×
Ad

ಬಿಪರ್‌ಜಾಯ್‌ ಚಂಡಮಾರುತ: ಗುಜರಾತಿನ ಕರಾವಳಿ ಜಿಲ್ಲೆಗಳ 21,000 ಜನರ ಸ್ಥಳಾಂತರ

Update: 2023-06-13 22:37 IST

ಅಹ್ಮದಾಬಾದ್: ಭಾರೀ ಹಾನಿಯನ್ನುಂಟು ಮಾಡಬಹುದಾದ ಬಿಪರ್‌ಜಾಯ್‌ ಚಂಡಮಾರುತವು ಜೂ.15ರಂದು ಸಂಜೆ ಗುಜರಾತಿನ ಕಛ್ ಜಿಲ್ಲೆಯಲ್ಲಿನ ಜಖಾವು ಬಂದರಿನ ಸಮೀಪ ಅಪ್ಪಳಿಸುವ ನಿರೀಕ್ಷೆಯಿದ್ದು,ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದ ವಿವಿಧ ಕರಾವಳಿ ಜಿಲ್ಲೆಗಳಿಂದ 21,000 ಜನರನ್ನು ಈವರೆಗೆ ಸ್ಥಳಾಂತರಿಸಲಾಗಿದೆ. ಹಲವಾರು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ ಎಂದು ರಾಜ್ಯ ಸುರಕ್ಷತಾ ಆಯುಕ್ತ ಅಲೋಕ ಕುಮಾರ ಪಾಂಡೆಯವರು ಮಂಗಳವಾರ ತಿಳಿಸಿದರು.

ತೆರವು ಪ್ರಕ್ರಿಯೆಯು ಇನ್ನೂ ಪ್ರಗತಿಯಲ್ಲಿದೆ ಮತ್ತು ಅಪಾಯಕ್ಕೆ ಗುರಿಯಾಗಬಹುದಾದ ಎಲ್ಲ ಜನರನ್ನು ಇಂದು ರಾತ್ರಿಯೊಳಗೆ ಸ್ಥಳಾಂತರಿಸಲಾಗುವುದು ಎಂದರು.

ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯ ಪ್ರಕಾರ, ಚಂಡಮಾರುತವು ವಿಸ್ತ್ರತ ಹಾನಿಯನ್ನುಂಟು ಮಾಡುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಗುಜರಾತಿನ ಕಛ್, ದೇವಭೂಮಿ ದ್ವಾರಕಾ ಮತ್ತು ಜಾಮನಗರ ಜಿಲ್ಲೆಗಳ ಮೇಲೆ ಅತ್ಯಂತ ಹೆಚ್ಚಿನ ಪರಿಣಾಮವನ್ನು ಬೀರುವ ಸಾಧ್ಯತೆಯಿದೆ.

ಸಮುದ್ರ ತೀರದಿಂದ 10 ಕಿ.ಮೀ.ವ್ಯಾಪ್ತಿ ಆಲ್ಲಿರುವ ಎಲ್ಲ ಜನರನ್ನು ಸ್ಥಳಾಂತರಿಸಲು ರಾಜ್ಯ ಸರಕಾರವು ಬಯಸಿದೆ ಎಂದು ತಿಳಿಸಿದ ಪಾಂಡೆ, ಚಂಡಮಾರುತದಿಂದಾಗಿ ಈವರೆಗೆ ಕೇವಲ ಒಂದು ಸಾವು ಸಂಭವಿಸಿದೆ ಎಂದರು.

ಅಹ್ಮದಾಬಾದ್ ಐಎಂಡಿ ನಿರ್ದೇಶಕಿ ಮನೋರಮಾ ಮೊಹಂತಿ ಅವರ ಪ್ರಕಾರ ಚಂಡಮಾರುತವು ಜೂ.15ರಂದು ಪ್ರತಿ ಗಂಟೆಗೆ 135 ಕಿ.ಮೀ.ನಿಂದ 150 ಕಿ.ಮೀ.ವೇಗದ ಗಾಳಿಯೊಂದಿಗೆ ಕಛ್ನ ಮಾಂಡ್ವಿ ಮತ್ತು ಪಾಕಿಸ್ತಾನದ ಕರಾಚಿ ನಡುವೆ ಜಖಾವು ಬಂದರಿನ ಸಮೀಪ ಹಾದು ಹೋಗಲಿದೆ.

ರೈಲುಗಳು ರದ್ದು ಗುಜರಾತಿನಲ್ಲಿ ಬಿಪರ್ಜಾಯ್ ಚಂಡಮಾರುತ ಎಚ್ಚರಿಕೆಯನ್ನು ಪರಿಗಣಿಸಿ ಪಶ್ಚಿಮ ರೈಲ್ವೆಯು ಚಂಡಮಾರುತದ ಅಪಾಯಕ್ಕೆ ಸಿಲುಕಬಹುದಾದ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇನ್ನಷ್ಟು ರೈಲುಗಳ ಕಾರ್ಯಾಚರಣೆಯನ್ನು ಭಾಗಶಃ ರದ್ದುಗೊಳಿಸಲು ನಿರ್ಧರಿಸಿದೆ. ಇದರೊಂದಿಗೆ ಈ ಪ್ರದೇಶಗಳಲ್ಲಿಯ ರೈಲು ಪ್ರಯಾಣಿಕರಿಗಾಗಿ ವಿವಿಧ ಸುರಕ್ಷತಾ ಮತ್ತು ಭದ್ರತಾ ಮುನ್ನೆಚ್ಚರಿಕೆ ಕ್ರಮಗಳನ್ನೂ ಅದು ತೆಗೆದುಕೊಳ್ಳುತ್ತಿದೆ.

ಅಸ್ತಿತ್ವದಲ್ಲಿರುವ ನಿಯಮಗಳಂತೆ ಪ್ರಯಾಣಶುಲ್ಕ ಮರುಪಾವತಿಗೂ ಅವಕಾಶ ಕಲ್ಪಿಸಲಾಗಿದೆ. ಇತ್ತೀಚಿನ ಪ್ರಕಟಣೆಯಂತೆ ಪಶ್ಚಿಮ ರೈಲ್ವೆಯು ಇನ್ನೂ ಮೂರು ರೈಲುಗಳ ಸಂಚಾರವನ್ನು ಮೊಟಕುಗೊಳಿಸಿದೆ. ಇದರೊಂದಿಗೆ ಒಟ್ಟು 69 ರೈಲುಗಳನ್ನು ರದ್ದುಗೊಳಿಸಲಾಗಿದ್ದು,58 ರೈಲುಗಳ ಸಂಚಾರವನ್ನು ಮೊಟಕುಗೊಳಿಸಲಾಗಿದೆ.

ಈ ನಡುವೆ ಭಾರತದ ಅತಿ ದೊಡ್ಡ ಸಾರ್ವಜನಿಕ ಕ್ಷೇತ್ರದ ಬಂದರು ಆಗಿರುವ ಕಾಂಡ್ಲಾ ತನ್ನೆಲ್ಲ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ.

Similar News