ಉಳ್ಳಾಲ: ಕಸ ಹಾಕುತ್ತಿದ್ದ ವಾಹನ ಚಾಲಕನಿಗೆ ದಂಡ
Update: 2023-06-22 19:26 IST
ಉಳ್ಳಾಲ: ಉಳ್ಳಾಲ ಬೀಚ್ ಬಳಿ ಕಸ ತಂದು ಹಾಕುತ್ತಿದ್ದ ಆಟೋ ರಿಕ್ಷಾ ವನ್ನು ಪತ್ತೆಹಚ್ಚಿದ ಉಳ್ಳಾಲ ನಗರಸಭೆ ಸಿಬ್ಬಂದಿ ದಂಡ ವಸೂಲಿ ಮಾಡಿದ ಘಟನೆ ವರದಿಯಾಗಿದೆ.
ಕುತ್ತಾರ್ ನಿವಾಸಿ ಮುಕೇಶ್ ಎಂಬಾತ ಕಸವನ್ನು ತುಂಬಿಕೊಂಡು ಉಳ್ಳಾಲದಲ್ಲಿ ವಿಲೇವಾರಿ ಮಾಡುತ್ತಿದ್ದ ಎನ್ನಲಾಗಿದೆ. ಗುರುವಾರ ಉಳ್ಳಾಲ ದಲ್ಲಿ ಕಸ ಸ್ವಚ್ಛ ಮಾಡುವ ಕೆಲಸ ನಡೆಯುತ್ತಿದ್ದ ವೇಳೆ ಆಟೋ ರಿಕ್ಷಾ ಕಸದ ರಾಶಿ ಇದ್ದ ಜಾಗಕ್ಕೆ ಬಂದಿತ್ತು. ಅಲ್ಲೇ ಇದ್ದ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ತುಂಬಿದ ಕಸ ಪತ್ತೆ ಆಗಿದೆ. ತಕ್ಷಣ ಅವರು ಪೌರಾಯುಕ್ತ ವಾಣಿ ವಿ ಆಳ್ವ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ವಾಣಿ ವಿ ಆಳ್ವ ಅವರು ಕಸ ತಂದಿದ್ದ ರಿಕ್ಷಾ ಚಾಲಕನಿಗೆ ದಂಡ ವಿಧಿಸಿದ್ದು, ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ್ದಾರೆ.