ಲಡಾಖ್ ಜನತೆ ಎಡವಿದ್ದೆಲ್ಲಿ?
6 ವರ್ಷಗಳ ನಂತರ, ಅವತ್ತು ಸಂಭ್ರಮ ಆಕಾಶ ಮುಟ್ಟಿದ್ದ ಅದೇ ಬೀದಿಗಳಲ್ಲಿ ಬೆಂಕಿ ದಹದಹಿಸುತ್ತಿದೆ. ಅವತ್ತಿನ ಅದೇ ಬೀದಿಗಳು ಈಗ ಪ್ರತಿಭಟನಾಕಾರರ ಆಕ್ರೋಶದ ಘೋಷಣೆಗಳಿಂದ ತುಂಬಿವೆ. ಅವತ್ತಿನ ಭರವಸೆ ಭ್ರಮನಿರಸನವಾಗಿ ಬದಲಾಗಿದೆ. ತಮಗೆ ದ್ರೋಹವಾಗಿದೆ ಎಂಬ ಕಹಿ ಅವರ ಮನಸ್ಸನ್ನು ಆವರಿಸಿದೆ. ಅವತ್ತು ದಿಲ್ಲಿಯ ಅಧೀನಕ್ಕೆ ಒಳಪಡುವುದನ್ನು ಬೆಂಬಲಿಸಿದ್ದ ನಾಯಕರೇ ಈಗ ಅದರ ಅಸಡ್ಡೆಯ ವಿರುದ್ಧ ಮಾತಾಡುತ್ತಿದ್ದಾರೆ. ಶ್ರೀನಗರ ದೂರದಲ್ಲಿತ್ತು, ಆದರೆ ದಿಲ್ಲಿ ಇನ್ನೂ ಬಹಳ ದೂರದಲ್ಲಿದೆ ಎಂಬುದು ಈಗ ಅವರಿಗೆ ಮನವರಿಕೆಯಾಗಿದೆ.
ಲೇಹ್ ಅಪೆಕ್ಸ್ ಬಾಡಿಯ ಸಹ-ಅಧ್ಯಕ್ಷರಾದ ಛೇರಿಂಗ್ ದೋರ್ಜೆ ಲಕ್ರುಕ್ ಅವರು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಲಡಾಖ್ನ ಇಂದಿನ ಸ್ಥಿತಿಯನ್ನು ಅತ್ಯಂತ ಸ್ಪಷ್ಟವಾಗಿ ವಿವರಿಸಿದ್ದಾರೆ.
ಅವರು ‘‘ಹಿಂದೆ ಶ್ರೀನಗರ ನಮಗೆ ದೂರವಾಗಿತ್ತು, ಆದರೆ ಇಂದು ದಿಲ್ಲಿ ಅದಕ್ಕಿಂತಲೂ ಹೆಚ್ಚು ದೂರವಾಗಿದೆ. ಒಂದು ಕಾಲದಲ್ಲಿ ಲಡಾಖ್ನ ಜನರು 370ನೇ ವಿಧಿಯನ್ನು ಶಪಿಸುತ್ತಿದ್ದರು, ಆದರೆ ಇಂದು ಅದೇ ವಿಧಿ ತಮ್ಮನ್ನು 70 ವರ್ಷಗಳ ಕಾಲ ರಕ್ಷಿಸಿತ್ತು ಎಂಬ ಸತ್ಯ ಅರಿವಾಗಿದೆ’’ ಎನ್ನುತ್ತಾರೆ. ಅವರ ಈ ಮಾತುಗಳು, 2019ರಲ್ಲಿ ಕಂಡ ಸ್ವಾತಂತ್ರ್ಯದ ಕನಸು ಇಂದು ಹೇಗೆ ಭ್ರಮನಿರಸನವಾಗಿದೆ ಮತ್ತು ಲಡಾಖ್ನ ಜನರು ಯಾವ ರೀತಿಯ ಅಸಹಾಯಕತೆಯನ್ನು ಅನುಭವಿಸುತ್ತಿದ್ದಾರೆ ಎಂಬುದಕ್ಕೆ ಕನ್ನಡಿ ಹಿಡಿದಂತಿವೆ.
ಆಗಸ್ಟ್ 2019 ಲಡಾಖ್ನಲ್ಲಿ ಅನೇಕರಿಗೆ ಬಹಳ ದೊಡ್ಡ ಬಿಡುಗಡೆಯ ಸಂದರ್ಭವಾಗಿತ್ತು. ಕೇಂದ್ರ ಸರಕಾರ 370ನೇ ವಿಧಿಯನ್ನು ರದ್ದುಗೊಳಿಸಿ ಜಮ್ಮು-ಕಾಶ್ಮೀರವನ್ನು ವಿಭಜಿಸಿದಾಗ, ಲೇಹ್ನ ಬೀದಿಗಳಲ್ಲಿ ಸಂಭ್ರಮ ಪ್ರಜ್ವಲಿಸಿತ್ತು. ಅವತ್ತು ಸಂಭ್ರಮಿಸಿದ್ದ ಜನ ದಶಕಗಳಿಂದಲೂ ಲಡಾಖ್ ಬದಲಾಗುವುದನ್ನು ಕಾದಿದ್ದರು.
ಶ್ರೀನಗರದ ರಾಜಕೀಯ ಪ್ರಾಬಲ್ಯದಿಂದ ವಿಮೋಚನೆ ಬಯಸಿದ್ದರು. ಕೇಂದ್ರಾಡಳಿತ ಪ್ರದೇಶ ಸ್ಥಾನಮಾನ ಅವರ ದೀರ್ಘಕಾಲದ ಬೇಡಿಕೆಯಾಗಿತ್ತು. ಅದು ಈಡೇರಿದಾಗ, ಭರವಸೆ ಬೇಕಾದಷ್ಟಿತ್ತು. ತಮ್ಮದೇ ಆದ ಭವಿಷ್ಯ ತೆರೆದುಕೊಂಡಿತು, ಹೊಸ ಯುಗದ ಆರಂಭ ಎಂದೆಲ್ಲ ಅವರು ಅಂದುಕೊಂಡಿದ್ದರು.
6 ವರ್ಷಗಳ ನಂತರ, ಅವತ್ತು ಸಂಭ್ರಮ ಆಕಾಶ ಮುಟ್ಟಿದ್ದ ಅದೇ ಬೀದಿಗಳಲ್ಲಿ ಬೆಂಕಿ ದಹದಹಿಸುತ್ತಿದೆ.ಅವತ್ತಿನ ಅದೇ ಬೀದಿಗಳು ಈಗ ಪ್ರತಿಭಟನಾಕಾರರ ಆಕ್ರೋಶದ ಘೋಷಣೆಗಳಿಂದ ತುಂಬಿವೆ. ಅವತ್ತಿನ ಭರವಸೆ ಭ್ರಮನಿರಸನವಾಗಿ ಬದಲಾಗಿದೆ. ತಮಗೆ ದ್ರೋಹವಾಗಿದೆ ಎಂಬ ಕಹಿ ಅವರ ಮನಸ್ಸನ್ನು ಆವರಿಸಿದೆ. ಅವತ್ತು ದಿಲ್ಲಿಯ ಅಧೀನಕ್ಕೆ ಒಳಪಡುವುದನ್ನು ಬೆಂಬಲಿಸಿದ್ದ ನಾಯಕರೇ ಈಗ ಅದರ ಅಸಡ್ಡೆಯ ವಿರುದ್ಧ ಮಾತಾಡುತ್ತಿದ್ದಾರೆ. ಶ್ರೀನಗರ ದೂರದಲ್ಲಿತ್ತು, ಆದರೆ ದಿಲ್ಲಿ ಇನ್ನೂ ಬಹಳ ದೂರದಲ್ಲಿದೆ ಎಂಬುದು ಈಗ ಅವರಿಗೆ ಮನವರಿಕೆಯಾಗಿದೆ.
ಲಡಾಖ್ನ ಕಥೆ ಇನ್ನು ಮುಂದೆ ಕೇವಲ ಪ್ರಾದೇಶಿಕ ರಾಜಕೀಯ ಸಮಸ್ಯೆಯಾಗಿಲ್ಲ. ಅದು ನಮ್ಮ ಕಾಲಕ್ಕೆ ಒಂದು ತೀವ್ರ ಎಚ್ಚರಿಕೆಯ ಕಥೆಯಾಗಿ ಬದಲಾಗಿದೆ. ಅದು ರಾಜಕೀಯವೆಂಬುದು ಎಲ್ಲ ಕಾಲದಲ್ಲೂ ಹೀಗೇ ಎಂಬ ಕಟು ಸತ್ಯವನ್ನು ತೋರಿಸಿದೆ.
ಬೇರೆಯವರು ಪಂಜರದ ಪಾಲಾಗುವುದನ್ನು ಹುರಿದುಂಬಿಸಿದವರೇ ಆ ಪಂಜರದ ಬಂಧಿಯಾಗುವುದು ತೀರಾ ಅನಿರೀಕ್ಷಿತವಲ್ಲ.
ಅಧಿಕಾರದ ಕೇಂದ್ರೀಕರಣ ಮತ್ತು ಒಂದು ಗುಂಪಿಗೆ ಸಾಂವಿಧಾನಿಕ ಸುರಕ್ಷತೆಗಳು ತಪ್ಪುವುದನ್ನು ಬೆಂಬಲಿಸಿದಾಗ, ಅದೇ ಸ್ಥಿತಿ ತಿರುಗಿ ತಮ್ಮನ್ನೇ ಸುತ್ತಿಕೊಳ್ಳುತ್ತದೆ ಎಂಬುದು ಲಡಾಖ್ ಕಥೆಯಲ್ಲಿ ಸ್ಪಷ್ಟವಾಗಿದೆ.
70 ವರ್ಷಗಳ ಕಾಲ, ಬೆಂಕಿ ಕಾಶ್ಮೀರದಲ್ಲಿದೆ ಎಂದು ಭಾವಿಸಲಾಗಿತ್ತು. ಲಡಾಖ್ನಲ್ಲಿರುವ ಅನೇಕರು ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ವಿಭಿನ್ನತೆ ಅನುಭವಿಸುತ್ತಾ, ತಮ್ಮ ಮನೆಯನ್ನು ಆ ಬೆಂಕಿಯಿಂದ ಬೇರ್ಪಡಿಸುವ ಮೂಲಕ ತಾವು ಸುರಕ್ಷಿತವಾಗಿರುತ್ತೇವೆ ಎಂದು ನಂಬಿದ್ದರು.
ಆದರೆ, ಹಾಗಾಗದೇ ಹೋಯಿತು. ಬೆಂಕಿಯಿಂದ ಬಾಣಲೆಗೆ ಎಂಬ ಸ್ಥಿತಿಯಾಯಿತು. ಈಗ ಭರವಸೆಗಳು ಬಿದ್ದುಹೋಗಿವೆ. ಪ್ರತಿಭಟನೆಯನ್ನು ಕೂಡ ಪಿತೂರಿ ಎನ್ನಲಾಗುತ್ತಿರುವಾಗ, ಸ್ಥಿತಿ ಇನ್ನೂ ಭಯಂಕರವಾಗಿ ಕಾಣಿಸುತ್ತಿದೆ.
ಲಡಾಖ್ನ ಪ್ರಸ್ತುತ ಹತಾಶೆ ಎಂಥದೆಂಬುದನ್ನು ಅರ್ಥಮಾಡಿಕೊಳ್ಳಲು, ಮೊದಲು 2019ರ ಭರವಸೆಗಳನ್ನು ನೋಡಬೇಕು.
ತಮ್ಮದೇ ಸರಕಾರದ ಕನಸು ಅವರದ್ದಾಗಿತ್ತು. ಆದರೆ ವಾಸ್ತವ ಅದಕ್ಕೆ ಪೂರ್ತಿ ವಿರುದ್ಧವಾಗಿದೆ. ಶ್ರೀನಗರದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ರಾಜಕೀಯ ಶಕ್ತಿ ಕಡೆಗೆ ಅವರನ್ನು ದಿಲ್ಲಿಯ ನೆರಳಲ್ಲಿ ಬಂಧಿಸಿಟ್ಟಿದೆ. ಯಾವ ಹೊಣೆಗಾರಿಕೆಯೂ ಇಲ್ಲದ ಮತ್ತು ಹೆಚ್ಚು ಶಕ್ತಿಶಾಲಿ ಅಧಿಕಾರಶಾಹಿಯ ಅಡಿಯಲ್ಲಿ ಇರುವಂತಾಗಿದೆ.
ಒಂದು ಕಾಲದಲ್ಲಿ ತಮ್ಮದೇ ಆದ ನೇಮಕಾತಿ ಮಂಡಳಿಗಳನ್ನು ಹೊಂದಿರುವ ಪ್ರಬಲ ಸಂಸ್ಥೆಗಳಾದ ಲಡಾಖ್ ಆಟೊನೊಮಸ್ ಹಿಲ್ ಡೆವಲಪ್ಮೆಂಟ್ ಕೌನ್ಸಿಲ್ಗಳು ಈಗ ನಿಷ್ಕ್ರಿಯವಾಗಿವೆ. ಇದರ ಪರಿಣಾಮವಾಗಿ ವಿದ್ಯಾವಂತ ಆದರೆ ನಿರುದ್ಯೋಗಿ ಯುವಕರ ಪೀಳಿಗೆ ಆಕ್ರೋಶದಿಂದ ಕುದಿಯುತ್ತಿದೆ.
ಲಭ್ಯವಿರುವ ಕೆಲವೇ ಉದ್ಯೋಗಗಳು ಕೂಡ ಯಾವಾಗ ಬೇಕಾದರೂ ಕೈತಪ್ಪಬಹುದು. ಇದನ್ನೀಗ ವರ್ಚುವಲ್ ಗುಲಾಮಗಿರಿ ಎಂದೇ ಹೇಳಲಾಗುತ್ತಿದೆ.
ಲಡಾಖ್ ಬೀದಿಗಳಲ್ಲಿನ ಈ ಆಕ್ರೋಶವನ್ನು, ಈ ಸತ್ಯವನ್ನು ಭಟ್ಟಂಗಿ ಟಿ.ವಿ. ವಾಹಿನಿಗಳು ತೋರಿಸುವುದಿಲ್ಲ. ಅಲ್ಲಿ ಲಡಾಖ್ ಅನ್ನೇ ಪೂರ್ತಿಯಾಗಿ ಅಪಖ್ಯಾತಿಗೊಳಿಸುವುದು ನಡೆದಿದೆ.
ಇಂಥ ಸಂದರ್ಭಗಳಲ್ಲಿ ದೇಶದ ವಿವಿಧೆಡೆ ನಡೆಯುತ್ತಾ ಬಂದಿರುವ ಕ್ರೂರ ಮತ್ತು ಗೊತ್ತೇ ಇರುವ ಆಟವೇ ಲಡಾಖ್ ಸಂದರ್ಭದಲ್ಲೂ ನಡೆದಿದೆ.
ಮೊದಲನೆಯದಾಗಿ, ಚಳವಳಿಯ ನಾಯಕನನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಮೂಲಕ, ಇಡೀ ಚಳವಳಿಯನ್ನೇ ನಾಶಗೊಳಿಸುವ ನಡೆ ಕಾಣಿಸಿದೆ.
ಒಂದು ಕಾಲದಲ್ಲಿ ಬ್ಲಾಕ್ಬಸ್ಟರ್ ಚಿತ್ರಕ್ಕೆ ಸ್ಫೂರ್ತಿಯಾಗಿದ್ದ ಗಾಂಧಿವಾದಿ ಸೋನಮ್ ವಾಂಗ್ಚ್ಕ್ ಅವರನ್ನು ಈಗ ದುಷ್ಟ ಪ್ರಚೋದಕ ಎಂದು ವ್ಯವಸ್ಥಿತವಾಗಿ ಬಿಂಬಿಸಲಾಗಿದೆ.
ಟೈಮ್ಸ್ ನೌ, ನವಭಾರತ್ ಮತ್ತು ಡಿಡಿ ನ್ಯೂಸ್ನಂತಹ ಚಾನೆಲ್ಗಳಲ್ಲಿ, ಅವರ ಶಾಂತಿಯುತ ಉಪವಾಸ ಸತ್ಯಾಗ್ರಹಗಳನ್ನು ದಂಗೆಗೆ ಕರೆ ಎಂದು ತೋರಿಲಾಗಿದೆ.
ಅವರ ಗಾಂಧಿವಾದಿ ವ್ಯಕ್ತಿತ್ವವನ್ನು ಡಿಡಿ ನ್ಯೂಸ್ನಲ್ಲಿ ಸುಧೀರ್ ಚೌಧರಿ ಕೇವಲ ಪಿಆರ್ ಹಾಗೂ ಮಾರ್ಕೆಟಿಂಗ್ ಎಂದುಬಿಟ್ಟಿದ್ದಾರೆ.
ಅವರು ಸರಕಾರದ ವಿರುದ್ಧ ಭಿನ್ನಾಭಿಪ್ರಾಯದ ಬೀಜಗಳನ್ನು ಬಿತ್ತುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಲಡಾಖ್ನ ಯುವಕರ ಹತಾಶೆಯನ್ನು ಸರಕಾರದ ವೈಫಲ್ಯದ ಪರಿಣಾಮ ಎಂದು ನೋಡಲಾಗುತ್ತಿಲ್ಲ.
ಬದಲಾಗಿ, ಅದು ಒಬ್ಬ ವ್ಯಕ್ತಿಯ ದುರುದ್ದೇಶಪೂರಿತ ಪ್ರಭಾವದ ಪರಿಣಾಮ ಎಂದು ಆರೋಪಿಸಲಾಗುತ್ತಿದೆ.
ಎರಡನೆಯದಾಗಿ, ಜನರ ಕೋಪದ ಸ್ವಾಭಾವಿಕತೆಯನ್ನೇ ನಿರಾಕರಿಸಲಾಗುತ್ತಿದೆ.
ಪ್ರತಿಭಟನೆಗಳ ನ್ಯಾಯಸಮ್ಮತತೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಅದನ್ನು ವ್ಯವಸ್ಥಿತ ಪಿತೂರಿ ಎಂದು ಬಿಂಬಿಸಲಾಗುತ್ತಿದೆ.
ಝೀ ನ್ಯೂಸ್ ಥರದ ಚಾನೆಲ್ಗಳು ಈ ಪ್ರತಿಭಟನೆಗಳು ವರ್ಷಗಳ ಹತಾಶೆಯಿಂದ ಹುಟ್ಟಿದವೆನ್ನದೆ, ಪೂರ್ವನಿಯೋಜಿತ ವಿಧ್ವಂಸಕ ಕೃತ್ಯವೆಂದು ತೋರಿಸಿವೆ.
ಲಡಾಖ್ನ ದುರಂತದ ಮೂಲ 370ನೇ ವಿಧಿಯ ವಿರೋಧಾಭಾಸದಲ್ಲಿದೆ. ದಶಕಗಳಿಂದ ಅವರು 370ನೇ ವಿಧಿಯನ್ನು ಶಪಿಸುತ್ತಿದ್ದರು. ಆದರೆ, ಅದೇ ಅವರ ರಕ್ಷಣೆಗೆ ಇದ್ದುದಾಗಿತ್ತು. ಇದು ಅವರಿಗೆ ಈಗ ಅರ್ಥವಾಗಿದೆ.ಅದು 70 ವರ್ಷಗಳ ಕಾಲ ತಮ್ಮನ್ನು ರಕ್ಷಿಸಿತು ಎಂಬುದು ಮನವರಿಕೆಯಾಗಿರುವಾಗ, ಅದಕ್ಕಾಗಿ ಅವರಿಗೀಗ ದುಃಖವಾಗುತ್ತಿದೆ.
ತಮ್ಮ ಭೂಮಿ ಸಂಪೂರ್ಣವಾಗಿ ಸುರಕ್ಷಿತವಾಗಿತ್ತು. ಆದರೆ ಈಗ ತಮಗೆ ಯಾವುದೇ ರಕ್ಷಣೆ ಇಲ್ಲವಾಗಿದೆ ಎಂಬ ಸಂಕಟ ಲಡಾಖ್ನ ಜನರನ್ನು ಕಾಡುತ್ತಿದೆ.
ಇಂದು ಆ ರಕ್ಷಣೆ ಇಲ್ಲವಾಗಿರುವುದರಿಂದ, ದೊಡ್ಡ ಹೋಟೆಲ್ ಸಮೂಹ, 15,000 GW ಬೃಹತ್ ಸೌರ ಯೋಜನೆ ಮುಂತಾದ ಬೇಡದ ಎಲ್ಲವೂ ಲಡಾಖ್ ಒಳಗೆ ಬರುತ್ತಿವೆ. ಐಕಾನಿಕ್ ಪಶ್ಮಿನಾ ಮೇಕೆಗಳ ಪಾಲನೆಯ ಭೂಮಿಗೆ ಇದು ದೊಡ್ಡ ಬೆದರಿಕೆಯಾಗಿದೆ.
ಭೂಮಿ ಕಳೆದುಕೊಳ್ಳುವ, ಜೀವನೋಪಾಯ ಇಲ್ಲವಾಗುವ ಮತ್ತು ತಮ್ಮದೇ ಗುರುತನ್ನು ಕೂಡ ಕಳೆದುಕೊಳ್ಳುವ ಭಯದಲ್ಲಿ ಆ ಜನರಿದ್ದಾರೆ.
ಅವರ ಪ್ರತಿಭಟನೆಗಳು ಕೂಡ ಸಂವಿಧಾನದ 6ನೇ ಷೆಡ್ಯೂಲ್ಗಾಗಿ ಒತ್ತಾಯಿಸಿದ್ದವು. ಆದರೆ ಅವರ ನಿಜವಾದ ಈ ಭಯವನ್ನು ಮಡಿಲ ಮಾಧ್ಯಮಗಳು ತೋರಿಸುತ್ತಿಲ್ಲ.
ಸರಕಾರಿ ಪರ ಮಾಧ್ಯಮ ದಿಕ್ಕು ತಪ್ಪಿಸುವ ಮತ್ತು ಚಳವಳಿ ಕಾನೂನುಬಾಹಿರ ಎಂದು ಬಿಂಬಿಸುವ ತಂತ್ರವನ್ನು ಬಳಸುತ್ತಿದೆ.
ಟೈಮ್ಸ್ ನೌ, ನವಭಾರತ್ ಮತ್ತು ಇಂಡಿಯಾ ಟಿ.ವಿ.ಯಲ್ಲಿ ನಿರೂಪಕರು ಸರಕಾರದ ಸಾಧನೆಗಳ ಪಟ್ಟಿಯನ್ನು ಇಡುತ್ತಾರೆ.
ಹೊಸ ಸುರಂಗಗಳು, ಹೆಚ್ಚಿದ ಎಸ್ಟಿ ಮೀಸಲಾತಿಗಳು, ಅಧಿಕೃತ ಭಾಷಾ ಮಾನ್ಯತೆಯಂಥ ಕಥೆ ಹೇಳುತ್ತಾರೆ.ಆದರೆ ಲಡಾಖ್ ಜನರ ನಿಜವಾದ ಬೇಡಿಕೆಯನ್ನು, ಅವರ ಭಯವನ್ನು ಈ ದೊಡ್ಡ ದೊಡ್ಡ ಸರಕಾರಿ ಅಂಕಿಅಂಶಗಳ ಅಡಿಯಲ್ಲಿ ಹೂತುಹಾಕಲಾಗಿದೆ. ಕಡೆಗೆ, ಅವರ ಪ್ರತಿಭಟನೆಯ ಹಿಂದೆ ವಿದೇಶಿ ಕೈವಾಡ ಇದೆಯೆನ್ನುವವರೆಗೂ ಹೋಗಿರುವುದನ್ನು ಕಾಣುತ್ತಿದ್ದೇವೆ.
ಝೀ ನ್ಯೂಸ್ ಮತ್ತು ನ್ಯೂಸ್ 18ನಂತಹ ಸುದ್ದಿ ವಾಹಿನಿಗಳು ಲಡಾಖ್ನಲ್ಲಿ 20,000ಕ್ಕೂ ಹೆಚ್ಚು ನೇಪಾಳಿ ವಲಸೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂಬ ಅಂಶವನ್ನು ನಿರ್ಲಕ್ಷಿಸಿ, ಬಂಧಿತರಲ್ಲಿ ಕೆಲ ನೇಪಾಳಿ ನಾಗರಿಕರಿದ್ದಾರೆ ಎಂಬುದನ್ನು ಒತ್ತಿಹೇಳುತ್ತಿವೆ. ಇದನ್ನು ಬಳಸಿಕೊಂಡು, ಇಡೀ ಪ್ರತಿಭಟನೆಯನ್ನು ಪಿತೂರಿ ಎಂದು ಬಿಂಬಿಸುವುದು ನಡೆದಿದೆ. ಭಟ್ಟಂಗಿ ಆ್ಯಂಕರ್ಗಳು ಯುವಜನರ ಆಕ್ರೋಶದ ಪ್ರತಿಭಟನೆಗಳನ್ನು ಔಟ್ಸೋರ್ಸ್ಡ್, ಪ್ಲಾಂಟೆಡ್ ಎನ್ನುತ್ತಿದ್ದಾರೆ. ಇದು ನೇಪಾಳದ ಜನರೇಷನ್ ಝೀ ದಂಗೆಯ ಮುಂದುವರಿಕೆ ಎನ್ನುತ್ತಿದ್ದಾರೆ.
ಆದರೆ, ಲೇಹ್ನಲ್ಲಿ ಗಲಭೆಗಳನ್ನು ಸಂಘಟಿಸಲು ನೇಪಾಳಿಗಳು 1,400 ಕಿ.ಮೀ.ಗಳಿಗಿಂತ ಹೆಚ್ಚು ದೂರದಿಂದ ಬರುವ ಅಸಂಬದ್ಧತೆಯನ್ನು ಪ್ರಶ್ನಿಸುವವರೇ ಇಲ್ಲ.
ಅಂದರೆ, ಪ್ರತಿಭಟನಾಕಾರರನ್ನು ನೊಂದ ನಾಗರಿಕರನ್ನಾಗಿ ನೋಡುವುದು ಸರಕಾರಕ್ಕೆ, ಅದರ ಬಲಕ್ಕಿರುವ ಮಡಿಲ ಮಾಧ್ಯಮಗಳಿಗೆ ಬೇಡವಾಗಿದೆ. ಬದಲಾಗಿ ವಿದೇಶಿ ಕೈವಾಡದ ಕಥೆ ಹೇಳುವುದು ಅವರಿಗೆ ಮುಖ್ಯವಾಗಿದೆ. ಆ ಮೂಲಕ ರಾಷ್ಟ್ರೀಯ ಭದ್ರತಾ ಕಾಯ್ದೆಯಂತಹ ಕಠಿಣ ಕ್ರಮಗಳನ್ನು ಬಳಸುವುದು ಸರಕಾರದ ಉದ್ದೇಶವಾಗಿದೆ.
ಇನ್ನೊಂದೆಡೆ, FCRA ಥರದ ಕಾನೂನಿನ ಅಸ್ತ್ರ ಮುಂದೆ ಮಾಡಲಾಗಿದೆ.
ವಾಂಗ್ಚ್ಕ್ ಪ್ರತಿಭಟನೆಗಳಿಗೆ ಉತ್ತೇಜನ ನೀಡುವ ಎನ್ಜಿಒ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಅಂತಿಮವಾಗಿ, ಇಡೀ ಚಳವಳಿ ಹಕ್ಕುಗಳಿಗಾಗಿ ನಡೆದಿರುವ ನಿಜವಾದ ಹೋರಾಟವಾಗಿರದೆ ಮೋಸದ, ಹಣ ಮಾಡುವ ಉದ್ಯಮ ಎಂದು ಬಿಂಬಿಸುವುದು ನಡೆದಿದೆ.
ಲಡಾಖ್ನ ಕಥೆ ಸರ್ವಾಧಿಕಾರಿ ಆಟ ಹೇಗೆ ನಡೆದಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಅದರ ನಿರೂಪಣೆ ಎಂಥದು ಮತ್ತದರ ಮೂಲಕ ಹೇಗೆ ತನ್ನ ಕಬಂಧ ಬಾಹುವನ್ನು ಆವರಿಸಿ ಉಸಿರುಗಟ್ಟಿಸುತ್ತದೆ ಎಂಬುದಕ್ಕೆ ಲಡಾಖ್ನ ಇವತ್ತಿನ ಸ್ಥಿತಿ ಸಾಕ್ಷಿಯಾಗಿದೆ.
ಮೊದಲು ಅವರಲ್ಲಿ ಭರವಸೆ ತುಂಬಿಸಲಾಗುತ್ತದೆ. ತಮ್ಮ ಕಡೆಗೆ ಸೆಳೆದುಕೊಳ್ಳಲಾಗುತ್ತದೆ. ಆನಂತರ ಅವರನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಹೊಸ ಆಟ ಶುರು ಮಾಡಲಾಗುತ್ತದೆ. ಕೊನೆಗೆ ಸ್ವಾಯತ್ತತೆಯೂ ಇಲ್ಲ, ಸ್ವಾತಂತ್ರ್ಯವೂ ಇಲ್ಲವಾಗುತ್ತದೆ.
ಭರವಸೆಗಳು ಕರಗುತ್ತವೆ, ಹಕ್ಕುಗಳನ್ನು ನಿರಾಕರಿಸಲಾಗುತ್ತದೆ.
ಭಿನ್ನಾಭಿಪ್ರಾಯ ತಲೆದೋರಿದಾಗ, ಕುಂದುಕೊರತೆಗಳನ್ನು ಬಗೆಹರಿಸಲು ಹೋಗದೆ, ಪ್ರತಿಭಟನೆಯನ್ನೇ ತಪ್ಪು ಎನ್ನಲಾಗುತ್ತದೆ, ಪಿತೂರಿ ಎನ್ನಲಾಗುತ್ತದೆ.
ಹೋರಾಟದ ನಾಯಕತ್ವ ವಹಿಸಿದವನ ಚಾರಿತ್ರ್ಯ ಹನನ ಮಾಡಲಾಗುತ್ತದೆ. ಇಡೀ ಚಳವಳಿಯನ್ನು ಪೂರ್ವ ಯೋಜಿತ ಪಿತೂರಿ, ವಿದೇಶಿ ಕೈವಾಡ ಎಂಬ ನಿರೂಪಣೆಗಳಲ್ಲಿ ಮುಳುಗಿಸಲಾಗುತ್ತದೆ.
ಸರಕಾರದ ಅಭಿವೃದ್ಧಿ ಕೆಲಸಗಳ ಪಟ್ಟಿ ಮುಂದಿಟ್ಟು, ಪ್ರತಿಭಟನೆ ನಡೆಸಿದವರನ್ನೇ ದ್ರೋಹಿಗಳು ಎಂದು ಬಿಂಬಿಸುವ ಆಟ ನಡೆಯುತ್ತದೆ.
ಸರಕಾರ ತನ್ನನ್ನು ತಾನು ಸಮರ್ಥಿಸಿಕೊಳ್ಳುವಾಗ, ಕರ್ಫ್ಯೂ, ಇಂಟರ್ನೆಟ್ ಸ್ಥಗಿತ, ಕಠಿಣ ಕಾನೂನುಗಳ ಅಡಿಯಲ್ಲಿ ಬಂಧನಗಳು ಇವೆಲ್ಲವನ್ನು ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಮಾಡಲಾಗುತ್ತದೆ.
ನಿಜವಾಗಿಯೂ ಯಾವುದು ದಮನಕಾರಿಯೋ ಅದನ್ನು ಹಾಗಲ್ಲ ಎಂದು ಸಮರ್ಥಿಸಿಕೊಳ್ಳಲಾಗುತ್ತದೆ.
ಇದು 2019ರಲ್ಲಿ ಹೊತ್ತಿಕೊಂಡ ಬೆಂಕಿ. ಅನಿಯಂತ್ರಿತ ಕೇಂದ್ರ ಶಕ್ತಿಯ ಬೆಂಕಿ.
ಅದನ್ನು ಯಾರು ಪ್ರಾರಂಭಿಸಿದರು ಮತ್ತು ಅದು ಏಕೆ ಉರಿಯುತ್ತಲೇ ಇದೆ ಎಂಬುದನ್ನು ಮಡಿಲ ಮಾಧ್ಯಮದ ನಿರೂಪಣೆಗಳು ಮರೆಮಾಡುತ್ತವೆ.
ಲಡಾಖ್ನ ಜನರು, ಇನ್ನೊಬ್ಬರ ಸಾಂವಿಧಾನಿಕ ರಕ್ಷಣೆಯ ವಿರುದ್ಧ ಸಂಭ್ರಮಿಸಿದರು. ಅದು ತೋಳದಿಂದ ಕಾಪಾಡಿಕೊಳ್ಳಲು ಸಿಂಹವನ್ನು ಮನೆಯೊಳಗೆ ಕರೆದಂತಾಯಿತು. ಈಗ ಅದೇ ಹಸಿದ ಸಿಂಹಕ್ಕೆ ಆಹಾರವಾಗುವ ಸ್ಥಿತಿಯನ್ನು ಲಡಾಖ್ ಅನುಭವಿಸುತ್ತಿದೆ.
ಇದು ಅತಿ ದುಃಖದ ಸಂಗತಿ.
ಇದು ಹೇಳುತ್ತಿರುವ ಪಾಠ ಕ್ರೂರವಾಗಿದೆ.
ಇದು ಅಂಥ ಎಲ್ಲರಿಗೂ ಒಂದು ಬಹುದೊಡ್ಡ ಎಚ್ಚರಿಕೆ.