×
Ad

'ಮಾರ್ಗದರ್ಶಿ' ಚಿಟ್‌ಫಂಡ್ ಹಗರಣ: ಮಾಧ್ಯಮ ದಿಗ್ಗಜ ರಾಮೋಜಿ ರಾವ್ ವಿರುದ್ಧ ಎಫ್‌ಐಆರ್

Update: 2023-06-21 22:55 IST

ಹೊಸದಿಲ್ಲಿ: ಮಾರ್ಗದರ್ಶಿ ಚಿಟ್‌ಫಂಡ್ಸ್ ಪ್ರೈವೇಟ್ ಲಿಮಿಟೆಡ್ (MCFL)ನ ಕಾರ್ಯನಿರ್ವಹಣೆಯಲ್ಲಿ ಅಕ್ರಮಗಳು ನಡೆದಿವೆಯೆನ್ನಲಾದ ಆರೋಪಗಳಿಗೆ ಸಂಬಂಧಿಸಿ ಖ್ಯಾತ ಮಾಧ್ಯಮ ದಿಗ್ಗಜ ರಾಮೋಜಿ ರಾವ್ ವಿರುದ್ಧ ಆಂಧ್ರಪ್ರದೇಶದ ಕ್ರಿಮಿನಲ್ ತನಿಖಾ ಇಲಾಖೆ (ಸಿಐಡಿ)ಯು ಮಂಗಳವಾರ ಏಳು ಎಫ್‌ಐಆರ್‌ಗಳನ್ನು ದಾಖಲಿಸಿದೆ.

ಎಂಸಿಎಫ್‌ಎಲ್‌ನ ಅಧ್ಯಕ್ಷ ರಾವ್ ವಿರುದ್ಧ , ವಿಶ್ವಾಸದ್ರೋಹ ಹಾಗೂ ವಂಚನೆಯ ಆರೋಪವನ್ನು ಹೊರಿಸಲಾಗಿದೆ. ರಾವ್ ಅವರ ಸೊಸೆ ಹಾಗೂ ಕಂಪೆನಿಯ ಆಡಳಿತ ನಿರ್ದೇಶಕಿಯಾದ ಶೈಲಜಾ ಕಿರಣ್ ಮತ್ತಿತರರನ್ನು ಕೂಡಾ ಎಫ್‌ಐಆರ್‌ನಲ್ಲಿ ಹೆಸರಿಸಾಲಾಗಿದೆ.

ತೆಲುಗಿನ ಜನಪ್ರಿಯ ದೈನಿಕ 'ಈನಾಡು'ವಿನ ಮಾಲಕರೂ ಆದ ರಾಮೋಜಿ ರಾವ್ ಹಾಗೂ, ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ನಡುವೆ ಶೀತಲ ಸಂಘರ್ಷ ನಡೆಯುತ್ತಲೇ ಇದೆ. ಜಗನ್‌ರೆಡ್ಡಿ ಅವರ ತಂದೆ ರಾಜಶೇಖರ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗಲೇ ರಾಮೋಜಿರಾವ್ ಅವರ ಈನಾಡು ಗ್ರೂಪ್ ಹಾಗೂ ಜಗನ್‌ರೆಡ್ಡಿ ಕುಟುಂಬದ ನಡುವೆ ವೈಮನಸ್ಸು ಬೆಳೆದಿತ್ತು. ರಾಮೋಜಿ ಅವರ ಮಾಧ್ಯಮಸಂಸ್ಥೆಗಳು ಜಗನ್ ಸರಕಾರದ ವಿರುದ್ಧ ಅಪಪ್ರಚಾರವನ್ನು ಹರಡುವ ಮೂಲಕ 'ಹಳದಿ ಪತ್ರಿಕೋದ್ಯಮವನ್ನು' ಪ್ರೋತ್ಸಾಹಿಸುತ್ತಿವೆ ಎಂದು ವೈಎಸ್‌ಆರ್ ಕಾಂಗ್ರೆಸ್ ಆಪಾದಿಸುತ್ತಿದೆ.

ರಾಮೋಜಿ ರಾವ್ ಮಾಲಕತ್ವದ ಮಾರ್ಗದರ್ಶಿ ಚಿಟ್‌ಫಂಡ್ ಸಂಸ್ಥೆಯು ಕಪ್ಪುಹಣ ಬಿಳುಪು, ನಿಧಿಗಳ ಸೋರಿಕೆ ಕಾರ್ಪೋರೇಟ್ ವಂಚನೆ, ಬೇನಾಮಿ ಹಣ ವರ್ಗಾವಣೆಗಳನ್ನು ನಡೆಸಲು ನಕಲಿ ಚಂದಾದಾರರಿಗೆ ನೆರವು ನೀಡುವುದು, ಆದಾಯ ತೆರಿಗೆ ವಂಚನೆ ಇತ್ಯಾದಿ ಅವ್ಯವಹಾರಗಳಲ್ಲಿ ತೊಡಗಿದೆಯೆಂದು ಆಂಧ್ರಪ್ರದೇಶ ಸಿಐಡಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

''ಈ ಉಲ್ಲಂಘನೆಗಳು ದಿಲ್ಲಿ ಹಾಗೂ ಹೈದರಾಬಾದ್‌ನಲ್ಲಿರುವ ಕೇಂದ್ರೀಯ ಏಜೆನ್ಸಿಯ ಕಾರ್ಯನಿರ್ವಹಣೆಯ ವ್ಯಾಪ್ತಿಗೆ ಬರುವುದರಿಂದ ನಾವು ಈ ಬಗ್ಗೆ ಅವುಗಳ ಜೊತೆ ಮಾತನಾಡಿ,ಮಾರ್ಗದರ್ಶಿ ಚಿಟ್‌ಫಂಡ್ಸಂ ವಿರುದ್ಧ ಸಕಾಲಿಕವಾಗಿ ಕ್ರಮ ಕೈಗೊಳ್ಳಬೇಕೆಂದು ಕೋರಲಿದ್ದೇವೆ'' ಎಂದು ಆಂಧ್ರಪ್ರದೇಶ ಸಿಐಡಿ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕರು ತಿಳಿಸಿದ್ದಾರೆ.

''ಚಿಟ್‌ಫಂಡ್ ಹೆಸರಿನಲ್ಲಿ ದುರ್ಬಲ ಹಾಗೂ ಅಮಾಯಕ ಚಂದಾದಾರರನ್ನು ಶೋಷಿಸುವಂತಹ ಅತಿ ದೊಡ್ಡ ಆರ್ಥಿಕ ವಂಚನೆಯನ್ನು ತಡೆಗಟ್ಟುವ ಪ್ರಕ್ರಿಯೆಯನ್ನು ತಾನು ನಡೆಸುತ್ತಿದ್ದೇನೆ ಎಂದು ಹೇಳಿರುವ ಏಜೆನ್ಸಿಯು, ಮಾರ್ಗದರ್ಶಿ ಕಂಪೆನಿಯ ಲೆಕ್ಕಪತ್ರ ಪುಸ್ತಕಗಳ ಬಗ್ಗೆ ಆಳವಾದ ತನಿಖೆಯ ಅಗತ್ಯವಿದೆಯೆಂದು ಹೇಳಿದೆ.

Similar News