ಜೂ. 22ರ ಬಂದ್ ಕರೆಗೆ ಬೆಂಬಲವಿಲ್ಲ: ಪುತ್ತೂರು ವಾಣಿಜ್ಯ-ಕೈಗಾರಿಕಾ ಸಂಘ ಸ್ಪಷ್ಟನೆ
ಪುತ್ತೂರು: ವಿದ್ಯುತ್ ದರ ಏರಿಕೆಯನ್ನು ವಿರೋಧಿಸಿ ಜೂನ್ 22 ರಂದು ಕರ್ನಾಟಕ ಬಂದ್‍ಗೆ ಕರೆ ನೀಡಲಾಗಿದ್ದು, ಈ ಬಂದ್ ಕರೆಗೆ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಬೆಂಬಲ ವ್ಯಕ್ತಪಡಿಸುವುದಿಲ್ಲ. ಬಂದ್ ನಿಂದ ಯಾವುದೇ ಪ್ರಯೋಜನ ಇಲ್ಲ. ಅಲ್ಲದೆ ಕೈಗಾರಿಕಾ ವಲಯಕ್ಕೆ ಬಂದ್ ಮತ್ತಷ್ಟು ಹೊಡೆತ ನೀಡುತ್ತದೆ ಎಂಬ ಕಾರಣದಿಂದ ಈ ಬಂದ್‍ಗೆ ಬೆಂಬಲವಿಲ್ಲ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸ್ಪಷ್ಟ ಪಡಿಸಿದೆ.
ಈ ಬಗ್ಗೆ ಮಂಗಳವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಜೋನ್ ಕುಟಿನೊ ಹಾಗೂ ಕಾರ್ಯದರ್ಶಿ ಉಲ್ಲಾಸ್ ಪೈ ಅವರು ವಿದ್ಯುತ್ ದರ ಏರಿಕೆಯಿಂದ ಉತ್ಪಾದನಾ ವೆಚ್ಚ ಹೆಚ್ಚಾಗಲಿದೆ. ಇದರಿಂದ ಉತ್ಪಾದನೆಗೆ ದರ ಹೆಚ್ಚು ಮಾಡುವುದು ಅನಿವಾರ್ಯವಾಗಲಿದೆ. ಇದರಿಂದಾಗಿ ಜನ ಸಾಮಾನ್ಯರಿಗೆ ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯುತ್ ದರವನ್ನು ಇಳಿಸುವ ಬಗ್ಗೆ ಸಂಘವು ಪುತ್ತೂರು ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಲಿದೆ. ಅಲ್ಲದೆ ಶಾಸಕರ ಮೂಲಕವೂ ಸರ್ಕಾರಕ್ಕೆ ಒತ್ತಡ ಹಾಕುವ ಕೆಲಸ ಮಾಡಲಿದೆ ಎಂದರು.
ಹಿಂದೆ 1 ಕೆ.ವಿ ಗೆ ರೂ.125 ದರ ವಿಧಿಸಲಾಗುತ್ತಿತ್ತು. ಇದೀಗ 1 ಕೆ.ವಿಗೆ ರೂ 200 ದರ ವಿಧಿಸಲಾಗಿದೆ. ಪುತ್ತೂರಿ ನಲ್ಲಿ ಮೆಸ್ಕಾಂ ವಾರದ ಬಹುತೇಕ ದಿನಗಳಲ್ಲೂ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಇದರಿಂದ ಸಣ್ಣ ಕೈಗಾರಿಕಾ ವಲಯಕ್ಕೆ ತುಂಬಾ ತೊಂದರೆ ಉಂಟಾಗುತ್ತಿದೆ. ಮೆಸ್ಕಾಂ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕು. ವಾರದಲ್ಲಿ ಒಂದು ದಿನ ಮಾತ್ರ ವಿದ್ಯುತ್ ಕಡಿತ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ವಾಮನ ಪೈ, ನಿರ್ದೇಶಕ ಶ್ರೀಕಾಂತ್ ಕೊಳತ್ತಾಯ, ಮಾಜಿ ಅಧ್ಯಕ್ಷ ಕೇಶವ ಪೈ ಉಪಸ್ಥಿತರಿದ್ದರು.