ಶಿಲಾನ್ಯಾಸ ಫಲಕಗಳಲ್ಲಿ ಕೇವಲ ಬಿಜೆಪಿ ಸಂಸದ ಮತ್ತು ಕೌನ್ಸಿಲರ್‌ಗಳ ಹೆಸರು: ಲಡಾಖ್ ನಲ್ಲಿ ವಿವಾದ ಸೃಷ್ಟಿ

Update: 2023-06-09 13:05 GMT

ಶ್ರೀನಗರ: ಕಾರ್ಗಿಲ್ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಬಿಜೆಪಿ ಸಂಸದ ಜಾಮ್ಯಾಂಗ್ ಸೇರಿಂಗ್ ನಾಮ್ಗ್ಯಾಲ್ ಅವರು ಶಂಕುಸ್ಥಾಪನೆಯನ್ನು ನೆರವೇರಿಸಿದ್ದು, ಶಿಲಾನ್ಯಾಸ ಫಲಕಗಳಲ್ಲಿ ಸಂಸದರ ಹೆಸರಿನ ಜೊತೆಗೆ ಬಿಜೆಪಿ ಸಂಯೋಜಿತ ಕೌನ್ಸಿಲರ್ ಗಳು ಮತ್ತು ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಲಡಾಖ್ ಹಜ್ ಸಮಿತಿಯ ಅಧ್ಯಕ್ಷರ ಹೆಸರುಗಳನ್ನು ಮಾತ್ರ ಕೆತ್ತಲಾಗಿದೆ. ಈ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿರುವ ಕ್ಷೇತ್ರಗಳ ಚುನಾಯಿತ ಕೌನ್ಸಿಲರ್ ಗಳ ಹೆಸರುಗಳು ಫಲಕದಲ್ಲಿ ಮಾಯವಾಗಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ ತೀವ್ರ ವಿವಾದ ಭುಗಿಲೆದ್ದಿದೆ ಎಂದು thewire.in ವರದಿ ಮಾಡಿದೆ. 

ಈ ಬಗ್ಗೆ ಲಡಾಖ್ ಸ್ವಾಯತ್ತ ಗುಡ್ಡಗಾಡು ಅಭಿವೃದ್ಧಿ ಮಂಡಳಿ (LAHDC)ಯು ಲಡಾಖ್ ನ ಲೆಫ್ಟಿನಂಟ್ ಗವರ್ನರ್ ಬಿ.ಡಿ.ಮಿಶ್ರಾ ಅವರಿಗೆ ಪತ್ರ ಬರೆದಿದೆ. ಈ ಕ್ರಮವು ಪ್ರದೇಶದ ಅತ್ಯುನ್ನತ ಚುನಾಯಿತ ಸಂಸ್ಥೆಯಾಗಿರುವ ಮಂಡಳಿಯ ಘನತೆಯನ್ನು ಕುಂದಿಸಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಜೂ.5ರಂದು ನಾಮ್ಗ್ಯಾಲ್ ಕಾರ್ಗಿಲ್ ಜಿಲ್ಲೆಯ ರಣಬೀರಪೋರ ಮತ್ತು ಭೀಮಭಾಟ್ ಕ್ಷೇತ್ರಗಳಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ನಿರ್ಮಾಣ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಈ ಕ್ಷೇತ್ರಗಳನ್ನು ಕೌನ್ಸಿಲರ್‌ಗಳದ ನ್ಯಾಷನಲ್ ಕಾನ್ಫರೆನ್ಸ್ ನ ಮುಬಾರಕ್ ಶಾ ನಕ್ವಿ ಮತ್ತು ಸಯೀದ್ ಮುಹಮ್ಮದ್ ಶಾ ಅವರು ಪ್ರತಿನಿಧಿಸುತ್ತಿದ್ದಾರೆ. ಶಿಲಾನ್ಯಾಸ ಫಲಕಗಳಲ್ಲಿ ಸಂಸದರ ಹೆಸರಿನ ಜೊತೆಗೆ ಬಿಜೆಪಿಯ ರಾಜ್ಯ ಘಟಕದ ಉಪಾಧ್ಯಕ್ಷ ಹಾಗೂ ಲಡಾಖ್ ಹಜ್ ಸಮಿತಿಯ ಅಧ್ಯಕ್ಷ ಮುಹಮ್ಮದ್ ಅಲಿ ಮಜಾಝ್ ಅವರ ಹೆಸರನ್ನು ಬರೆಯಲಾಗಿದೆ.

ಅಭಿವೃದ್ಧಿ ಪ್ರಕ್ರಿಯೆಯಲ್ಲಿ ತಮ್ಮನ್ನು ಪಕ್ಕಕ್ಕೆ ತಳ್ಳಿರುವ ಆಡಳಿತದ ಕ್ರಮವು ತಮಗೆ ಮಾಡಿರುವ ಅವಮಾನವಾಗಿದೆ ಎಂದು ನಕ್ವಿ ಮತ್ತು ಶಾ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಶಿಲಾನ್ಯಾಸ ಸಮಾರಂಭಗಳಿಗೆ ತಮ್ಮನ್ನು ಆಹ್ವಾನಿಸಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಜೂ.6ರಂದು ಕರ್ಷಾ ಗುಡ್ಡಗಾಡು ಮಂಡಳಿ ಕ್ಷೇತ್ರದಲ್ಲಿ ನಾಲ್ಕು ರಸ್ತೆ ನಿರ್ಮಾಣ ಯೋಜನೆಗಳಿಗೆ ನಾಮ್ಗ್ಯಾಲ್ ಶಂಕುಸ್ಥಾಪನೆ ನೆರವೇರಿಸಿದ್ದು,ನೆರೆಯ ಚಾ ಕ್ಷೇತ್ರದ ಬಿಜೆಪಿ ಕೌನ್ಸಿಲರ್ ಸ್ಟ್ಯಾಂಝಿನ್ ಲಪ್ಕಾ ಮತ್ತು ಬಿಜೆಪಿಯೊಂದಿಗೆ ನಂಟು ಹೊಂದಿರುವ ನಾಮ ನಿರ್ದೇಶಿತ ಕೌನ್ಸಿಲರ್ ಸ್ಟ್ಯಾಂಝಿನ್ ಚೋಸ್ಗ್ಯಾಲ್ ಅವರು ಹೆಸರುಗಳು ಫಲಕಗಳಲ್ಲಿವೆ. ಆದರೆ ಸ್ಥಳೀಯ ಕಾಂಗ್ರೆಸ್ ಕೌನ್ಸಿಲರ್ ಸ್ಟ್ಯಾಂಝಿನ್ ಜಿಗ್ಮತ್ ಅವರ ಹೆಸರನ್ನು ಕೈಬಿಡಲಾಗಿದೆ.

‘ಸಮಾರಂಭದ ಕುರಿತು ನನಗೆ ಮಾಹಿತಿಯನ್ನೂ ನೀಡಿರಲಿಲ್ಲ. ಇದು ಪ್ರಜಾಪ್ರಭುತ್ವದ ಕೊಲೆಯಾಗಿದೆ,ದುಷ್ಟ ಕೃತ್ಯವಾಗಿದೆ. ನನ್ನ ಕ್ಷೇತ್ರದಲ್ಲಿಯ ಶಿಲಾನ್ಯಾಸ ಫಲಕದಲ್ಲಿ ಇನ್ನೊಂದು ಕ್ಷೇತ್ರದ ಕೌನ್ಸಿಲರ್ ಹೆಸರು ಸ್ಥಾನವನ್ನು ಪಡೆಯಲು ಹೇಗೆ ಸಾಧ್ಯ ಎಂದು ಜಿಗ್ಮತ್ ಪ್ರಶ್ನಿಸಿದರು.

ಕಾರ್ಗಿಲ್ ನ ಸ್ಥಳೀಯ ನಿವಾಸಿಗಳೂ ಈ ತಾರತಮ್ಯವನ್ನು ಪ್ರತಿಭಟಿಸಿದ್ದು,ಇಂತಹ ಕ್ರಮಗಳು ಗುಡ್ಡಗಾಡು ಮಂಡಳಿಯನ್ನು ದುರ್ಬಲಗೊಳಿಸುತ್ತವೆ ಎಂದು ಆರೋಪಿಸಿದ್ದಾರೆ.

Similar News