×
Ad

ಮಾಧ್ಯಮಗಳು ಮತ್ತು ವಿಶ್ವಾಸಾರ್ಹತೆ

Update: 2025-09-28 07:41 IST

ಸುದ್ದಿ ಮಾಧ್ಯಮಗಳು ಸತ್ಯನಿಷ್ಠವಾಗಿರಬೇಕು, ವಸ್ತುನಿಷ್ಠವಾಗಿರಬೇಕು ಮತ್ತು ನ್ಯಾಯಯುತವಾಗಿರಬೇಕು. ಮಾಧ್ಯಮ ಸ್ವಾತಂತ್ರ್ಯ ಎಷ್ಟು ಮುಖ್ಯವೋ ಅದೇ ರೀತಿ ಸ್ವಯಂ ನಿಯಂತ್ರಣ ಕೂಡ ಅಗತ್ಯ. ಎಲ್ಲಕ್ಕಿಂತ ಮುಖ್ಯವಾಗಿ ವೃತ್ತಿಪರ ತತ್ವಗಳಿಗೆ ಮಾಧ್ಯಮ ಕ್ಷೇತ್ರದಲ್ಲಿರುವವರು ಬದ್ಧವಾಗಿರಬೇಕು. ಪ್ರಜಾಪ್ರಭುತ್ವ ಯಶಸ್ವಿಯಾಗಲು ಮಾಧ್ಯಮಗಳು

ಬೇಕೇ ಬೇಕು. ಆದ್ದರಿಂದಲೇ ಮಾಧ್ಯಮಗಳನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂದು ಕರೆಯಲಾಗುತ್ತದೆ.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ರಾಜಕೀಯ, ಆರ್ಥಿಕ ಮತ್ತು ಡಿಜಿಟಲ್ ಬೆದರಿಕೆಗಳ ನಡುವೆ ಇಂದು (ಸೆ.28) ವಿಶ್ವ ಸುದ್ದಿ ದಿನವನ್ನು ಆಚರಿಸಲಾಗುತ್ತಿದೆ. ಸತ್ಯ ಆಧಾರಿತ ಪತ್ರಿಕೋದ್ಯಮದ ಶಕ್ತಿ ಮತ್ತು ಸಾರ್ವಜನಿಕ ಜೀವನದಲ್ಲಿ ಅದರ ಅಗತ್ಯವನ್ನು ಒತ್ತಿ ಹೇಳಲು ವಿಶ್ವದಾದ್ಯಂತದ ಸುದ್ದಿ ಕೊಠಡಿಗಳನ್ನು ವಿಶ್ವ ಸುದ್ದಿ ದಿನದ ಮೂಲಕ ಒಟ್ಟುಗೂಡಿಸುವ ಉದ್ದೇಶವನ್ನು ಇಟ್ಟುಕೊಂಡು ವಿಶ್ವ ಸಂಪಾದಕರ ವೇದಿಕೆ ಮತ್ತು ಡೈಲಿ ಮಾವರಿಕ್ ಬ್ರಾಂಕೋ ಬ್ರಿಕ್ ಸಂಸ್ಥೆಗಳು ಸ್ಥಾಪಿಸಿರುವ ಪ್ರಾಜೆಕ್ಟ್ ಕೊಂಟಿನಮ್ ಮತ್ತು ಕೆನಡಿಯನ್ ಪತ್ರಿಕೋದ್ಯಮ ಪ್ರತಿಷ್ಠಾನದ ನೇತೃತ್ವದಲ್ಲಿ ಪ್ರತೀ ವರ್ಷ ಈ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.

ಈ ಎರಡೂ ಸಂಸ್ಥೆಗಳು ಉತ್ತಮ ಪತ್ರಿಕೋದ್ಯಮಕ್ಕಾಗಿ ವಾದ ಮಂಡಿಸುವ ಮೂಲಕ, ಮಾಧ್ಯಮಗಳಿಗೆ ಸಾರ್ವಜನಿಕ ಬೆಂಬಲ ಮತ್ತು ವಿಶ್ವಾಸವನ್ನು ಗಳಿಸಲು ಪ್ರಯತ್ನಿಸುತ್ತಿವೆ, ಜೊತೆಗೆ ಸುದ್ದಿಗಳನ್ನು ತಲುಪಿಸುವಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಸುದ್ದಿ ಕೊಠಡಿಗಳನ್ನು ಪ್ರೇರೇಪಿಸುತ್ತಿವೆ. ಗುಣಮಟ್ಟದ ಮತ್ತು ವಿಶ್ವಾಸಾರ್ಹತೆಯ ಪತ್ರಿಕೋದ್ಯಮ ಮತ್ತು ಪ್ರಜಾಪ್ರಭುತ್ವದಲ್ಲಿ ಸತ್ಯ ಆಧಾರಿತ ಸುದ್ದಿಗಳ ಪ್ರಾಮುಖ್ಯತೆಯನ್ನು ಪರಿಚಯಿಸುವ ಉದ್ದೇಶದಿಂದ ಮೊದಲ ವಿಶ್ವ ಸುದ್ದಿ ದಿನವನ್ನು ಕೆನಡಿಯನ್ ಪತ್ರಿಕೋದ್ಯಮ ಪ್ರತಿಷ್ಠಾನವು 2018ರಲ್ಲಿ ಆರಂಭಿಸಿತು. ಅಂದಿನಿಂದ ಪ್ರತೀ ವರ್ಷ ಸೆಪ್ಟಂಬರ್ 28ರಂದು ವಿಶ್ವ ಸುದ್ದಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇದೇ ದಿನವನ್ನು ಮಾಹಿತಿಯ ಸಾರ್ವತ್ರಿಕ ಪ್ರವೇಶಕ್ಕಾಗಿ ಅಂತರ್ರಾಷ್ಟ್ರೀಯ ದಿನ ಎಂದು ವಿಶ್ವಸಂಸ್ಥೆ ಪ್ರತೀ ವರ್ಷ ಆಚರಿಸಿಕೊಂಡು ಬರುತ್ತಿದೆ. ಮಾಹಿತಿಯನ್ನು ಹುಡುಕುವ, ಸ್ವೀಕರಿಸುವ ಮತ್ತು ಸಾರ್ವಜನಿಕರಿಗೆ ನೀಡುವ ಪತ್ರಕರ್ತರ ಹಕ್ಕನ್ನು ಉತ್ತೇಜಿಸಲು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವಲ್ಲಿ ಪಾರದರ್ಶಕತೆಯ ಪ್ರಾಮುಖ್ಯತೆ, ಪರಿಸರ ಮಾಹಿತಿಯ ಪ್ರವೇಶ ಮತ್ತು ಮುಕ್ತ ದತ್ತಾಂಶದ ಪಾತ್ರವನ್ನು ಎತ್ತಿ ತೋರಿಸಲು ವಿಶ್ವಸಂಸ್ಥೆಯು ಈ ದಿನವನ್ನು ಆಚರಿಸಿಕೊಂಡು ಬರುತ್ತಿದೆ. ಈ ಆಚರಣೆಯು ಎಲ್ಲರಿಗೂ ಮಾಹಿತಿಯ ಮುಕ್ತ ಪ್ರವೇಶಕ್ಕೆ ಜಾಗತಿಕ ಸಮುದಾಯದ ಬದ್ಧತೆಯನ್ನು ಒತ್ತಿಹೇಳುತ್ತದೆ. ಈ ದಿನಕ್ಕೆ ಹೊಂದಿಕೆಯಾಗುವಂತೆ ವಿಶ್ವ ಸುದ್ದಿ ದಿನವನ್ನು ಆಚರಣೆಗೆ ತರಲಾಯಿತು.

ಈ ಎರಡೂ ಆಚರಣೆಗಳು ಸುದ್ದಿಯ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಪತ್ರಿಕೋದ್ಯಮದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವವಾದವುಗಳಾಗಿವೆ. ಪತ್ರಿಕೋದ್ಯಮದ ಉದ್ದೇಶ, ಸಾರ್ವಜನಿಕರಿಗೆ ಅಗತ್ಯವಿರುವ ಮತ್ತು ತಿಳಿಯಲು ಅರ್ಹವಾದ ಮಾಹಿತಿಯನ್ನು ಒದಗಿಸುವುದು. ಇದರಿಂದ ಜನರು ತಮ್ಮನ್ನು ತಾವು ಬದಲಾವಣೆಗೆ ಒಳಪಡಿಸಿಕೊಳ್ಳಬಹುದು. ಈ ಧ್ಯೇಯದೊಳಗೆ ಒಂದು ನಿರ್ದಿಷ್ಟವಾದ ಉನ್ನತ ಉದ್ದೇಶವೂ ಅಡಗಿದೆ, ಅದೆಂದರೆ, ಪ್ರಬಲ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಹೊಣೆಗಾರರನ್ನಾಗಿ ಮಾಡುವುದು. ಇದರಿಂದ ಜನರು ತಮ್ಮನ್ನು ತಾವು ಆಳಿಕೊಳ್ಳಬಹುದು.

ದುರದೃಷ್ಟವಶಾತ್ ಜನರಿಗೆ ಸತ್ಯ ಮತ್ತು ಮಿಥ್ಯೆಗಳ ನಡುವಿನ ವ್ಯತ್ಯಾಸ ಗುರುತಿಸುವ ಆಸಕ್ತಿಯಾಗಲೀ, ಸಾಮರ್ಥ್ಯವಾಗಲೀ ಇಲ್ಲದ ಕಾಲಮಾನದಲ್ಲಿ ನಾವು ಬದುಕುತ್ತಿದ್ದೇವೆ. ತನಿಖಾ ಪತ್ರಿಕೋದ್ಯಮ ಮೂಲೆ ಗುಂಪಾಗಿ ದಶಕಗಳೇ ಕಳೆದಿವೆ. ಆದರೆ, ಗಂಭೀರ ತಪ್ಪುಗಳು ನಡೆದಾಗ, ಪತ್ರಕರ್ತರನ್ನು ಹೊರತುಪಡಿಸಿ ಬೇರೆ ಯಾರೂ ಕೂಡ ಘಟನೆಯ ಸತ್ಯಗಳನ್ನು ಅನ್ವೇಷಿಸುವ ಕೆಲಸವನ್ನು ಮಾಡುವುದಿಲ್ಲ. ಭ್ರಷ್ಟಾಚಾರದ ಕುರಿತು ವರದಿ ಮಾಡಲು ಪತ್ರಕರ್ತರು ಮತ್ತು ಪತ್ರಿಕೆಗಳು ಸೇರಿದಂತೆ ಮಾಧ್ಯಮಗಳು ಇಲ್ಲದಿದ್ದರೆ, ಅನಿವಾರ್ಯವಾಗಿ ಭ್ರಷ್ಟಾಚಾರ ಮತ್ತು ಅನಾಚಾರಗಳು ಹೆಚ್ಚುತ್ತವೆ. ಸಾರ್ವಜನಿಕರು ಇದರಿಂದ ತೊಂದರೆಗೂ ಒಳಗಾಗುವ ಸಾಧ್ಯತೆಗಳು ಹೆಚ್ಚಿರುತ್ತವೆೆ. ಸಾರ್ವಜನಿಕರ ಗಮನ ಸೆಳೆಯಲು ಯಾವುದೇ ಸ್ವತಂತ್ರ ಮಾಧ್ಯಮ ಇಲ್ಲದಿದ್ದರೆ ಅಧಿಕಾರದ ಮದದಲ್ಲಿರುವವರು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಲು ಹವಣಿಸುತ್ತಾರೆ. ಸಾರ್ವಜನಿಕ ಹಿತಾಸಕ್ತಿಗಳು ಕಡೆಗಣಿಸಲ್ಪಡುತ್ತವೆ. ಆದ್ದರಿಂದ ಸ್ವತಂತ್ರ ಮತ್ತು ನಿರ್ಭೀತ ಪತ್ರಿಕೋದ್ಯಮ ಇಂದಿನ ಅಗತ್ಯವಾಗಿದೆ.

ಪ್ರಜಾಪ್ರಭುತ್ವ ಇಲ್ಲದೆ ಸ್ವತಂತ್ರ ಪತ್ರಿಕೋದ್ಯಮ ಉಳಿಯಲು ಸಾಧ್ಯವಿಲ್ಲ. ಅಂತೆಯೇ, ಸ್ವತಂತ್ರ ಪತ್ರಿಕೋದ್ಯಮವಿಲ್ಲದೆ ಪ್ರಜಾಪ್ರಭುತ್ವವೂ ಉಳಿಯಲಾರದು. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸ್ವತಂತ್ರ ಪತ್ರಿಕೋದ್ಯಮಕ್ಕಾಗಿ ಜನರು ಜಿದ್ದಾಜಿದ್ದಿನಿಂದ ಹೋರಾಡ ಬೇಕಾಗಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ವ್ಯಕ್ತಪಡಿಸುವ ಹಕ್ಕನ್ನು ಹೊಂದಿರಬೇಕು. ಅಂತೆಯೇ, ಮಾಧ್ಯಮಗಳು ಅವುಗಳನ್ನು ಕೇಳಲು, ತನಿಖೆ ಮಾಡಿ, ವರದಿ ಮಾಡಿ ಜನರಿಗೆ ಮಾಹಿತಿಯನ್ನು ನೀಡಲು ಸಿದ್ಧವಾಗಿರಬೇಕು.

ಪತ್ರಿಕಾ ಸ್ವಾತಂತ್ರ್ಯಕ್ಕೆ ಗಾಂಧೀಜಿಯವರು ಹೆಚ್ಚು ಒತ್ತು ನೀಡಿದ್ದರು. ಪತ್ರಕರ್ತರಿಗೆ ಸ್ವಾತಂತ್ರ್ಯವಿಲ್ಲದಿದ್ದರೆ ಅವರಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು. ಬ್ರಿಟಿಷ್ ಸರಕಾರ ಜಾರಿಗೆ ತಂದ ಪತ್ರಿಕಾ ಕಾಯ್ದೆಗಳನ್ನು ಅವರು ಬಲವಾಗಿ ವಿರೋಧಿಸಿದರು. ಇಂತಹ ಕಾಯ್ದೆಗಳು ಪತ್ರಕರ್ತರ ಸ್ವಾತಂತ್ರ್ಯವನ್ನು ಹಾಳುಮಾಡುತ್ತವೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಪತ್ರಿಕಾ ಸ್ವಾತಂತ್ರ್ಯದ ವಿಚಾರಗಳು ಅವರ ತಲೆಯಲ್ಲಿ ಯಾವಾಗಲೂ ತುಂಬಿರುತ್ತಿದ್ದವು. ‘ದಿ ಬಾಂಬೆ ಕ್ರಾನಿಕಲ್’ ಪತ್ರಿಕೆ ‘ಬಿಲೋ ದ ಬೆಲ್ಟ್’ ಎಂಬ ಲೇಖನ ಬರೆದುದಕ್ಕಾಗಿ ಮಾನನಷ್ಟ ಪ್ರಕರಣವೊಂದರಲ್ಲಿ ದಂಡವನ್ನು ಪಾವತಿ ಮಾಡಿತು. ಇದರಿಂದ ಗಾಂಧೀಜಿಯವರಿಗೆ ತುಂಬಾ ನೋವಾಯಿತು. ದೇಶದ್ರೋಹ ಮತ್ತು ಹೊಣೆಗಾಣಿಕೆ ಕಾನೂನುಗಳಿಂದ ಪತ್ರಿಕಾ ಕಾನೂನಗಳನ್ನು ಬೇರ್ಪಡಿಸಬೇಕು. ದಿನಪತ್ರಿಕೆಯೊಂದರ ಸಂಪಾದಕ ತನ್ನ ಲೇಖನದಲ್ಲಿ ಬರೆಯವ ವಿಷಯಗಳನ್ನು ಚಿನ್ನದ ತಕ್ಕಡಿಯಲ್ಲಿ ತೂಗಲು ಸಾಧ್ಯವಿಲ್ಲ. ಯಾವುದೇ ದುರುದ್ದೇಶವಿಲ್ಲದಿದ್ದರೆ ಸಾರ್ವಜನಿಕರಿಗೆ ಮಾಹಿತಿ ನೀಡುವ ದೃಷ್ಟಿಯಿಂದ ಅವನು ಬರೆಯಲೇಬೇಕಾಗುತ್ತದೆ. ಇಂತಹ ಮಾನಹಾನಿ ಪ್ರಕರಣಗಳನ್ನು ಭಾರತೀಯರ ಮನೋಸ್ಥ್ಯೆರ್ಯವನ್ನು ಕುಗ್ಗಿಸುವ ಉದ್ದೇಶದಿಂದಲೇ ಹಾಕಲಾಗುತ್ತದೆ. ಆ ಮೂಲಕ ಪತ್ರಕರ್ತರು ಮತ್ತು ಸಾರ್ವಜನಿಕರನ್ನು ಅಂಜುಬುರುಕರನ್ನಾಗಿ ಮಾಡಲಾಗುತ್ತಿದೆ. ಇಂತಹ ಹೊಣೆಗಾರಿಕೆಯ ಲೆಕ್ಕಾಚಾರಗಳು ಭಾರತೀಯ ಪತ್ರಿಕೋದ್ಯಮದ ನೈತಿಕತೆಯನ್ನು ಕುಗ್ಗಿಸುತ್ತವೆ.

ಸಾಮಾಜಿಕ ಮಾಧ್ಯಮಗಳು ಬೆಳವಣಿಗೆ ಸಾಧಿಸಿದಂತೆಲ್ಲ ಸುಳ್ಳು ಸುದ್ದಿಗಳು ಪಸರಿಸುವುದೂ ಕೂಡ ಹೆಚ್ಚಾಗುತ್ತಿವೆ. ಪರಿಣಾಮವಾಗಿ ಜನಸಾಮಾನ್ಯರು ಮುಖ್ಯವಾಹಿನಿ ಮಾಧ್ಯಮಗಳ ಸುದ್ದಿಗಳನ್ನೂ ಕೂಡ ನಂಬಲು ಹಿಂದೇಟು ಹಾಕುತ್ತಿದ್ದಾರೆ. ಡಿಜಿಟಲ್ ಅಥವಾ ಸಾಮಾಜಿಕ ಮಾಧ್ಯಮಗಳು ಹರಡುವ ಸುದ್ದಿಗಳ ಬಗ್ಗೆ ಹೆಚ್ಚಿನ ಜನರಿಗೆ ಅನುಮಾನವೇ ಹೆಚ್ಚು. ಸಾಂಸ್ಕೃತಿಕ ಶೂನ್ಯತೆಯಲ್ಲಿ ಸಮೂಹ ಮಾಧ್ಯಮಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲಾರವು ಎಂಬ ಪ್ರಸಿದ್ಧ ಸಂವಹನ ತಜ್ಞ ವಿಲ್ಬರ್ಟ್ ಶ್ರಾಮ್ನ ಮಾತುಗಳು ಸದಾಕಾಲ ಉಳಿದುಕೊಳ್ಳುತ್ತವೆ. ನಂಬಿಕೆ ಮತ್ತು ವಿಶ್ವಾಸಾರ್ಹತೆ ಮಾಧ್ಯಮಗಳಿಗೆ ಅತ್ಯಂತ ಅವಶ್ಯಕವಾದ ಅಂಶಗಳು. ಮಾಧ್ಯಮಗಳು ನಂಬಿಕೆ ಉಳಿಸಿಕೊಂಡಾಗ ಮಾತ್ರ ಯಾವುದೇ ವಿಷಯದಲ್ಲಾದರೂ ಉತ್ತಮವಾದ ಜನಾಭಿಪ್ರಾಯ ಮೂಡಿಸಲು ಸಾಧ್ಯ. ಜಾಗತೀಕರಣದ ನಂತರ ಮತ್ತು ಆಧುನಿಕ ಮಾಧ್ಯಮಗಳ ಆಗಮನದ ನಂತರ ಪತ್ರಿಕೋದ್ಯಮದ ಸ್ವರೂಪ ಕೂಡ ಬದಲಾಗಿದೆ. ಎಲ್ಲಾ ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ಪತ್ರಿಕಾ ರಂಗ ಇಂದು ಬೃಹತ್ತಾಗಿ ಬೆಳೆದು ನಿಂತಿದೆ.

ಪೈಡ್ ನ್ಯೂಸ್ ಅಥವಾ ಕಾಸಿಗಾಗಿ ಸುದ್ದಿ ಎಂಬ ಕೂಗಿನ ನಡುವೆಯೂ ಭಾರತದಲ್ಲಿ ಪತ್ರಿಕೆಗಳು ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಬಂದಿರುವುದು ನಿಜಕ್ಕೂ ಉತ್ತಮ ಬೆಳವಣಿಗೆಯಾದರೂ ಎಲ್ಲೋ ಒಂದು ಕಡೆ ಪತ್ರಿಕಾ ರಂಗ ಕೂಡ ಉದ್ದಿಮೆಯ ಸ್ವರೂಪವನ್ನು ಪಡೆದುಕೊಂಡಿದ್ದನ್ನು, ಪತ್ರಿಕಾ ಸ್ವಾತಂತ್ರ್ಯ ಮಾಲಕರ ವಿವೇಚನೆಗೆ ಒಳಗಾಗಿದ್ದನ್ನು, ಜಾಹೀರಾತುಗಳಿಗಾಗಿ ಕೆಲವು ಪತ್ರಿಕೆಗಳು ತಮ್ಮತನವನ್ನು ಬಿಟ್ಟು ಕೊಟ್ಟಿದ್ದನ್ನು, ರಾಜಕೀಯ ಪಕ್ಷಗಳ ಮುಖವಾಣಿಯಂತೆ ವರ್ತಿಸುತ್ತಿರುವುದನ್ನು, ನಾಯಕ ಪೂಜೆಗೆ ಒತ್ತು ಕೊಟ್ಟಂತೆ ಭಾಸವಾಗಿದ್ದನ್ನು, ಜಾಹೀರಾತಿಗೂ, ಸುದ್ದಿಗೂ ವ್ಯತ್ಯಾಸವೇ ಇಲ್ಲದಂತೆ ಜಾಹೀರಾತುಗಳನ್ನು ಸುದ್ದಿಯಂತೆ ಪ್ರಕಟಿಸುತ್ತಿರುವುದನ್ನು, ಆ ಮೂಲಕ ಓದುಗರನ್ನು ಗಲಿಬಿಲಿ ಮಾಡುತ್ತಿರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ.

ಸುದ್ದಿ ಮಾಧ್ಯಮಗಳು ಸತ್ಯನಿಷ್ಠವಾಗಿರಬೇಕು, ವಸ್ತುನಿಷ್ಠವಾಗಿರಬೇಕು ಮತ್ತು ನ್ಯಾಯಯುತವಾಗಿರಬೇಕು. ಮಾಧ್ಯಮ ಸ್ವಾತಂತ್ರ್ಯ ಎಷ್ಟು ಮುಖ್ಯವೋ ಅದೇ ರೀತಿ ಸ್ವಯಂ ನಿಯಂತ್ರಣ ಕೂಡ ಅಗತ್ಯ. ಎಲ್ಲಕ್ಕಿಂತ ಮುಖ್ಯವಾಗಿ ವೃತ್ತಿಪರ ತತ್ವಗಳಿಗೆ ಮಾಧ್ಯಮ ಕ್ಷೇತ್ರದಲ್ಲಿರುವವರು ಬದ್ಧವಾಗಿರಬೇಕು. ಪ್ರಜಾಪ್ರಭುತ್ವ ಯಶಸ್ವಿಯಾಗಲು ಮಾಧ್ಯಮಗಳು ಬೇಕೇ ಬೇಕು. ಆದ್ದರಿಂದಲೇ ಮಾಧ್ಯಮಗಳನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂದು ಕರೆಯಲಾಗುತ್ತದೆ. ಸಾಮಾನ್ಯ ಕಾಳಜಿಯ ಸಮಸ್ಯೆಗಳನ್ನು ನಾಗರಿಕರು ಮುಕ್ತವಾಗಿ ಚರ್ಚಿಸುವ ಅವಕಾಶವನ್ನು ಮಾಧ್ಯಮಗಳು ನೀಡಬೇಕು. ಆದರೆ ಸಾರ್ವಜನಿಕ ಸಮಸ್ಯೆಗಳು ಮತ್ತು ವಿಚಾರಗಳಿಗಿಂತ ಪಟ್ಟಭದ್ರ ವಿಚಾರಗಳಿಗೆ ಮಾಧ್ಯಮಗಳು ಹೆಚ್ಚು ಅವಕಾಶ ಮಾಡಿಕೊಡುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮುದ್ರಣ ಮಾಧ್ಯಮ ಭೌತಿಕ ವಿಷಯವಾಗಿದೆ. ಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಮನೆ ಅಥವಾ ಕಚೇರಿಗಳಲ್ಲಿ ತಿಂಗಳು ಅಥವಾ ವರ್ಷಗಳ ಕಾಲ ಇಡಬಹುದು ಹಾಗೂ ಬೇಕೆಂದಾಗ ಅವುಗಳನ್ನು ಪುನರಾವಲೋಕನ ಮಾಡಬಹುದು. ಆದರೆ ವಿದ್ಯುನ್ಮಾನ ಅಥವಾ ಡಿಜಿಟಲ್ ಮಾಧ್ಯಮಗಳು ಹಾಕುವ ಮಾಹಿತಿಗಳು ಯಾವಾಗ ಬೇಕಾದರೂ ಕಣ್ಮರೆಯಾಗಬಹುದು. ಮುದ್ರಣ ಮಾಧ್ಯಮವು ಆಳವಾದ ತಿಳುವಳಿಕೆಯನ್ನು ಒದಗಿಸುತ್ತದೆ. ಹೆಚ್ಚಿನ ಡಿಜಿಟಲ್ ಮಾಧ್ಯಮಗಳ ಸುದ್ದಿ ಮೂಲಗಳು ಅನಿಯಂತ್ರಿತ ಮತ್ತು ಸತ್ಯಾಸತ್ಯತೆಯನ್ನು ಸರಿಯಾಗಿ ಪರೀಕ್ಷಿಸಿರುವುದಿಲ್ಲ. ವಾಸ್ತವವಾಗಿ ಯಾರು ಏನು ಬೇಕಾದರೂ ಪೋಸ್ಟ್ ಮಾಡುವ ಅವಕಾಶ ಡಿಜಿಟಲ್ ಮಾಧ್ಯಮಗಳಲ್ಲಿರುತ್ತದೆ. ಆದರೆ ಪತ್ರಿಕೆಗಳು ದೀರ್ಘಕಾಲದ ಮತ್ತು ಅತ್ಯಂತ ರಚನಾತ್ಮಕ ಸಂಪಾದಕೀಯ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತವೆ. ನಿಖರವಾದ ಸುದ್ದಿಗಳನ್ನು ಒದಗಿಸುವ ವಿಷಯದಲ್ಲಿ ಪತ್ರಿಕೆಗಳು ಇಂದು ಮೊದಲ ಪಂಕ್ತಿಯಲ್ಲಿವೆ. ಸುದ್ದಿ ಪ್ರಸಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂವೇದನಾಶೀಲತೆ ಮತ್ತು ಮಾನವ ಆಸಕ್ತಿಯ ವಿಷಯಗಳನ್ನು ಸಂಯೋಜಿಸುವುದರಿಂದ ಮಾಹಿತಿಯಲ್ಲಿ ಜನರ ಮನವೊಲಿಸುವ ಶಕ್ತಿ ಇರುವುದು ಪತ್ರಿಕೆಗಳಿಗೆ ಮಾತ್ರ.

ಮಾಧ್ಯಮಗಳು ಬೆಳೆದಂತೆಲ್ಲ ಜನರಲ್ಲಿ ಮಾಧ್ಯಮ ಸಾಕ್ಷರತೆ ಕೂಡ ಬೆಳೆಯುತ್ತಿದೆ ಎಂಬುದನ್ನು ಪತ್ರಿಕಾ ಸಂಸ್ಥೆಗಳು ಮನಗಂಡಂತೆ ಕಾಣುತ್ತಿಲ್ಲ. ಪತ್ರಿಕೆಗಳು ಪ್ರಕಟಿಸಿದ್ದನ್ನೆಲ್ಲಾ ಕಣ್ಣು ಮುಚ್ಚಿ ಸ್ವೀಕರಿಸುವ ಬದಲಾಗಿ ವಿಮರ್ಶೆ ಮಾಡುವ ಓದುಗರ ಪ್ರಮಾಣ ಬೆಳೆಯುತ್ತಿದೆ. ತಾವು ಓದಿದ, ನೋಡಿದ ಹಾಗೂ ಕೇಳಿದ ಸುದ್ದಿಗಳನ್ನು ಸ್ವತಂತ್ರವಾಗಿ ಪರಿಶೀಲಿಸುವ ಮಟ್ಟಕ್ಕೆ ಜನರು ಬಂದು ನಿಂತಿದ್ದಾರೆ. ಟಿ.ವಿ .ಕಾರ್ಯಕ್ರಮಗಳನ್ನು, ಸುದ್ದಿ ನಿರೂಪಕರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡುವಷ್ಟು ಮಾಧ್ಯಮ ಸಾಕ್ಷರತೆಯ ಪ್ರಮಾಣ ಬೆಳೆದಿದೆ ಎಂದರೆ ಅದೇನು ಸಾಮಾನ್ಯವಾದ ಸಂಗತಿಯಲ್ಲ. ಹಾಗಾಗಿ ಪತ್ರಿಕೆಗಳು ಹಿಂದಿಗಿಂತ ಇಂದು ಮತ್ತು ಮುಂದೆ ಅತ್ಯಂತ ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸಬೇಕಾಗುತ್ತದೆ, ಇಲ್ಲದಿದ್ದರೆ ಅದಕ್ಕೆ ತಕ್ಕ ಬೆಲೆಯನ್ನು ಮುಲಾಜಿಲ್ಲದೆ ತೆರಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಡಾ. ಅಮ್ಮಸಂದ್ರ ಸುರೇಶ್

contributor

Similar News