ಯುದ್ಧವಿಮಾನ ಇಂಜಿನ್ ತಯಾರಿಸಲು ಎಚ್‌ಎಎಲ್‌ನೊಂದಿಗೆ ಜಿಇ ಏರೋಸ್ಪೇಸ್ ಒಪ್ಪಂದ
ವಾಶಿಂಗ್ಟನ್: ಭಾರತೀಯ ವಾಯು ಪಡೆಯ ಹಗುರ ಯುದ್ಧ ವಿಮಾನ ‘ತೇಜಸ್’ಗೆ ಇಂಜಿನ್ ಗಳನ್ನು ಜಂಟಿಯಾಗಿ ನಿರ್ಮಿಸಲು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಜೊತೆಗೆ ಒಪ್ಪಂದವೊಂದಕ್ಕೆ ಸಹಿ ಹಾಕಿರುವುದಾಗಿ ಅಮೆರಿಕದ ಜಿಇ ಏರೋಸ್ಪೇಸ್ ಗುರುವಾರ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿಯ ಅಮೆರಿಕದ ಮೊದಲ ಸರಕಾರಿ ಪ್ರವಾಸದ ವೇಳೆ ಈ ಪ್ರಕಟಣೆ ಹೊರಬಿದ್ದಿದೆ.
‘‘ಜಿಇ ಏರೋಸ್ಪೇಸ್ ನ ಎಫ್414 ಇಂಜಿನ್ ಗಳನ್ನು ಭಾರತದಲ್ಲಿ ಜಂಟಿಯಾಗಿ ಉತ್ಪಾದಿಸುವುದು ಒಪ್ಪಂದದಲ್ಲಿ ಒಳಗೊಂಡಿದೆ. ಇದಕ್ಕಾಗಿ ಅಗತ್ಯ ರಫ್ತು ಅನುಮೋದನೆ ಪಡೆಯಲು ಜಿಇ ಏರೋಸ್ಪೇಸ್ ಅಮೆರಿಕ ಸರಕಾರದೊಂದಿಗೆ ಸಂಪರ್ಕದಲ್ಲಿದೆ’’ ಎಂದು ಇಲ್ಲಿ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಜಿಇ ಏರೋಸ್ಪೇಸ್ ತಿಳಿಸಿದೆ.
ಎಚ್ಎಎಲ್ ಜೊತೆಗಿನ ಒಪ್ಪಂದವು ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಇಟ್ಟ ಮಹತ್ವದ ಹೆಜ್ಜೆಯಾಗಿದೆ ಎಂದು ಅದು ಬಣ್ಣಿಸಿದೆ.
‘‘ಇದು ನಮ್ಮ ದೀರ್ಘಾವಧಿಯ ಭಾಗೀದಾರ ಭಾರತ ಮತ್ತು ಎಚ್ಎಎಲ್ ಜೊತೆಗಿನ ಐತಿಹಾಸಿಕ ಒಪ್ಪಂದವಾಗಿದೆ’’ ಎಂದು ಜಿಇ ಏರೋಸ್ಪೇಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್. ಲಾರೆನ್ಸ್ ಕಲ್ಪ್ ಜೂನಿಯರ್ ಹೇಳಿದರು.