×
Ad

ಮಾಧ್ಯಮಗಳಲ್ಲಿ ‘ಅಹಿತಕರ ಸುದ್ದಿಗಳ’ ಗೋಳು

Update: 2025-09-28 11:12 IST

ಮಾಧ್ಯಮಗಳು ಪ್ರಜಾತಂತ್ರದ ನಾಲ್ಕನೆಯ ಅಂಗವೆಂದು ಪರಿಗಣಿತವಾಗಿದೆ. ಇದು ಕೇವಲ ರೂಢಿಗತ ಮಾತಲ್ಲ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳೇ ಪ್ರಜಾತಂತ್ರ ವ್ಯವಸ್ಥೆಯನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ಸಾಧ್ಯ. ಆದ್ದರಿಂದ ಸರಕಾರಗಳು ಈ ಸ್ವಾತಂತ್ರ್ಯವನ್ನು ನಿಯಂತ್ರಣ ಮಾಡಲು ಹೊರಡುವುದು ಅಪಾಯಕಾರಿ. ಹೀಗಾಗಿ ಮಾಧ್ಯಮಗಳು ಸ್ವಯಂ ನಿಯಂತ್ರಣ ಹೊಂದುವುದೇ ಆರೋಗ್ಯಕರ ಬೆಳವಣಿಗೆ. ಹಿಂದೆ ಮಾಧ್ಯಮ ರಂಗದಲ್ಲಿ ಪ್ರಚಲಿತದಲ್ಲಿದ್ದ ಸದಾಚಾರ, ಸತ್ಸಂಪ್ರದಾಯಗಳನ್ನು ಪುನಃ ನಿರೀಕ್ಷಿಸಬಹುದೇ?

ಈ ಒಂದು ಸುದ್ದಿಯ ಸುತ್ತ ಜರುಗುತ್ತಿರುವ ಬೆಳವಣಿಗೆಗಳು ಜನರ ಮನಸ್ಸಿನಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿದ್ದರೆ ಆಶ್ಚರ್ಯವಿಲ್ಲ. ಹೌದು, ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ಸುದ್ದಿ ಎಬ್ಬಿಸಿರುವ ಅಬ್ಬರ ಮತ್ತು ಊಹಾಪೋಹ ಆ ರೀತಿಯಿದೆ. ಖಾಸಗಿ ಟಿ.ವಿ. ಮಾಧ್ಯಮಗಳಲ್ಲಿ ನಿರೂಪಕರ ಮಾತುಗಳ ಅಬ್ಬರ, ಕಿರುಚಾಟ ಇತ್ಯಾದಿ ಹಿಂಸೆಯಾಗಿ ಬಿಟ್ಟಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ದೃಶ್ಯಾವಳಿ, ಹೇಳಿಕೆ- ಪ್ರತಿಹೇಳಿಕೆ, ವೈಯಕ್ತಿಕ ನಿಂದನೆಯ ಮಾತುಗಳು, ಟ್ರೋಲ್ಗಳು ಸಾಕೋ ಸಾಕೆನಿಸಿದೆ. ಬಹುತೇಕ ದಿನಪತ್ರಿಕೆಗಳು ವಿಶ್ವಾಸಾರ್ಹ ಸುದ್ದಿ ನೀಡುತ್ತಿದ್ದರೂ ಕೆಲವೊಂದು ದಿನ ಪತ್ರಿಕೆಗಳ ಅತಿರಂಜಿತ ಶೀರ್ಷಿಕೆ ಹಾಗೂ ವರದಿಗಳು ಬೆಳಗಿನ ಆಹ್ಲಾದಕರ ಓದಿನ ಲಹರಿಯನ್ನು ಕಸಿದು ಕೊಂಡಿದ್ದು ಸುಳ್ಳಲ್ಲ.

ಹಾಗೆ ನೋಡಿದರೆ ಈ ಮಾದರಿಯಲ್ಲಿ ಪ್ರಕರಣವೊಂದು ಸುದ್ದಿ ಮಾಡುತ್ತಿರುವುದು ಇದೇ ಮೊದಲನೇ ಬಾರಿಯಲ್ಲ. ಕೊನೆಯ ಬಾರಿಯೂ ಆಗಲಾರದು. ಕೆಲ ಸಮಯದ ಹಿಂದೆ ‘ದರ್ಶನ್ಪ್ರಕರಣ’ವೂ ಎಲ್ಲ ಮಾಧ್ಯಮಗಳಲ್ಲಿಯೂ ಇದೇ ರೀತಿ ಸುದ್ದಿಯಾಗಿದ್ದನ್ನು ನೆನಪಿಸಿಕೊಳ್ಳ ಬಹುದು. ನಿಜ, ಮೇಲ್ನೋಟಕ್ಕೆ ಇದು ಗಂಭೀರ ಪ್ರಕರಣವೆಂದು ಕಂಡು ಬಂದಿದೆ. ಹಾಗಂತ ಸುದ್ದಿಯನ್ನು ವರದಿ ಮಾಡುವ ಕ್ರಮದಲ್ಲಿ ವ್ಯತ್ಯಾಸವೇನೂ ಆಗ ಬೇಕಾಗಿಲ್ಲ. ಅನೇಕ ದಶಕಗಳ ಹಿಂದಿನಿಂದಲೂ ದೇಶದಾದ್ಯಂತ ಸಾಕಷ್ಟು ವಿವಾದಗಳು, ಪ್ರಕರಣಗಳು ಇದೇ ರೀತಿ ಸುದ್ದಿ ಮಾಡಿದ್ದುಂಟು. ಜನರ ಅಚ್ಚರಿ, ಕುತೂಹಲಕ್ಕೆ ಕಾರಣವಾಗುತ್ತಿದ್ದ ಈ ಮಾದರಿ ಪ್ರಕರಣಗಳ ತಾರ್ಕಿಕ ಅಂತ್ಯ ಯಾವುದೇ ಊಹೆಗೂ ಸಿಗದೆ ಅಂತ್ಯಗೊಂಡಿದ್ದೂ ಇದೆ.

ನಾಗರಿಕ ಸಮಾಜದಲ್ಲಿ ವಿವಾದ, ಭಿನ್ನಾಭಿಪ್ರಾಯ, ಅಪರಾಧ ಪ್ರಕರಣ ಇತ್ಯಾದಿಗಳೆಲ್ಲ ಯಾವಾಗಲೂ ಇದ್ದಿದ್ದೇ. ಆದರೆ ನಮಗೆ ಇಲ್ಲಿ ಮುಖ್ಯವಾಗುವುದು ಅದನ್ನು ವರದಿ ಮಾಡುವಂತಹ ಕ್ರಮ. ಹಾಗೆಯೇ ಅವುಗಳ ಕುರಿತು ವ್ಯಕ್ತ ಪಡಿಸುವಂತಹ ವೈಯಕ್ತಿಕ ಅಭಿಪ್ರಾಯಗಳ ರೀತಿ-ನೀತಿ. ಇವೆಲ್ಲ ನಾಗರಿಕ ಸಮಾಜವೊಂದರ ಸದಾಚಾರವನ್ನು ಮೀರುವಂತಿರ ಬಾರದು. ಹಿಂದೆ ಇವೆಲ್ಲ ಯಾವತ್ತೂ ಸಾಮಾಜಿಕ ಸಭ್ಯತೆ ಮತ್ತು ನೈತಿಕ ಚೌಕಟ್ಟನ್ನು ಮೀರುತ್ತಿರಲಿಲ್ಲ. ಇದನ್ನು ಇವತ್ತು ನೆನಪಿಸಿ ಕೊಂಡರೆ ನೋವಾಗುತ್ತದೆ. ಕಾಲ ಸರಿದಂತೆ ಜನರ ಮನೋಭಾವ ಮತ್ತು ನಡವಳಿಕೆ ಹೇಗೆ ಬದಲಾಯಿತು ಎಂಬುದನ್ನು ಯೋಚಿಸಿದರೆ ಆಶ್ಚರ್ಯವೂ ಆಗುತ್ತದೆ. ಮಾಧ್ಯಮಗಳಲ್ಲಿ, ವಿಶೇಷವಾಗಿ ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಬಳಕೆಯಾಗುತ್ತಿರುವ ಭಾಷೆ, ಭಾವಾವೇಶ ಮತ್ತು ವಾಸ್ತವಕ್ಕಿಂತ ತಮ್ಮ ತಮ್ಮ ವೈಯಕ್ತಿಕ ನಿಲುವುಗಳಿಗೆ ಜೋತು ಬೀಳುವ ಮನೋಭಾವ ಇತ್ಯಾದಿ ಗಾಬರಿ ಹುಟ್ಟಿಸುವಂತಿದೆ. ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ಮುಂದೇನಾಗಬಹುದು?

ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣವೆಂಬುದು ಗಂಭೀರವಾಗಿ ಪರಿಗಣಿಸಬೇಕಾದ ಪ್ರಕರಣ ಎಂಬುದು ಸರಿ. ಜನರ ಮನಸ್ಸಿನಲ್ಲಿ ಎದ್ದಿರುವ ಸಂದೇಹ, ಸಂಶಯಗಳು ನಿವಾರಣೆಯಾಗಬೇಕು. ಅದಕ್ಕಿಂತಲೂ ಮುಖ್ಯವಾಗಿ ನ್ಯಾಯ-ಸತ್ಯ ಸಂದೇಹವಿಲ್ಲದಂತೆ ಸ್ಥಾಪಿತವಾಗಬೇಕು; ಪ್ರಕರಣ ತಾರ್ಕಿಕ ಅಂತ್ಯ ಕಾಣ ಬೇಕು. ಅಲ್ಲಿಯ ತನಕ ಮಾಧ್ಯಮವಾಗಲೀ, ಉಳಿದವರಾಗಲೀ ಪ್ರಕರಣದ ಸತ್ಯಾಸತ್ಯತೆ ನಿರ್ಣಯ ಮಾಡುವಂತಿಲ್ಲ. ಅಂತಿಮ ಮಾತು ಏನಿದ್ದರೂ ಘನ ನ್ಯಾಯಾಲಯದ್ದು. ಈ ನಿಟ್ಟಿನಲ್ಲಿ ಸರಕಾರ ಮತ್ತು ವಿಶೇಷ ತನಿಖಾ ತಂಡ ತಮ್ಮ ಹೊಣೆಗಾರಿಕೆ ನಿರ್ವಹಿಸುತ್ತಿರುವಾಗ ವಿದ್ಯುನ್ಮಾನ ಮತ್ತು ಇತರ ಮಾಧ್ಯಮಗಳು ಕೂಡ ಅಷ್ಟೇ ಜವಾಬ್ದಾರಿಯಿಂದ ನಡೆದು ಕೊಳ್ಳುವುದು ಮುಖ್ಯ. ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಯಾಶೀಲರಾಗಿರುವ ಯುಟ್ಯೂಬರ್ಗಳು ಮತ್ತು ಜನಸಾಮಾನ್ಯರು ಸಹ ಎಚ್ಚರ ತಪ್ಪುವಂತಿಲ್ಲ.

ಆದರೆ ಇಂದು ಏನಾಗುತ್ತಿದೆ? ಈ ನಿಟ್ಟಿನಲ್ಲಿ ನಡೆಯುತ್ತಿರುವ ವ್ಯತಿರಿಕ್ತ ಬೆಳವಣಿಗೆಗಳು ಆಶ್ಚರ್ಯ ಹುಟ್ಟಿಸುತ್ತದೆ. ಕೆಲವು ಮಾಧ್ಯಮಗಳು ಪ್ರಕರಣದ ಸುತ್ತ ಜರುಗುತ್ತಿರುವ ಬೆಳವಣಿಗೆಗಳನ್ನು ಯಥಾವತ್ತಾಗಿ ವರದಿ ಮಾಡುವುದನ್ನು ಬಿಟ್ಟು ಊಹಾಪೋಹದ ಸುದ್ದಿ, ವರದಿಯನ್ನು ತೇಲಿ ಬಿಡುತ್ತಿವೆ. ಕೆಲವು ಪತ್ರಿಕಾ ಲೇಖನಗಳೂ ವಾಸ್ತವವನ್ನು ಮರೆಮಾಚಿ ಭಾವನಾತ್ಮಕ ನೆಲೆಯಲ್ಲಿ ಸಾಗುತ್ತವೆ. ಇನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಗೊಂದಲಕಾರಿ ಸುದ್ದಿಗಳಿಗೆ ಲಂಗು ಲಗಾಮು ಇಲ್ಲ. ಇಲ್ಲಿ ಯಾರು ಯಾರದೋ ಚಾರಿತ್ರ್ಯಹರಣ, ನಿಂದನೆಗಳು ಸಾಮಾನ್ಯವೆಂಬಂತಾಗಿದೆ. ಹಾಗೆಯೇ ಟ.ವಿ. ಚಾನೆಲ್ಗಳು ಪೈಪೋಟಿ ಬಿದ್ದಂತೆ ಪ್ರಕರಣವನ್ನು ಅತಿರಂಜಿತವಾಗಿಯೋ, ಲಘವಾಗಿಯೋ ದಿನವಿಡೀ ಬೇರೆ ಬೇರೆ ಆಯಾಮಗಳಲ್ಲಿ ಎಳೆದಾಡುತ್ತಿರುವುದನ್ನು ಕಾಣುತ್ತೇವೆ. ಟಿ.ವಿ.ಗಳಿಗೆ ಟಿಆರ್ಪಿ ಹೆಚ್ಚಿಸುವಂತಹ ಧಾವಂತವಾದರೆ ಉಳಿದ ಮಾಧ್ಯಮಗಳಿಗೆ ಜನರ ಗಮನ ಸೆಳೆಯುವಂತಹ ಆತುರ! ಈ ನಡುವೆ ಕೆಲವು ಮಾಧ್ಯಮಗಳು ಯಾವುದೇ ಪೂರ್ವಾಗ್ರಹವಿಲ್ಲದೆ ಕಾರ್ಯಾಚರಿಸುವುದನ್ನು ಮರೆಯುವಂತಿಲ್ಲ.

ಜನರಿಗೆ ವಿಶ್ವಾಸಾರ್ಹ ಸುದ್ದಿಯನ್ನು ನೀಡುವುದು ಮಾಧ್ಯಮಗಳ ಹೊಣೆಗಾರಿಕೆಯೂ ಹೌದು, ಧರ್ಮವೂ ಹೌದು. ಇಲ್ಲಿ ಯಾವ ಪಕ್ಷಪಾತವೂ ಇರಕೂಡದು. ಜೊತೆಗೆ ತೀರ್ಪು, ತೀರ್ಮಾನಗಳ ಧ್ವನಿಯೂ ಸಲ್ಲದು. ಸಾಮಾಜಿಕ ಸಭ್ಯತೆ, ಮೌಲ್ಯಗಳ ಚೌಕಟ್ಟಿನಲ್ಲಿ ನಡೆಯ ಬೇಕಾದ ಈ ಕಾರ್ಯ ಅತ್ಯಂತ ಮಹತ್ವಪೂರ್ಣವಾದದ್ದು. ಈ ಅಂಶಗಳನ್ನು ನಿರ್ಲಕ್ಷ್ಯ ಮಾಡಿದರೆ ತೊಂದರೆಗೆ ಒಳಗಾದವರು ಮತ್ತೊಮ್ಮೆ ಹಿಂಸೆ, ನೋವುಗಳಿಗೆ ತುತ್ತಾಗ ಬಹುದು. ಇದಕ್ಕೆ ಸಂಬಂಧ ಪಡದವರ ಮಾನ ಮಾರ್ಯದೆ ಹರಾಜಾಗಲೂ ಬಹುದು. ಈ ರೀತಿ ನೋವು, ಅಪಮಾನಗಾಕ್ಕೊಳದವರಿಗೆ ನಂತರ ಯಾವ ರೀತಿಯ ನ್ಯಾಯ ನೀಡಬಹುದು? ಈ ದೃಷ್ಟಿಯಿಂದ ಮಾಧ್ಯಮಗಳು ವಸ್ತುನಿಷ್ಠ ಸುದ್ದಿ ಮತ್ತು ವರದಿಯನ್ನು ನೀಡುವುದು ಅಗತ್ಯ.

ಸಾಮಾಜಿಕ ಮಾಧ್ಯಮಗಳು ಮತ್ತು ಖಾಸಗಿ ಟಿ.ವಿ. ಚಾನೆಲ್ಗಳು ಅಸ್ತಿತ್ವಕ್ಕೆ ಬಂದಾಗ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮುಕ್ತ ಅವಕಾಶ ದೊರೆಯಿತೆಂಬ ಸಂತಸವಿತ್ತು. ಆದರೆ ಇವುಗಳು ವ್ಯಕ್ತಿ ನಿಂದನೆ, ಕೆಟ್ಟ ಕಮೆಂಟ್ಸ್, ಚಾರಿತ್ರ್ಯಹರಣಗಳಿಗೂ ಕಾರಣವಾಗಬಹುದೆಂಬ ಕಲ್ಪನೆ ಬಹುಶಃ ಯಾರಿಗೂ ಇದ್ದಂತಿರಲಿಲ್ಲ. ಸಮಾಜದಲ್ಲಿ ಸಾಮಾಜಿಕ ಮಾಧ್ಯಮಗಳು ಸಾಧಿಸಬಹುದಾದ ಅಪಾರ ಸಾಧ್ಯತೆಗಳನ್ನು ಈ ರೀತಿ ಕೈಚೆಲ್ಲುತ್ತ ಸಾಗುತ್ತಿರುವುದು ನಿಜಕ್ಕೂ ಶೋಚನೀಯ.

ಮಾಧ್ಯಮಗಳು ಪ್ರಜಾತಂತ್ರದ ನಾಲ್ಕನೆಯ ಅಂಗವೆಂದು ಪರಿಗಣಿತವಾಗಿದೆ. ಇದು ಕೇವಲ ರೂಢಿಗತ ಮಾತಲ್ಲ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳೇ ಪ್ರಜಾತಂತ್ರ ವ್ಯವಸ್ಥೆಯನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ಸಾಧ್ಯ. ಆದ್ದರಿಂದ ಸರಕಾರಗಳು ಈ ಸ್ವಾತಂತ್ರ್ಯವನ್ನು ನಿಯಂತ್ರಣ ಮಾಡಲು ಹೊರಡುವುದು ಅಪಾಯಕಾರಿ. ಹೀಗಾಗಿ ಮಾಧ್ಯಮಗಳು ಸ್ವಯಂ ನಿಯಂತ್ರಣ ಹೊಂದುವುದೇ ಆರೋಗ್ಯಕರ ಬೆಳವಣಿಗೆ. ಹಿಂದೆ ಮಾಧ್ಯಮ ರಂಗದಲ್ಲಿ ಪ್ರಚಲಿತದಲ್ಲಿದ್ದ ಸದಾಚಾರ, ಸತ್ಸಂಪ್ರದಾಯಗಳನ್ನು ಪುನಃ ನಿರೀಕ್ಷಿಸಬಹುದೇ?

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಹರೀಶ್ ಕುಮಾರ್ ಕುಡ್ತಡ್ಕ

contributor

Similar News