×
Ad

ಉಪ್ಪಿನಂಗಡಿ: ಬತ್ತಿ ಹೋದ ನೇತ್ರಾವತಿಗೆ ಅಣೆಕಟ್ಟಿನ ಅಭಯ

Update: 2023-06-14 22:54 IST

ಉಪ್ಪಿನಂಗಡಿ: ಅಂತರ್ಜಲ ವೃದ್ಧಿಸುವ ಸಲುವಾಗಿ ಬಂಟ್ವಾಳ ತಾಲೂಕು  ಬಿಳಿಯೂರು ಎಂಬಲ್ಲಿ 50 ಕೋಟಿಗೂ ಮಿಗಿಲಾದ ಮೊತ್ತದಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡ ಅಣೆಕಟ್ಟಿಗೆ ಪರೀಕ್ಷಾರ್ಥ ಗೇಟು ಅಳವಡಿಸುವ ಕಾರ್ಯ  ನಡೆದಿದ್ದು, 4 ಮೀಟರ್ ಎತ್ತರದ ಗೇಟು ತುಂಬಲು ಇನ್ನೂ ಎರಡೂವರೆ ಅಡಿ ಬಾಕಿ ಇರುವಂತೆಯೇ ಅಣೆಕಟ್ಟಿನ ಹಿನ್ನೀರು ನಿರೀಕ್ಷಿತ ಪ್ರದೇಶಕ್ಕಿಂತಲೂ ಮಿಗಿಲಾದ ಪ್ರದೇಶಕ್ಕೆ ವಿಸ್ತರಿಸಲಟ್ಟಿದೆ.

46.70 ಕೋಟಿ ರೂ ಅಂದಾಜು ಮೊತ್ತದಲ್ಲಿ  ಚಾಲನೆ ಪಡೆದ ಈ ಯೋಜನೆಯು ಬಳಿಕ 55.5 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದ್ದು, ಸಂಪರ್ಕ  ಸೇತುವೆಯನ್ನು ಒಳಗೊಂಡ ಈ ಅಣೆಕಟ್ಟಿನಿಂದ ಪ್ರಾರಂಭದಲ್ಲಿ 34 ನೇ ನೆಕ್ಕಿಲಾಡಿ ಗ್ರಾಮದ  ಬೊಳ್ಳಾರ್ ವರೆಗೆ ನೀರು ನಿಲ್ಲಬಹುದೆಂದು  ಅಂದಾಜಿಸಲಾಗಿತ್ತು. ಕಳೆದ ಸೋಮವಾರದಂದು ಅಣೆಕಟ್ಟಿಗೆ ಪರೀಕ್ಷಾರ್ಥವಾಗಿ 4 ಮೀಟರ್ ಎತ್ತರದ ಗೇಟು ಅಳವಡಿಸಲಾಗಿದ್ದು, ಬುಧವಾರ ಮಧ್ಯಾಹ್ನದ ವೇಳೆ ಉಪ್ಪಿನಂಗಡಿಯ ಕೂಟೇಲು ಪರಿಸರದವರೆಗೆ  ನದಿಯಲ್ಲಿ ಹಿನ್ನೀರು  ಸಂಗ್ರಹಗೊಂಡಿದೆ. ಅಳವಡಿಸಲಾದ ಗೇಟು ಭರ್ತಿಯಾಗಲು ಇನ್ನೂ ಎರಡುವರೆ ಅಡಿಯಷ್ಟು ಬಾಕಿ ಇದ್ದು,  ಹಿನ್ನೀರಿನ ಸಂಗ್ರಹಗೊಳ್ಳುವ ಪ್ರದೇಶ ಮತ್ತಷ್ಟು ವಿಸ್ತಾರಗೊಳ್ಳುವ ಸಾಧ್ಯತೆ ಇದೆ.

ಪರೀಕ್ಷಾರ್ಥ  ಗೇಟು ಅಳವಡಿಕೆಯ ವೇಳೆ  ಯಾವೆಲ್ಲಾ ಪ್ರದೇಶಗಳು  ಹಿನ್ನೀರಿನಿಂದ ಪ್ರಯೋಜನ ಪಡೆಯುತ್ತದೆ  ಎನ್ನುವುದನ್ನು  ದಾಖಲಿಸಿದ ಬಳಿಕ  ಗೇಟು ತೆರವುಗೊಳಿಸಲಾಗುತ್ತದೆ. ಬಳಿಕ  ಮಳೆಗಾಲ ಕೊನೆಗೊಳ್ಳುವ  ಸಮಯದಲ್ಲಿ ಅಂದರೆ ನವೆಂಬರ್  ಅಥವಾ ಡಿಸೆಂಬರ್ ತಿಂಗಳಲ್ಲಿ ಮತ್ತೆ  ಗೇಟು ಅಳವಡಿಸಿ ಅಣೆಕಟ್ಟಿನಲ್ಲಿ ನೀರು ಸಂಗ್ರಹಿಸಲಾಗುವುದು. ತನ್ಮೂಲಕ ಅಣೆಕಟ್ಟಿನಿಂದ 8 ಕಿ.ಮೀ. ದೂರದವರೆಗಿನ ಪ್ರದೇಶಗಳ ಜನತೆಗೆ ಅಂತರ್ಜಲ ವೃದ್ಧಿ ತನ್ಮೂಲಕ ಕೃಷಿ ಅಭಿವೃದ್ಧಿ ಹಾಗೂ ಬಹು ಗ್ರಾಮ ಕುಡಿಯುವ ಯೋಜನೆಯನ್ನು ಅನುಷ್ಠಾನಿ ಸಲು ಅವಕಾಶ ಒದಗಿಸಿದಂತಾಗುತ್ತದೆ. 

ಹೊಸ ಅಣೆಕಟ್ಟಿನ ಅವಶ್ಯಕತೆ  ಇನ್ನಿಲ್ಲ: ಕ್ಷೇತ್ರದ ನೂತನ ಶಾಸಕರು  ಅಭಿಪ್ರಾಯಿಸಿದಂತೆ  ಉಪ್ಪಿನಂಗಡಿ  ಸಂಗಮ ಕ್ಷೇತ್ರದ ಸನಿಹದಲ್ಲಿ  ಅಣೆಕಟ್ಟು ನಿರ್ಮಿಸಿ  ಪ್ರವಾಸೋದ್ಯಮ ಕ್ಷೇತ್ರವನ್ನಾಗಿಸುವ ಯೋಜನೆಯನ್ನು ಪ್ರಸ್ತಾಪಿಸಿದ್ದು, ಇದೀಗ ಬಿಳಿಯೂರು  ಅಣೆಕಟ್ಟಿನ ಹಿನ್ನೀರು  ಉಪ್ಪಿನಂಗಡಿಯಾಚೆಗೂ  ವಿಸ್ತಾರಗೊಳ್ಳುತ್ತಿರು ವುದರಿಂದ ಈ ಪ್ರದೇಶದಲ್ಲಿ ಹೊಸದಾಗಿ ಅಣೆಕಟ್ಟು ನಿರ್ಮಿಸುವ  ಅಗತ್ಯತೆ ಕಂಡು ಬರುವುದಿಲ್ಲ.  ಮೇಲಾಗಿ  34 ನೇ ನೆಕ್ಕಿಲಾಡಿಯಲ್ಲಿ ಪುತ್ತೂರು ನಗರ ಸಭಾ ವ್ಯಾಪ್ತಿಗೆ  ನೀರು ಪೂರೈಸುವ ಕುಮಾರಧಾರಾ ನದಿಯ  ಅಣೆಕಟ್ಟಿನಲ್ಲಿಯೂ ಬಿಳಿಯೂರು ಅಣೆಕಟ್ಟಿನ  ಹಿನ್ನೀರು ಈಗಾಗಲೇ ಶೇಖರಣೆಗೊಂಡಿರುವುದರಿಂದ ನೆಕ್ಕಿಲಾಡಿ ಅಣೆಕಟ್ಟಿನಲ್ಲಿ  ಮುಂದಿನ ದಿನಗಳಲ್ಲಿ ನೀರು ತಡೆಗಟ್ಟುವ ಅವಶ್ಯಕತೆ  ಉದ್ಭವಿಸುವುದಿಲ್ಲ. 

ನೇತ್ರಾವತಿ ನದಿ ಗರ್ಭದ ಉದ್ಭವ ಲಿಂಗ  ಸದಾ ಮುಳುಗಡೆ  ಸಾಧ್ಯತೆ: ಅಣೆಕಟ್ಟಿನಲ್ಲಿ 4 ಮೀಟರ್ ಎತ್ತರದ ವರೆಗೆ  ನೀರು ಸಂಗ್ರಹಗೊಳ್ಳುವುದರಿಂದ  ಅಣೆಕಟ್ಟಿನ ಹಿನ್ನೀರು ನೇತ್ರಾವತಿ ನದಿಯ 8 ಕಿ.ಮೀ. ಉದ್ದಕ್ಕೂ ವಿಸ್ತಾರಗೊಳ್ಳುವುದರಿಂದ  ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ  ದೇವಾಲಯದ  ಮಖೆ ಜಾತ್ರೆಯ ಸಮಯದಲ್ಲಿ  ವಿಶೇಷ ಪೂಜಾ  ಕೈಂಕರ್ಯಕ್ಕೆ  ಒಳಗಾಗುತ್ತಿರುವ ನದಿ ಗರ್ಭದಲ್ಲಿರುವ ಉದ್ಭವ ಲಿಂಗವು ಹಿನ್ನೀರಿನಿಂದ  ಮುಳು ಗಡೆಗೊಳ್ಳಲಿದ್ದು, ಪಾರಂಪರಿಕ ಪೂಜಾ  ಕೈಂಕರ್ಯಕ್ಕೆ ತಡೆಯಾಗುವ  ಸಾಧ್ಯತೆ  ಕಂಡು ಬಂದಿದೆ. ಮಾತ್ರವಲ್ಲದೆ ಪವಿತ್ರ ಸಂಗಮ ಸ್ನಾನದ ಮಹತ್ವ ಪಡೆದಿರುವ ಸಂಗಮ  ಸ್ಥಳದ ತೀರ್ಥ ಸ್ನಾನವು  ಹಿನ್ನೀರಿನಲ್ಲೇ  ನಡೆಸುವ ಅನಿವಾರ್ಯತೆಯನ್ನು  ಮೂಡಿಸಿದೆ.

ಯೋಜನೆ ನಿರೀಕ್ಷಿತ ವ್ಯಾಪ್ತಿಯನ್ನು ಮೀರಿ ಹೆಚ್ಚು ಫಲಪ್ರದವೆನಿಸಿದೆ: ಶಿವಪ್ರಸನ್ನ

ಬಿಳಿಯೂರು  ಅಣೆಕಟ್ಟಿನಿಂದ ಈ ಮೊದಲು ನಿರೀಕ್ಷಿಸಿದ್ದ ವ್ಯಾಪ್ತಿಯು ಮತ್ತಷ್ಟು ವಿಸ್ತಾರಗೊಂಡಿರುವುದರಿಂದ ಹೆಚ್ಚಿನ ಪ್ರದೇಶಗಳ ಕೃಷಿ ಭೂಮಿಯು ಈ ಯೋಜನೆಯಿಂದ ಪ್ರಯೋಜನ ಪಡೆಯಲಿದೆ. ಈಗಾಗಲೇ ಪರೀಕ್ಷಾರ್ಥ ಗೇಟು ಅಳವಡಿಕೆಯ  ಕಾರ್ಯದಲ್ಲಿ ನದಿಯ 8 ಕಿ.ಮೀ. ವ್ಯಾಪ್ತಿಯಲ್ಲಿ ನೀರು ಸಂಗ್ರಹಣೆಗೊಳ್ಳುತ್ತಿರುವುದರಿಂದ ಮುಂದಿನ ವರ್ಷದುದ್ದಕ್ಕೂ ಇದೇ ಮಟ್ಟದಲ್ಲಿ ನೀರು ನದಿಯಲ್ಲಿ ಸಂಗ್ರಹಗೊಂಡು  ಹೆಚ್ಚುವರಿ ನೀರು  ಮುಂದಕ್ಕೆ ಹರಿಯಲಿದೆ.  ಇದರಿಂದಾಗಿ ಈ ವರ್ಷ ಸಂಪೂರ್ಣ ಬತ್ತಿ ಹೋಗಿದ್ದ ನೇತ್ರಾವತಿ ನದಿಯು  ಮುಂದಿನ ದಿನಗಳಲ್ಲಿ ಜಲಾಶಯ ವಾಗಿ ಪರಿವರ್ತನೆಯಾಗಲಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಶಿವ ಪ್ರಸನ್ನ ಮಾಧ್ಯಮಕ್ಕೆ  ವಿವರಿಸಿದ್ದಾರೆ. 

ಪೆರ್ನೆ ಗ್ರಾ.ಪಂ ಹಿರಿಯ ಸದಸ್ಯ ನವೀನ ಪದೆಬರಿ ಈ ಕಿಂಡಿ ಅಣೆಕಟ್ಟು ಈ ಭಾಗದ ರೈತರ ಹಲವು ವರ್ಷ ಬೇಡಿಕೆಯಾಗಿದ್ದು, ಶಾಸಕರಿಂದ ಹಿಡಿದು ಸರಕಾರದ ಮಟ್ಟದಲ್ಲಿ ಯೋಜನೆಗಾಗಿ ಪಟ್ಟು ತಂದ ಕಾರಣ ಬೆಳ್ತಂಗಡಿ ಹಾಗೂ ಪುತ್ತೂರು ಎರಡು ತಾಲೂಕಿನ ನದಿ ಇಕ್ಕಡೆಗಳ ರೈತರ ಭೂಮಿಯಲ್ಲಿ ಅಂತರ್ಜಲ ಉತ್ತಮವಾಗಿರುವು ದಲ್ಲದೆ, ಉಪ್ಪಿನಂಗಡಿಲ್ಲಿ  ನೇತ್ರಾವತಿ ಕುಮಾರಧಾರಗಳ ನೀರಿನ ಮಟ್ಟ ಹೆಚ್ಚಿಸುವಲ್ಲಿ ಕಾರಣವಾಗಿದೆ.

Similar News