ಅಕ್ರಮ ಗೋಸಾಗಾಟಗಾರರ ಮೇಲೆ ಶೂಟೌಟ್: ಅರುಣ್ ಪುತ್ತಿಲ ಮೇಲೆ ಕಾನೂನು ಕ್ರಮ ಏಕಿಲ್ಲ?
ಅರುಣ್ ಪುತ್ತಿಲ | Screenbrab Photo
ಅಕ್ರಮ ಗೋವು ಸಾಗಣೆಯಲ್ಲಿ ಭಾಗಿಯಾಗಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದವರ ಮೇಲೆ ಪುತ್ತೂರು ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಹಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಪೊಲೀಸರ ಮೇಲೆ ಚೂರಿಯಿಂದ ಹಲ್ಲೆ ಮಾಡಲು ಆರೋಪಿಗಳು ಮುಂದಾದಾಗ ಫೈರಿಂಗ್ ಮಾಡಲಾಯ್ತು ಎಂದು ಪೊಲೀಸ್ ವರಿಷ್ಠಾಧಿಕಾರಿಯವರು ಹೇಳುತ್ತಾರೆ.
ಅಕ್ಟೋಬರ್ 21 ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಗಳೂರು ನಗರ ಪೊಲೀಸ್ ಆಯುಕ್ತರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯವರ ದಕ್ಷತೆಯನ್ನು ಕೊಂಡಾಡುತ್ತಾರೆ. ಅದರ ಮರುದಿನ ಅಂದರೆ, ಅಕ್ಟೋಬರ್ 22 ರಂದು ಮುಂಜಾನೆ ‘ಅಕ್ರಮ ಗೋಸಾಗಾಟಗಾರರು’ ಎಂದು ಕೇರಳದ ಕಾಸರಗೋಡು ಮೂಲದ ಅಬ್ದುಲ್ಲಾ ಎಂಬವರ ಮೇಲೆ ಪುತ್ತೂರು ಪೊಲೀಸರು ಗುಂಡು ಹಾರಿಸುತ್ತಾರೆ. ಆರೋಪಿಗಳು ಓಡಿ ಹೋದಾಗ ಗುಂಡು ಹಾರಿಸಲಾಯಿತೋ ಅಥವಾ ಆರೋಪಿಗಳು ದಾಳಿ ಮಾಡಿದಾಗ ಆತ್ಮರಕ್ಷಣೆಗಾಗಿ ಗುಂಡು ಹಾರಿಸಲಾಯಿತೋ ಎಂಬುದರ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ನಡೆಸಬೇಕು. ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಬಹುದು ಎಂಬ ಕಾರಣಕ್ಕಾಗಿ ಪೊಲೀಸರು ಗುಂಡು ಹಾರಿಸುವಂತಿಲ್ಲ. ಅಕ್ರಮ ಗೋಸಾಗಾಟ ಅಥವಾ ಗೋ ಕಳ್ಳತನ ಎಂಬುದು ಆರೋಪಿಗಳು ತಪ್ಪಿಸಿಕೊಂಡಾಗ ಗುಂಡು ಹಾರಿಸುವಂತಹ ಗಂಭೀರ ಪ್ರಕರಣವಲ್ಲ. ಹಾಗಾಗಿ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಎಂದು ಹೆಸರು ಪಡೆದ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಗಳಾಗಿರುವ ಅರುಣ್ ಕೆ ಯವರು ಈ ಕುರಿತು ಮಾನವ ಹಕ್ಕು ಕಾಯ್ದೆಗಳಡಿಯಲ್ಲಿ ತನಿಖೆ ನಡೆಸಬೇಕು.
ಈ ಹಿಂದೆ ಕರಾವಳಿಯಲ್ಲಿ ಗೋಸಾಗಾಟಗಾರರನ್ನು ಹಿಡಿಯಲು ಬಜರಂಗದಳದವರು ಬೆನ್ನಟ್ಟಿ ಹೋದಾಗ ಯುವಕರು ಜೀವ ಉಳಿಸಿಕೊಳ್ಳಲು ಹೋಗಿ ಜೀವ ಕಳೆದುಕೊಂಡ ಪ್ರಕರಣಗಳಿವೆ. ಈ ಬಾರಿ ಪೊಲೀಸರೇ ಬೆನ್ನಟ್ಟಿ ಅಕ್ರಮ ಗೋಸಾಗಾಟಗಾರರ ಮೇಲೆ ಗುಂಡು ಹಾರಿಸಿದ್ದಾರೆ. ಆದರೆ ಪೊಲೀಸರ ಕಾರ್ಯಾಚರಣೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪೊಲೀಸರು ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ಬೆನ್ನಟ್ಟಿ ನಿಲ್ಲಿಸಿ, ದನಗಳನ್ನು ವಾಹನದಿಂದ ಇಳಿಸುವಾಗ ಸ್ಥಳದಲ್ಲಿ ಹಿಂದುತ್ವ ನಾಯಕ ಅರುಣ್ ಪುತ್ತಿಲ ಇದ್ದರು. ದನವನ್ನು ವಾಹನದಿಂದ ಇಳಿಸುವ ಬಗ್ಗೆ ಅರುಣ್ ಪುತ್ತಿಲ, ಪೊಲೀಸ್ ಕಾನ್ಸ್ಟೇಬಲ್ ಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಕ್ಷ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅರುಣ್ ಕೆ.ಯವರು ಅಧಿಕಾರ ಸ್ವೀಕರಿಸಿದ ಬಳಿಕ ಮಾರಲ್ ಪೊಲೀಸಿಂಗ್ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಎರಡು ದಿನದ ಹಿಂದೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಇದೀಗ ಹಿಂದುತ್ವವಾದಿಗಳ ಮಾರಲ್ ಪೊಲೀಸಿಂಗ್ ಸ್ವರೂಪ ಬದಲಾಗಿದೆಯೇ ಎನ್ನುವ ಅನುಮಾನ ‘ಪುತ್ತೂರು ದನ ಸಾಗಾಟಗಾರರ ಮೇಲೆ ಫೈರಿಂಗ್’ ಪ್ರಕರಣ ಅನುಮಾನ ಮೂಡಿಸುತ್ತಿದೆ. ಪೊಲೀಸ್ ಕಾರ್ಯಾಚರಣೆಯ ಮಧ್ಯೆ ಅರುಣ್ ಪುತ್ತಿಲ ಕಾಣಿಸಿಕೊಂಡಿದ್ದು ಹೇಗೆ? ಇದು ಪೊಲೀಸ್ ಮತ್ತು ಹಿಂದುತ್ವದ ಜಂಟಿ ಕಾರ್ಯಾಚರಣೆಯೇ ಎಂಬುದರ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ನಡೆಸಬೇಕಿದೆ.
ಇವೆಲ್ಲದರ ಹೊರತಾಗಿಯೂ ಪೊಲೀಸರ ಕ್ರಮ ಕಾನೂನು ಬದ್ಧವಾಗಿದ್ದರೂ, ಹಿಂದುತ್ವದ ನಾಯಕ ಅರುಣ್ ಪುತ್ತಿಲ ವಿರುದ್ಧ ಪೊಲೀಸರು ಸುಮೊಟೋ ಎಫ್ಐಆರ್ ದಾಖಲಿಸಬೇಕಿದೆ. ಪೊಲೀಸರು ಆರೋಪಿಗಳಿಗೆ ಗುಂಡು ಹಾರಿಸಿದ ಕೆಲವೇ ಕ್ಷಣಗಳಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ 'ಗೋಪೂಜೆಯಂದೇ ಗೋಹಂತಕರಿಗೆ ಗುಂಡೇಟು ನಡೆಸಿದ ಪೊಲೀಸ್ ಅಧಿಕಾರಿಗಳಿಗೆ ಅಭಿನಂದನೆಗಳು' ಎಂದು ಪೋಸ್ಟ್ ಮಾಡಿದ್ದಲ್ಲದೇ, ತನ್ನ ಫೋಟೋದ ಜತೆ ಎಸ್ಪಿ ಅರುಣ್ ಕೆ, ಡಿವೈಎಸ್ಪಿ ಅರುಣ್ ನಾಗೇಗೌಡ, ಠಾಣಾಧಿಕಾರಿ ಜಂಬೂರಾಜ್ ಮಹಾಜನ್ ಫೋಟೋ ಹಾಕಿ ಅಭಿನಂದನೆಯ ಪೋಸ್ಟರ್ ತಯಾರಿಸಿ ಹಾಕಿಕೊಂಡಿದ್ದಾರೆ. ಪೋಸ್ಟರ್ ನಲ್ಲಿಯೂ 'ಗೋಪೂಜೆಯಂದೇ ಗೋಹಂತಕರಿಗೆ ಗುಂಡೇಟು ನಡೆಸಿದ ಪೊಲೀಸ್ ಅಧಿಕಾರಿಗಳಿಗೆ ಅಭಿನಂದನೆಗಳು' ಎಂದು ಫೋಟೋದ ಕೆಳಗೆ ಬರೆಯಲಾಗಿದೆ. ಅರುಣ್ ಕುಮಾರ್ ಪುತ್ತಿಲ ಅವರ ಈ ನಡೆಯು 'ಪೊಲೀಸರ ಕಾನೂನು ಕ್ರಮವನ್ನೇ ಒಂದು ಧಾರ್ಮಿಕ ಪ್ರತೀಕಾರ ಅಥವಾ ಕೋಮು ಆಕ್ರೋಶದ ಕ್ರಿಯೆಯಾಗಿ ಚಿತ್ರಿಸುವ ಪ್ರಯತ್ನ'ವಾಗಿದೆ. ಇದು ಸಂವಿಧಾನದ ಮೂಲಮೌಲ್ಯಗಳ ವಿರುದ್ಧದ ನಿಲುವು ಆಗಿದೆ. ಕಾನೂನಿನ ದೃಷ್ಟಿಯಿಂದಲೂ ಅರುಣ್ ಕುಮಾರ್ ಪುತ್ತಿಲ ಮಾಡಿರುವುದು ಅಪರಾಧವಾಗಿದೆ. (Bharatiya Nyaya Sanhita (BNS) ಸೆಕ್ಷನ್ 197: Provocation with intent to cause riot) ಯಾರು ಜನಾಂಗ, ಧರ್ಮ, ಜಾತಿ, ಅಥವಾ ಭಾಷೆಯ ಆಧಾರದ ಮೇಲೆ ದ್ವೇಷ ಅಥವಾ ಅಸಮಾಧಾನ ಉಂಟುಮಾಡುವ ಉದ್ದೇಶದಿಂದ ಹೇಳಿಕೆ ನೀಡುತ್ತಾರೆ, ಅವರು ಶಿಕ್ಷಾರ್ಹರು.
ಅಂದರೆ, “ಗೋಹಂತಕರಿಗೆ ಗುಂಡೇಟು ಹಾರಿಸಿದ ಪೊಲೀಸರಿಗೆ ಅಭಿನಂದನೆ” ಎನ್ನುವ ಮಾತು ಧರ್ಮಾಧಾರಿತ ಹಿಂಸೆಯನ್ನು ಪ್ರೋತ್ಸಾಹಿಸುವ ಶೈಲಿಯಲ್ಲಿದೆ, ಮತ್ತು ಅದು ಕೋಮು ವೈಮನಸ್ಸು ಪ್ರಚೋದನೆಗೆ (Communal incitement) ಒಳಪಡುತ್ತದೆ.
ಅಲ್ಲದೇ, BNS ಸೆಕ್ಷನ್ 353 ಮತ್ತು 356 ಪ್ರಕಾರ, ಯಾವುದೇ ಸರ್ಕಾರಿ ನೌಕರ (ಪೊಲೀಸ್ ಅಧಿಕಾರಿಗಳು) ತಮ್ಮ ಕರ್ತವ್ಯವನ್ನು ನಿಭಾಯಿಸುವ ವೇಳೆ ಅವರಿಗೆ ಧಾರ್ಮಿಕ ಅಥವಾ ಜಾತಿ ಆಧಾರದ ನೋಟ ನೀಡುವುದು ಅವರ ಗೌರವವನ್ನು ಹಾನಿಗೊಳಿಸುವ ಕೆಲಸ. ಇದು ಪರೋಕ್ಷವಾಗಿ ಕಾನೂನು ಜಾರಿಗೊಳಿಸುವ ಪ್ರಕ್ರಿಯೆಯನ್ನು ದುರ್ಬಲಗೊಳಿಸುತ್ತದೆ. Indian Police Act, 1861 — Section 30A (Disobedience or obstruction) ಪ್ರಕಾರ ಪೊಲೀಸರ ಕಾರ್ಯವನ್ನು ತಪ್ಪಾಗಿ ಚಿತ್ರಿಸುವುದರಿಂದ ಜನರ ವಿಶ್ವಾಸ ಹಾಳಾಗುವುದು ಕಾನೂನಿನ ದೃಷ್ಟಿಯಲ್ಲಿ public mischief ಆಗಬಹುದು. ಈ ಎಲ್ಲಾ ಹಿನ್ನಲೆಯಲ್ಲಿ ಪೊಲೀಸರ ಕಾನೂನು ಬದ್ದ ಕಾರ್ಯನಿರ್ವಹಣೆಯನ್ನು 'ಧಾರ್ಮಿಕತೆಗಾಗಿ ಹಿಂಸೆ'ಯ ಅಡಿಯಲ್ಲಿ ವ್ಯಾಖ್ಯಾನಿಸಿ ಕೋಮುವೈಷಮ್ಯ ಮೆರೆದ ಅರುಣ್ ಕುಮಾರ್ ಪುತ್ತಿಲ ವಿರುದ್ದ ಪ್ರಕರಣ ದಾಖಲಿಸಲು ಎಸ್ಪಿಯವರು ಸೂಚನೆ ನೀಡಬೇಕಿದೆ.
ಪೊಲೀಸ್ ಇಲಾಖೆ ಧರ್ಮನಿರಪೇಕ್ಷ ಇಲಾಖೆ. ಅದು ಕಾನೂನು ಜಾರಿಗೊಳಿಸುವ ಯಂತ್ರ, ಯಾವುದೇ ಧಾರ್ಮಿಕ ನಂಬಿಕೆಯ ಪ್ರತಿನಿಧಿ ಅಲ್ಲ. ಪೊಲೀಸರ ಕಾರ್ಯದಲ್ಲಿ ಧಾರ್ಮಿಕ, ಕೋಮು ಸಂಘಟನೆಗಳು, ಧಾರ್ಮಿಕ ಸಮವಸ್ತ್ರಧಾರಿಗಳು ಜೊತೆಯಾಗುವುದು, ಪೊಲೀಸರ ಕಾರ್ಯವನ್ನು ಧಾರ್ಮಿಕ ಹಿನ್ನಲೆಯಲ್ಲಿ ವಿವರಿಸುವುದು ಪೊಲೀಸ್ ಇಲಾಖೆಯ ಧರ್ಮನಿರಪೇಕ್ಷತೆಯ ಮೇಲಿನ ದಾಳಿಯಾಗುತ್ತದೆ. ಪೊಲೀಸರ ಮತ್ತು ಜನರ ಮಧ್ಯೆ ಇರುವ 'ಸಾಮಾಜಿಕ ವಿಶ್ವಾಸ' ವನ್ನು ಹಾಳುಮಾಡುವ ಪ್ರಕ್ರಿಯೆ ಇದಾಗುತ್ತದೆ. ಈ ಹಿನ್ನಲೆಯಲ್ಲಿ ಅಕ್ರಮ ಗೋ ಸಾಗಾಟಗಾರರಿಗೆ ಗುಂಡು ಹಾರಿಸಿದ ಪ್ರಕರಣವನ್ನು ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ನಡೆಸಬೇಕು. ಅಲ್ಲದೆ ಪೊಲೀಸರ ಫೋಟೋ ಮತ್ತು ಹೆಸರು ಬಳಸಿಕೊಂಡು ಸಮುದಾಯಗಳ ನಡುವೆ ವೈಮನಸ್ಸು ಉಂಟುಮಾಡಿದ ಅರುಣ್ ಕುಮಾರ್ ಪುತ್ತಿಲ ವಿರುದ್ದ ಪ್ರತ್ಯೇಕ ಪ್ರಕರಣ ದಾಖಲಿಸಬೇಕಿದೆ.