×
Ad

ಸಿಬಿಐಗೆ ರಾಜ್ಯದೊಳಗೆ ತನಿಖೆ ನಡೆಸಲು ನೀಡಲಾಗಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆದ ತಮಿಳುನಾಡು

Update: 2023-06-15 14:38 IST

ಚೆನ್ನೈ: ದಿಲ್ಲಿ ವಿಶೇಷ ಪೊಲೀಸ್ ಸಂಸ್ಥೆ ಕಾಯ್ದೆಯ ಸೆಕ್ಷನ್ 6ರ ಅಡಿ ರಾಜ್ಯ ಸರ್ಕಾರದ ಯಾವುದೇ ಅನುಮತಿ ಇಲ್ಲದೆ ರಾಜ್ಯದೊಳಗೆ ತನಿಖೆ ನಡೆಸಲು ಕೇಂದ್ರ ತನಿಖಾ ದಳ(ಸಿಬಿಐ)ಕ್ಕೆ ನೀಡಲಾಗಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆದಿರುವುದಾಗಿ ತಮಿಳುನಾಡಿನ ಡಿಎಂಕೆ ನೇತೃತ್ವದ ಸರ್ಕಾರ ಪ್ರಕಟಿಸಿದೆ. ಮತ್ತೊಂದು ಕೇಂದ್ರ ತನಿಖಾ ಸಂಸ್ಥೆಯಾದ ಜಾರಿ ನಿರ್ದೇಶನಾಲಯವು ರಾಜ್ಯ ಇಂಧನ ಸಚಿವ ವಿ.ಸೆಂಥಿಲ್‌ಬಾಲಾಜಿ ಅವರನ್ನು ಬಂಧಿಸಿದ ದಿನವೇ ಈ ನಿರ್ಧಾರ ಪ್ರಕಟಗೊಂಡಿದೆ ಎಂದು thehindu.com ವರದಿ ಮಾಡಿದೆ.

"ಮುಂದಿನ ದಿನಗಳಲ್ಲಿ ತನಿಖೆ ನಡೆಸುವುದಕ್ಕೂ ಮುನ್ನ ಕೇಂದ್ರ ತನಿಖಾ ಸಂಸ್ಥೆಯು ರಾಜ್ಯ ಸರ್ಕಾರದ ಪೂರ್ವಾನುಮತಿ ಪಡೆಯಬೇಕು" ಎಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹೇಳಲಾಗಿದೆ.

ಈ ವರ್ಷದ ಮಾರ್ಚ್ ತಿಂಗಳಲ್ಲಿ ಮಿಝೋರಾಂ, ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ರಾಜಸ್ಥಾನ, ಮಹಾರಾಷ್ಟ್ರ, ಕೇರಳ, ಝಾರ್ಖಂಡ್, ಪಂಜಾಬ್ ಹಾಗೂ ಮೇಘಾಲಯ ಸೇರಿದಂತೆ ಒಟ್ಟು ಒಂಬತ್ತು ರಾಜ್ಯಗಳು ಸಿಬಿಐಗೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆದಿವೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸಂಸತ್ತಿಗೆ ತಿಳಿಸಿದ್ದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದಲ್ಲಿ ಪಕ್ಷದ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಎಂ.ಕೆ‌.ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷವು ಪ್ರಮುಖ ಮೈತ್ರಿ ಪಕ್ಷವಾಗಿದೆ. 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಬಿಜೆಪಿಯು ನಾಲ್ಕು ಶಾಸಕರನ್ನು ಹೊಂದಿದ್ದರೂ ರಾಜ್ಯದಿಂದ ಯಾವುದೇ ಲೋಕಸಭಾ ಅಥವಾ ರಾಜ್ಯಸಭಾ ಸದಸ್ಯರನ್ನು ಹೊಂದಿಲ್ಲ. ಅದರ ಮೈತ್ರಿಪಕ್ಷವಾದ ಎಐಎಡಿಎಂಕೆ ಮಾತ್ರ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ತನ್ನ ಸದಸ್ಯರನ್ನು ಹೊಂದಿದೆ.

ದಿಲ್ಲಿ ವಿಶೇಷ ಪೊಲೀಸ್ ಸಂಸ್ಥೆ ಕಾಯ್ದೆ, 1946ರ ಪ್ರಕಾರ, ಕೇಂದ್ರ ತನಿಖಾ ಸಂಸ್ಥೆಯು ಯಾವುದಾದರೂ ರಾಜ್ಯದ ವ್ಯಾಪ್ತಿಯಲ್ಲಿ ತನಿಖೆ ಕೈಗೊಳ್ಳುವ ಮುನ್ನ ಸಂಬಂಧಿಸಿದ ರಾಜ್ಯ ಸರ್ಕಾರಗಳ ಅನುಮತಿ ಪಡೆಯಬೇಕಾಗುತ್ತದೆ. ಯಾವುದೇ ಅಡಚಣೆ ಇಲ್ಲದೆ ತನಿಖೆ ನಡೆಸಲು ಸಾಧ್ಯವಾಗಲು ರಾಜ್ಯ ಸರ್ಕಾರಗಳು ಕೇಂದ್ರ ತನಿಖಾ ಸಂಸ್ಥೆಗೆ ಸಾಮಾನ್ಯ ಒಪ್ಪಿಗೆ ನೀಡುತ್ತಾ ಬರುತ್ತಿವೆ.

ಜಂಟಿ ನಿರ್ದೇಶಕರು ಮತ್ತು ಚೆನ್ನೈ ವಲಯದ ಮುಖ್ಯಸ್ಥರ ಕಚೇರಿ, ಭ್ರಷ್ಟಾಚಾರ ನಿಗ್ರಹ ದಳ, ವಿಶೇಷ ಅಪರಾಧ ವಿಭಾಗ, ವಿಶೇಷ ಘಟಕ ಹಾಗೂ ವೈಜ್ಞಾನಿಕ ನೆರವು ಘಟಕ  ಸೇರಿದಂತೆ ಹಲವಾರು ಕೇಂದ್ರ ತನಿಖಾ ಸಂಸ್ಥೆಯ ಜಾಲದ ಕಚೇರಿಗಳು ತಮಿಳುನಾಡಿನ ಚೆನ್ನೈ ಹಾಗೂ ಮದುರೈನಲ್ಲಿ ನೆಲೆಯೂರಿವೆ. ಈ ನಡುವೆ 2015ರಲ್ಲಿ ಮಿಝೋರಾಂ ಸರ್ಕಾರವು ಕೇಂದ್ರ ತನಿಖಾ ಸಂಸ್ಥೆಗೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆದಿತ್ತು. 2018ರಲ್ಲಿ ಪಶ್ಚಿಮ ಬಂಗಾಳ ಸರ್ಕಾರ, 2019ರಲ್ಲಿ ಛತ್ತೀಸ್‌ಗಢ ಸರ್ಕಾರ ಇದನ್ನೇ ಮಾಡಿದ್ದವು. 2020ರಲ್ಲಿ ರಾಜಸ್ಥಾನ, ಮಹಾರಾಷ್ಟ್ರ, ಕೇರಳ, ಝಾರ್ಖಂಡ್ ಹಾಗೂ ಪಂಜಾಬ್ ರಾಜ್ಯ ಸರ್ಕಾರಗಳೂ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆದಿದ್ದವು. 2022ರಲ್ಲಿ ಮೇಘಾಲಯ ಸರ್ಕಾರ ತನ್ನ ಒಪ್ಪಿಗೆಯನ್ನು ಹಿಂಪಡೆದಿತ್ತು.

ಕೇಂದ್ರ ತನಿಖಾ ಸಂಸ್ಥೆಯು ಭಾರತ ಸರ್ಕಾರದ ಸಿಬ್ಬಂದಿ, ಪಿಂಚಣಿ ಮತ್ತು ಸಾರ್ವಜನಿಕ ಕುಂದುಕೊರತೆ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಡಿ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯು ಭಾರತದ ಅತ್ಯುನ್ನತ ತನಿಖಾ ಸಂಸ್ಥೆಯಾಗಿದೆ.

Similar News