ಯುವಜನರಲ್ಲಿ ಸ್ವಾತಂತ್ರ್ಯದ ಮೌಲ್ಯಗಳನ್ನು ಪುನರುಜ್ಜೀವನಗೊಳಿಸಲು ‘ಪಂಚ ಪ್ರಾಣ್’ ಯೋಜನೆ: ಸಂಸದ ನಳಿನ್ ಕುಮಾರ್

ಮಂಗಳೂರು: ಜಿಲ್ಲಾ 'ಯುವ ಉತ್ಸವ' ಉದ್ಘಾಟನೆ

Update: 2023-06-10 10:20 GMT

ಮಂಗಳೂರು, ಜೂ.10: ಯುವ ಜನರಲ್ಲಿ ದೇಶ ಪ್ರೇಮ ಮತ್ತು ಸ್ವಾತಂತ್ರ್ಯದ ಮೌಲ್ಯಗಳನ್ನು ಪುನರುಜ್ಜೀವನಗೊಳಿಸಲು ‘ಪಂಚ ಪ್ರಾಣ್’ ಯೋಜನೆಯನ್ನು ನೆಹರು ಯುವ ಕೇಂದ್ರದ ವತಿಯಿಂದ ದೇಶಾದ್ಯಂತ ಜಾರಿಗೊಳಿಸಲಾಗುತ್ತಿದೆ ಎಂದು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

ಭಾರತ ಸರಕಾರದ ನೆಹರೂ ಯುವ ಕೇಂದ್ರ ಮಂಗಳೂರು ಇದರ ವತಿಯಿಂದ ನಗರದ ಕುದ್ಮಲ್ ರಂಗರಾವ್ ಪುರಭವನದ ಮಿನಿ ಹಾಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ 'ಜಿಲ್ಲಾ ಯುವ ಉತ್ಸವ-23' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಯುವ ಉತ್ಸವ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ 5 ಸ್ಪರ್ಧೆಗಳಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಆಯ್ಕೆಯಾಗಿ ರಾಷ್ಟ್ರಮಟ್ಟದಲ್ಲಿ ಕೀರ್ತಿ ಬೆಳಗಿಸಬೇಕು. ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಮುಗಿಸಿ, ಶತಮಾನದತ್ತ ಸಂಚರಿಸುತ್ತಿದ್ದೇವೆ. ಜಗತ್ತು ಭಾರತವನ್ನು ಗೌರವಿಸಬೇಕಾದರೆ, ಯುವಜನರ ಪಾತ್ರ ಅತ್ಯಗತ್ಯ. ಭಾರತ ಯುವಕರ ದೇಶ ಎಂದೇ ಗುರುತಿಸಿಕೊಂಡಿದ್ದು, ದೇಶ ಸಾಂಸ್ಕೃತಿಕವಾಗಿ ಎತ್ತರಕ್ಕೆ ಏರಬೇಕು ಹಾಗೂ ಸ್ವಾವಲಂಬಿಯಾಗಿ ಎದ್ದು ನಿಲ್ಲಬೇಕಿದೆ ಎಂದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನೆಹರು ಯುವ ಕೇಂದ್ರ ದೇಶಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಯುವ ಉತ್ಸವ ಆಯೋಜಿಸಿದೆ. ಆ ಮೂಲಕ ಜಿಲ್ಲಾ ಮಟ್ಟದಿಂದ ರಾಜ್ಯ ಮತ್ತು ರಾಷ್ಟ್ರದವರೆಗೆ ಪ್ರಗತಿ ಹೊಂದುತ್ತಿರುವ ವಿವಿಧ ಕಾರ್ಯಕ್ರಮದಲ್ಲಿ ಯುವಕರನ್ನು ತೊಡಗಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಯುವ ಕಲಾವಿದರು, ಬರಹಗಾರರು, ಛಾಯಾಗ್ರಾಹಕರು, ಸಾಂಪ್ರದಾಯಿಕ ಕಲಾ ಪ್ರಕಾರಗಳ ಕಲಾವಿದರು ಮತ್ತು ಒಟ್ಟಾರೆಯಾಗಿ ದೇಶದ ಯುವ ಜನರು ಈ ಅಂದೋಲನದಲ್ಲಿ ತಳಮಟ್ಟದಿಂದ ಭಾಗವಹಿಸಲಿದ್ದಾರೆ ಎಂದು ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.

ವೇದಿಕೆಯಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಎನ್‌ವೈಕೆಎಸ್‌ನ ಪ್ರಾದೇಶಿಕ ನಿರ್ದೇಶಕ ಎಮ್.ಎನ್ ನಟರಾಜ್, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಯಶವಂತ್ ಯಾದವ್, ಜಿ.ಎಫ್.ಜಿ.ಸಿ. ಕಾರ್‌ಸ್ಟ್ರೀಟ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಯಕರ ಭಂಡಾರಿ, ದ.ಕ. ಯೂತ್ ಫೆಡರೇಶನ್‌ ಅಧ್ಯಕ್ಷ ಸುರೇಶ್ ರೈ ಹಾಗೂ ಮಾಜಿ ಜಿಲ್ಲಾ ಯುವ ಅಧಿಕಾರಿ ಜೆ.ಎಫ್.ಡಿಸೋಜ ಉಪಸ್ಥಿತರಿದ್ದರು.

Similar News