×
Ad

ಅಮೆರಿಕದ ಸ್ವಾರ್ಥದ ಆಟದ ದಾಳವಾಗಬೇಡಿ; ಭಾರತಕ್ಕೆ ಚೀನಾ ಆಗ್ರಹ

Update: 2023-06-20 23:12 IST

ಬೀಜಿಂಗ್: ಭಾರತವನ್ನು ಪ್ರಚೋದಿಸುವ ಮತ್ತು ಚೀನಾದ ಆರ್ಥಿಕ ಪ್ರಗತಿಗೆ ಕಿರುಕುಳ ನೀಡುವ ತನ್ನ ಪ್ರಯತ್ನವನ್ನು ಅಮೆರಿಕ ತೀವ್ರಗೊಳಿಸಿದೆ. ಭಾರತವು  ಅಮೆರಿಕದ ಸ್ವಾರ್ಥದ ಆಟದ ದಾಳವಾಗಬಾರದು ಎಂದು ಚೀನಾದ ಕೇಂದ್ರ ವಿದೇಶಾಂಗ ವ್ಯವಹಾರಗಳ ಆಯೋಗದ ನಿರ್ದೇಶಕ ವಾಂಗ್ ಯಿ ಬುಧವಾರ ಆಗ್ರಹಿಸಿದ್ದಾರೆ.

ಭೌಗೋಳಿಕ ರಾಜಕೀಯ ಲೆಕ್ಕಾಚಾರದೊಂದಿಗೆ ಅಮೆರಿಕವು ಭಾರತದೊಂದಿಗಿನ ಆರ್ಥಿಕ ಮತ್ತು ವ್ಯಾಪಾರ ಸಂವಹನಗಳನ್ನು ಬಲಪಡಿಸುವ ಪ್ರಯತ್ನಗಳಿಗೆ ಚಾಲನೆ ನೀಡಿದೆ. ಆದರೆ ಇದು ಖಂಡಿತಾ ವಿಫಲವಾಗಲಿದೆ ಎಂದವರು ಹೇಳಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ನೀಡಲಿರುವ ಮಹತ್ವದ ಭೇಟಿಯ ಬಗ್ಗೆ  ಚೀನಾ ಖಾರವಾಗಿ ಪ್ರತಿಕ್ರಿಯಿಸಿದೆ. ಅಮೆರಿಕದ ಭೌಗೋಳಿಕ ರಾಜಕೀಯ ಲೆಕ್ಕಾಚಾರವನ್ನು ಸುಲಭದಲ್ಲಿ ಅರ್ಥ ಮಾಡಿಕೊಳ್ಳಬಹುದು. ಅನೇಕ ಭಾರತೀಯ ಗಣ್ಯರು ಭಯಪಡುವಂತೆ, ಭಾರತದೊಂದಿಗೆ ಆರ್ಥಿಕ ಮತ್ತು ವ್ಯಾಪಾರ ಸಹಕಾರವನ್ನು ಬಲಪಡಿಸಲು  ಅಮೆರಿಕದ ಹುರುಪಿನ ಪ್ರಯತ್ನಗಳ ಮೂಲ ಉದ್ದೇಶ ಚೀನಾದ ಆರ್ಥಿಕ ಪ್ರಗತಿಯ ವೇಗವನ್ನು ತಗ್ಗಿಸುವುದಾಗಿದೆ. ಆದರೆ ಅಮೆರಿಕದ ಈ ಭೌಗೋಳಿಕ ರಾಜಕೀಯ ಲೆಕ್ಕಾಚಾರ ಖಂಡಿತಾ ಫಲನೀಡದು.

ಯಾಕೆಂದರೆ ಜಾಗತಿಕ ಪೂರೈಕೆ ಸರಪಳಿಯಲ್ಲಿ ಚೀನಾದ ಸ್ಥಾನಮಾನವನ್ನು ಭಾರತ ಅಥವಾ ಇತರ ಯಾವುದೇ ಆರ್ಥಿಕತೆ ಬದಲಿಸಲು ಸಾಧ್ಯವಿಲ್ಲ. ಅಮೆರಿಕನ್ ಕಂಪೆನಿಗಳು ಭಾರತದಲ್ಲಿ ಹೂಡಿಕೆಯನ್ನು ಹೆಚ್ಚಿಸಿದರೂ ಆ್ಯಪಲ್ನಂತಹ ಸಂಸ್ಥೆಗಳನ್ನು ಚೀನಾದ ಪೂರೈಕೆ ಸರಪಳಿಯಿಂದ ಬೇರ್ಪಡಿಸಲಾಗದು. ವಾಸ್ತವವಾಗಿ ಅಮೆರಿಕದೊಂದಿಗಿನ ಭಾರತದ ವ್ಯಾಪಾರವು ಚೀನಾದೊಂದಿಗಿನ ಅದರ ವ್ಯಾಪಾರವನ್ನು ಬದಲಿಸಲು ಸಾಧ್ಯವಿಲ್ಲ ಅಥವಾ ಜಾಗತಿಕ ಪೂರೈಕೆ ಸರಪಳಿಯಲ್ಲಿ ಚೀನಾವನ್ನು ಭಾರತ ಬದಲಿಸಲು ಸಾಧ್ಯವಿಲ್ಲ ಎಂದು ವಾಂಗ್ ಯಿ ಹೇಳಿದ್ದಾರೆ

Similar News