×
Ad

ರಕ್ತದಾನದಿಂದ ಅಮೂಲ್ಯ ಜೀವ ರಕ್ಷಣೆ: ಡಾ.ಎಂ.ಶಾಂತಾರಾಮ ಶೆಟ್ಟಿ

ರೆಡ್‌ಕ್ರಾಸ್‌ನಿಂದ ರಕ್ತದಾನಿಗಳಿಗೆ ಸನ್ಮಾನ

Update: 2023-06-20 21:45 IST

ಮಂಗಳೂರು: ವೈದ್ಯಕೀಯ ಕ್ಷೇತ್ರ ಇಂದು ಅದ್ಭುತ ಬೆಳವಣಿಗೆ ಕಂಡಿದ್ದು ರಕ್ತದಾನ, ಅಂಗಾಂಗ ದಾನದಿಂದ ಇನ್ನೊಬ್ಬರ ಜೀವ ಉಳಿಸುವುದು ಸಾಧ್ಯವಾಗಿದೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಕಾಲದಲ್ಲಿ ರಕ್ತ ಒದಗಿ ಸುವ ಮೂಲಕ ರಕ್ತದಾನಿಗಳು ನೀಡುತ್ತಿರುವ ಸೇವೆ ದೇವರ ಸೇವೆಗಿಂತ ಮಿಗಿಲಾಗಿದೆ ಎಂದು ನಿಟ್ಟೆ ವಿ.ವಿ.ಯ ಸಹ ಕುಲಾಧಿಪತಿ ಡಾ.ಎಂ.ಶಾಂತಾರಾಮ ಶೆಟ್ಟಿ ಹೇಳಿದ್ದಾರೆ.

ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ವತಿಯಿಂದ ಎಸ್‌ಡಿಎಂ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್‌ನ ಸಹಯೋಗದಲ್ಲಿ  ಎಸ್‌ಡಿಎಂ ಕಾಲೇಜ್ ಆಫ್ ಬಿಬಿಎಂನ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಶ್ವ ರಕ್ತದಾನ ದಿನಾಚರಣೆ ಮತ್ತು ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಕ್ತದಾನಿಗಳನ್ನು ಸನ್ಮಾನಿಸಿದ ಮಾಜಿ ಸಚಿವ ಜೆ.ಕೃಷ್ಣ ಪಾಲೆಮಾರ್‌ ಮಾತನಾಡಿ ‘ರಕ್ತದಾನಿಗಳು  ಜಾತಿ, ಮತ, ಧರ್ಮಗಳನ್ನು ಮೀರಿ ಶ್ರೇಷ್ಠವಾದ ಕಾರ್ಯದಲ್ಲಿ ತೊಡಗಿದ್ದಾರೆ. ಇಂತಹ ಮಾನವೀಯ ಸೇವೆಯ ಬಗ್ಗೆ ಯುವ ಪೀಳಿಗೆಯಲ್ಲಿ ಹೆಚ್ಚಿನ ಅರಿವು ಮೂಡಿಸುವುದು ಅಗತ್ಯ ಎಂದರು. 20ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ 16 ಮಂದಿಯನ್ನು ಸನ್ಮಾನಿಸಲಾಯಿತು

ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಿ.ವೇದವ್ಯಾಸ ಕಾಮತ್, ಎಸ್‌ಡಿಎಂ ಕಾಲೇಜ್ ಆಫ್ ಬಿಬಿಎಂನ ಡೀನ್ ದಿವ್ಯ ಉಚ್ಚಿಲ , ಮಂಗಳೂರು ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ.ಆರ್. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರೆಡ್‌ಕ್ರಾಸ್ ದ.ಕ.ಜಿಲ್ಲಾ ಘಟಕದ ಖಜಾಂಜಿ ಕೆ.ಮೋಹನ್ ಶೆಟ್ಟಿ,  ಆಡಳಿತ ಮಂಡಳಿ ಸದಸ್ಯ ಡಾ. ಬಿ.ಸಚ್ಚಿದಾನಂದ ರೈ , ಗುರುದತ್ ಎಂ.ನಾಯಕ್, ಡಾ.ಸುಮನಾ ಬೋಳೂರು, ಗೌರವ ಸಲಹೆಗಾರರಾದ ಪ್ರಭಾಕರ ಶರ್ಮ, ರವೀಂದ್ರನಾಥ ಉಚ್ಚಿಲ ಉಪಸ್ಥಿತರಿದ್ದರು.

ಆಡಳಿತ ಮಂಡಳಿ ಸದಸ್ಯ ಪಿ.ಬಿ.ಹರೀಶ್ ರೈ ಸ್ವಾಗತಿಸಿ, ಕಾರ್ಯದರ್ಶಿ ಸಂಜಯ ಶೆಟ್ಟಿ ವಂದಿಸಿದರು. ಎಸ್‌ಡಿಎಂ ಕಾಲೇಜ್ ಆಫ್ ಬಿಬಿಎಂನ ವಿದ್ಯಾರ್ಥಿನಿ ಸಾಕ್ಷಿ ಕಾರ್ಯಕ್ರಮ ನಿರೂಪಿಸಿದರು. 

Similar News