ಸಂಸತ್ ಸದಸ್ಯತ್ವಕ್ಕೆ ದಿಢೀರ್ ರಾಜೀನಾಮೆ ನೀಡಿದ ಬ್ರಿಟನ್ ಮಾಜಿ ಪ್ರಧಾನಿ

Update: 2023-06-10 03:03 GMT

ಲಂಡನ್: ಬ್ರಿಟನ್‍ನ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಅವರ ಸ್ಥಾನಕ್ಕೆ ಉಪ ಚುನಾವಣೆ ನಡೆಯಬೇಕಾಗಿದೆ.

ಎಲ್ಲ ಕೋವಿಡ್-19 ನಿಯಮಾವಳಿಗಳನ್ನು ಅನುಸರಿಸಲಾಗುತ್ತಿದೆ ಎಂಬ ಹೇಳಿಕೆ ನೀಡುವ ಮೂಲಕ ಜಾನ್ಸನ್ ಬ್ರಿಟನ್‍ನ ಹೌಸ್ ಆಫ್ ಕಾಮನ್ಸ್ ಅನ್ನು ತಪ್ಪುದಾರಿಗೆ ಎಳೆದಿದ್ದಾರೆ ಎಂಬ ಆರೋಪದ ಬಗ್ಗೆ ಸಂಸದೀಯ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರ ರಾಜಕೀಯ ಭವಿಷ್ಯದ ಬಗ್ಗೆ ಅನಿಶ್ಚಿತತೆ ಕಾಡುತ್ತಿರುವ ಮಧ್ಯೆಯೇ ಸಂಸತ್ ಸದಸ್ಯತ್ವ ತೊರೆದಿದ್ದಾರೆ.

"ಸಂಸತ್ ತ್ಯಜಿಸುತ್ತಿರುವುದು ಸದ್ಯಕ್ಕಂತೂ ಅತೀವ ಬೇಸರ ತಂದಿದೆ" ಎಂದು ಜಾನ್ಸನ್ ಹೇಳಿಕೆ ನೀಡಿದ್ದಾರೆ. "ಯಾವುದೇ ಪುರಾವೆ ಇಲ್ಲದೇ ಹಾಗೂ ಕನಿಷ್ಠ ಕನ್ಸರ್ವೇಟಿವ್ ಪಾರ್ಟಿಯ ಸದಸ್ಯರ ಒಪ್ಪಿಗೆಯೂ ಇಲ್ಲದೇ ಹೇಳಿಕೆ ನೀಡುತ್ತಿರುವ ಕೆಲವೇ ಮಂದಿಯ ಗುಂಪಿನಿಂದಾಗಿ ನಾನು ಈ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿದೆ" ಎಂದು ವಿವರಿಸಿದ್ದಾರೆ.

ಜಾನ್ಸನ್ ಉದ್ದೇಶಪೂರ್ವಕವಾಗಿ ಸದನದ ದಾರಿ ತಪ್ಪಿಸಿದ್ದಾರೆ ಎಂದು ಸಾಬೀತಾದಲ್ಲಿ ಸಂಸತ್‍ನ ವಿಶೇಷ ಹಕ್ಕುಗಳ ಸಮಿತಿ ಜಾನ್ಸನ್ ಅವರನ್ನು 10 ದಿನಗಳಿಗಿಂತ ಹೆಚ್ಚು ಕಾಲ ಸಂಸತ್‍ನಿಂದ ಅಮಾನತು ಮಾಡಬಹುದಾಗಿದೆ.

ವಿಶೇಷ ಹಕ್ಕುಗಳ ಸಮಿತಿಯಿಂದ ಪತ್ರ ಬಂದಿರುವುದನ್ನು ದೃಢಪಡಿಸಿರುವ ಮಾಜಿ ಪ್ರಧಾನಿ, ನನ್ನನ್ನು ಸಂಸತ್‍ನಿಂದ ಹೊರಗಟ್ಟಲು ಈ ಪ್ರಕ್ರಿಯೆಯನ್ನು ಬಳಸಿಕೊಳ್ಳುವ ದೃಢ ನಿರ್ಧಾರಕ್ಕೆ ಬಂದಂತಿದೆ ಎಂದು ಆಪಾದಿಸಿದ್ದಾರೆ.

Similar News