ಮಂಗಳೂರು | ಸೈಬರ್ ವಂಚನೆಯ ಬಗ್ಗೆ ಜಾಗೃತರಾಗಿ: ಎಸಿಪಿ ನಜ್ಮಾ ಫಾರೂಕಿ ಸಲಹೆ
ಮಂಗಳೂರು, ಡಿ.13: ಅಪರಾಧ ಕೃತ್ಯಗಳ ಸ್ವರೂಪ ಬದಲಾಗುತ್ತಿದೆ. ಇಂದಿನ ಯುವಜನತೆ ಮಾದಕ ವಸ್ತು ಸೇವನೆ, ಸೈಬರ್ ಕ್ರೈಂ, ಅತ್ಯಾಚಾರದಂತಹ ಕ್ರಿಮಿನಲ್ ಕೃತ್ಯಗಳಲ್ಲಿ ಹೆಚ್ಚಾಗಿ ಶಾಮೀಲಾಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಅದೇ ರೀತಿ ಆನ್ಲೈನ್ ವಂಚನೆಗೊಳಗಾಗಿ ಅದೆಷ್ಟೂ ಮಂದಿ ಹಣ, ಬದುಕನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವುದಲ್ಲದೆ ಜನರೂ ಕೂಡ ಕಾನೂನು, ಮಾನವ ಹಕ್ಕುಗಳು ಮತ್ತು ಕರ್ತವ್ಯಗಳನ್ನು ತಿಳಿಯುವ ಅಗತ್ಯ ಇದೆ ಎಂದು ಎಸಿಪಿ ನಜ್ಮಾ ಫಾರೂಕಿ ಹೇಳಿದ್ದಾರೆ.
ಲಯನ್ಸ್ ಇಂಟರ್ ನ್ಯಾಷನಲ್ ಜಿಲ್ಲೆ 317 ಡಿ ವತಿಯಿಂದ ನಗರದ ಬಲ್ಮಠ ಶಾಂತಿನಿಲಯದಲ್ಲಿ ನಡೆದ ಮಾನವ ಹಕ್ಕುಗಳು ಎಂಬ ವಿಷಯದಲ್ಲಿ ನಡೆದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸೈಬರ್ ವಂಚನೆ, ಡಿಜಿಟಲ್ ಅರೆಸ್ಟ್, ಸಾಮಾಜಿಕ ಜಾಲತಾಣಗಳ ಮೂಲಕ ಬ್ಲ್ಯಾಕ್ಮೇಲ್, ಯುಪಿಎ ಸ್ಕ್ಯಾನ್ ಹೆಸರಲ್ಲಿ ವಂಚನೆ, ಸಾಮಾಜಿಕ ಜಾಲತಾಣಗಳಲ್ಲಿ ಇನ್ನೊಬ್ಬರ ಹೆಸರಲ್ಲಿ ನಕಲಿ ಖಾತೆ ತೆರೆದು ಹಣಕ್ಕಾಗಿ ಬೇಡಿಕೆ ಇಡುವುದು, ಸೆಲೆಬ್ರಿಟಿಗಳ ಫೋಟೋಗಳನ್ನು ಮಾರ್ಫ್ ಮಾಡಿ ವಂಚಿಸುವುದು, ಎಪಿಕೆ ಫೈಲ್ ಗಳ ಮೂಲಕ ವಂಚನೆ, ಕೆವೈಸಿ, ಆಧಾರ್ ಅಪ್ಡೇಟ್ ಹೆಸರಲ್ಲಿ ವಂಚನೆ, ಹಣ ದ್ವಿಗುಣಗೊಳಿಸಿ ಕೊಡಲಾಗುವುದು ಎಂದು ಹೇಳಿ ಹಣ ಹೂಡಿಕೆ ಮಾಡಿಸಿ ಮೋಸ ಮಾಡುವುದು ಅಧಿಕವಾಗಿದೆ. ಹಾಗಾಗಿ ಈ ಬಗ್ಗೆ ಸದಾ ಜಾಗೃತರಾಗಬೇಕು ಎಂದು ನಜ್ಮಾ ಫಾರೂಕಿ ನುಡಿದರು.
ಅಡ್ವಕೇಟ್ ಉದಯಾನಂದ ಕೆ. ಮುಖ್ಯ ಭಾಷಣಗೈದರು. ಕಾರ್ಯಕ್ರಮದಲ್ಲಿ ಬಿ.ಪಿ ಆಚಾರ್ ಬರೆದ ಮಾನವ ಹಕ್ಕುಗಳ ಕುರಿತ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಕಾಲೇಜು ಮಕ್ಕಳಿಂದ ಮಾನವ ಹಕ್ಕು ಕುರಿತು ಪ್ಯಾನೆಲ್ ಡಿಸ್ಕಷನ್, ರಸಪ್ರಶ್ನೆ, ಬಹುಮಾನ ವಿತರಣೆ ನಡೆಯಿತು.
ಜಿಲ್ಲಾ ಗವರ್ನರ್ ಕುಡ್ಪಿಅರವಿಂದ ಶೆಣೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಸಂಯೋಜಕ ಎಡ್ವಿನ್ ವಾಲ್ಟರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಂಎಚ್ ಕರುಣಾಕರ್, ಬಿ.ಎಸ್.ರೈ, ಕೆ.ಚಂದ್ರಮೋಹನ್ ರಾವ್, ಪ್ರಜ್ವಲ ಯು.ಎಸ್., ಎಂ.ಟಿ.ರಾಜಾ, ಜ್ಯೋತಿ ಎಸ್. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಆಶಾ ಚಂದ್ರಮೋಹನ್ ಕಾರ್ಯಕ್ರಮ ನಿರೂಪಿಸಿದರು.