ಮಂಗಳೂರು: ಆಫರ್ ನೀಡುವುದಾಗಿ ಹೇಳಿ ವಂಚನೆ; ಪ್ರಕರಣ ದಾಖಲು
Update: 2023-06-21 20:40 IST
ಮಂಗಳೂರು, ಜೂ.21: ಆಫರ್ ನೀಡುವುದಾಗಿ ಹೇಳಿ ಮಹಿಳೆಯೋರ್ವರು ಹಣ ಪಡೆದು ವಂಚಿಸಿರುವ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂ.13ರಂದು ಕರೆ ಮಾಡಿದ ಅಪರಿಚಿತ ಮಹಿಳೆ ಶೇ.40ರಷ್ಟು ಆಫರ್ ನೀಡುವುದಾಗಿ ತಿಳಿಸಿ 899 ರೂ. ಮೊತ್ತದ ವಾಚ್‌ನ್ನು ಆರ್ಡರ್ ಮಾಡುವಂತೆ ತಿಳಿಸಿದ್ದಳು. ಆ ಮೊತ್ತವನ್ನು ಪಾವತಿಸಲು ಕ್ಯೂ ಆರ್ ಕೋಡ್ ಕಳುಹಿಸಿದ್ದಳು. ಹಣ ಪಾವತಿಸಿದ ಕೂಡಲೇ ಆರ್ಡರ್ ಬುಕ್ ಆಗಿರುವ ಬಗ್ಗೆ ತನಗೆ ಸಂದೇಶ ಬಂದಿತ್ತು. ಬಳಿಕ ಇನ್ನೊಂದು ಆಫರ್ ಇರುವುದಾಗಿ ತಿಳಿಸಿ ಜಿಎಸ್‌ಟಿ, ಇನ್ಶೂರೆನ್ಸ್ ಮೊತ್ತ ಎಂದೆಲ್ಲಾ ಹೇಳಿ 11,840 ರೂ. ಪಾವತಿಸುವಂತೆ ತಿಳಿಸಿದ್ದಳು. ಅದನ್ನು ರಿಫಂಡ್ ಮಾಡಲು ಮತ್ತೊಂದು ಯುಪಿಐ ಸಂಖ್ಯೆಗೆ 11,840 ರೂ. ಪಾವತಿಸುವಂತೆ ಸೂಚಿಸಿದ್ದಳು. ಹೀಗೆ 24,579 ರೂ.ಗಳನ್ನು ಗೂಗಲ್ ಪೇ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.