×
Ad

ಬಾದ್ ಶಾಹನ ಗಡ್ಡ ಎಳೆದ ‘‘ಬ್ಯಾಡ್ಸ್ ಆಫ್ ಬಾಲಿವುಡ್’

Update: 2025-09-28 07:41 IST

‘‘ನನ್ನ ಗಡ್ಡ ಎಳೆದವನಿಗೆ ಯಾವ ಶಿಕ್ಷೆ ಕೊಡಬೇಕು’’ ಎಂದು ಕೇಳಿದನಂತೆ ಆಸ್ಥಾನ ಪ್ರವೇಶಿಸಿದ ಅಕ್ಬರ್ ಬಾದ್ಶಾಹ. ಮಂತ್ರಿಗಳೆಲ್ಲ ಆರೋಪಿಗೆ ಕಠಿಣ ಶಿಕ್ಷೆಗಳನ್ನು ಘೋಷಿಸುತ್ತಿರುವಾಗ, ಬೀರಬಲ್ ‘‘ನಿಮ್ಮ ಗಡ್ಡ ಎಳೆದವನ ಬಾಯಿಗೆ ಮಿಠಾಯಿ ಹಾಕಿ’’ ಎಂದು ಸಲಹೆ ನೀಡಿದನಂತೆ. ಅಕ್ಬರ್ ಬಾದ್ಶಾಹನ ಗಡ್ಡ ಎಳೆಯುವ ಧೈರ್ಯ ಅವನ ಪುಟಾಣಿ ಮಗುವಿಗಲ್ಲದೆ ಇನ್ನಾರಿಗಿದೆ ಎನ್ನುವ ಕಾರಣಕ್ಕೆ ಈ ಉತ್ತರವನ್ನು ನೀಡಿದ್ದ. ಸದ್ಯಕ್ಕೆ ‘ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸಿರೀಸ್ ಮೂಲಕ ಬಾಲಿವುಡ್ ಬಾದ್ಶಾನ ಗಡ್ಡ ಎಳೆಯುವ ಧೈರ್ಯ ಪ್ರದರ್ಶಿಸಿದ್ದಾರೆ ಶಾರುಕ್ ಪುತ್ರ ಆರ್ಯನ್ ಖಾನ್. ಬಾಲಿವುಡ್ನ ಎಲ್ಲ ಹಿರಿಕಿರಿ ಸ್ಟಾರ್ಗಳು ಬಾದ್ಶಾಹ ಪುತ್ರನ ಈ ಸಾಹಸಕ್ಕೆ ಹೆಗಲು ನೀಡಿ, ಆತನ ಬಾಯಿಗೆ ಮಿಠಾಯಿ ಹಾಕಿದ್ದಾರೆ. 

ಶಾರುಕ್ ಖಾನ್ ಪುತ್ರನ ಆರಂಗೇಟ್ರಂಗೆ ಬಾಲಿವುಡ್ ಸುದೀರ್ಘ ಸಮಯದಿಂದ ಕಾಯುತ್ತಿತ್ತು. ನಟನಾಗಿ ಆತನನ್ನು ಸ್ವೀಕರಿಸಲು ತುದಿಗಾಲಲ್ಲಿ ನಿಂತಿದ್ದ ಬಾಲಿವುಡ್ ಇದೀಗ ನಿರ್ದೇಶಕನಾಗಿ ಆತನನ್ನು ಸ್ವಾಗತಿಸುತ್ತಿದೆ. ಈ ಹಿಂದೆ ಬಾಲನಟನಾಗಿ, ಡಬ್ಬಿಂಗ್ ಕಲಾವಿದನಾಗಿ, ತಂತ್ರಜ್ಞನಾಗಿ ಕೆಲಸ ಮಾಡಿದ್ದ ಆರ್ಯನ್ ಖಾನ್ ಇದೀಗ ಮೊದಲ ಬಾರಿಗೆ ಬಾಲಿವುಡ್ಗೆ ನಿರ್ದೇಶಕನಾಗಿ ನೇರ ಪ್ರವೇಶ ಮಾಡಿದ್ದಾರೆ. ವೆಬ್ ಸಿರೀಸ್ನ ಹೆಸರು ಮತ್ತು ಅದರ ಜಾಹೀರಾತುಗಳು ‘ಬ್ಯಾಡ್ಸ್ ಆಫ್ ಬಾಲಿವುಡ್’ ಬಗ್ಗೆ ಭಾರೀ ನಿರೀಕ್ಷೆಯನ್ನಿಡುವಂತೆ ಮಾಡಿತ್ತು. ಬಾಲಿವುಡ್ನ ಬಹುತೇಕ ಸ್ಟಾರ್ ನಟರನ್ನು ಒಂದಲ್ಲ ಒಂದು ಬಗೆಯಲ್ಲಿ ಕತೆಯಲ್ಲಿ ತುರುಕಿಸಿಕೊಂಡಿರುವ ಆರ್ಯನ್ ಖಾನ್, ತನ್ನ ತಂದೆಯ ಇಮೇಜ್ನ್ನು ಗರಿಷ್ಠ ಮಟ್ಟದಲ್ಲಿ ಈ ಸಾಹಸಕ್ಕೆ ಬಳಸಿಕೊಂಡಿದ್ದಾರೆ. ಬಾಲಿವುಡ್ನ ಅಕರಾಳ ವಿಕರಾಳ ಮುಖಕ್ಕೆ ವ್ಯಂಗ್ಯದ ಕನ್ನಡಿಯನ್ನು ಹಿಡಿದಿದ್ದಾರೆ. ಬಾಲಿವುಡ್ನ ಒಳ ರಾಜಕೀಯ, ಸಿನೆಮಾ ಮಾಫಿಯಾ, ಹೊಸ ನಟರ ಸಂಘರ್ಷ, ಸವಾಲುಗಳ ಚೂರುಗಳನ್ನು ಕೊಲಾಜ್ ರೀತಿಯಲ್ಲಿ ಅವರು ಜೋಡಿಸಿದ್ದಾರೆ.

ಬಾಲಿವುಡ್ನಲ್ಲಿ ನೆಲೆಕಂಡುಕೊಳ್ಳಲು ಹೋರಾಟ ನಡೆಸುವ ಹೊಸ ಸ್ಟಾರ್ ಆಸ್ಮಾನ್(ಲಕ್ಷ್ಯ್ ಲಾಲ್ವಾನಿ)ನ್ನು ಕೇಂದ್ರವಾಗಿಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆಯಾದರೂ, ಬಾಲಿವುಡ್ನೊಳಗಿರುವ ನಟರು, ಕಲಾವಿದರು, ನಿರ್ದೇಶಕರು, ನಿರ್ಮಾಪಕರ ಬೆಳ್ಳಿತೆರೆಯ ಹಿಂದಿರುವ ಮುಖವನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ. ಹೊಸ ನಾಯಕನ ಬೆಳವಣಿಗೆಗೆ ಅದಾಗಲೇ ಬಾಲಿವುಡ್ನ್ನು ಸೂಪರ್ ಸ್ಟಾರ್ ಆಗಿ ಆಳುತ್ತಿರುವ ಅಜಯ್ ತಲ್ವಾರ್(ಬಾಬಿ ಡಿಯೋಲ್) ಅಡ್ಡಗಾಲು ಹಾಕುತ್ತಾನೆ. ತನ್ನ ಮಗಳು ಕರಿಷ್ಮಾ ತಲ್ವಾರ್(ಸಹೆರ್ ಬಂಬಾ) ಜೊತೆಗೆ ನಟಿಸದಂತೆ ತಡೆಯಲು ಆತ ಗರಿಷ್ಠ ಪ್ರಯತ್ನವನ್ನು ಮಾಡುತ್ತಾನೆ. ಅಷ್ಟೇ ಅಲ್ಲ ಬೇರೆ ಬೇರೆ ರೂಪಗಳಲ್ಲಿ ನಿರ್ಮಾಪಕರಿಗೆ, ನಿರ್ದೇಶಕರಿಗೆ ಒತ್ತಡಗಳನ್ನು ಹೇರುತ್ತಾನೆ. ಇದೇ ಹೊತ್ತಿಗೆ ನಿರ್ಮಾಪಕ ಫ್ರೆಡ್ಡಿ ಸೋಡಾವಾಲ(ಮನೀಶ್ ಚೌಧರಿ)ನ ಜೊತೆಗಿನ ನವನಾಯಕನ ಒಪ್ಪಂದಗಳು, ಫ್ರೆಡ್ಡಿಯ ಏಳು-ಬೀಳು, ಬಾಲಿವುಡ್ನೊಳಗಿನ ಸೋಲು-ಗೆಲುವಿನ ಜೂಜಾಟಗಳು ಸಣ್ಣ ಸಣ್ಣ ಝಲಕ್ಗಳಾಗಿ ಬಂದು ಹೋಗುತ್ತವೆ. ಹಾಗೆಯೇ ಕೌಟುಂಬಿಕ ಸಂಬಂಧಗಳ ನಡುವಿನ ಪೊಳ್ಳುತನಗಳನ್ನು ವಿಡಂಬನೆಯ ಮೂಲಕವೇ ದಾಟಿಸುತ್ತಾರೆ. ಬಾಲಿವುಡ್ನ ಸ್ವಜನ ಪಕ್ಷಪಾತ, ಶೋಷಣೆಗಳನ್ನು ತಮಾಷೆಯ ರೂಪದಲ್ಲಿ ಕಟ್ಟಿಕೊಡುತ್ತಾರೆ. ಬಾಲಿವುಡ್ ಪಾರ್ಟಿಗಳು, ದಾಳಿ ನಡೆಸುವ ಪೊಲೀಸ್ ಅಧಿಕಾರಿಗಳ ಸೋಗಲಾಡಿತನ ಹೀಗೆ ಎಲ್ಲವನ್ನೂ ಇಲ್ಲಿ ರುಚಿಗೆ ತಕ್ಕಷ್ಟು ಸೇರಿಸಲಾಗಿದೆ.

ಆಮಿರ್ ಖಾನ್, ಸಲ್ಮಾನ್ ಖಾನ್, ಶಾರುಕ್ ಖಾನ್ ಸೇರಿದಂತೆ ಹಲವು ಸೂಪರ್ ಸ್ಟಾರ್ಗಳು ಸಿರೀಸ್ನಲ್ಲಿ ಮಿಂಚಿನಂತೆ ಬಂದು ಹೋಗುತ್ತಾರೆ. ಇವರೆಲ್ಲ ತಮ್ಮ ನಿಜ ಹೆಸರಿನಲ್ಲೇ ಕಾಣಿಸಿಕೊಳ್ಳುತ್ತಾರೆ. ಇವರೆಲ್ಲರನ್ನೂ ನಿರ್ದೇಶಕ ಆರ್ಯನ್ ಖಾನ್ ಸಣ್ಣದಾಗಿ ಕಾಲೆಳೆದಿದ್ದಾರೆ. ಕರಣ್ ಜೋಹರ್ ಇಲ್ಲಿ ನಿರ್ದೇಶಕ ಕರಣ್ ಜೋಹರ್ ಆಗಿಯೇ ಪಾತ್ರ ನಿರ್ವಹಿಸಿದ್ದಾರೆ. ಕಥಾನಾಯಕನ ಆಪ್ತನಾಗಿ ಫರ್ವೇಝ್ ಪಾತ್ರದಲ್ಲಿ ರಾಘುವ್ ಜುಯಲ್ ಇಷ್ಟವಾಗುತ್ತಾನೆ. ‘ಕಿಲ್’ ಚಿತ್ರದಲ್ಲಿ ಲಕ್ಷ್ಯ್ ಮತ್ತು ರಾಘವ್ ಹೀರೋ-ವಿಲನ್ಗಳಾಗಿ ಗಮನ ಸೆಳೆದಿದ್ದರು. ಇಲ್ಲಿ ಅದಕ್ಕೆ ವ್ಯತಿರಿಕ್ತವಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಮಧುರ್ ಭಂಡಾರ್ಕರ್ ಸಹಿತ ಕೆಲವು ನಿರ್ದೇಶಕರು ಬಾಲಿವುಡ್ನ ನಿಜ ಬಣ್ಣಗಳನ್ನು ತೆರೆದಿಡುವ ಪ್ರಯತ್ನವನ್ನು ತಮ್ಮ ಚಿತ್ರಗಳಲ್ಲಿ ಮಾಡಿದ್ದರು. ‘ಓಂ ಶಾಂತಿ ಓಂ’ ಚಿತ್ರವೂ ಬಾಲಿವುಡ್ನ ಕೆಲವು ಮುಖಗಳಿಗೆ ಬೆಳಕು ಚೆಲ್ಲಿತ್ತು. ಆ ಚಿತ್ರದ ಮುಂದುವರಿದ ಭಾಗದಂತಿದೆ ಆರ್ಯನ್ ಪ್ರಯತ್ನ. ‘ಬ್ಯಾಡ್ಸ್ ಆಫ್ ಬಾಲಿವುಡ್’ ಯಾವ ಕಾಲಘಟ್ಟದಲ್ಲಿ ನಡೆಯುವ ಕಥೆ ಎನ್ನುವುದನ್ನು ಸ್ಪಷ್ಟಪಡಿಸುವುದಿಲ್ಲ. ಹಾಗೆಯೇ ಬಹುತೇಕ ದೃಶ್ಯಗಳು, ಘಟನಾವಳಿಗಳು ತಲೆ ಮೇಲಿಂದ ಹಾದು ಹೋಗುತ್ತವೆ. ಪ್ರೇಕ್ಷಕನನ್ನು ತನ್ನ ವ್ಯಂಗ್ಯದ ಇರಿತದಿಂದ ಹಿಡಿದು ನಿಲ್ಲಿಸುವುದಿಲ್ಲ. ಮನಸ್ಸನ್ನು ಗಾಢವಾಗಿ ಆವರಿಸುವುದಿಲ್ಲ. ಕಥಾನಾಯಕ-ನಾಯಕಿಯ ನಡುವೆ ಪ್ರೇಮ ಹುಟ್ಟಿದ್ದು ಯಾವಾಗ ಎನ್ನುವುದು ಪ್ರೇಕ್ಷಕನಿಗೆ ಗೊತ್ತಾಗುವುದೇ ಇಲ್ಲ. ಚಿತ್ರದ ಕ್ಲೈಮಾಕ್ಸ್ ತುಸು ಭಿನ್ನವಾಗಿದ್ದು ಸಮಾಧಾನ ತರುತ್ತದೆ.

ಆರ್ಯನ್ ಖಾನ್ನ ಮೊದಲ ಪ್ರಯತ್ನ ಇದಾಗಿರುವುದರಿಂದ ಮತ್ತು ಈ ಮೊದಲ ಪ್ರಯತ್ನದಲ್ಲೇ ಬಾಲಿವುಡ್ ಅತಿರಥ ಮಹಾರಥಿಗಳ ಗಡ್ಡ ಎಳೆಯುವ ಪ್ರಯತ್ನ ಮಾಡಿರುವುದರಿಂದ ಆತನ ಬಾಯಿಗೆ ಮಿಠಾಯಿ ಹಾಕಿ ಪ್ರೋತ್ಸಾಹಿಸುವ ಅಗತ್ಯವಿದೆ ಎನ್ನಿಸುತ್ತದೆ. ಒಟ್ಟು ಏಳು ಕಂತುಗಳಲ್ಲಿರುವ ಈ ಸಿರೀಸ್ನ್ನು ನೀವು ನೆಟ್ಫ್ಲಿಕ್ಸ್ ನಲ್ಲಿ ನೋಡಬಹುದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - - ಮುಸಾಫಿರ್

contributor

Similar News