೆಳೆಸುವ ನಿಟ್ಟಿನಲ್ಲಿ ಹೇಗೆಲ್ಲಾ ಪ್ರಭಾವ ಬೀರಬಲ್ಲುದು ಎಂಬುದನ್ನು ಯೋಚಿಸಬೇಕಾಗಿದೆ.

ಶೈಕ್ಷಣಿಕ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಪೋಷಿಸಲು ಅತ್ಯುತ್ತಮವಾದ ಸಂಪನ್ಮೂಲಗಳು, ಅಮೂಲ್ಯವಾದ ಮಾರ್ಗದರ್ಶನ ಮತ್ತು ಸಮೃದ್ಧ ವಾತಾವರಣವನ್ನು ಒದಗಿಸುವ ಇಂಥ ಸಂಸ್ಥೆಗಳ ವಾತಾವರಣ ಹೀಗೆ ಹದಗೆಡುತ್ತಿರುವುದು ನಿಜಕ್ಕೂ ಆತಂಕಕಾರಿ. ದೇಶದಾದ್ಯಂತ ಪ್ರಮುಖ ಶೈಕ್ಷಣಿಕ ಕ್ಯಾಂಪಸ್‌ಗಳ ವಾತಾವರಣವನ್ನು ಹಾಳುಮಾಡಲು ವ್ಯವಸ್ಥಿತ ಪ್ರಯತ್ನ ಇಂಥ ವಿದ್ಯಾರ್ಥಿ ಗುಂಪುಗಳ ಹೆಸರಿನಲ್ಲಿ ಆಗುತ್ತಿರುವುದು ಆಘಾತ ಮೂಡಿಸುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿನ ವಿಶ್ವವಿದ್ಯಾನಿಲಯ ಕ್ಯಾಂಪಸ್‌ಗಳಲ್ಲಿ ಹಲವಾರು ಕೋಮುವಾದಿ ಘಟನೆಗಳು ನಡೆದಿವೆ. ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ (ಜೆಎನ್‌ಯು) ೨೦೨೦ರಲ್ಲಿ ವಿದ್ಯಾರ್ಥಿಗಳ ಗುಂಪು ಕ್ಯಾಂಪಸ್‌ನಲ್ಲಿ ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ ಇತರ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿತು. ತೀರಾ ಇತ್ತೀಚೆಗೆ, ೨೦೨೨ರಲ್ಲಿ ಜೆಎನ್‌ಯು ಹಾಸ್ಟೆಲ್‌ನಲ್ಲಿ ಮಾಂಸಾಹಾರವನ್ನು ನೀಡಿದ್ದಕ್ಕಾಗಿ ಹಿಂಸಾಚಾರ ನಡೆದಿತ್ತು. ಜೆಎನ್‌ಯು ಕ್ಯಾಂಪಸ್‌ನಲ್ಲಿ ಧಾರ್ಮಿಕ ಮೆರವಣಿಗೆಯ ಸಂದರ್ಭದಲ್ಲಿ ಗಲಾಟೆಗಳು ನಡೆದವು. ಬಹಳಷ್ಟು ಕಡೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಮೇಲಿನ ನೇರ ದಾಳಿಗಳು ಒಂದೆಡೆಯಾದರೆ, ಅದಕ್ಕಿಂತ ಹೆಚ್ಚಾಗಿ, ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿ ಸಂಘಟನೆಗಳ ಒಳಗಿನ ಕೋಮುವಾದ ಹೆಚ್ಚು ರಹಸ್ಯ ಸ್ವರೂಪಗಳಲ್ಲಿ ವ್ಯಕ್ತವಾಗುತ್ತಿದೆ.

ವೈವಿಧ್ಯತೆ, ಚರ್ಚೆ ಮತ್ತು ಟೀಮ್‌ವರ್ಕ್ ಅನ್ನು ಪೋಷಿಸುವುದಾಗಿ ಹೇಳಿಕೊಳ್ಳುವ ಈ ತೋರಿಕೆಯ ವಿದ್ಯಾರ್ಥಿ ಸಂಘಟನೆಗಳಲ್ಲಿ ಹೆಚ್ಚಿನವುಗಳು ಕ್ಯಾಂಪಸ್‌ನ ಜಾತ್ಯತೀತ ಸನ್ನಿವೇಶವನ್ನೇ ಹಾಳುಮಾಡಲು ಒಳಗೊಳಗೇ ಪ್ರಯತ್ನಿಸುತ್ತವೆ.

ಮೇ ಮೊದಲ ವಾರದಲ್ಲಿ ಐಐಟಿ ಬಿ ಫಾರ್ ಭಾರತ್ ಗ್ರೂಪ್ ವಾಟ್ಸ್‌ಆ್ಯಪ್ ಗ್ರೂಪ್ ಸಂದೇಶದಲ್ಲಿ, ‘ದಿ ಕೇರಳ ಸ್ಟೋರಿ’ ಚಿತ್ರ ವೀಕ್ಷಿಸಲು ಆಸಕ್ತಿ ಹೊಂದಿರುವ ೫೧ ಹುಡುಗಿಯರ ಟಿಕೆಟ್‌ಗಳನ್ನು ಪ್ರಾಯೋಜಿಸುತ್ತಿರುವುದಾಗಿ ಹೇಳಿಕೊಂಡಿತು. ಅದಾದ ಬಳಿಕ ಫೇಸ್‌ಬುಕ್‌ನಲ್ಲಿ ಅದು ಮಾಡಿದ ಪೋಸ್ಟ್, ೮೦ಕ್ಕೂ ಹೆಚ್ಚು ವಿದ್ಯಾರ್ಥಿಗಳು - ಅವರಲ್ಲಿ ೬೫ ವಿದ್ಯಾರ್ಥಿನಿಯರು - ಉಚಿತ ಟಿಕೆಟ್‌ಗಳನ್ನು ಪಡೆದು ಚಿತ್ರ ವೀಕ್ಷಿಸಿದ್ದಾರೆ ಎಂದು ಹೇಳಿತು. ವಿಶ್ವ ಹಿಂದೂ ಪರಿಷತ್ ಬೆಂಬಲ ಇದ್ದುದರ ಬಗ್ಗೆಯೂ ಪ್ರಸ್ತಾಪಿಸಿದ್ದ ಆ ಪೋಸ್ಟ್‌ನಲ್ಲಿ, ‘ಲವ್ ಜಿಹಾದ್’ ವಿರುದ್ಧ ಜಾಗೃತಿ ಮೂಡಿಸಲು ಈ ಚಿತ್ರ ವೀಕ್ಷಣೆಗೆ ಉಚಿತ ಟಿಕೆಟ್ ನೀಡಿದ್ದಾಗಿ ಹೇಳಿಕೊಂಡಿತ್ತು. ಅದು ಈಗ ಮತ್ತೊಂದು ಸ್ಕ್ರೀನಿಂಗ್‌ಗೆ ಸಿದ್ಧವಾಗುತ್ತಿರುವ ವಿಚಾರವನ್ನೂ ಹೇಳಿಕೊಂಡಿದೆ.

ಕೇರಳ ಸ್ಟೋರಿ ಎಂಥ ಸುಳ್ಳಿನ ಕಂತೆ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ಬಲಪಂಥೀಯ ರಾಜಕೀಯ ಸಿದ್ಧಾಂತವನ್ನು ಎತ್ತಿಹೇಳಲು, ನಿರ್ದಿಷ್ಟ ಸಮುದಾಯದ ವಿರುದ್ಧ ದ್ವೇಷ ಬೆಳೆಸಲು ಕಟ್ಟಲಾದ ಕಥೆ ಪ್ರಚೋದನಾಕಾರಿಯಾಗಿದ್ದು, ಈಗಾಗಲೇ ನಾಗರಿಕ ಹಕ್ಕುಗಳ ಗುಂಪುಗಳು ಮತ್ತು ಅಕಾಡೆಮಿಗಳು ವ್ಯಾಪಕವಾಗಿ ಖಂಡಿಸಿವೆ.

‘ಲವ್ ಜಿಹಾದ್’ ಅಸ್ತಿತ್ವವನ್ನು ಸಾಬೀತುಪಡಿಸಲು ಯಾವುದೇ ಗಂಭೀರ ಪುರಾವೆಗಳಿಲ್ಲ, ಆದರೆ ಈ ಚಿತ್ರದ ಉಚಿತ ವೀಕ್ಷಣೆಗೆ ಪ್ರೇರೇಪಿಸುವ ಮೂಲಕವೇ ಮಹಿಳಾ ವಿದ್ಯಾರ್ಥಿಗಳಲ್ಲಿ ಕೋಮುವಾದಿ ಮನಃಸ್ಥಿತಿಗೆ ಕಾರಣವಾಗಬಲ್ಲ ಘಾತುಕ ನಡೆ ಈ ವಿದ್ಯಾರ್ಥಿ ಗುಂಪಿನಿಂದ ಆಗಿದೆ. ಅದೊಂದು ಸಾಕ್ಷ್ಯಚಿತ್ರವೂ ಅಲ್ಲ. ಮುಸ್ಲಿಮ್ ಸಮುದಾಯದ ವಿರುದ್ಧ ಭಯ ಮತ್ತು ದ್ವೇಷವನ್ನು ಹುಟ್ಟುಹಾಕುವ ಏಕೈಕ ಉದ್ದೇಶವನ್ನು ಹೊಂದಿರುವ ವಾಣಿಜ್ಯಿಕ ಚಿತ್ರ.

‘ಲವ್ ಜಿಹಾದ್’ ಎನ್ನುವುದು ಮುಸ್ಲಿಮ್ ಪುರುಷರು ಹಿಂದೂ ಮಹಿಳೆಯರನ್ನು ಇಸ್ಲಾಮ್‌ಗೆ ಮತಾಂತರಿಸುವ ಉದ್ದೇಶದಿಂದ ಆಮಿಷವೊಡ್ಡಿ ಮದುವೆಯಾತ್ತಾರೆಂದು ಆರೋಪಿಸಲು, ಒಂದು ಕಲ್ಪಿತ ವಿದ್ಯಮಾನವನ್ನು ವಿವರಿಸಲು ಬಳಸಲಾಗುವ ಪದ. ಈ ಪದವು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವುದಕ್ಕೆ ದೊಡ್ಡ ಮಟ್ಟದಲ್ಲಿ ಬಳಕೆಯಾಗುತ್ತಿದೆ.

ಕೇರಳ ಸ್ಟೋರಿ ಕೂಡ ಮುಸ್ಲಿಮರನ್ನು ಅವಹೇಳನ ಮಾಡುವ ಲವ್ ಜಿಹಾದ್ ವಿಚಾರವನ್ನೇ ಬಂಡವಾಳ ಮಾಡಿಕೊಂಡಿದೆ. ಹೀಗಿರುವಾಗ ಇಂಥದೊಂದು ಚಿತ್ರದ ವೀಕ್ಷಣೆಗೆ ಉಚಿತ ಟಿಕೆಟ್ ಹೆಸರಿನಲ್ಲಿ ಹುರಿದುಂಬಿಸುವುದು ವಿಶ್ವವಿದ್ಯಾನಿಲಯದಂಥ ಸ್ಥಳದಲ್ಲಿನ ಜಾತ್ಯತೀತ ರಚನೆಯನ್ನು ನಾಶ ಮಾಡುವ ಉದ್ದೇಶದ್ದೇ ಆಗಿದೆ.

ಉರ್ದು ಪದಗಳನ್ನು ತೆಗೆದುಹಾಕುವ ಮೂಲಕ ಹಿಂದಿಯ ಸಂಸ್ಕೃತೀಕರಣಕ್ಕೆ ಕರೆ ಕೊಡುವುದಾಗಲೀ, ಶ್ರದ್ಧಾ ವಾಕರ್ ಕೊಲೆ ಪ್ರಕರಣ ಉಲ್ಲೇಖಿಸಿ, ಮುಸ್ಲಿಮರ ಬಗ್ಗೆ ಎಚ್ಚರದಿಂದಿರಿ ಎಂದು ಹಿಂದೂ ಮಹಿಳೆಯರಿಗೆ ಮನವಿ ಮಾಡುವ ಪೋಸ್ಟ್ ಹಾಕುವುದಾಗಲೀ ಅದರ ಉದ್ದೇಶವೇನೆಂಬುದನ್ನೇ ನಿರೂಪಿಸುತ್ತಿದೆ. ತೊಂದರೆ ಮತ್ತು ಕಿಡಿಗೇಡಿತನವನ್ನು ಉಂಟುಮಾಡಲು ದೇವಸ್ಥಾನಕ್ಕೆ ಹೋಗುತ್ತಿರುವವರೆಂದು ಇಬ್ಬರು ಮಹಿಳೆಯರ ಕಾರ್ಟೂನ್ ಹಾಕುವಲ್ಲಿ ಕೂಡ ಈ ಗುಂಪಿನ ಆಳವಾದ ಸ್ತ್ರೀದ್ವೇಷ ಮತ್ತು ಲಿಂಗಭೇದಭಾವವೇ ಕಾಣಿಸುತ್ತದೆ.

ಹೀಗೆ ಕೋಮುದ್ವೇಷ ಮತ್ತು ಸ್ತ್ರೀ ದ್ವೇಷವನ್ನು ತೋರಿಸುವ, ವ್ಯಂಗ್ಯದ, ಲೇವಡಿಯ ಪೋಸ್ಟ್‌ಗಳ ಮೂಲಕ ಈ ಗುಂಪು ವ್ಯವಸ್ಥಿತವಾಗಿ ಕೋಮು ರಾಜಕೀಯದಲ್ಲಿ ತೊಡಗಿಕೊಂಡಿದೆ. ಸಮಾಜವನ್ನು ವಿಭಜಿಸುವ ವಿಚಾರಗಳನ್ನು ಹರಡಲು ಅದು ನಿರಂತರ ಪ್ರಯತ್ನಿಸುತ್ತಿದೆ ಎಂಬುದನ್ನೇ ಅವೆಲ್ಲವೂ ತೋರಿಸುತ್ತವೆ.

ಕ್ಯಾಂಪಸ್‌ನೊಳಗೆ ಕೇರಳ ಸ್ಟೋರಿ ವೀಕ್ಷಣೆಗಾಗಿ ಟಿಕೆಟ್‌ಗಳನ್ನು ವಿತರಿಸುವ ಈ ವಿದ್ಯಾರ್ಥಿ ಗುಂಪು ವಿಎಚ್‌ಪಿ ಜೊತೆ ಸಹಯೋಗ ಹೊಂದಿರುವುದೇ ಅದು ಏನೆಂಬುದರ ಸ್ಪಷ್ಟ ಸುಳಿವನ್ನು ಕೊಡುತ್ತದೆ. ಈ ವಿದ್ಯಾರ್ಥಿ ಗುಂಪಿನ ನಡೆಯ ಬಗ್ಗೆ ಈ ಹಿಂದೆಯೂ ಹಲವಾರು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಂದ ಟೀಕೆಗಳು ವ್ಯಕ್ತವಾದದ್ದಿದೆ. ಆದರೆ ಅದರ ಸಮಾಜ ಒಡೆಯವ ಉದ್ದೇಶದ ಚಟುವಟಿಕೆ ಮಾತ್ರ ಎಗ್ಗಿಲ್ಲದೆ ಸಾಗಿಬಂದಿದೆ.

ಇದು ಗಂಭೀರ ಸಮಸ್ಯೆ. ಇದು ಮುಸ್ಲಿಮ್ ವಿದ್ಯಾರ್ಥಿಗಳನ್ನು ಗುರಿಯಾಗಿಸುವ ಮತ್ತು ಬೆದರಿಸುವ ಪ್ರಯತ್ನವಾಗಿದೆ. ಕ್ಯಾಂಪಸ್‌ನಲ್ಲಿ ಭಯ ಮತ್ತು ಹಗೆತನದ ವಾತಾವರಣವನ್ನು ಇದು ಸೃಷ್ಟಿಸಬಹುದು. ಮುಸ್ಲಿಮ್ ವಿದ್ಯಾರ್ಥಿಗಳನ್ನು ಮತ್ತಷ್ಟು ದೂರವಿಡುವ ಸಾಧ್ಯತೆಯೂ ಇಲ್ಲದಿಲ್ಲ.

ಐಐಟಿ ಬಾಂಬೆ ಈಗಾಗಲೇ ಹಲವು ಆಘಾತಕಾರಿ ಘಟನೆಗಳ ಕಾರಣಕ್ಕಾಗಿ, ಅಲ್ಲಿನ ಜಾತಿ ಆಧಾರಿತ ತಾರತಮ್ಯದ ಕಾರಣಕ್ಕಾಗಿ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ. ಈ ವರ್ಷದ ಆರಂಭದಲ್ಲಿ ದರ್ಶನ್ ಸೋಲಂಕಿ ಎಂಬ ಬಿ.ಟೆಕ್. ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ನಂತರ ಆತನ ಕುಟುಂಬವು ಇಂಥದೊಂದು ತಾರತಮ್ಯ ಅಲ್ಲಿ ನಡೆಯುತ್ತಿರುವುದರ ಬಗ್ಗೆ ಆರೋಪಿಸಿದೆ. ಅವನ ಜಾತಿ ಗುರುತಿನ ಕಾರಣದಿಂದ ಸಹವಿದ್ಯಾರ್ಥಿಗಳೇ ಅವನನ್ನು ಬಹಿಷ್ಕರಿಸಿದ್ದರು ಎಂದಿದ್ದಾರೆ. ಬಹುಸಾಂಸ್ಕೃತಿಕ ಕ್ಯಾಂಪಸ್‌ನಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳ ವಿರುದ್ಧದ ಮನೋಭಾವ ಮೂಡಿಸುವ ವರ್ತನೆಯೊಂದು ಈಗ ಕಾಣಿಸಿದೆ. ಇದು ಉನ್ನತ ಸಂಸ್ಥೆಯ ಐತಿಹಾಸಿಕವಾದ ಪ್ರಗತಿಪರ, ವೈವಿಧ್ಯಮಯ ಚಿತ್ರವನ್ನು ಮಸುಕಾಗಿಸುತ್ತದೆ, ಕಳಂಕಿತವಾಗಿಸುತ್ತದೆ.

ಕೋಮುವಾದಿ ಸಂಘಟನೆಗಳೊಂದಿಗೆ ಬಹಿರಂಗವಾಗಿ ಒಡನಾಡುವ ಇಂಥ ವಿದ್ಯಾರ್ಥಿ ಗುಂಪುಗಳು ಕ್ಯಾಂಪಸ್‌ನಲ್ಲಿ ಮತ್ತು ಯುವಜನರ ಮನಸ್ಸಿನಲ್ಲಿ ಜಾಗಮಾಡಿಕೊಳ್ಳ ಹೊರಟಿರುವುದು ಆತಂಕಕಾರಿ. ಹಿಂದುಳಿದ ಸಮುದಾಯಗಳಿಂದ ಬಂದ ವಿದ್ಯಾರ್ಥಿಗಳಲ್ಲಿ ಇದು ನಿರಾಶೆ, ಹತಾಶೆ, ಕಡೆಗೆ ಭ್ರಮನಿರಸನಕ್ಕೆ ಕಾರಣವಾಗಬಲ್ಲುದು. ವಿಶ್ವವಿದ್ಯಾನಿಲಯವು ತನ್ನ ಕ್ಯಾಂಪಸ್‌ನಲ್ಲಿನ ಇಂತಹ ಋಣಾತ್ಮಕ ವರ್ತನೆಗಳ ಬಗ್ಗೆ ಎಚ್ಚರ ವಹಿಸಬೇಕು ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಅವರ ಧರ್ಮ, ಜನಾಂಗ, ಜಾತಿ, ಲಿಂಗ, ಅಥವಾ ಜನ್ಮಸ್ಥಳವನ್ನು ಲೆಕ್ಕಿಸದೆ ಎಲ್ಲರೂ ಒಳಗೊಂಡು ನಡೆಯುವಂತಾಗುವ ವಾತಾವರಣವನ್ನು ಸೃಷ್ಟಿಸಬೇಕು.

ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಸಮಸ್ಯಾತ್ಮಕ, ಧ್ರುವೀಕರಣ ಮತ್ತು ತಪ್ಪುರೂಪಣೆಯಲ್ಲಿ ತೊಡಗುವ ಇಂಥ ವಿದ್ಯಾರ್ಥಿ ಗುಂಪುಗಳ ಬಗ್ಗೆ ಉನ್ನತ ಶಿಕ್ಷಣ
ಸಂಸ್ಥೆ ಅತ್ಯಂತ ಪ್ರಬಲವಾದ ಪದಗಳಲ್ಲಿ ವಿರೋಧ ವ್ಯಕ್ತಪಡಿ ಸದೆ ಹೋದರೆ ಅಪಾಯ ನಿಶ್ಚಿತ. ಈ ಸಮಸ್ಯೆಯನ್ನು ಪರಿಹರಿ ಸಲು ಮತ್ತು ಎಲ್ಲಾ ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಿಸಲು ಸಂಸ್ಥೆಯ ಆಡಳಿತವು ಕ್ರಮ ತೆಗೆದುಕೊಳ್ಳುವುದು ಅಗತ್ಯ.

ವಿದ್ಯಾರ್ಥಿಗಳ ಜವಾಬ್ದಾರಿಯೂ ದೊಡ್ಡದೇ ಆಗಿದೆ. ಅವರು ತಮ್ಮ ಆದ್ಯತೆಗಳೇನು ಎಂಬುದನ್ನು ಅರಿತರೆ, ಸಮಾಜವನ್ನು ಒಡೆಯುವ ಇಂಥವರ ಆಮಿಷದಿಂದ, ಪ್ರಭಾವದಿಂದ ದೂರವಿರಬಹುದು. ನಿರ್ದಿಷ್ಟ ಸಮುದಾಯದ ಬಗ್ಗೆ ಪೂರ್ವಾಗ್ರಹ, ಭಯ ಮತ್ತು ಹಗೆತನವನ್ನು ಪೋಷಿಸುವ ಯಾವುದನ್ನೂ ಹತ್ತಿರಕ್ಕೆ ಬಿಟ್ಟುಕೊಳ್ಳಬಾರದು.

(ಕೃಪೆ: thewire.in)

Similar News