×
Ad

ನಮ್ಮ ಮನೆಗಳಿಂದ ಅವರ ಮನಗಳಿಗೆ : ಹಿರಿಯರ ಆರೈಕೆಯ ಹೊಸ ಮುಖ

Update: 2025-10-01 16:41 IST

ಸಾಂದರ್ಭಿಕ ಚಿತ್ರ 

ಭಾರತೀಯ ಸಾಮಾಜಿಕ ಶ್ರೀಮಂತ ಪರಂಪರೆಯ ಅಸ್ತಿತ್ವದಲ್ಲಿ ಹಿರಿಯರ ಪಾತ್ರವು ಮಹತ್ವವನ್ನು ಹೊಂದಿದೆ. ಅವರ ಜ್ಞಾನ, ಪಾರಂಪರಿಕ ಮೌಲ್ಯಗಳು ಮತ್ತು ಅಚಲ ಪ್ರೀತಿ ಪೀಳಿಗೆಗಳನ್ನು ಒಗ್ಗೂಡಿಸುತ್ತವೆ. ಇಂದಿನ ಭಾರತವು ನಿರ್ಣಾಯಕ ಜನಸಂಖ್ಯಾ ಹಂತವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಹಿರಿಯರು ಕುಟುಂಬ ಮತ್ತು ಸಮಾಜದ ಅಂಚಿನಿಂದ ಮುಂಚೂಣಿಗೆ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ನಾವು ಕೇಳಬೇಕಾದ ಪ್ರಶ್ನೆ ಕೇವಲ “ಹಿರಿಯರ ಆರೈಕೆಯನ್ನು ಹೇಗೆ ಮಾಡಬೇಕು?” ಎಂಬುದಲ್ಲ; ಬದಲಿಗೆ “ಅವರು ಸಿಗಬೇಕಾದ ಘನತೆ, ಸಂತೋಷ ಮತ್ತು ಸಮಗ್ರ ಯೋಗಕ್ಷೇಮ, ಗೌರವನ್ನು ಹೇಗೆ ಸಿಗುವಂತೆ ಮಾಡುವುದು?” ಎಂಬುದಾಗಿದೆ.

ವಯಸ್ಸಾಗುವುದು ಪ್ರತಿಯೊಬ್ಬ ಮಾನವನಿಗೂ ತಪ್ಪದ ಹಾದಿ. “ನಿಮ್ಮನ್ನು ಅರಿತುಕೊಳ್ಳುವ ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಇತರರ ಸೇವೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದು”ಎಂದು ಮಹಾತ್ಮ ಗಾಂಧಿಜಿಯವರು ಒಮ್ಮೆ ಹೇಳಿದ್ದರು. ಆ ಮೂಲಕ ನಿಸ್ವಾರ್ಥ ಸೇವೆಯ ಮೂಲಕ ಇತರರೆಡೆಗಿನ ಸಹಾನೂಭೂತಿಯ ಜೀವನವನ್ನು ಅಳವಡಿಸಿಕೊಳ್ಳಲು ಅವರು ಕರೆ ನೀಡಿದ್ದರು.

►ಹಿರಿಯರೇ ನಮ್ಮ ಕುಟುಂಬದ ಆಧಾರ

ಭಾರತೀಯ ಸಂಸ್ಕೃತಿಯಲ್ಲಿ ಒಂದು ಕಾಲದಲ್ಲಿ ಅವಿಭಕ್ತ ಕುಟುಂಬಗಳೇ ಆಧಾರವಾಗಿದ್ದು, ನಮ್ಮಅಜ್ಜಿಯರು–ಅಜ್ಜಂದಿರೇ ಜ್ಞಾನದ ಮೂಲವಾಗಿದ್ದರು. ಅವರು ಕುಟುಂಬಕ್ಕೆ ನೈತಿಕ ಬಲ, ಮಾರ್ಗದರ್ಶನ ಮತ್ತು ಆರೈಕೆಯ ಆಧಾರವಾಗಿದ್ದರು. ಆದರೆ ಇಂದಿನ ನಗರೀಕರಣ, ಉದ್ಯೋಗ ಸಂಬಂಧಿತ ವಲಸೆ ಮತ್ತು ಸಣ್ಣ ಕುಟುಂಬಗಳ ಸಂಖ್ಯೆ ಹೆಚ್ಚಾಗಿರುವುದರಿಂದ ವೃದ್ಧರ ಆರೈಕೆಯು ತೆರೆಮರೆಗೆ ಸರಿಯುತ್ತಿದೆ. ವೇಗದ ಜೀವನಶೈಲಿ ಮತ್ತು ಬದಲಾಗುತ್ತಿರುವ ಆದ್ಯತೆಗಳ ನಡುವೆ ವೃದ್ಧರು ನಿರ್ಲಕ್ಷ್ಯಕ್ಕೆ ಒಳಗಾಗುವ ಅಪಾಯ ಹೆಚ್ಚುತ್ತಿದೆ.

ಈ ಹಿನ್ನೆಲೆಯಲ್ಲಿ, ಹಿರಿಯ ಆರೈಕೆಯನ್ನು ಪುನರ್‌ ವ್ಯಾಖ್ಯಾನಿಸುವ ಕ್ರಾಂತಿಕಾರಕ ಬದಲಾವಣೆ ತರುವ ಅಗತ್ಯವಿದೆ. ಕೇವಲ ವೈದ್ಯಕೀಯ ಬೆಂಬಲಷ್ಟೇ ಅಲ್ಲ, ಭಾವನಾತ್ಮಕ ಮತ್ತು ಸಾಮಾಜಿಕ ಮನೋಸ್ಥೈರ್ಯವನ್ನು ಒಳಗೊಂಡ ಸಮಗ್ರ ಬದಲಾವಣೆ ಬೇಕಿದೆ.

2050ರ ವೇಳೆಗೆ, ಭಾರತದ ಹಿರಿಯ ನಾಗರಿಕರ ಸಂಖ್ಯೆ ಸುಮಾರು 300 ಮಿಲಿಯನ್ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಇದು ಇಂದಿನ ಅಂಕಿಅಂಶಗಳಿಗಿಂತ ದ್ವಿಗುಣ ಸಂಖ್ಯೆಯ ಹೆಚ್ಚಳವಾಗಿದ್ದು, ಆರೋಗ್ಯ ಮತ್ತು ಸಾಮಾಜಿಕ ವ್ಯವಸ್ಥೆಗೆ ಗಂಭೀರ ಸವಾಲುಗಳನ್ನು ಎತ್ತಿದೆ. ಹೆಚ್ಚುತ್ತಿರುವ ಜೀವನಾವಧಿ ಹಾಗೂ ಬದಲಾಗುತ್ತಿರುವ ಕುಟುಂಬ ಚಲನಶೀಲತೆಗಳು ದೀರ್ಘಕಾಲಿಕ ಕಾಯಿಲೆಗಳ ಪ್ರಮಾಣ, ಒಂಟಿತನ ಹಾಗೂ ಆರೈಕೆಯ ಅವಲಂಬನೆಗಳನ್ನು ಮತ್ತಷ್ಟು ತೀವ್ರಗೊಳಿಸುತ್ತಿವೆ. ನಗರೀಕರಣ ಮತ್ತು ಆರ್ಥಿಕ ಒತ್ತಡಗಳಿಂದ ಸಾಂಪ್ರದಾಯಿಕ ಕುಟುಂಬ ಆಧಾರಿತ ಆರೈಕೆಯ ಮಾದರಿ ನಿಧಾನವಾಗಿ ಕಣ್ಮರೆಯಾಗುತ್ತಿದ್ದು, ಅನೇಕ ಹಿರಿಯರು ತಮ್ಮ ಮಕ್ಕಳಿಂದ ಪ್ರತ್ಯೇಕವಾಗಿ ವಾಸಿಸುವ ಪರಿಸ್ಥಿತಿಗೆ ಒಳಗಾಗುತ್ತಿದ್ದಾರೆ.

►ಹಿರಿಯರಿಗೆ ಮನೆ ಮನಸ್ಸುಗಳ ನಿಲ್ದಾಣ

ಹಿರಿಯರಿಗೆ ಮನೆ ಕೇವಲ ವಾಸಿಸುವ ಸ್ಥಳವಲ್ಲ; ಅದು ನೆನಪುಗಳ ಆಶ್ರಯ, ಭಾವನಾತ್ಮಕ ಭದ್ರತೆಯ ತಾಣ ಹಾಗೂ ಸಂಬಂಧಗಳ ಜೀವಂತ ಕೊಂಡಿಯಾಗಿದೆ. ಮನೆಯಲ್ಲಿ ಆರೈಕೆಯನ್ನು ಒದಗಿಸುವುದರಿಂದ ಹಿರಿಯರಿಗೆ ಸಾಕಷ್ಟು ಪ್ರಯೋಜನಗಳು ಸಿಗುತ್ತದೆ. ಆಸ್ಪತ್ರೆಯ ಸೋಂಕುಗಳ ಅಪಾಯದಿಂದ ಅವರನ್ನು ರಕ್ಷಿಸಿಕೊಳ್ಳಬಹುದು. ದೈನಂದಿನ ಜೀವನಶೈಲಿಯಲ್ಲಿ ಬದಲಾವಣೆಯಾಗುತ್ತದೆ. ಹಿರಿಯರಿಗೆ ಸ್ವಾತಂತ್ರ್ಯ, ಭದ್ರತೆ ಸಿಗುತ್ತದೆ. ತಮ್ಮದೇ ಆಪ್ತ, ಪರಿಚಿತ ವಾತಾವರಣದಲ್ಲಿ ಅವರು ಜೀವನ ಮುನ್ನಡೆಸುವುದರರಿಂದ ಹಿರಿಯರ ಆತಂಕ ನಿವಾರಣೆಯಾಗುವುದು ಮತ್ತು ಒಟ್ಟಾರೆ ಯೋಗಕ್ಷೇಮದಲ್ಲಿ ಸುಧಾರಣೆ ಕಂಡು ಬರುತ್ತದೆ.

ಖಲೀಲ್ ಗಿಬ್ರಾನ್ ಹೇಳಿದಂತೆ, “ಮೃದುತ್ವ ಮತ್ತು ದಯೆ ದೌರ್ಬಲ್ಯದ ಸಂಕೇತಗಳಲ್ಲ, ಅವು ಶಕ್ತಿ ಮತ್ತು ದೃಢಸಂಕಲ್ಪದ ಅಭಿವ್ಯಕ್ತಿಗಳು.” ವೃದ್ಧರಿಗಾಗಿ ಮನೆ-ಕೇಂದ್ರೀಕೃತ ಆರೈಕೆ ವ್ಯವಸ್ಥೆಗಳನ್ನು ರೂಪಿಸುವುದು ಕೇವಲ ಸಾಮಾಜಿಕ ಹೊಣೆಗಾರಿಕೆಯಲ್ಲ, ಅದು ನಿಜವಾದ ಸಹಾನುಭೂತಿಯ ಪ್ರತಿಬಿಂಬವಾಗಿದೆ.

ಹಿರಿಯರನ್ನು ಮನೆಯಲ್ಲಿ ಆರೈಕೆ ಮಾಡುವುದೆಂದರೆ ಕೇವಲ ರೋಗಕ್ಕೆ ಚಿಕಿತ್ಸೆ ಅಥವಾ ನಿರ್ವಹಣೆ ಮಾತ್ರವಲ್ಲ; ಅದು ಅವರ ಜೀವನದ ಗುಣಮಟ್ಟವನ್ನು ದೀರ್ಘಕಾಲಿಕವಾಗಿ ಉಳಿಸಿ, ಆರೋಗ್ಯದ ದೃಷ್ಟಿಯಲ್ಲಿ ಮುಂಜಾಗ್ರತಾ ಕ್ರಮವನ್ನು ವಹಿಸುವುದು.

►ಮನೆಯಲ್ಲಿ ಹಿರಿಯರ ಆರೈಕೆಯಲ್ಲಿ ಎಚ್ಚರಿಕೆ ಅಗತ್ಯ

ಭಾರತದ ಹಿರಿಯರಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ, ಸಂಧಿವಾತ ಹಾಗೂ ಹೃದಯ ಸಂಬಂಧಿತ ಸಮಸ್ಯೆಗಳು ಸಾಮಾನ್ಯವಾಗಿವೆ. ಇಂತಹ ದೀರ್ಘಕಾಲದ ಕಾಯಿಲೆಗಳ ನಿರ್ವಹಣೆಯಲ್ಲಿ, ವೈದ್ಯರನ್ನು ನಿಯಮಿತವಾಗಿ ಭೇಟಿ ಮಾಡುವುದರ ಜೊತೆಗೆ, ಮನೆಯಲ್ಲೇ ಕೈಗೊಳ್ಳುವ ಕ್ರಮಗಳು ಸಮಾನವಾಗಿ ಮುಖ್ಯವಾಗುತ್ತವೆ. ಬೇರೆ ಬೇರೆ ಔಷಧಿಗಳ ಸೇವನೆಯ ಸಂದರ್ಭದಲ್ಲಿ ವಿಶೇಷ ಜಾಗ್ರತೆ ಅವಶ್ಯಕವಾಗಿದ್ದು, ಮನೆಯಲ್ಲಿ ರಕ್ತದೊತ್ತಡ ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುವ ಅಭ್ಯಾಸವು ಉತ್ತಮ ಆರೋಗ್ಯ ನಿರ್ವಹಣೆಗೆ ಪ್ರಮುಖ ಅಂಶವಾಗಿದೆ.

ಎಲ್ಲೆಂದರಲ್ಲಿಗೆ ಒಯ್ಯಬಹುದಾದ ಆಮ್ಲಜನಕ ಸಾಂದ್ರಕಗಳು, ಟೆಲಿಮೆಡಿಸಿನ್ ವ್ಯವಸ್ತೆಗಳು ಮತ್ತು ಡಿಜಿಟಲ್ ಸ್ಟೆತೊಸ್ಕೋಪ್‌ಗಳಂತಹ ನವೀನ ತಂತ್ರಜ್ಞಾನಗಳ ಮೂಲಕ, ವೈದ್ಯಕೀಯವಾಗಿ ಸಂಕೀರ್ಣ ಪರಿಸ್ಥಿತಿಯಲ್ಲಿರುವ ಹಿರಿಯರು ಈಗ ಆಸ್ಪತ್ರೆಗಳಿಗೆ ಬಾರದೆಯೇ ಉನ್ನತ ಮಟ್ಟದ ಆರೈಕೆಯನ್ನು ತಮ್ಮ ಮನೆಯಲ್ಲಿ ಪಡೆಯಬಹುದು. ಹೋಮ್ ನರ್ಸಿಂಗ್, ಮನೆಗೆ ಬರುವ ಚಿಕಿತ್ಸಕರು ಮತ್ತು ಧರಿಸಬಹುದಾದ ಆರೋಗ್ಯ ಸಾಧನಗಳು ಅವರ ದಿನನಿತ್ಯದ ಆರೈಕೆಯ ಅವಿಭಾಜ್ಯ ಅಂಗಗಳಾಗಿ, ಸುರಕ್ಷಿತ, ಸ್ವತಂತ್ರ ಮತ್ತು ಘನತೆಯುತ ಆರೋಗ್ಯಯುತ ಜೀವನವನ್ನು ಸಾಧಿಸಲು ಸಹಾಯ ಮಾಡುತ್ತವೆ.

►ರೋಗ ಬರದಂತೆ ತಡೆಗಟ್ಟುವಿಕೆ ಮುಖ್ಯ

ರೋಗ ಬರದಂತೆ ತಡೆಗಟ್ಟುವಿಕೆಯು ಆರೈಕೆ ಆರೋಗ್ಯ ವ್ಯವಸ್ಥೆಯ ಪ್ರಮುಖ ಅಂಗವಾಗಿದ್ದು, ರೋಗ ಉಲ್ಬಣವನ್ನು ತಡೆಯುವ ಹಾಗೂ ಆರೋಗ್ಯವನ್ನು ದೀರ್ಘಕಾಲಿಕವಾಗಿ ಕಾಪಾಡುವ ಉದ್ದೇಶ ಹೊಂದಿದೆ. ಇದರ ವ್ಯಾಪ್ತಿಯಲ್ಲಿ ಇನ್ಫ್ಲುಯೆನ್ಸಾ ಮತ್ತು ನ್ಯುಮೋನಿಯಾ ಮುಂತಾದ ಸೋಂಕುಗಳ ವಿರುದ್ಧ ಲಸಿಕೆಗಳ ನೀಡಿಕೆ, ವಾಸಸ್ಥಳದಲ್ಲಿ ಸೂಕ್ತ ಬದಲಾವಣೆಗಳ ಮೂಲಕ ರೋಗ ನಿರೋಧಕ ತಂತ್ರಗಳ ಅನುಷ್ಠಾನ, ಹಾಗೂ ಆರಂಭಿಕ ಹಂತದಲ್ಲೇ ರೋಗ ತಡೆಯುವ ಕ್ರಮಗಳು ಒಳಗೊಂಡಿವೆ. ದೈನಂದಿನ ಜೀವನ ಶೈಲಿಯಲ್ಲಿ ಇಂತಹ ತಡೆಗಟ್ಟುವ ಆರೈಕೆಯನ್ನು ವ್ಯವಸ್ಥಿತವಾಗಿ ಅಳವಡಿಸಿಕೊಂಡಲ್ಲಿ, ಆಸ್ಪತ್ರೆ ಭೇಟಿ ನೀಡುವ ಅವಶ್ಯಕತೆಯೇ ಬರುವುದಿಲ್ಲ. ಇದರಿಂದ ವೈದ್ಯರ ಭೇಟಿ ಗಣನೀಯವಾಗಿ ಕಡಿಮೆಯಾಗುವುದಲ್ಲದೆ, ಇದರಿಂದ ರೋಗಿಯ ಮೇಲಾಗುವ ಒತ್ತಡ ಮತ್ತು ಆತಂಕವೂ ತಗ್ಗುತ್ತದೆ ಎಂದು ಸಂಶೋಧನೆಗಳು ದೃಢಪಡಿಸಿವೆ.

►ಹಿರಿಯರ ಆರೈಕೆಯಲ್ಲಿ AI ಬಳಕೆ

ಮೇಲ್ವಿಚಾರಣೆ ಮತ್ತು ರೋಗಿ ಇರುವ ಸ್ಥಳದಿಂದಲೇ ನಡೆಸುವ ವೀಡಿಯೋ ಸಮಾಲೋಚನೆಗಳಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯು, ಗಂಭೀರ ಘಟನೆಗಳ ಮೊದಲು ಸಂಭವನೀಯ ಬಿಕ್ಕಟ್ಟುಗಳನ್ನು ಸಮಯೋಚಿತವಾಗಿ ಗುರುತಿಸಲು ನೆರವಾಗುತ್ತದೆ. ಈ ತಂತ್ರಜ್ಞಾನವು ವೈದ್ಯಕೀಯ ವೃತ್ತಿಪರರನ್ನು ಬದಲಿಸುವುದಕ್ಕಿಂತಲೂ, ಅವರ ಕಾರ್ಯದಕ್ಷತೆಯನ್ನು ಹೆಚ್ಚಿಸಿ, ಕುಟುಂಬ ಹಾಗೂ ಸಮುದಾಯ ಆರೋಗ್ಯ ಸೇವೆಗಳ ಬಳಕೆಯಲ್ಲಿ ಸುಧಾರಿಸುವ ಪೂರಕ ಸಾಧನವಾಗಿದೆ.

►ಹಿರಿಯರ ಸ್ನೇಹಿ ವಾತಾವರಣ ನಿರ್ಮಾಣ

ವಯೋವೃದ್ಧರಲ್ಲಿ ಸಾಮಾನ್ಯವಾಗಿ ಕಂಡುಬರುವ “ವೃದ್ಧಾಪ್ಯದ ಗುಣಲಕ್ಷಣಗಳು” ಎಂದರೆ ಬೀಳುವುದು, ಜ್ಞಾಪಕಶಕ್ತಿ ಕುಗ್ಗುವುದು, ಮೂತ್ರದ ಮೇಲೆ ನಿಯಂತ್ರಣ ಕಳೆದುಕೊಳ್ಳುವಿಕೆ, ಖಿನ್ನತೆ ಹಾಗೂ ಸಂವೇದನಶೀಲತೆಯಲ್ಲಿನ ಕೊರತೆ. ಇವು ದೈಹಿಕ-ಮಾನಸಿಕ ಆರೋಗ್ಯದ ಮೇಲೆ ಮಾತ್ರವಲ್ಲ, ಅವರ ಜೀವನಮಟ್ಟದ ಮೇಲೂ ಗಂಭೀರ ಪರಿಣಾಮ ಬೀರುತ್ತವೆ.

ಈ ಸಮಸ್ಯೆಗಳನ್ನು ತಡೆಗಟ್ಟಲು ಹಾಗೂ ನಿಯಂತ್ರಿಸಲು ನಿಗದಿತ ಅವಧಿಯಲ್ಲಿ ತಪಾಸಣೆಗಳನ್ನು ನಡೆಸುವುದು, ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದು ಮತ್ತು ಬೌದ್ಧಿಕ ಚಟುವಟಿಕೆಗಳಲ್ಲಿ ಹಿರಿಯರನ್ನು ತೊಡಗಿಸಿಕೊಳ್ಳುವುದು ಅತ್ಯವಶ್ಯಕ.

ಇದೇ ವೇಳೆ, ಹಿರಿಯರು ತಮ್ಮ ಸಮಸ್ಯೆಗಳಲ್ಲಿ ಒಂಟಿತನ ಅನುಭವಿಸದಂತೆ ಮುಕ್ತ ಸಂವಹನವನ್ನು ಉತ್ತೇಜಿಸಿ, ತಕ್ಷಣದ ವೈದ್ಯಕೀಯ ಹಾಗೂ ಮಾನಸಿಕ ಸಹಾಯವನ್ನು ಲಭ್ಯವಾಗುವಂತೆ ಮಾಡುವುದು ಆರೋಗ್ಯ ಸೇವಾ ಕ್ಷೇತ್ರದ ಪ್ರಮುಖ ಜವಾಬ್ದಾರಿಯಾಗಿದೆ.

►ವಯಸ್ಕರಿಗಾಗಿ ಸುರಕ್ಷಿತ ವಸತಿ ನಿರ್ಮಾಣ

ವಯಸ್ಕರ ಅಗತ್ಯಗಳನ್ನು ಪೂರ್ಣಗೊಳಿಸಲು ವಿನ್ಯಾಸಗೊಳಿಸಲಾದ ವೃದ್ಧ ಸ್ನೇಹಿ ಮನೆಗಳು ಸುರಕ್ಷತೆ, ಅನುಕೂಲತೆ ಮತ್ತು ಸ್ವಾವಲಂಬನೆಯನ್ನು ಉತ್ತಮ ರೀತಿಯಲ್ಲಿ ಒದಗಿಸುತ್ತವೆ. ಸ್ಲಿಪ್ ರಹಿತ ಮ್ಯಾಟ್‌ಗಳು, ಹಿಡಿಯುವ ಬಾರ್ ಗಳು, ಎತ್ತರದ ಶೌಚಾಲಯಗಳು(ವೆಸ್ಟರ್ನ್) ಮತ್ತು ಸುಲಭವಾಗಿ ಅಡ್ಡಾಡಲು ಪೂರಕ ವ್ಯವಸ್ಥೆಗಳ ನಿರ್ಮಾಣ ಮಾಡುವುದರಿಂದ ದಿನನಿತ್ಯದ ಚಟುವಟಿಕೆಗಳಲ್ಲಿ ವೃದ್ಧರು ಬಿದ್ದು ಗಾಯ ಮಾಡಿಕೊಳ್ಳುವ ಅಪಘಾತದ ಅಪಾಯವನ್ನು ಕಡಿಮೆ ಮಾಡುತ್ತವೆ. ಆರಾಮದಾಯಕ ಆಸನ ವ್ಯವಸ್ಥೆ ಮತ್ತು ಸುಲಭವಾಗಿ ಸಿಗಬಹುದಾದ ಪೂರಕ ವ್ಯವಸ್ಥೆಗಳು ಸ್ವತಂತ್ರ ಜೀವನ ಶೈಲಿಯನ್ನು ಉತ್ತೇಜಿಸುತ್ತವೆ.

ತುರ್ತು ಪರಿಸ್ಥಿತಿಗಳಲ್ಲಿ ತ್ವರಿತ ಪ್ರತಿಕ್ರಿಯೆಗಾಗಿ ಸ್ಪಷ್ಟ ತುರ್ತು ಯೋಜನೆಗಳು, ಲಭ್ಯವಿರುವ ಸಂಪರ್ಕ ಸಂಖ್ಯೆಗಳನ್ನು ಪಟ್ಟಿ ಮಾಡುವುದು ಮತ್ತು ಸಂಪೂರ್ಣವಾಗಿ ಸಿದ್ಧಗೊಂಡ ಪ್ರಥಮ ಚಿಕಿತ್ಸಾ ಕಿಟ್ ಅತಿ ಅಗತ್ಯ. ಇಂತಹ ಪರಿಷ್ಕರಣೆಗಳು ವಯಸ್ಕರ ಸುರಕ್ಷತೆ, ಆರೋಗ್ಯ ಮತ್ತು ಜೀವನದ ಗುಣಮಟ್ಟವನ್ನು ಪ್ರಮುಖವಾಗಿ ಸುಧಾರಿಸುತ್ತವೆ.

►ಹೃದಯಸ್ಪರ್ಶಿ ಆರೈಕೆ; ಭಾವನಾತ್ಮಕ ಸಂಬಂಧ

ಭಾವನಾತ್ಮಕ ಬೆಂಬಲವಿಲ್ಲದೆ ನೀಡಲಾಗುವ ವೈದ್ಯಕೀಯ ಸೇವೆ ಹಿರಿಯರಿಗೆ ಇಷ್ವವಾಗದು. ಅದು ಅವರ ಮನಸ್ಸಿಗೆ ನೆಮ್ಮದಿ ನೀಡದು. ವಿಶೇಷವಾಗಿ ಮಕ್ಕಳು ಮತ್ತು ಮೊಮ್ಮಕ್ಕಳು ದೂರದಲ್ಲಿದ್ದಾಗ ಒಂಟಿತನವು ಹಿರಿಯರ ಭೌತಿಕ ಮತ್ತು ಮಾನಸಿಕ ಆರೋಗ್ಯಕ್ಕೆ ನೇರ ಪರಿಣಾಮ ಬೀರುತ್ತದೆ, ಈ ಸಂದರ್ಭಗಳಲ್ಲಿ, ಅವರು ಆತ್ಮೀಯ ಆರೈಕೆಗೆ ಹಾತೊರೆಯುತ್ತಾರೆ. ಹಿರಿಯರ ಆರೈಕೆಯಲ್ಲಿ ಇದನ್ನು ಮುಖ್ಯವಾಗಿ ಗಮನಿಸಬೇಕು.

►ಒಂಟಿತನ ಕಡಿಮೆ ಮಾಡಬೇಕು

ಹಿರಿಯ ನಾಗರಿಕರಿಗೆ ದಿನನಿತ್ಯದ ಕ್ಷಣಗಳನ್ನು ಪರಸ್ಪರ ಹಂಚಿಕೊಳ್ಳಲು, ಸಂವಾದ ನಡೆಸಲು ಮತ್ತು ಆಹಾರವನ್ನು ಒಟ್ಟಿಗೆ ಸೇವಿಸಲು ಅವಕಾಶ ನೀಡುವುದು ಅವರ ಮಾನಸಿಕ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ. ಕುಟುಂಬದ ಆಗುಹೋಗುಗಳನ್ನು ಎಲ್ಲರೊಡನೆ ಹಂಚಿಕೊಳ್ಳುವುದು, ಸಂಪ್ರದಾಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಮತ್ತು ಹಿರಿಯರ ಅಮೂಲ್ಯ ಹಾಜರಾತಿಯನ್ನು ಗೌರವಿಸುವುದು, ಅವರ ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಸಂಬಂಧಗಳನ್ನು ಗಟ್ಟಿ ಮಾಡುತ್ತದೆ.

►ಹಿರಿಯರಿಗೆ ಗೌರವವಿರಲಿ

ಹಿರಿಯರ ಜೀವನದಲ್ಲಿ ಸ್ವಾತಂತ್ರ್ಯ ಮತ್ತು ಅವರಿಗೆ ಗೌರವ ನೀಡುವುದು ಸಮಾಜದ ಪ್ರಮುಖ ಜವಾಬ್ದಾರಿಯಾಗಿದೆ. ವಯಸ್ಸಾದಂತೆ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯಕ್ಕೆ ಸವಾಲುಗಳು ಎದುರಾಗಬಹುದು. ಆದರೂ ಆಹಾರ, ವಿಶ್ರಾಂತಿ, ಆರೋಗ್ಯ ಹಾಗೂ ಆರ್ಥಿಕ ವಿಷಯಗಳಲ್ಲಿ ಅವರ ಅಭಿಪ್ರಾಯವನ್ನು ಗೌರವಿಸುವುದು ಅತ್ಯಂತ ಅವಶ್ಯಕ. ಹಿರಿಯರು ಕೇವಲ ಆರೈಕೆ ಪಡೆಯಲು ಇರುವುವರು ಎಂದೇ ಪರಿಗಣಿಸುವುದು ಅವರ ಸ್ವಾಭಿಮಾನಕ್ಕೆ ಧಕ್ಕೆಯನ್ನು ಉಂಟುಮಾಡುತ್ತದೆ. ಆದ್ದರಿಂದ ಅವರನ್ನು ನಿರ್ಧಾರ ತೆಗದುಕೊಳ್ಳುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಸೇರಿಸುವುದು ಅವರ ಘನತೆ ಗೌರವ ಕಾಪಾಡುವ ಪ್ರಮುಖ ಹೆಜ್ಜೆ.

ಕಲೆ, ಸಂಗೀತ, ತೋಟಗಾರಿಕೆ, ಯೋಗ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಹಿರಿಯರ ದಿನನಿತ್ಯಕ್ಕೆ ಸಂತೋಷ ಹಾಗೂ ಚೈತನ್ಯವನ್ನು ತುಂಬುತ್ತದೆ. ಇದೇ ರೀತಿಯಾಗಿ, ಹಿರಿಯರ ಕ್ಲಬ್‌ಗಳು, ಪ್ರಾರ್ಥನಾ ಕೂಟಗಳು ಮತ್ತು ಕರಕುಶಲ ಕಾರ್ಯಾಗಾರಗಳು ಕೇವಲ ಕಾಲಹರಣಕ್ಕೆ ಸೀಮಿತವಾಗದೇ, ಬದುಕಿನಲ್ಲಿ ಅರ್ಥಪೂರ್ಣತೆಯನ್ನು ಹೆಚ್ಚಿಸುತ್ತವೆ. ಇವು ಸಾಮಾಜಿಕ ಸಂಪರ್ಕವನ್ನು ಬಲಪಡಿಸುವುದರ ಜೊತೆಗೆ, ಹಿರಿಯರಿಗೆ ಸಕ್ರಿಯ ಮತ್ತು ಗೌರವಯುತ ಜೀವನ ನಡೆಸಲು ಪ್ರೇರಣೆ ನೀಡುತ್ತವೆ.

►ಮಾನಸಿಕ ಆರೋಗ್ಯವೂ ಮುಖ್ಯ

ಮಾನಸಿಕ ಆರೋಗ್ಯದ ವಿಚಾರಗಳನ್ನು ನಾವು ಗಂಭೀರವಾಗಿ ಪರಿಗಣಿಸಬೇಕು. ಖಿನ್ನತೆ ಮತ್ತು ಮರೆವು ವಯಸ್ಸಿನ ಸಹಜ ಭಾಗವೆಂದು ನಿರ್ಲಕ್ಷಿಸದೆ, ಅವನ್ನು ಗುರುತಿಸಿ ಸಮರ್ಪಕ ಪರಿಹಾರ ಹುಡುಕುವುದು ಅಗತ್ಯ. ಇದಕ್ಕಾಗಿ ಮುಕ್ತ ಸಂಭಾಷಣೆ ನಡೆಸುವುದು, ವೃತ್ತಿಪರ ಸಹಾಯ ಪಡೆಯುವುದು ಹಾಗೂ ಮನೋವೈದ್ಯಕೀಯ ಸಹಾಯ ಪಡೆಯುವುದು ಧೈರ್ಯದ ಹಾಗೂ ಆರೋಗ್ಯಕರ ಜೀವನದತ್ತದ ಪ್ರಮುಖ ಹೆಜ್ಜೆಗಳಾಗಿವೆ.

“ತಾನು ಇಷ್ಟಪಡುವುದು ತನ್ನ ಸಹೋದರನಿಗೂ ಇಷ್ಟವಾಗಬೇಕು. ಆ ರೀತಿ ಮಾಡದವನು ನಿಜವಾದ ನಂಬಿಗಸ್ತನಲ್ಲ” ಎಂಬ ಪ್ರವಾದಿ ಮುಹಮ್ಮದ್ [ಸ] ಅವರ ಸಂದೇಶವು ನಮ್ಮ ಬದುಕಿಗೆ ಆಳವಾದ ಮಾರ್ಗದರ್ಶನವಾಗಿದೆ. ಇದು ಕೇವಲ ಕುಟುಂಬದ ಮಿತಿಯನ್ನು ಮೀರಿ, ಸಮಾಜದ ಪ್ರತಿಯೊಬ್ಬ ದುರ್ಬಲ ಹಿರಿಯರರತ್ತ ಕಾಳಜಿ, ಮಾನವೀಯತೆ ಮತ್ತು ಪ್ರೀತಿ ವಿಸ್ತರಿಸುವಂತೆ ಸ್ಫೂರ್ತಿ ನೀಡುತ್ತದೆ. ಈ ಮನೋಭಾವನೆಯ ಮೂಲಕ ಸಾಮಾಜಿಕ ಸಂಬಂಧಗಳನ್ನು ಬಲಪಡಿಸಿ, ಎಲ್ಲರಿಗೂ ಗೌರವಯುತ ಮತ್ತು ಘನತಾಪೂರ್ಣ ಜೀವನವನ್ನು ನಿರ್ಮಿಸಲು ನಾವು ಸಹಕರಿಸಬಹುದು.

► ಸಂಬಂಧಗಳನ್ನು ಗಟ್ಟಿಗೊಳಿಸಬೇಕು

ಮನುಷ್ಯರು ತಮ್ಮ ಜೀವನದ ಪ್ರತಿಯೊಂದು ಹಂತದಲ್ಲಿಯೂ ಸಾಮಾಜಿಕ ಗುಣಲಕ್ಷಣಗಳನ್ನು ತೋರಿಸುತ್ತಾರೆ. ಪರಸ್ಪರ ಅರಿವು ಮತ್ತು ಭಾವನಾತ್ಮಕ ಸಮತೋಲನವನ್ನು ಕಾಯ್ದುಕೊಳ್ಳುವುದು, ಒಂಟಿತನವನ್ನು ತಗ್ಗಿಸುವುದು ಹಾಗೂ ಸ್ವಾಭಿಮಾನವನ್ನು ಬಲಪಡಿಸುವುದು ಇವುಗಳಲ್ಲಿ ಸಾಮಾಜಿಕ ಪರಸ್ಪರ ಸಂಪರ್ಕವು ಅತ್ಯಂತ ನಿರ್ಣಾಯಕ. ವೃದ್ಧರ ಆರೈಕೆಯನ್ನು ಕುಟುಂಬವು ಕೇವಲ ಬಾಧ್ಯತೆ ಎಂಬಂತೆ ಕಾಣದೆ, ಕೃತಜ್ಞತೆಯ ಹಾಗೂ ಮಾನವೀಯತೆಯ ಅಭಿವ್ಯಕ್ತಿಯಾಗಿ ಸ್ವೀಕರಿಸುವುದು ಅಗತ್ಯ. ಕುಟುಂಬದೊಳಗಿನ ಜವಾಬ್ದಾರಿಗಳ ಹಂಚಿಕೆ, ಆರೈಕೆ ಮಾಡುವವರ ದಣಿವು ತಡೆಯುವುದರ ಜೊತೆಗೆ, ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ ಮತ್ತು ಪೀಳಿಗೆಗೆಳ ನಡುವಿನ ಸಂಬಂಧಗಳ ಮಹತ್ವವನ್ನು ಸ್ಪಷ್ಟಗೊಳಿಸುತ್ತದೆ.

ಇದೇ ಸಮಯದಲ್ಲಿ, ಸಮುದಾಯದ ಸಕ್ರಿಯ ಬೆಂಬಲವು ಹಿರಿಯರ ಆರೈಕೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಸುಲಭ ಪ್ರವೇಶ ಹೊಂದಿದ ಬೆಂಚುಗಳು, ಇಳಿಜಾರುಗಳು, ಅನುಕೂಲಕರ ವಿಶ್ರಾಂತಿ ಕೊಠಡಿಗಳು ಮತ್ತು ಆದ್ಯತೆಯ ಸೇವಾ ಕೌಂಟರ್ಗಳಂತಹ ಸಾರ್ವಜನಿಕ ಸೌಕರ್ಯಗಳು ಹಿರಿಯರಿಗೆ ಗೌರವ ಭಾವನೆಯನ್ನು ಹೆಚ್ಚಿಸುತ್ತವೆ. ಕಲ್ಯಾಣ ಸಂಘಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ನಂಬಿಕೆ ಆಧಾರಿತ ಸಂಘಟನೆಗಳು ಸಾಕ್ಷರತಾ ಕಾರ್ಯಾಗಾರಗಳು, ಕಥಾ ವಾಚನ ಕಾರ್ಯಕ್ರಮಗಳು ಹಾಗೂ ಆರೋಗ್ಯ ಉಪಕ್ರಮಗಳಂತಹ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ, ಹಿರಿಯರನ್ನು ಸಾಮಾಜಿಕ ಜೀವನದ ವೈವಿಧ್ಯಮಯ ಜಾಲದೊಳಗೆ ಅರ್ಥಪೂರ್ಣವಾಗಿ ಸೇರಿಸಿಕೊಳ್ಳಲು ಸಹಾಯ ಮಾಡುತ್ತವೆ.

► ಹಿರಿಯರಿಗಾಗಿ ಸೌಲಭ್ಯಗಳು

ರಾಜ್ಯ ಮತ್ತು ನೀತಿ ಆಧಾರಿತ ಆರೋಗ್ಯ ರಕ್ಷಣೆ ವೆಚ್ಚಗಳು, ಸಹಾಯಕ ಸಾಧನಗಳ ಖರ್ಚಿಗೆ ಸಂಬಂಧಿಸಿದ ಆರ್ಥಿಕ ಅಡೆತಡೆಗಳನ್ನು ಸ್ಪಷ್ಟವಾಗಿ ತೋರಿಸುತ್ತವೆ. ಬಹುತೇಕ ಸರ್ಕಾರಿ ಕಾರ್ಯಕ್ರಮಗಳು, ಆರೋಗ್ಯ ವಿಮಾ ಯೋಜನೆಗಳು ಮತ್ತು ಪಿಂಚಣಿ ವ್ಯವಸ್ಥೆಗಳು ಸಮರ್ಪಕವಾಗಿ ಬಳಸಲಾಗುತ್ತಿಲ್ಲ. ಈ ವ್ಯತ್ಯಾಸವನ್ನು ಕಡಿಮೆ ಮಾಡಲು, ಸಾರ್ವಜನಿಕ-ಖಾಸಗಿ ಸಹಯೋಗದ ಮೂಲಕ ಸಬ್ಸಿಡಿ ಸಹಾಯಧನಲ್ಲಿ ನಡೆಯುವ ಚಿಕಿತ್ಸೆ, ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಗಳು, ಮೊಬೈಲ್ ಆರೋಗ್ಯ ಚಿಕಿತ್ಸಾಲಯಗಳು ಮತ್ತು ವಿಶ್ರಾಂತಿ ಆರೈಕೆ ಸೇವೆಗಳಂತಹ ಯೋಜನೆಗಳನ್ನು ವ್ಯಾಪಕವಾಗಿ ವಿಸ್ತರಿಸುವುದು ಅವಶ್ಯಕವಾಗಿದೆ. ಜೊತೆಗೆ, ಅನುವಂಶಿಕ ಹಕ್ಕುಗಳು ಮತ್ತು ನಿರ್ಲಕ್ಷ್ಯ ವಿರೋಧಿ ಕಾಯ್ದೆಗಳಂತಹ ಕಾನೂನು ರಕ್ಷಣೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಮೂಲಕ, ಈ ಉಪಕ್ರಮಗಳ ಪರಿಣಾಮಕಾರಿತ್ವವನ್ನು ಖಚಿತಪಡಿಸಬಹುದು.

►ಆರೈಕೆದಾರರೇ ನಿಜವಾದ ಹೀರೋಗಳು!

ಆರೈಕೆ ಮಾಡುವವರು, ಅವರು ಕುಟುಂಬ ಸದಸ್ಯರಾಗಿರಲಿ ಅಥವಾ ಸಮರ್ಪಿತ ವೃತ್ತಿಪರರಾಗಿರಲಿ, ಭಾವನಾತ್ಮಕ, ದೈಹಿಕ ಮತ್ತು ಆರ್ಥಿಕವಾಗಿ ಭಾರೀ ಜವಾಬ್ದಾರಿಗಳನ್ನು ಹೊಂದಿರುತ್ತಾರೆ. ಅವರಿಗೆ ಅಗತ್ಯವಿರುವುದು ತಜ್ಞ ನರ್ಸಿಂಗ್ ಕೌಶಲ್ಯ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ತಕ್ಷಣ ಪ್ರತಿಕ್ರಿಯಿಸುವ ಗುಣ. ನಿಯಮಿತ ವಿರಾಮಗಳು, ಮಾನಸಿಕ ಬೆಂಬಲ ಮತ್ತು ಸಹೋದ್ಯೋಗಿ ಆರೈಕೆದಾರರೊಂದಿಗೆ ಸಂಪರ್ಕವು ಅತ್ಯಗತ್ಯ. ವೈದ್ಯಕೀಯ ತಂಡಗಳಿಗೆ ಅವರು ಮುಖ್ಯ ಕಣ್ಣು ಮತ್ತು ಕಿವಿಗಳಾಗಿರುವ ಕಾರಣ, ಆರೋಗ್ಯ ಸೇವಾ ಒದಗಿಸುವವರೊಂದಿಗೆ ಪರಿಣಾಮಕಾರಿ ಸಂವಹನ ಹೊಂದಿರಬೇಕು. ಸರಿಯಾದ ಮಾನ್ಯತೆ ಮತ್ತು ಬೆಂಬಲವು ಅವರ ಕರ್ತವ್ಯವನ್ನು ಒತ್ತಡದಿಂದ ಪ್ರೀತಿ ಮತ್ತು ತೃಪ್ತಿಯ ಕೆಲಸದ ಅನುಭವಕ್ಕೆ ಪರಿವರ್ತಿಸಬಹುದು.

ಮನೆಯಲ್ಲಿಯೇ ಹಿರಿಯರ ಆರೈಕೆ ಮಾಡುವುದು ವೈಯಕ್ತಿಕ ಕರ್ತವ್ಯವೂ ಹೌದು. ಇದರ ಹಿಂದೆ ಒಂದಿಷ್ಟು ಮಾನವೀಯ ನೆಲೆಗಳಿವೆ. ಆ ಮೂಲಕ ಹಿರಿಯ ಜೀವಗಳಿನ್ನು ಗೌರವಿಸುವ ಭಾರತದ ನಿರ್ಮಾಣ ಸಾಧ್ಯವಾಗುತ್ತದೆ. ಕುಟುಂಬಗಳು ಆರೈಕೆ ಮಾಡುವಾಗ ವಾತ್ಸಲ್ಯವನ್ನು ಹಂಚುತ್ತಾರೆ. ಆರೋಗ್ಯ ವೃತ್ತಿಪರರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ. ಸರಕಾರಗಳು ಸಮರ್ಥ ಕಾನೂನುಗಳನ್ನು ರಚಿಸುತ್ತದೆ. ಆ ಮೂಲಕ ಅದರ ವ್ಯಾಪ್ತಿ ವಿಸ್ತರಣೆಯಾಗುತ್ತದೆ. ಆ ಮೂಲಕ ಸಮುದಾಯಗಳ ನಡುವೆ ಸಾಮಾಜಿಕ ಸಂಬಂಧಗಳು ಗಟ್ಟಿಯಾಗುತ್ತವೆ.

► ಅಷ್ಟು ಸುಲಭವಲ್ಲ ಮನೆಯಲ್ಲಿ ಹಿರಿಯರ ಆರೈಕೆ

ಹಿರಿಯರ ಆರೈಕೆಯ ಕ್ಷೇತ್ರದಲ್ಲಿ ಹಲವು ಗಂಭೀರ ಸವಾಲುಗಳಿವೆ. ಆರೈಕೆದಾರಿಗೆ ಆಯಾಸ, ಗೃಹ ಆಧಾರಿತ ಆರೈಕೆ ಆಯ್ಕೆಗಳ ಕುರಿತು ಇರುವ ಸೀಮಿತ ಅರಿವು, ಆರ್ಥಿಕ ಹೊರೆ, ಹಾಗೂ ವಯಸ್ಸು ಮತ್ತು ಮಾನಸಿಕ ಆರೋಗ್ಯದ ಬಗ್ಗೆ ವ್ಯಾಪಕವಾಗಿರುವ ನಕಾರಾತ್ಮಕ ಸಮಾಜಮುಖಿ ಕಲ್ಪನೆಗಳು ಪ್ರಮುಖ ಅಡೆತಡೆಗಳಾಗಿವೆ. ಈ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಬಹುಮುಖ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಅಗತ್ಯ. ಈ ಕುರಿತು ಜಾಗೃತಿ ಅಭಿಯಾನಗಳು ಬೇಕು. ಆರೈಕೆ ದೀರ್ಘಕಾಲಿಕವಾಗಿರುವುದರಿಂದ ಆರ್ಥಿಕವಾಗಿ ಸದೃಢತೆಯೂ ಅಗತ್ಯ. ಸುಲಭವಾಗಿ ಬಳಸಬಹುದಾದ ತಂತ್ರಜ್ಞಾನಗಳು ಮತ್ತು ಸಮುದಾಯ ಸಂಪನ್ಮೂಲಗಳ ಬಲವರ್ಧನೆಗಳ ಸಮನ್ವಯದಿಂದ ಹಿರಿಯರ ಆರೈಕೆಯಲ್ಲಿ ಹೆಚ್ಚು ಸಮಗ್ರ, ಗೌರವಯುತ ಮತ್ತು ಸ್ಥಿರ ಭವಿಷ್ಯವನ್ನು ನಿರ್ಮಿಸಬಹುದು.

►ಹಿರಿಯರ ಆರೈಕೆ ಹೊರೆಯಲ್ಲ

ಭಾರತೀಯ ಸಂಪ್ರದಾಯಲ್ಲಿ ಹಿರಿಯರ ಸೇವೆಯನ್ನು ಕೇವಲ ಸಾಮಾಜಿಕ ಹೊಣೆಗಾರಿಕೆಯಾಗಿ ಮಾತ್ರವಲ್ಲ, ಅತ್ಯುನ್ನತ ಆಧ್ಯಾತ್ಮಿಕ ಕರ್ತವ್ಯವಾಗಿಯೂ ಪರಿಗಣಿಸಲಾಗಿದೆ. ನಮ್ಮ ಆಧ್ಯಾತ್ಮಿಕ ಗ್ರಂಥಗಳು ಹಿರಿಯರನ್ನು ಜ್ಞಾನ ಸಂರಕ್ಷಕರು ಮತ್ತು ಸಂಸ್ಕೃತಿ ಪಾಲಕರಾಗಿ ಗೌರವಿಸಿವೆ. ಇಂದಿನ ಪರಿಸ್ಥಿತಿಯಲ್ಲಿ, ಈ ಮೌಲ್ಯಗಳನ್ನು ಆಧುನಿಕ ಚೌಕಟ್ಟಿನೊಳಗೆ ಅಳವಡಿಸಿಕೊಂಡು ಕುಟುಂಬ ವ್ಯವಸ್ಥೆಯನ್ನು ಬಲಪಡಿಸುವುದು, ಸಮುದಾಯವು ಅದಕ್ಕೆ ಬೆಂಬಲ ನೀಡುವುದನ್ನು ಮುಂದುವರೆಸುವುದು ಮತ್ತು ಸರ್ಕಾರದ ನೀತಿಗಳಲ್ಲಿ ಸೂಕ್ತ ಬದಲಾವಣೆಗಳನ್ನು ತರವುದು ಅತ್ಯಾವಶ್ಯಕ.

ಹಿರಿಯರ ಆರೈಕೆಯು ಆರೋಗ್ಯ ಸೇವೆಗಳ ಮೀರಿದ ವಿಷಯವಾಗಿದೆ. ಇದು ಭಾರತದ ಮೌಲ್ಯಗಳನ್ನು ಜೀವಂತವಾಗಿಸುವ, ನಮ್ಮ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪಸರಿಸುವ ಪ್ರಮುಖ ಸಾಧನವಾಗಿದೆ. ವೈದ್ಯಕೀಯ, ಭಾವನಾತ್ಮಕ ಮತ್ತು ಸಾಮಾಜಿಕ ಸಂಬಂಧಗಳನ್ನು ಸಮನ್ವಯಗೊಳಿಸುವ ಮೂಲಕ, ಭಾರತವು ಜಗತ್ತಿಗೆ ಸಹಾನುಭೂತಿ ಮತ್ತು ಮಾನವೀಯತೆಯಿಂದ ಕೂಡಿದ ಹಿರಿಯರ ಆರೈಕೆಯ ಮಾದರಿಯನ್ನು ಸ್ಥಾಪಿಸುವ ಸಾಮರ್ಥ್ಯ ಹೊಂದಿದೆ.

ಈ ದಿಸೆಯಲ್ಲಿ ಯಶಸ್ವಿಯಾದರೆ ಅದು ರಾಷ್ಟ್ರದ ಪ್ರಗತಿಗೆ ಪೂರಕವಾಗುತ್ತದೆ; ಎಡವಿದರೆ ಸಮಾಜದ ಹೃದಯವೇ ಒಡೆದಂತಾಗುತ್ತದೆ. ನಮ್ಮ ಹಿರಿಯರು ಘನತೆ, ಪ್ರೀತಿ ಮತ್ತು ಆರಾಮದಿಂದ ತಮ್ಮ ಸುವರ್ಣ ವರ್ಷಗಳನ್ನು ಸವೆಸಿರುವುದು. ಕೇವಲ ಸಾರ್ವಜನಿಕ ಆರೋಗ್ಯದ ಜಯವಲ್ಲ. ಪ್ರಜಾಪ್ರಭುತ್ವದ ಬಲ, ಸಂಪ್ರದಾಯದ ಸ್ಥೈರ್ಯ ಮತ್ತು ನಮ್ಮ ಆತ್ಮಸಾಕ್ಷಿಯ ಧ್ಯೋತಕ.

ಹೀಗಾಗಿ, ಹಿರಿಯರ ಆರೋಗ್ಯ, ಗೌರವ ಮತ್ತು ಆರೈಕೆಯನ್ನು ನಮ್ಮ ಮನೆಗಳಿಂದಲೇ ಪ್ರಾರಂಭಿಸಬೇಕು. ಅವರ ಸಂಧ್ಯಾಕಾಲದಿಂದಲೇ ಭಾರತದ ನವೋದಯ ಬೆಳಗಲಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಡಾ.ಹಾರೂನ್ ಎಚ್

contributor

ಎಂಡಿ ಎಫ್‌ಜಿಎಸ್ಐ ಕನ್ಸಲ್ಟೆಂಟ್, ಡಿಪಾರ್ಟ್ಮೆಂಟ್ ಆಫ್ ಇಂಟರ್ನಲ್ ಮೆಡಿಸಿನ್ , ಕೆಎಂಸಿ ಆಸ್ಪತ್ರೆ, ಮಂಗಳೂರು

Similar News