ಒಗ್ಗಟ್ಟೇ ದೇಶದ ಶಕ್ತಿ : ವಿಧಾನಸಭೆಯ ಸಭಾಧ್ಯಕ್ಷ ಯುಟಿ ಖಾದರ್

ವಿವಿ ಸಂಧ್ಯಾ ಕಾಲೇಜು ವಾರ್ಷಿಕೋತ್ಸವ

Update: 2023-06-10 17:44 GMT

ಮಂಗಳೂರು: ದೇಶದ ಒಗ್ಗಟ್ಟೇ ದೇಶದ ಶಕ್ತಿ, ವಿಶ್ವದಲ್ಲಿ ದೇಶ ಮುಂಚೂಣಿಗೆ ಬರಬೇಕಾದರೆ ನಮ್ಮ ಸಮಾಜದಲ್ಲಿ ಒಗ್ಗಟ್ಟು ಮೂಡಬೇಕು, ಒಡಕು ಇರಬಾರದು ಈ ನಿಟ್ಟಿನಲ್ಲಿ ಸಾಮರಸ್ಯದ ಹಾಗೂ ಸಹೋದರತೆಯನ್ನು ನೆಲೆಗೊಳಿಸುವುದು ಮುಖ್ಯ ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಹೇಳಿದ್ದಾರೆ.

ಅವರು ಶನಿವಾರ ವಿವಿ ಕಾಲೇಜ್‌ನ ರವೀಂದ್ರ ಕಲಾಭವನದಲ್ಲಿ ನಡೆದ ಮಂಗಳೂರು ವಿಶ್ವ ವಿದ್ಯಾಲಯ ಸಂಧ್ಯಾ ಕಾಲೇಜ್‌ನ 7ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಸಾಯಬಾರದು. ಶೈಕ್ಷಣಿಕ ಕ್ಷೇತ್ರದಿಂದ ಜೀವನದಲ್ಲಿ ಪ್ರಗತಿ ಪಡೆಯಲು ಸಾಧ್ಯವಿದೆ. ಭಾರತ ದೇಶ ಪ್ರಗತಿಯನ್ನು ಕಾಣಬೇಕು ಎಂದರೆ ಕೇವಲ ಜನಪ್ರತಿನಿಧಿಗಳು ಬಲಿಷ್ಢರಾದರೆ ಸಾಲದು, ಎಸಿ ರೂಮಲ್ಲಿ ಕುಳಿತುಕೊಳ್ಳುವ ಅಧಿಕಾರಿಗಳು, ವ್ಯಾಪಾರಿಗಳು ಬಲಿಷ್ಠರಾದರೆ ದೇಶ ಬಲಿಷ್ಠವಾಗುವು ದಿಲ್ಲ. ತರಗತಿಯ ಕೊಠಡಿಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿ ಬಲಿಷ್ಠರಾದರೆ ಮಾತ್ರ ದೇಶ ಪ್ರಗತಿ ಹೊಂದುತ್ತದೆ. ಶಿಕ್ಷಣದಿಂದ ಮಾತ್ರ ದೇಶದ ಆಸ್ತಿಯಾಗಿ ನಾವು ಬದಲಾಗಬಹುದು, ಎಲ್ಲರೂ ದೇಶದ ಸಂಪತ್ತಾಗಿ ಬದಲಾಗಬೇಕು, ಶಿಕ್ಷಣ ಮತ್ತು ವ್ಯಕ್ತಿತ್ವವನ್ನು ವೃದ್ಧಿಗೊಳಿಸುವ ಸಮಾಜಕ್ಕೆ ಪೂರಕವಾಗಿ ಅದನ್ನು  ಒಗ್ಗೂಡಿಸುವ ನಿಟ್ಟಿನಲ್ಲಿ ಕಾರ್ಯತತ್ಪರಾಗಬೇಕು, ಸಾಮರಸ್ಯ ಹಾಗೂ ಸೋದರತೆಯನ್ನು ಉಳಿಸಿ ಬೆಳೆಸಿಕೊಳ್ಳಬೇಕು, ಅಭಿವೃದ್ಧಿ ಹೊಂದಿದ ಭಾರತ ಹಾಗೂ ಬಲಿಷ್ಠ ಕರ್ನಾಟಕ ಸ್ಥಾಪಿಸಲು ಎಲ್ಲರೂ ಮುಂದಡಿ ಇಡಬೇಕು ಎಂದರು.

ಕರಾವಳಿ ಲೇಖಕಿಯರ ವಾಚಕೀಯರ ಸಂಘದ ಅಧ್ಯಕ್ಷರಾದ ಡಾ.ಡಿ.ಜ್ಯೋತಿ ಚೇಳ್ಯಾರು ಅವರು ಮಾತನಾಡಿ, ಅರಿವಿನ ಕ್ಷಮತೆಯ ರಹದಾರಿಯಾಗಿ ಭವಿಷ್ಯ ನಿರ್ಮಿಸಿಕೊಳ್ಳಲು ಶಿಕ್ಷಣ ಮುಖ್ಯವಾಗಿದೆ. ಸರಿ ತಪ್ಪು ವಿವೇಚನೆಯ ಜತೆಗೆ ಸಮಾಜವನ್ನೂ ಒಗ್ಗೂಡಿಸುವಂತಹ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದರು.

ಮಂಗಳೂರು ವಿವಿಯ ಕುಲಸಚಿವರಾದ ಪ್ರೊ.ಕಿಶೋರ್ ಕುಮಾರ್ ಸಿ.ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು, ಸಮಾಜದಲ್ಲಿ ಸಾಮಾಜಿಕ ಮೌಲ್ಯಗಳನ್ನು ಬೆಳೆಸುತ್ತಾ ಬೆಳೆಯಬೇಕು, ಶಿಸ್ತಿಗೆ ಬಹಳ ಪ್ರಾಮುಖ್ಯತೆ ನೀಡಬೇಕು. ಸಂಧ್ಯಾ ಕಾಲೇಜ್‌ಗೂ  ರ್ಯಾಂಕ್  ಬರಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಹಾಗೂ ಜ್ಯೋತಿ ಚೇಳ್ಯಾರು ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಸಂಘದ ಉಪ ನಿರ್ದೇಶಕರಾದ ಡಾ.ಜಗದೀಶ್ ಬಿ.,  ಡಿಪ್ಲೊಮಾ ಇನ್ ಜಿಎಸ್‌ಟಿ ಸಂಯೋಜಕರಾದ ಡಾ.ಯತೀಶ್ ಕುಮಾರ್, ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರತಿಭಾ ಕೆ., ಕಾರ್ಯದರ್ಶಿ ಶಶಾಂಕ್, ಲಲಿತಾ ಕಲಾ ಸಂಘದ ಕಾರ್ಯದರ್ಶಿ ಗಣೇಶ್ ಆಚಾರ್ಯ, ಸಹ ಕಾರ್ಯದರ್ಶಿ ನಿಮಿತಾ ಕೆ.ಎಂ. ಉಪಸ್ಥಿತರಿದ್ದರು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಮಾಧವ ಎಂ.ಕೆ. ಶೈಕ್ಷಣಿಕ ವರದಿ ಮಂಡಿಸಿದರು. ಈ ಸಂದರ್ಭ ವಿವಿಧ ಸ್ಪರ್ಧೆ ಹಾಗೂ ಕ್ರೀಡಾಕೂಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉಪನ್ಯಾಸಕಿ ಮಧುಶ್ರೀ ಜೆ.ಶ್ರಿಯಾನ್, ಅಶ್ವತ್ಥ್ ಸಾಲ್ಯಾನ್ ನಿರ್ವಹಿಸಿದರು. ಪ್ರಿನ್ಸಿಪಾಲರಾದ ಡಾ.ಲಕ್ಷ್ಮೀದೇವಿ ಎಲ್. ಸ್ವಾಗತಿಸಿದರು.

ದುರ್ಗಾ ಮೆನನ್ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಸಹ ಕಾರ್ಯದರ್ಶಿ ಸ್ವಾತಿ ಮರಿಯಾ ಡಿಸೋಜ ವಂದಿಸಿದರು.

Similar News