ಏಕಸ್ವಾಮ್ಯದ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಭಾರತವೇ ವಿಶ್ವಗುರು: ಪಿ. ಚಿದಂಬರಂ
ಹೊಸದಿಲ್ಲಿ: ಹೆಚ್ಚುತ್ತಿರುವ ವಿಮಾನಯಾನ ದರದ ವಿಚಾರದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ರವಿವಾರ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ಮುಕ್ತ ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚಾದಾಗ ಪೂರೈಕೆ ಹೆಚ್ಚುತ್ತದೆ ಆದರೆ, ಭಾರತದ ಮುಕ್ತ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾದಾಗ ಬೆಲೆಗಳು ಏರುತ್ತವೆ ಎಂದು ಅವರು ಹೇಳಿದ್ದಾರೆ.
ಹೆಚ್ಚುತ್ತಿರುವ ವಿಮಾನಯಾನ ದರದ ಬಗ್ಗೆ ಸರಿಯಾದ ನಿರ್ಧಾರವೊಂದನ್ನು ತೆಗೆದುಕೊಳ್ಳುವಂತೆ ಕಾಂಗ್ರೆಸ್ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಿದೆ.
‘‘ವಿಸ್ತಾರ ಮತ್ತು ಏರ್ ಇಂಡಿಯಾದಲ್ಲಿ ದಿಲ್ಲಿ-ಚೆನ್ನೈ ಬಿಝ್ನೆಸ್ ದರ್ಜೆಯ ಟಿಕೆಟ್‌ಗಳಿಗೆ ಕ್ರಮವಾಗಿ ರೂ. 6,300 ಮತ್ತು ರೂ. 5,700ರಷ್ಟು ಮಿತದರವನ್ನು ನಿಗದಿಪಡಿಸಲಾಗಿದೆ. ಓಹ್.. ಕ್ಷಮಿಸಿ.. ಅವುಗಳ ದರವನ್ನು ಅತ್ಯಂತ ಮಿತವಾಗಿ, ಅಂದರೆ ಕ್ರಮವಾಗಿ ರೂ. 63,000 ಮತ್ತು ರೂ. 57,000 ಎಂದು ನಿಗದಿಪಡಿಸಲಾಗಿದೆ’’ ಎಂಬುದಾಗಿ ಚಿದಂಬರಂ ಟ್ವೀಟ್ ಮಾಡಿದ್ದಾರೆ.
ವಿಮಾನಯಾನ ಸಂಸ್ಥೆಗಳು ತಮ್ಮ ಮಾರ್ಗಗಳನ್ನು ವಿಸ್ತರಿಸುತ್ತವೆ, ಹಳೆಯ ಮಾರ್ಗಗಳಲ್ಲಿ ವಿಮಾನಗಳ ಸಂಖ್ಯೆಯನ್ನು ಕಡಿಮೆಗೊಳಿಸುತ್ತವೆ ಮತ್ತು ಬೆಲೆಗಳನ್ನು ಏರಿಸುತ್ತವೆ ಎಂದು ಮಾಜಿ ಹಣಕಾಸು ಸಚಿವರು ಹೇಳಿದರು. ‘‘ಏಕಸ್ವಾಮ್ಯದ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಭಾರತವು ಜಗತ್ತಿಗೆ ವಿಶ್ವಗುರುವಾಗುವತ್ತ ಹೊರಟಿದೆ’’ ಎಂದಿದ್ದಾರೆ.