ಎಲ್ಲೂರು ಗ್ರಾಪಂ ಸದಸ್ಯತ್ವಕ್ಕೆ ಜಯಂತ್ ಭಟ್ ರಾಜೀನಾಮೆ
ಪಡುಬಿದ್ರಿ: ಎಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಂತ್ ಭಟ್ ವೈಯಕ್ತಿಕ ಕಾರಣ ನೀಡಿ ಅಧ್ಯಕ್ಷ ಸ್ಥಾನ ಹಾಗೂ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಎಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಅಧ್ಯಕ್ಷರಾಗಿ ಇದಕ್ಕೂ ಮೊದಲಿನ ಸಾಲಿನಲ್ಲಿ ಉಪಾಧ್ಯಕ್ಷರಾಗಿ, ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದರು.
ಇದೀಗ ಒಂದು ವರ್ಷಗಳ ಹಿಂದೆ ನಡೆದ ಅಪಘಾತವೊಂದರಲ್ಲಿ ಗಾಯಗೊಂಡಿದ್ದ ಕಾರಣ ಅಧ್ಯಕ್ಷರ ಹಾಗೂ ಸದಸ್ಯನಾಗಿ ಕರ್ತವ್ಯ ಮಾಡಲು ಕಷ್ಟವಾಗಿದೆ. ಇದಕ್ಕೆ ನನಗೆ ಆರೋಗ್ಯ ಸಹಕರಿಸದೆ ಇರುವುದರಿಂದ ಎಲ್ಲೂರು ಗ್ರಾಮಸ್ಥರಿಗೆ ಸರಿಯಾದ ನ್ಯಾಯವನ್ನು ಒದಗಿಸಲು ಅಸಮರ್ಥನಾಗಿದ್ದು, ಸ್ವ ಇಚ್ಚೆಯಿಂದ ಅಧ್ಯಕ್ಷ ಹಾಗೂ ಪಂಚಾಯಿತಿ ಸದಸ್ಯತ್ವಕ್ಕೂ ರಾಜೀನಾಮೆ ನೀಡುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ. ರಾಜೀನಾಮೆ ಪತ್ರವನ್ನು ಕುಂದಾಪುರ ಸಹಾಯಕ ಕಮೀಷನರ್‍ಗೆ ನೀಡಿದ್ದಾರೆ.
ಐದು ವರ್ಷ ಸದಸ್ಯನಾಗಿ, ಐದು ವರ್ಷ ಉಪಾಧ್ಯಕ್ಷನಾಗಿ, ಎರಡೂವರೆ ವರ್ಷಗಳ ಕಾಲ ಸೇರಿ ನಾನು ಕರ್ತವ್ಯ ನಿರ್ವಹಿಸಿದ್ದು, ನನ್ನ ಅವಧಿಯಲ್ಲಿ ಎಲ್ಲೂರು ಗ್ರಾಮಾ ಪಂಚಾಯಿತಿಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ನನ್ನ ಆರೋಗ್ಯದಲ್ಲಿ ಉಂಟಾಗಿರುವ ಸಮಸ್ಯೆಯಿಂದ ಮುಂದೆ ಕರ್ತವ್ಯ ನಿರ್ವಹಿಸಲು ಅಸಾಧ್ಯ ವಾಗಿದೆ. ನನಗೆ ಸಹಕಾರ ನೀಡಿದ ಎಲ್ಲಾ ಗ್ರಾಮಸ್ಥರಿಗೆ ಚಿರಋಣಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.