×
Ad

ಕೊರಗರು ಸೇರಿದಂತೆ ಅಳಿವಿನಂಚಿನಲ್ಲಿರುವ ಬುಡಕಟ್ಟು ಗುಂಪುಗಳ ಪ್ರತಿನಿಧಿಗಳಿಗೆ ರಾಷ್ಟ್ರಪತಿ ಆತಿಥ್ಯ

ರಾಷ್ಟ್ರಪತಿ ಭವನದಲ್ಲಿ ಮುರ್ಮುರನ್ನು ಭೇಟಿಯಾದ ಪ್ರತಿನಿಧಿಗಳು

Update: 2023-06-13 22:30 IST

ಹೊಸದಿಲ್ಲಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕೊರಗ ಸಮುದಾಯ ಸೇರಿದಂತೆ ದೇಶದಲ್ಲಿ ವಿನಾಶದಂಚಿನಲ್ಲಿರುವ ಬುಡಕಟ್ಟು ಗುಂಪುಗಳ 75 ಮಂದಿ ಪ್ರತಿನಿಧಿಗಳು ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

 ಕರ್ನಾಟಕದ ಕೊರಗರು, ಜೇನುಕುರುಬರು, ಕೇರಳದ ಇರುಳರು, ರಾಜಸ್ತಾನದ ಸಹಾರಿಯಾ, ಮಧ್ಯಪ್ರದೇಶದ ಬೈಗಾ ಪರ್ದೌನಿ,ಗುಜರಾತ್ನ ಸಿದ್ದಿಗಳು, ಒಡಿಶಾದ ಬುಡಿಗಾಲಿ ಸೇರಿದಂತೆ ವಿನಾಶದಂಚಿನಲ್ಲಿರುವ ಬುಡಕಟ್ಟು ಪಂಗಡಗಳ 75 ಪ್ರತಿನಿಧಿಗಳು ಭಾಗವಹಿಸಿದ್ದರು.  

ಇಂತಹ ಉಪಕ್ರಮ ನಡೆದಿರುವುದು ಇದೇ ಮೊದಲ ಸಲವಾಗಿದ್ದು, ರಾಷ್ಟ್ರಪತಿಯವರು ಅಳಿವಿನಂಚಿನಲ್ಲಿರುವ ಬುಡಕಟ್ಟು ಪಂಗಡಗಳ 75 ಮಂದಿ ಪ್ರತಿನಿಧಿಗಳನ್ನು ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಲು ಆಹ್ವಾನಿಸಿದ್ದರು. ಪ್ರತಿನಿಧಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡ ಅವರು, ಬುಡಕಟ್ಟು ಪಂಗಡಗಳ ಅಭಿವೃದ್ಧಿಗಾಗಿ ಸರಕಾರ ಹಮ್ಮಿಕೊಂಡಿರುವ ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಳ ಪ್ರಯೋಜನ ಪಡೆಯುವಂತೆ ಕರೆ ನೀಡಿದರು.

ಈ ಸಂದರ್ಭ ರಾಷ್ಟ್ರಪತಿ ಭವನದ ಕ್ರೀಡಾಂಗಣದಲ್ಲಿ ವಿವಿಧ ಪ್ರತಿನಿಧಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಮುರ್ಮು ಅವರು, ‘‘ಪ್ರತಿನಿಧಿಗಳಲ್ಲಿ ಹಲವರು ಇದೇ ಮೊದಲ ಬಾರಿಗೆ ತಮ್ಮ ಹಳ್ಳಿಯನ್ನು ಬಿಟ್ಟು ಹೊರಗೆ ಬಂದಿರಬಹುದು. ಆದರೆ ಅವರೆಲ್ಲರೂ ತಮ್ಮ ತಮ್ಮ ಸಮುದಾಯಗಳನ್ನು ಪ್ರತಿನಿಧಿಸುವವರಾಗಿದ್ದಾರೆ ’’ ಎಂದರು. ರಾಷ್ಟ್ರಪತಿ ಭವನಕ್ಕೆ ತಮ್ಮ ಭೇಟಿಯ ಅನುಭವಗಳನ್ನು ಅವರು ತಮ್ಮ ಸಮುದಾಯದ ಉಳಿದ ಪ್ರತಿನಿಧಿಗಳ ಜೊತೆ ಹಂಚಿಕೊಳ್ಳುವಂತೆ ಹಾಗೂ ಸರಕಾರದ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.

ಅಳಿವಿನಂಚಿನಲ್ಲಿರುವ ಸಮುದಾಯಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವಂತೆಊ ರಾಷ್ಟ್ರಪತಿ ಈ ಸಂದರ್ಭದಲ್ಲಿ ಕಿವಿಮಾತು ಹೇಳಿದರು.ಅಳಿವಿನಂಚಿನಲ್ಲಿರುವ ಸಮುದಾಯದ 28 ಲಕ್ಷ ಮಂದಿ ಸೇರಿದಂತೆ ದೇಶದ 10 ಕೋಟಿಗೂ ಅಧಿಕ ಬುಡಕಟ್ಟು ಜನರು ತಮ್ಮ ಪ್ರತಿಭೆಗಳನ್ನು ಅಭಿವೃದ್ಧಿಪಡಿಸುವಂತೆ ಹಾಗೂ ಸಮಾಜ ಹಾಗೂ ದೇಶದ ಪ್ರಗತಿಗೆ ಕೊಡುಗೆ ನೀಡುವಂತೆ ಕರೆ ನೀಡಿದರು.

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಮಾತನಾಡಿ ಬುಡಕಟ್ಟು ಅಭಿವೃದ್ಧಿ ಹಾಗೂ ಕಲ್ಯಾಣಕ್ಕಾಗಿನ ಕಾರ್ಯಕ್ರಮಗಳ ಅನುಷ್ಟಾನಗೊಳಿಸುವಾಗ ಅಳಿವಿನಂಚಿನಲ್ಲಿ ಬುಡಕಟ್ಟು ಪಂಗಡಗಳು ಫಲಾನುಭವಿಗಳಾಗುವಂತೆ ಮಾಡಲು ಸರಕಾರವು ಗಮನಹರಿಸಲಿದೆಯೆಂದು ಹೇಳಿದರು

ರಾಷ್ಟ್ರೀಯ ಬುಡಕಟ್ಟು ಪಂಡಗಳ ಮಂಡಳಿಯ ಅಧ್ಯಕ್ಷ ಹರ್ಷ ಚೌಹಾಣ್, ಬುಡಕಟ್ಟು ವ್ಯವಹಾರಗಳ ಸಹಾಯಕ ಸಚಿವೆ ರೇಣುಕಾ ಸಿಂಗ್ ಸರುಟಾ, ಜಲಶಕ್ತಿ ಹಾಗೂ ಬುಡಕಟ್ಟು ವ್ಯವಹಾರಗಳ ಸಹಾಯಕ ಸಚಿವ ಬಿಶ್ವೇಶ್ವರ ಟುಡು ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರತಿನಿಧಿಗಳಿಗೆ ರಾಷ್ಟ್ರಪತಿ ಭವನ ಹಾಗೂ ಅಮೃತ ಉದ್ಯಾನವನವನ್ನು ಸಂದರ್ಶಿಸಲು ಏರ್ಪಾಡು ಮಾಡಲಾಗಿತ್ತು.

Similar News