ಮಣಿಪಾಲ: ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚನೆ; ಪ್ರಕರಣ ದಾಖಲು
Update: 2023-06-09 20:45 IST
ಮಣಿಪಾಲ, ಜೂ.9: ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸಾವಿರಾರು ರೂ. ಹಣ ಪಡೆದು ವಂಚಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂಜಿಬೆಟ್ಟು ಮನೋಳಿಗುಜ್ಜೆಯ ನವೀನ್ ರಾವ್(57) ಎಂಬವರಿಗೆ ಮೊಬೈಲ್ ಮೂಲಕ ಭಾಸ್ಕರ ಭಟ್‌ನ ಪರಿಚಯವಾಗಿದ್ದು, ಈತ ತಾನು ವಿಧಾನ ಸೌಧದಲ್ಲಿ ಸರಕಾರಿ ಹುದ್ದೆಯ ಕಾರ್ಯದರ್ಶಿಯಾಗಿ ಕೆಲಸ ಮಾಡಿ ಕೊಂಡಿರುವುದಾಗಿ ನಂಬಿಸಿ, ನವೀನ್ ರಾವ್ ಕುಟುಂಬದ ಸದಸ್ಯರಿಗೆ ಸರಕಾರಿ ಉದ್ಯೋಗ ಬೇಕಾದಲ್ಲಿ ನೇರ ನೇಮಕಾತಿಯ ಮೂಲಕ ಮಾಡಿಸಿ ಕೊಡುವುದಾಗಿಯೂ ಹೇಳಿದ್ದನು.
ಇದನ್ನು ನಂಬಿದ ಅವರು, ಭಾಸ್ಕರ್ ಭಟ್ ಮೊಬೈಲ್‌ಗೆ ದಾಖಲೆಗಳನ್ನು ಕಳುಹಿಸಿ ಜ.19ರಿಂದ ಫೆ.2ರ ತನಕ ನಿರಂತರವಾಗಿ ಅವರ ಖಾತೆಗೆ ಒಟ್ಟು 40 ಸಾವಿರ ರೂ. ಹಣವನ್ನು ಹಾಕಿದ್ದರು. ಭಾಸ್ಕರ್ ಭಟ್ ಫೆ.20ರೊಳಗೆ ಉದ್ಯೋಗದ ಆದೇಶ ಬರುವುದಾಗಿ ಹೇಳಿದ್ದನು. ಆದರೆ ಭಾಸ್ಕರ್ ಭಟ್ ಉದ್ಯೋಗ ಕೊಡಿಸದೆ, ಹಣವನ್ನು ವಾಪಾಸು ಕೊಡದೇ ವಂಚನೆ ಮಾಡಿರುವು ದಾಗಿ ದೂರಲಾಗಿದೆ.