×
Ad

ಬಾಲಕಿಯೊಂದಿಗೆ ರಾಜಿ ಮಾಡಿಸಲು ಅತ್ಯಾಚಾರ ಆರೋಪಿಯನ್ನು ಹಾಜರುಪಡಿಸಿ: ಅಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶನ

Update: 2023-06-16 19:56 IST

ಗಾಂಧಿನಗರ : 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುವ ಆರೋಪಿಯನ್ನು ನನ್ನ ಎದುರು ನಿಲ್ಲಿಸಿ; ಅವರ ನಡುವೆ ‘ರಾಜಿ’ ಮಾಡಿಸಲು ಸಾಧ್ಯವೇ ಎಂದು ನಾನು ನೋಡುತ್ತೇನೆ ಎಂದು ಗುಜರಾತ್ ಹೈಕೋರ್ಟ್ ನ್ಯಾಯಾಧೀಶರೊಬ್ಬರು ಗುರುವಾರ ರಾಜ್ಯದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ತನ್ನ ಮಗಳ ಏಳು ತಿಂಗಳ ಗರ್ಭವನ್ನು ತೆಗೆಯಲು ಅನುಮತಿ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ವೇಳೆ ನ್ಯಾಯಾಧೀಶ ಸಮೀರ್ ದವೆ ಈ ಸೂಚನೆ ನೀಡಿದ್ದಾರೆ.

ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ನಿಯಮಗಳ ಪ್ರಕಾರ, 20 ವಾರಗಳವರೆಗಿನ ಗರ್ಭವನ್ನು ಕೊನೆಗೊಳಿಸಲು ಅವಕಾಶವಿದೆ. ಅತ್ಯಾಚಾರದಿಂದಾಗಿ ಗರ್ಭ ಧರಿಸಿರುವ ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಪ್ರಕರಣದಲ್ಲಿ, 24 ವಾರಗಳವರೆಗಿನ ಗರ್ಭಗಳನ್ನು ಕೊನೆಗೊಳಿಸಬಹುದಾಗಿದೆ.

ಮೊರ್ಬಿ ಉಪಜೈಲ್ ನಲ್ಲಿರುವ 23 ವರ್ಷದ ಆರೋಪಿಯನ್ನು ಶುಕ್ರವಾರ ತನ್ನೆದುರು ಹಾಜರುಪಡಿಸುವಂತೆ ನ್ಯಾ. ದವೆ ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೂ ಮುನ್ನ, ಈ ಪ್ರಕರಣದಲ್ಲಿ ರಾಜಿ ಮಾಡಲು ಸಾಧ್ಯವೇ ಎನ್ನುವುದನ್ನು ತಿಳಿದುಕೊಳ್ಳಲು ನ್ಯಾಯಾಲಯದ ಅಧಿಕಾರಿಯಾಗಿ ನಾನು ಈಗಾಗಲೇ ಪ್ರಯತ್ನಿಸಿದ್ದೇನೆ, ಆದರೆ ಅದು ಸಾಧ್ಯವಿಲ್ಲ ಎನ್ನುವುದನ್ನು ಕಂಡುಕೊಂಡಿದ್ದೇನೆ ಎಂದು ಬಾಲಕಿಯ ವಕೀಲ ಸಿಕಂದರ್ ಸೈಯದ್ ನ್ಯಾಯಾಧೀಶರಿಗೆ ಹೇಳಿದ್ದರು.

ಆರೋಪಿಯು ರಾಜಿಗೆ ಸಿದ್ಧನಾದರೆ, ‘‘ಅಲ್ಲಿಗೆ ಪ್ರಕರಣ ಕೊನೆಗೊಳ್ಳುತ್ತದೆ’’ ಎಂದು ವಕೀಲರು ಅಭಿಪ್ರಾಯಪಟ್ಟರು. ‘‘ಅದು ಮೂರು ಜೀವಗಳನ್ನು ಉಳಿಸುತ್ತದೆ’’ ಎಂದರು.

ಜೂನ್ 7ರಂದು ನಡೆದ ಇದೇ ಪ್ರಕರಣದ ವಿಚಾರಣೆಯ ವೇಳೆ, ನ್ಯಾಯಮೂರ್ತಿ ದವೆ ಮನುಸ್ಮೃತಿಯನ್ನು ಉಲ್ಲೇಖಿಸಿ, ಹಿಂದಿನ ಕಾಲದಲ್ಲಿ ಹುಡುಗಿಯರು 14-16ನೇ ವರ್ಷದಲ್ಲಿ ಮದುವೆಯಾಗುತ್ತಿದ್ದರು ಮತ್ತು 17ನೇ ವರ್ಷದ ವೇಳೆಗೆ ಕನಿಷ್ಠ ಒಂದು ಮಗುವಿಗೆ ಜನ್ಮ ನೀಡುತ್ತಿದ್ದರು ಎಂದು ಹೇಳಿದ್ದರು.

ಬಾಲಕಿ ಅಥವಾ ಭ್ರೂಣದಲ್ಲಿ ಯಾವುದಾದರೂ ಗಂಭೀರ ಕಾಯಿಲೆಗಳು ಇಲ್ಲದಿದ್ದರೆ ಗರ್ಭಪಾತಕ್ಕೆ ಆದೇಶ ನೀಡಲು ಕಷ್ಟವಾಗುತ್ತದೆ ಎಂದು ನ್ಯಾಯಾಧೀಶರು ಹೇಳಿದ್ದರು.

ಗುರುವಾರ, ನ್ಯಾಯಾಧೀಶರ ಹೇಳಿಕೆಗಳನ್ನು ತಪ್ಪಾಗಿ ವ್ಯಾಖ್ಯಾನಿಸಲಾಗುತ್ತಿರುವ ಬಗ್ಗೆ ತನಗೆ ಚಿಂತೆಯಾಗಿದೆ ಎಂದು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಜಸ್ವಂತ್ ಶಾ ನ್ಯಾಯಾಲಯಕ್ಕೆ ಹೇಳಿದರು. ‘‘ಒಳ್ಳೆಯ ಭಾವನೆಯಿಂದ ಹೇಳಿರುವ ಮಾತುಗಳನ್ನು ಅನಗತ್ಯವಾಗಿ ಬೇರೆಯದೇ ರೀತಿಯಲ್ಲಿ ತೆಗೆದುಕೊಳ್ಳಲಾಗುತ್ತಿದೆ’’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ‘‘ನ್ಯಾಯಾಧೀಶರು ಸ್ಥಿತಪ್ರಜ್ಞರಾಗಿರಬೇಕು, ಅವರು ಹೊಗಳಿಕೆ ಮತ್ತು ಟೀಕೆಗಳೆರಡನ್ನೂ ನಿರ್ಲಕ್ಷಿಸಬೇಕು’’ ಎಂದರು.

Similar News