×
Ad

ಅಕ್ಕಿ ನಿರಾಕರಣೆಯ ಹಿಂದೆ ಕೇಂದ್ರ ಸರಕಾರ ದೊಡ್ಡ ಪಿತೂರಿ: ಮಾಜಿ ಸಚಿವ ರಮಾನಾಥ ರೈ ಆರೋಪ

Update: 2023-06-20 21:33 IST

ಮಂಗಳೂರು, ಜೂ.20: ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಅಕ್ಕಿ ನಿರಾಕರಿಸಿರುವುದರ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ, ಬಹಳ ದೊಡ್ಡ  ಪಿತೂರಿ ಇದೆ  ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸರಕಾರದ ಪ್ರತಿಷ್ಠಿತ ‘ಅನ್ನಭಾಗ್ಯ’ ಯೋಜನೆಗೆ ಅಕ್ಕಿ ಪೂರೈಕೆ ಮಾಡಲು ನಿರಾಕರಿಸಿದ ಕೇಂದ್ರ ಬಿಜೆಪಿ ಸರಕಾರದ ದ್ವೇಷ ರಾಜಕಾರಣ ಹಾಗೂ ಬಡವರ ವಿರೋಧಿ ನೀತಿಯನ್ನು ಖಂಡಿಸಿ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಂಗಳವಾರ ಬೆಳಗ್ಗೆ ಮಂಗಳೂರಿನ ಮಿನಿವಿಧಾನ ಸೌಧದ ಎದುರು ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಅಕ್ಕಿ ಉಚಿತವಾಗಿ ಕೊಟ್ಟರೆ, ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದರೆ ದೇಶ ದಿವಾಳಿಯಾಗುತ್ತದೆ ಎಂದು  ಬಿಜೆಪಿ ಹೇಳುತ್ತಿದೆ. ಅಕ್ಕಿ ಯಾರಿಗೆ ಅಗತ್ಯವಿಲ್ಲವೊ ಅವರು ಅರ್ಜಿ ಹಾಕಬೇಕಿಲ್ಲ. ಬಡವರ ಅನ್ನಕ್ಕೆ ನೀವು ಕಲ್ಲು ಹಾಕಬೇಡಿ, ಸಾಮಾಜಿಕ ನ್ಯಾಯದಿಂದ ವಂಚಿತರಾದವರ ಕಾರ್ಯಕ್ರಮಕ್ಕೆ ಕಲ್ಲು ಹಾಕಬೇಡಿ, ಬಡವರ  ಹೊಟ್ಟಿಗೆ ಹೊಡೆಯಬೇಡಿ. ಬಡವರ ಶಾಪ ತಟ್ಟುತ್ತದೆ ಎಂದು  ಬಿಜೆಪಿ ನಾಯಕರನ್ನು ಎಚ್ಚರಿಸಿದರು.

ಹಿಂದೆ ಕಲ್ಲಡ್ಕದಲ್ಲಿ ಶಾಲೆಗೆ ಕೊಲ್ಲೂರಿನಿಂದ ನೀಡುವ ಅಕ್ಕಿಯನ್ನು ನಿಲ್ಲಿಸಿದರು ಎಂದು ತನ್ನ ವಿರುದ್ಧ ಬಿಜೆಪಿ ನಾಯಕರು ಅಪಪ್ರಚಾರ ಮಾಡಿ ಚುನಾವಣೆಯಲ್ಲಿ ಗೆದ್ದರು. ಈಗ ಅದೇ ವಿಚಾರವನ್ನು ಹಿಡಿದುಕೊಂಡು ಮಾತನಾಡುತ್ತಿದ್ದಾರೆ. ಆದರೆ ನಾವು ಒಂದು ಹಿಡಿ ಅಕ್ಕಿಯನ್ನು ನಿಲ್ಲಿಸಲಿಲ್ಲ. ಪ್ರತಿ ತಿಂಗಳು 4 ಲಕ್ಷ ರೂ. ದೇವಸ್ಥಾನದಿಂದ ಚೆಕ್‌ನ ಮೂಲಕ ರವಾನೆಯಾಗುತ್ತಿದೆ. ಅದು ಎಲ್ಲಿಗೆ ಹೋಗುತ್ತದೆ ಎಂದು ಗೊತ್ತಿಲ್ಲ. ದೇವಸ್ಥಾನದ ದುಡ್ಡು ದುರುಪಯೋಗ ಮಾಡಲಾಗುತ್ತಿದೆ. ತಾನು ಅಕ್ಕಿ ನಿರಾಕರಿಸಿದೆ ಎಂದು ಹಿಂದೆ ಬಂಟ್ವಾಳ ದಲ್ಲಿ  ತಟ್ಟೆ ಹಿಡಿದು ತನ್ನ ವಿರುದ್ಧ ಪ್ರತಿಭಟನೆ ಮಾಡಿದ್ದರು ಎಂದು ರೈ ನೆನಪಿಸಿಕೊಂಡರು.

ರಾಜ್ಯ ಸರಕಾರದ ಬಡವರ ಪರ ಯಾವುದೇ ಯೋಜನೆ ಜಾರಿಗೊಳಿಸುವುದಿದ್ದರೆ ಅದಕ್ಕೆ ಕೇಂದ್ರ ಸಂಪೂರ್ಣ ಸರಕಾರ ನೀಡಬೇಕಿತ್ತು. ಆದರೆ ಇವತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರಕ್ಕೆ ಬಡವರ ಕಾಳಜಿ ಇಲ್ಲ. ಅದು ಯಾವತ್ತೂ ಬಡವರ ಪರ ಕೆಲಸ ಮಾಡಿದ ಪಕ್ಷವಲ್ಲ. ಬಿಜೆಪಿ ಬಡವರ ಪಕ್ಷವಲ್ಲ. ಅದು   ಬಂಡವಾಳ ಶಾಹಿಗಳ, ಜಮೀನುದ್ದಾರರ, ಶ್ರೀಮಂತರ,  ವ್ಯಾಪಾರಿಗಳ, ಅಂಬಾನಿ, ಅದಾನಿಯ ಪಕ್ಷವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ ಕುಮಾರ್,  ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಜೆ.ಆರ್.ಲೋಬೊ , ಮಾಜಿ ಜಿ.ಪಂ ಅಧ್ಯಕ್ಷೆ ಮಮತಾ ಗಟ್ಟಿ, ಪಕ್ಷದ ಧುರೀಣರಾದ ಸುರೇಶ್ ಬಳ್ಳಾಲ್, ಬೇಬಿ ಕುಂದರ್, ಚಂದ್ರಪ್ರಕಾಶ್ ಶೆಟ್ಟಿ, ಪ್ರಥ್ವಿರಾಜ್, ಸಂತೋಷ್ ಕುಮಾರ್ ಶೆಟ್ಟಿ, ಪ್ರಕಾಶ್ ಸಾಲ್ಯಾನ್ ಮತ್ತಿತರರು ಭಾಗವಹಿಸಿದ್ದರು.

Similar News