ಒಂದೇ ಒಂದು ಪೈಸೆ ಪಾವತಿಸದೆ 2 ವರ್ಷ ಪಂಚತಾರಾ ಹೊಟೇಲ್‌ನಲ್ಲಿ ವಾಸ್ತವ್ಯ!: ಗ್ರಾಹಕನ ವಿರುದ್ಧ ಎಫ್‌ಐಆರ್
►ಹೊಟೇಲ್‌ಗೆ 58 ಲಕ್ಷ ರೂ. ನಷ್ಟ ► ಹೊಟೇಲ್ ಸಿಬ್ಬಂದಿ ಶಾಮೀಲಾಗಿರುವ ಶಂಕೆ
ಹೊಸದಿಲ್ಲಿ: ರಾಜಧಾನಿಯ ಪಂಚತಾರಾ ಹೊಟೇಲೊಂದರಲ್ಲಿ ತನ್ನ ಸಿಬ್ಬಂದಿಯೊಂದಿಗೆ ಶಾಮೀಲಾಗಿ ಗ್ರಾಹಕನೊಬ್ಬ ಒಂದೇ ಒಂದು ಪೈಸೆ ಪಾವತಿಸದೆಯೇ ಎರಡು ವರ್ಷಗಳ ಕಾಲ ತಂಗಿದ್ದು, ಸುಮಾರು 58 ಲಕ್ಷ ರೂ.ನಷ್ಟು ವುಂಟು ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಇಂದಿರಾಗಾಂಧಿ ಅಂತಾರ್ ರಾಷ್ಟ್ರೀಯ ವಿಮಾನನಿಲ್ದಾಣದ ಸಮೀಪದ ಏರೋಸಿಟಿ ಪ್ರದೇಶದಲ್ಲಿರುವ ರೊಸಿಯೆಟ್ ಹೊಟೇಲ್‌ನಲ್ಲಿ ಈ ವಂಚನೆ ನಡೆದಿದೆ.
ಅಂಕುಶ್‌ದತ್ತಾ ಎಂಬಾತ 603 ದಿನಗಳ ಕಾಲ ರೊಸಿಯೆಟ್ ಹೊಟೇಲ್‌ನಲ್ಲಿ ತಂಗಿದ್ದು, ಯಾವುದೇ ಹಣ ಪಾವತಿಸದೆಯೇ ಹೊಟೇಲ್ ರೂಂ ಖಾಲಿ ಮಾಡಿದ್ದಾನೆಂದು ಮಾಲಕ ಸಂಸ್ಥೆಯಾದ ಬರ್ಡ್ ಏರ್‌ಪೋರ್ಟ್ಸ್ ಹೊಟೇಲ್ ಪ್ರೈ.ಲಿಮಿಟೆಡ್‌ನ ಪ್ರತಿನಿಧಿ ವಿನೋದ್‌ಮಲ್ಹೋತ್ರಾ ಇತ್ತೀಚೆಗೆ ದೂರು ನೀಡಿರುವುದಾಗಿ ಐಜಿಐ ವಿಮಾನನಿಲ್ದಾಣ ಪೊಲೀಸರು ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.
ಹೊಟೇಲ್‌ನ ಫ್ರಂಟ್ ಆಫೀಸ್ ವಿಭಾಗದ ವರಿಷ್ಠ ಪ್ರೇಮ್ ಪ್ರಕಾಶ್ ಎಂಬಾತ ಹೊಟೇಲ್‌ನ ನಿಯಮಗಳನ್ನು ಉಲ್ಲಂಘಿಸಿ ದೀರ್ಘಾವಧಿಯ ಕಾಲ ದತ್ತಾ ಹೊಟೇಲ್‌ನಲ್ಲಿ ಉಳಿಯುವುದಕ್ಕೆ ಅವಕಾಶ ನೀಡಿದ್ದನೆಂದು ಎಫ್‌ಐಆರ್ ಆಪಾದಿಸಿದೆ. ಹೊಟೇಲ್ ಕೊಠಡಿಯ ದರಗಳನ್ನು ನಿಗದಿಪಡಿಸುವ ಹಾಗೂ ಗ್ರಾಹಕರಿಂದ ಪಾವತಿ ಬಾಕಿಯನ್ನು ಪತ್ತೆಹಚ್ಚುವ ಹೊಟೇಲ್‌ನ ಕಂಪ್ಯೂಟರ್ ವ್ಯವಸ್ಥೆಯೊಂದಿಗೆ ಸಂಪರ್ಕ ಸಾಧಿಸುವ ಅಧಿಕಾರವನ್ನು ಆತ ಹೊಂದಿದ್ದ.
ದತ್ತಾ ಹೊಟೇಲ್‌ನಲ್ಲಿ ಉಳಿದುಕೊಳ್ಳುವುದಕ್ಕಾಗಿ ಆತನಿಂದ ಪ್ರಕಾಶ್ ಒಂದಿಷ್ಟು ಹಣ ಪಡೆದಿರಬಹುದೆಂದು ಹೊಟೇಲ್‌ನ ಆಡಳಿತವರ್ಗ ಶಂಕಿಸಿದೆ. ಗ್ರಾಹಕರ ವಾಸ್ತವ್ಯ ಹಾಗೂ ಅವರ ಹಣಪಾವತಿಯ ಲೆಕ್ಕಪತ್ರಗಳನ್ನು ನಿರ್ವಹಿಸುವ ಹೊಟೇಲ್‌ನ ಸಾಫ್ಟ್‌ವೇರ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ದತ್ತಾ ಹೊಟೇಲ್‌ನಲ್ಲಿ ತಂಗುವುದಕ್ಕೆ ಪ್ರಕಾಶ್‌ನೆರವಾಗಿರಬಹುದೆಂದು ಶಂಕಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಗ್ರಾಹಕ ಅಂಕುಶ್ ದತ್ತಾ ಹಾಗೂ ಪ್ರೇಮ್ ಪ್ರಕಾಶ್ ಸೇರಿದಂತೆ ಇತರ ಅಜ್ಞಾತ ಹೊಟೇಲ್‌ಸಿಬ್ಬಂದಿಯ ವಿರುದ್ಧ ಕ್ರಿಮಿನಲ್‌ಸಂಚಿನ ಆರೋಪ ಹೊರಿಸಲಾಗಿದೆಯೆಂದು ಪೊಲೀಸರು ಹೇಳಿದ್ದಾರೆ.