ಶಾಸಕರು ಅಭಿವೃದ್ಧಿ ಕಡೆ ಗಮನಹರಿಸಲು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆಗ್ರಹ

Update: 2023-06-10 13:45 GMT

ಮಂಗಳೂರು : ರಾಜ್ಯದಲ್ಲಿ ಮತ್ತೆ ಕೋಮುಸಂಘರ್ಷ ವಾತಾವರಣ ಸೃಷ್ಟಿಯಾಗುವ ಭೀತಿ ಇದೆ ಎನ್ನುವ ಮೂಲಕ ಶಾಸಕ ವೇದವ್ಯಾಸ ಕಾಮತ್ ಜನತೆಯಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರಕಾರ ಅಧಿಕಾರ ವಹಿಸಿಕೊಂಡ ಸಮಯದಿಂದ ಅಭಿವೃದ್ಧಿ ವಿಷಯ ಬಗ್ಗೆ ಯಾವುದೇ ಚಕಾರ ಎತ್ತದೆ, ಸುಖಾಸಮ್ಮನೆ ಆರೋಪ ಮಾಡುತ್ತಿರುವ ಶಾಸಕರು ಕ್ಷೇತ್ರದ ಅಭಿವೃದ್ಧಿಯ ಕಡೆ ಗಮನಹರಿಸಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ತಿಳಿಸಿದ್ದಾರೆ.

ಇನ್ನೇನು ಮಳೆಗಾಲ ಆರಂಭವಾಗಲಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಮಾಡಿದ ಎಡವಟ್ಟಿನಿಂದ ನಗರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಈ ಬಗ್ಗೆ ಶಾಸಕರು ಮೊದಲು ಗಮನಹರಿಸಲಿ. ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನರು ಕೋಮು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಕಾಂಗ್ರೆಸ್‌ಗೂ ಸಂಸ್ಕೃತಿ, ಸಂಸ್ಕಾರದ ಬಗ್ಗೆ ಅರಿವು ಇದೆ. ಬಿಜೆಪಿಗರು ಭಾವನಾತ್ಮಕವಾಗಿ ಜನತೆಯನ್ನು ಮರುಳು ಮಾಡುವುದನ್ನು ಕೈಬಿಡಲಿ ಎಂದು ಆಗ್ರಹಿಸಿದ್ದಾರೆ.

ಭಾವನಾತ್ಮಕ ಮಾತುಗಳ ಮೂಲಕ ಜನತೆಯಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಸುವುದು ಬಿಜೆಪಿಗರಿಗೆ ಚಾಲಿಯಾಗಿದೆ. ಕಾಂಗ್ರೆಸ್ ಬಡವರ ಪರವಾಗಿದ್ದು, ದೇಶದಲ್ಲೇ ಮಾದರಿಯಾಗಿ ರೂಪಿಸಿ, ಅಭಿವೃದ್ಧಿಯಲ್ಲೂ ನಂಬರ್ ವನ್ ರಾಜ್ಯವನ್ನಾಗಿಸುವ ಗುರಿಯನ್ನು ಹೊಂದಿದೆ ಎಂದು ಪದ್ಮರಾಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Similar News