×
Ad

ಅಕ್ಕಿ ನಿರಾಕರಣೆ: ಕೇಂದ್ರ ಸರಕಾರದ ವಿರುದ್ಧ ಸಿಪಿಎಂ ಪ್ರತಿಭಟನೆ

Update: 2023-06-20 19:12 IST

ಮಂಗಳೂರು, ಜೂ.20: ಕೇಂದ್ರ ಸರಕಾರವು ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡಲು ನಿರಾಕರಿಸಿದ ಕ್ರಮವನ್ನು ಖಂಡಿಸಿ ಸಿಪಿಎಂ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭ ಕೇಂದ್ರ ಸರಕಾರದ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ರಾಜ್ಯ ಸರಕಾರದ ಅನ್ನ ಭಾಗ್ಯ ಯೋಜನೆಗೆ ಹೆಚ್ಚುವರಿಯಾಗಿ ವರ್ಷಕ್ಕೆ 1.66 ಲಕ್ಷ ಟನ್ ಅಕ್ಕಿಗಾಗಿ ಜೂ.9ರಂದು ಭಾರತೀಯ ಆಹಾರ ನಿಗಮಕ್ಕೆ (ಎಫ್‌ಸಿಐ) ಮನವಿ ಮಾಡಿದಾಗ ಜೂ.11ರಂದು ಅಕ್ಕಿ ಕೊಡಬಹುದೆಂದು ಭಾರತೀಯ ಆಹಾರ ನಿಗಮ ಉತ್ತರ ನೀಡಿದ್ದರೂ ಜೂ.13ರಂದು ಕೇಂದ್ರ ಸರಕಾರದ ಮಧ್ಯ ಪ್ರವೇಶದಿಂದ ಅಕ್ಕಿ ನಿರಾಕರಣೆ ಮಾಡಿದೆ. ದುಡ್ಡು ಕೊಟ್ಟರೂ ಅಕ್ಕಿ ಕೊಡಲು ಒಪ್ಪುವುದಿಲ್ಲ ಎಂಬ ಕೇಂದ್ರ ಸರಕಾರದ ನೀತಿ ಸರ್ವಾಧಿಕಾರದ ನೀತಿ ಖಂಡನೀಯ ಎಂದರು.

ಸಿಪಿಎಂ ಕಾರ್ಯದರ್ಶಿ ಮಂಡಳಿ ಸದಸ್ಯ ಸುಕುಮಾರ್, ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ರಾದ ಸುನಿಲ್ ಕುಮಾರ್ ಬಜಾಲ್, ಸದಾಶಿವ ದಾಸ್, ಪದ್ಮಾವತಿ ಶೆಟ್ಟಿ ಮತ್ತು ಜಿಲ್ಲಾ ಸಮಿತಿ ಸದಸ್ಯರಾದ ಕೃಷ್ಣಪ್ಪಸಾಲಿಯಾನ್, ಜಯಂತಿ ಶೆಟ್ಟಿ, ಜಯಂತ ನಾಯ್ಕ್, ಯೋಗೀಶ್ ಜಪ್ಪಿನಮೊಗರು, ಸಂತೋಷ್ ಬಜಾಲ್, ಮನೋಜ್ ವಾಮಂಜೂರು, ಬಿ.ಕೆ. ಇಮ್ತಿಯಾಝ್ ಉಪಸ್ಥಿತರಿದ್ದರು.

Similar News