×
Ad

ಇರಾನ್ ಗೆ ಭೇಟಿ ನೀಡಿದ ಸೌದಿ ವಿದೇಶಾಂಗ ಸಚಿವ

Update: 2023-06-17 23:03 IST

ಟೆಹ್ರಾನ್: ಸೌದಿ ಅರೆಬಿಯಾದ ವಿದೇಶಾಂಗ ಸಚಿವ ಯುವರಾಜ ಫೈಸಲ್ ಬಿಮ್ ಫರ್ಹಾನ್ ಶನಿವಾರ ಟೆಹ್ರಾನ್ ಗೆ ಆಗಮಿಸಿದ್ದು 7 ವರ್ಷಗಳ ಬಳಿಕ ಸೌದಿಯ ಉನ್ನತ ಮುಖಂಡರೊಬ್ಬರು ಇರಾನ್ಗೆ ನೀಡಿರುವ ಅಧಿಕೃತ ಭೇಟಿ ಇದಾಗಿದೆ ಎಂದು ಸರಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.

ಈ ಪ್ರವಾಸದ ಸಂದರ್ಭ ಸೌದಿಯ ವಿದೇಶಾಂಗ ಸಚಿವರು ಇರಾನ್ನ ವಿದೇಶಾಂಗ ಸಚಿವ ಸೇರಿದಂತೆ ಉನ್ನತ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿಯವರನ್ನು ಭೇಟಿಯಾಗುವ ಯೋಜನೆಯಿದೆ ಎಂದು ಸೌದಿ ಮಾಧ್ಯಮಗಳು ವರದಿ ಮಾಡಿವೆ. 2016ರಲ್ಲಿ ಶಿಯಾ ಧಾರ್ಮಿಕ ಗುರು ನಿಮರ್-ಅಲ್ನಿಮರ್ಗೆ ಸೌದಿ ಅರೆಬಿಯಾದಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿರುವುದನ್ನು ವಿರೋಧಿಸಿ ಇರಾನ್ನಲ್ಲಿ ನಡೆದ ಪ್ರತಿಭಟನೆಯಲ್ಲಿ  ಟೆಹ್ರಾನ್ನಲ್ಲಿರುವ ಸೌದಿ ಅರೆಬಿಯಾದ ರಾಯಭಾರ ಕಚೇರಿ ಹಾಗೂ ಮಷಾದ್ನಲ್ಲಿರುವ ಕಾನ್ಸುಲೇಟ್ ಮೇಲೆ ದಾಳಿ ನಡೆಸಲಾಗಿತ್ತು. ಆ ಬಳಿಕ ಇರಾನ್ನೊಂದಿಗಿನ ರಾಜತಾಂತ್ರಿಕ ಬಾಂಧವ್ಯವನ್ನು ಸೌದಿ ಅರೆಬಿಯಾ ಕಡಿದುಕೊಂಡಿತ್ತು. ಅಂತೆಯೇ ಸೌದಿಯಲ್ಲಿನ ತನ್ನ ರಾಯಭಾರ ಕಚೇರಿಯನ್ನು ಇರಾನ್ ಮುಚ್ಚಿತ್ತು.

ಸುಮಾರು 7 ವರ್ಷಗಳ ಬಳಿಕ, ಕಳೆದ ಮಾರ್ಚ್ ನಲ್ಲಿ ಚೀನಾದ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯಲ್ಲಿ ದ್ವಿಪಕ್ಷೀಯ ಬಾಂಧವ್ಯ ಸುಧಾರಿಸಲು ಹಾಗೂ ತಮ್ಮ ರಾಯಭಾರ ಕಚೇರಿಯನ್ನು ಮರು ಆರಂಭಿಸಲು ಎರಡೂ ದೇಶಗಳು ಸಮ್ಮತಿಸಿದ್ದವು. ಜೂನ್ 6ರಂದು ಇರಾನ್ ಸರಕಾರ ಸೌದಿಯಲ್ಲಿನ ರಾಯಭಾರಿ ಕಚೇರಿಯನ್ನು ಮರುಆರಂಭಿಸಿದೆ.

ಇದೀಗ ಟೆಹ್ರಾನ್ ನಲ್ಲಿ ಸೌದಿಯ ರಾಯಭಾರ ಕಚೇರಿಯನ್ನು ಮತ್ತೆ ತೆರೆಯುವ ಬಗ್ಗೆ ಸೌದಿಯ ಯುವರಾಜರ ಭೇಟಿ ಸಂದರ್ಭ ಕೆಲವು ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ ಎಂದು ಇರಾನ್ ಸರಕಾರದ ವಕ್ತಾರ ಅಲಿ ಬಹಾದುರ್ ಜಹ್ರೋಮಿ ಹೇಳಿದ್ದಾರೆ.

Similar News