ಕೆನಡಾ: ಬ್ರಾಂಡನ್ ನಗರದಲ್ಲಿ ಭಾರತೀಯ ವಿದ್ಯಾರ್ಥಿಯ ಮೃತದೇಹ ಪತ್ತೆ?
Update: 2023-06-20 23:42 IST
ಟೊರಂಟೊ: ಕೆನಡಾದ ಮನಿಟೊಬ ಪ್ರಾಂತದಲ್ಲಿ ಹರಿಯುವ ಅಸ್ಸಿನಿಬೊಯ್ನ್ ನದಿಯ ಬಳಿ ರವಿವಾರ ಸಂಜೆ ಮೃತದೇಹವೊಂದು ಪತ್ತೆಯಾಗಿದ್ದು ಇದು ಕಳೆದ ವಾರ ನಾಪತ್ತೆಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯ ಮೃತದೇಹ ಆಗಿರಬಹುದು ಎಂದು ಪೊಲೀಸರನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಬ್ರಾಂಡನ್ ನಗರದ ಪೂರ್ವದಲ್ಲಿ ಹೆದ್ದಾರಿಯ ಸೇತುವೆಯಡಿ ಮೃತದೇಹ ಪತ್ತೆಯಾಗಿದೆ. ಗುಜರಾತ್ ಮೂಲದ ವಿದ್ಯಾರ್ಥಿ ವಿಷಯ್ ಪಟೇಲ್ ಕಳೆದ ವಾರದಿಂದ ನಾಪತ್ತೆಯಾಗಿರುವುದಾಗಿ ಆತನ ಕುಟುಂಬದವರು ದೂರು ನೀಡಿದ್ದರು. ಅದರಂತೆ ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಸೇತುವೆ ಬಳಿ ಆತನ ಬಟ್ಟೆ ಕಂಡುಬಂದಿದೆ. ಬಳಿಕ ಹುಡುಕಾಟ ಮುಂದುವರಿಸಿದಾಗ ಸೇತುವೆ ಕೆಳಗಡೆ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ.