ಮಣಿಪುರ ಹಿಂಸಾಚಾರ ಜಂಟಿ ಶೋಧ ಕಾರ್ಯಾಚರಣೆಯಲ್ಲಿ 35 ಶಸ್ತ್ರಾಸ್ತ್ರ, ದಾಸ್ತಾನು ಕೊಠಡಿ ಪತ್ತೆ

Update: 2023-06-09 16:15 GMT

ಕೋಲ್ಕತಾ: ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಭದ್ರತಾ ಪಡೆಗಳು ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಕನಿಷ್ಠ 35 ಶಸ್ತ್ರಾಸ್ತ್ರಗಳು ಹಾಗೂ ಶಸ್ತ್ರಾಸ್ತ್ರ ದಾಸ್ತಾನು ಕೊಠಡಿಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಟ್ಟ ಹಾಗೂ ಕಣಿವೆ ವಲಯಗಳಲ್ಲಿ ಗುರುವಾರ ನಡೆಸಿದ ಎರಡನೇ ದಿನದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ವಿಭಿನ್ನ ಮಾದರಿಯ 35 ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಹಾಗೂ ಶಸ್ತ್ರಾಸ್ತ್ರ ದಾಸ್ತಾನು ಕೊಠಡಿಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ. 

ಮಣಿಪುರದಲ್ಲಿ ತಿಂಗಳ ಕಾಲ ನಡೆದ ಜನಾಂಗೀಯ ಹಿಂಸಾಚಾರದಿಂದ ಬಾಧಿತವಾಗಿರುವ ಜನರ ಕಷ್ಟಗಳನ್ನು ನಿವಾರಿಸಲು ಆತ್ಮವಿಶ್ವಾಸ ರೂಪಿಸುವ ಹಾಗೂ ಜನ ಕೇಂದ್ರಿತ ಕ್ರಮಗಳನ್ನು ಭದ್ರತಾ ಪಡೆಗಳು ಅನುಸರಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ನಡೆಸಿದ ಮೊದಲ ದಿನದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು 29 ಶಸ್ತ್ರಾಸ್ತ್ರಗಳನ್ನು ಪತ್ತೆ ಮಾಡಿತು. 

ಇವುಗಳಲ್ಲಿ ಹೆಚ್ಚಿನವು ಅಟೋಮ್ಯಾಟಿಕ್ ಗನ್, ಮೋರ್ಟಾರ್, ಹ್ಯಾಂಡ್ ಗ್ರೆನೇಡ್, ಸಣ್ಣ ಶಸ್ತ್ರಾಸ್ತ್ರಗಳು, ಸ್ಪೋಟಕಗಳು ಹಾಗೂ ಶಸ್ತ್ರಾಸ್ತ್ರ ದಾಸ್ತಾನು ಕೊಠಡಿಗಳು ಎಂದು ಅವರು ತಿಳಿಸಿದ್ದಾರೆ. ಎಎಫ್ಎಸ್ಪಿಎ ಪ್ರದೇಶವಲ್ಲದ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸುವ ಸಂದರ್ಭ ಮ್ಯಾಜಿಸ್ಟ್ರೇಟರು ಉಪಸ್ಥಿತರಿದ್ದರು ಎಂದು ಅವರು ತಿಳಿಸಿದ್ದಾರೆ. 

ಮಣಿಪುರದಲ್ಲಿ ತಿಂಗಳ ಹಿಂದೆ ಭುಗಿಲೆದ್ದ ಜನಾಂಗೀಯ ಹಿಂಸಾಚಾರದಲ್ಲಿ ಕನಿಷ್ಠ 100 ಮಂದಿ ಸಾವನ್ನಪ್ಪಿದ್ದಾರೆ ಇತರ 310 ಮಂದಿ ಗಾಯಗೊಂಡಿದ್ದಾರೆ. ಪ್ರಸಕ್ತ ಒಟ್ಟು 37,450 ಮಂದಿ 272 ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. 

Similar News