ಅಣಬೆ ಉತ್ಪಾದನಾ ಫ್ಯಾಕ್ಟರಿ ಮುಚ್ಚಲು ಆಗ್ರಹ: ಎರಡನೇ ದಿನಕ್ಕೆ ಕಾಲಿಟ್ಟ ಸ್ಥಳೀಯರ ಮುಷ್ಕರ

Update: 2023-06-09 16:16 GMT

ವಾಮಂಜೂರು: ತಿರುವೈಲ್ ವಾರ್ಡ್ ನಲ್ಲಿ ಕಾರ್ಯಾಚರಿಸುತ್ತಿರುವ ಅಣಬೆ ಉತ್ಪಾದನಾ ಫ್ಯಾಕ್ಟರಿ ಮುಚ್ಚುವಂತೆ ಆಗ್ರಹಿಸಿ ಸ್ಥಳಿಯರು ನಡೆಸುತ್ತಿರುವ ಅನಿರ್ದಿಷ್ಠಾವಧಿ ಮುಷ್ಕರ ಎರಡನೇ ದಿನಕ್ಕೆ  ಕಾಲಿಟ್ಟಿದ್ದು, ಶಾಸಕರು, ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ವಾಮಂಜೂರು ಜುಮಾ ಮಸೀದಿಯ ಮುಖಂಡರು ಇಂದು ಮುಷ್ಕರ ನಿರತ ಸ್ಥಳೀಯರನ್ನು ಭೇಟಿ ಮಾಡಿ ಬೆಂಬಲ ಘೋಷಿಸಿದರು.

ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್‌ ಶೆಟ್ಟಿ ಅವರು ಭೇಟಿ ನೀಡಿ ಬೆಂಬಲ ಘೋಷಿಸಿದರು. ಪ್ರತಿಭಟನಾ ನಿರತರೊಂದಿಗೆ ಸ್ಥಳದಲ್ಲಿಯೇ ಕುಳಿತು ಸಮಸ್ಯೆಯನ್ನು ಬಗೆಹರಿಸುವ ಕುರಿತಂತೆ ಸ್ಥಳೀಯರೊಂದಿಗೆ ಚರ್ಚಿಸಿದರು. ಇಲ್ಲಿ ಸಿಂಪಡಣೆಯಾಗುತ್ತಿರುವ ರಾಸಾಯನಿಕ ವಸ್ತುಗಳಿಂದ ವಾಂತಿ, ತಲೆನೋವು, ಮಾನಸಿಕ ಖಿನ್ನತೆ, ಮತ್ತಿತರ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ. ವೈದ್ಯನಾಗಿ ನನಗೂ ಇದರ ಅರಿವಾಗಿದ್ದು, ಜಿಲ್ಲಾಧಿಕಾರಿಯವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕರ ಸಮಸ್ಯೆಗೆ ಅಂತ್ಯ ಹಾಡಬೇಕು ಎಂದು ಶಾಸಕರು ಒತ್ತಾಯಿಸಿದರು.

ಮುಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್‌, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್‌ ಜಯಾನಂದ ಅಂಚನ್‌, ಮೂಡುಶೆಡ್ಡೆ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಜಯಶ್ರೀ ಸೇರಿದಂತೆ ಸಂಘಟನೆಗಳ ಮುಖಂಡರು, ವಾಮಂಜೂರು ಜುಮಾ ಮಸೀದಿಯ ಮುಖಂಡರು ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು. 

Similar News