×
Ad

ಸಂಶೋಧನೆ ವಿಜ್ಞಾನದ ಅವಿಭಾಜ್ಯ ಅಂಗ: ಡಾ.ಗುರುಮೂರ್ತಿ

Update: 2023-06-15 19:35 IST

ಉಡುಪಿ, ಜೂ.15: ಮೂಲ ವಿಜ್ಞಾನದಲ್ಲಿ ನಡೆಯುವ ಸಂಶೋಧನೆ ಜೀವನದ ಅವಿಭಾಜ್ಯ ಅಂಗ. ಇದರಿಂದ ಜೀವನ ಶೈಲಿ ಮೇಲ್ದರ್ಜೆಗೆ ಏರಿಸಲು ಸಾಧ್ಯವಿದೆ ಎಂದು ಬೆಂಗಳೂರು ಕ್ರೈಸ್ಟ್ ವಿವಿಯ ಸೆಂಟರ್ ಫಾರ್ ಅಡ್ವಾನ್ಸಡ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್‌ನ (ಸಿಎಆರ್‌ಡಿ)ನ ನಿರ್ದೇಶಕ ಡಾ. ಗುರುಮೂರ್ತಿ ಹೆಗ್ಡೆ ಹೇಳಿದ್ದಾರೆ.

ನಗರದ ಪೂರ್ಣಪ್ರಜ್ಞ ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ವತಿಯಿಂದ ಕಾಲೇಜಿನ ವಿಜ್ಞಾನಿ ಸಂಘದ ಆಶ್ರಯದಲ್ಲಿ ಗುರುವಾರ ನಡೆದ ವಿಜ್ಞಾನಿ-ವಿದ್ಯಾರ್ಥಿ ಸಂವಾದ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತಿದ್ದರು. ದೇಶ, ಪರಿಸರ, ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಸಂಶೋಧನೆಗಳು ನಡೆಯಬೇಕು ಎಂದು ಅವರು ಹೇಳಿದರು. 

ಸಂಶೋಧನೆಯಿಂದಾಗಿ ಜಗತ್ತು ಅಭಿವೃದ್ಧಿಯೊಂದಿಗೆ ಮುಂದೆ ಸಾಗುತ್ತಿದೆ. ಕೊರೋನೋತ್ತರ ಭಾರತದ ಡಿಜಿಟಲ್ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಯಾಗಿದ್ದು, ಹೊಸಹೊಸ ಅನ್ವೇಷಣೆಗಳು ಹೊಸ ಹೊಸ ತಂತ್ರಜ್ಞಾನಕ್ಕೆ ಕೊಡುಗೆ ನೀಡುತ್ತಿದೆ. ಇದರಿಂದ ಭಾರತದತ್ತ ಕುತೂಹಲದಿಂದ ನೋಡುತ್ತಿದೆ ಎಂದವರು ನುಡಿದರು.

ಮಕ್ಕಳಲ್ಲಿ ಪ್ರಶ್ನಿಸುವ ಗುಣ ಅತ್ಯಂತ ಮುಖ್ಯವಾಗಿದೆ. ಮಗುವಿನಲ್ಲಿ ಅನ್ವೇಷಣೆ ಮನೋಭಾವ ಬಾಲ್ಯದಿಂದಲೇ ಇರುತ್ತದೆ. ಆಟಿಕೆ ನೀಡಿದರೆ ಮೊದಲು ಅದನ್ನು ಬಿಚ್ಚಿ ನೋಡುತ್ತದೆ. ಅಂದರೆ ಅದರೊಳಗೆ ಏನಿದೆ ಎಂಬ ಕುತೂಹಲ ಅದಕ್ಕೆ. ನಂತರದ ದಿನಗಳಲ್ಲಿ ಪ್ರತಿಯೊಂದನ್ನು ಪ್ರಶ್ನಿಸಲು ಪ್ರಾರಂಭಿಸುತ್ತದೆ. ಆದರೆ  ಪೋಷಕರು ಪ್ರಶ್ನೆ ಕೇಳುವುದನ್ನೇ ನಿಲ್ಲಿಸುವ ರೀತಿಯಲ್ಲಿ ಬೆಳೆಸುತ್ತಾರೆ. ಈ ಮನೋಭಾವ ಬದಲಾಗಬೇಕು ಎಂದರು.

ಅಮೇರಿಕಾದ ಅಲಬಾಮ ವಿಶ್ವವಿದ್ಯಾನಿಲಯದ ಪೆಥಾಲಜಿ ಹಾಗೂ ಸಮಗ್ರ ಕ್ಯಾನ್ಸರ್ ಸೆಂಟರ್‌ನ ಪ್ರಾಧ್ಯಾಪಕ ಡಾ. ಸೂರ್ಯನಾರಾಯಣ ವಾರಂಬಳ್ಳಿ ಅವರು ಮಾತನಾಡಿದರು. 

ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಅವರು ವಿಜ್ಞಾನಿ- ವಿದ್ಯಾರ್ಥಿ ಸಂವಾದದ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಮಾಹೆ ಯ ಮಣಿಪಾಲ ಸೆಂಟರ್ ಫಾರ್ ನ್ಯಾಚುರಲ್ ಸಾಯನ್ಸ್‌ನ ನಿರ್ದೇಶಕ ಡಾ. ಪಿ. ಶ್ರೀಕುಮಾರ್ ಸಹ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. 

ಪೂರ್ಣಪ್ರಜ್ಞ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎ.ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು. ಪಿಪಿಸಿ ಆಡಳಿತಾಧಿ ಕಾರಿ ಡಾ.ಎ.ಪಿ. ಭಟ್, ಗೌರವ ಕಾರ್ಯದರ್ಶಿ ಡಾ. ಚಂದ್ರಶೇಖರ್, ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮೀ ಭಟ್, ಕಾರ್ಯಕ್ರಮ ಸಂಯೋಜಕ ಡಾ.ರಾಮು ಎಲ್. ಉಪಸ್ಥಿತರಿದ್ದರು.  

Similar News