ಗೋದಿ ಮೀಡಿಯಾಗಳ ಹೆಡ್ ಲೈನ್ ಗಳು ಹೇಳುತ್ತಿರುವುದೇನು?

ರವೀಶ್ ಕುಮಾರ್ - ಇಂದು ದೇಶದ ಉದ್ದಗಲಗಳಲ್ಲೂ, ಜಾಗತಿಕವಾಗಿಯೂ ಅತ್ಯಂತ ಚಿರಪರಿಚಿತ ಮುಖ. ಪತ್ರಿಕೋದ್ಯಮದಲ್ಲಿ ದಂತಕತೆಯಾಗಿ ಗುರುತಿಸಲ್ಪಡುವ, ಗೌರವಿಸಲ್ಪಡುವ ಹೆಸರು. ಬಿಹಾರ ಮೂಲದ ರವೀಶ್ ಬೆಳೆದಿದ್ದು ದಿಲ್ಲಿಯಲ್ಲಿ. ಕಲಿತಿದ್ದು ಇತಿಹಾಸ. ಆದರೆ ಆಗಿದ್ದು ಪತ್ರಕರ್ತ. ಎನ್‌ಡಿಟಿವಿ ಇಂಡಿಯಾ ಹಿಂದಿ ವಾಹಿನಿಯ ವರದಿಗಾರರಾಗಿ ವೃತ್ತಿ ಜೀವನ ಶುರು ಮಾಡಿ ಅದರ ಕಾರ್ಯನಿರ್ವಾಹಕ ಸಂಪಾದಕರಾದವರು. ವರದಿಗಾರರಾಗಿ ಅತ್ಯಂತ ವಿಶಿಷ್ಟವಾಗಿ ಸ್ಟೋರಿ ಹೇಳುವ ಮೂಲಕ ಜನಪ್ರಿಯತೆ ಗಳಿಸಿದರು. ಆಮೇಲೆ ಅವರ ಪ್ರೈಮ್ ಟೈಮ್ ಶೋ ಅತ್ಯಂತ ನಿಖರ ಮಾಹಿತಿ ಮತ್ತು ಪ್ರಖರ ವಿಶ್ಲೇಷಣೆಗೆ ಮನೆಮಾತಾಗಿತ್ತು. ಎನ್ಡಿಟಿವಿ ಅದಾನಿ ತೆಕ್ಕೆಗೆ ಸರಿದ ಬೆನ್ನಿಗೇ, ಅಲ್ಲಿಂದ ಹೊರಬಂದು ಯೂಟ್ಯೂಬ್ ಮೂಲಕ ತನ್ನ ನೇರ, ನಿಖರ, ನಿಷ್ಠುರ ಅಷ್ಟೇ ಆಕರ್ಷಕ ನಿರೂಪಣೆಯ ಪತ್ರಿಕೋದ್ಯಮವನ್ನು ಮುಂದುವರಿಸಿದರು. ಈಗ ಅವರಿಗೆ ಯೂಟ್ಯೂಬ್ನಲ್ಲಿ 80 ಲಕ್ಷ ಚಂದಾದಾರರು. ಯಾರೂ ಕೇಳದ ಪ್ರಶ್ನೆ ಕೇಳುತ್ತಲೇ ಅಂಧ ಭಕ್ತರ ಕೆಂಗಣ್ಣಿಗೆ ಗುರಿಯಾಗಿರುವ ರವೀಶ್ ಕುಮಾರ್ ಮ್ಯಾಗ್ಸೆಸೆ ಪುರಸ್ಕೃತರು.

Update: 2023-12-28 11:18 GMT

ಕನ್ನಡಕ್ಕೆ: ಆಬಿದಾ ಬಾನು | 

ಹಿಂದಿ ದಿನಪತ್ರಿಕೆಗಳು ಹಾಗೂ ಚಾನೆಲ್‌ಗಳು ಬಿಜೆಪಿಯ ವಿಚಾರ ಧಾರೆಯೊಳಗೆ ಅದ್ಯಾವ ಪರಿ ಮುಳುಗಿ ಬಿಟ್ಟಿವೆ ಎಂದರೆ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವಿಗೆ ಆ ಪತ್ರಿಕೆಗಳು ಹಾಗೂ ಚಾನೆಲ್‌ಗಳೂ ಸಂಭ್ರಮಿಸಿದವು. ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವನ್ನು ಹಿಂದಿ ಮಾಧ್ಯಮಗಳು ತೋರಿಸಿದ ರೀತಿ ಈ ಮಡಿಲ ಮೀಡಿಯಾಗಳು ಬಿಜೆಪಿ ಹಾಗೂ ಪ್ರಧಾನಿ ಮೋದಿಯವರ

ರಾಜಕೀಯ ಪ್ರಭಾವದ ಭೌಗೋಳಿಕ ವಿಸ್ತಾರವನ್ನು ಅದ್ಯಾವ ರೀತಿಯಲ್ಲಿ ನೋಡುತ್ತಿವೆ ಎಂಬುದನ್ನು ತೋರಿಸುತ್ತಿದೆ. ಹಿಂದಿ ಪ್ರದೇಶಗಳಲ್ಲಿ ಬಿಜೆಪಿ ಬೇರೆಲ್ಲ ಪಕ್ಷಗಳಿಗಿಂತ ಮುಂದಿದೆ ಎಂಬುದು ಈ ಮಡಿಲ ಮಾಧ್ಯಮಗಳಿಗೆ ಬಹಳ ಖುಷಿ ತಂದಿದೆ. ಹಿಂದಿಗೆ ಒತ್ತು ನೀಡುವುದಕ್ಕಾಗಿಯೇ ಹಿಂದಿ ಪತ್ರಿಕೆಗಳು ಹಾಗೂ ಚಾನೆಲ್‌ಗಳ ಹೆಡ್ ಲೈನ್ ಗಳಲ್ಲಿ ತೆಲಂಗಾಣವನ್ನು ದಕ್ಷಿಣದ ರಾಜ್ಯ ಎಂದು ಪ್ರತ್ಯೇಕವಾಗಿಯೇ ತೋರಿಸುತ್ತಾ ಉಳಿದ ಮೂರು ರಾಜ್ಯಗಳನ್ನು ಹಿಂದಿ ಪ್ರದೇಶ ಎಂದು ತೋರಿಸಲಾಯಿತು. ತೆಲಂಗಾಣವನ್ನು ಭೌಗೋಳಿಕ ನೆಲೆಯಲ್ಲಿ ತೋರಿಸಿದರೆ ಮಧ್ಯ ಪ್ರದೇಶ, ಛತ್ತೀಸ್ಗಡ ಹಾಗೂ ರಾಜಸ್ಥಾನಗಳನ್ನು ಭಾಷೆಯ ಆಧಾರದಲ್ಲಿ ತೋರಿಸಲಾಯಿತು.

ಪತ್ರಿಕೆಗಳು ತಮ್ಮ ಹೆಡ್ ಲೈನ್ ಗಳಲ್ಲಿ ಬೇಕೆಂದೇ ಉತ್ತರ V/s ದಕ್ಷಿಣ ಎಂದು ಬಳಕೆ ಮಾಡಿದಂತೆ ಕಾಣಲಿಲ್ಲ. ಆದರೆ ದಕ್ಷಿಣ V/s ಹಿಂದಿ ಎಂದು ಬಿಂಬಿಸಲಾಯಿತು. ಈ ಮಡಿಲ ಮಾಧ್ಯಮಗಳು ಬಿಜೆಪಿಯನ್ನು ಉತ್ತರ ಭಾರತದ ಪಾರ್ಟಿ ಎಂದು ಬಿಂಬಿಸುವುದನ್ನು ತಪ್ಪಿಸಿದವು. ಆದರೆ ಅವುಗಳು ಹಿಂದಿ ಭಾಷಿಕರ ಹಾಗೂ ಹಿಂದಿ ಪ್ರದೇಶಗಳ ಬಗ್ಗೆ ಬಹಳಷ್ಟು ಒತ್ತು ಕೊಡುವ ಮೂಲಕವೂ ಬಿಜೆಪಿಗೆ ದೊಡ್ಡ ಉಪಕಾರ ಮಾಡಿಲ್ಲ. ಹಿಂದಿ ಎಂದು ವೈಭವೀಕರಿಸುವ ಮೂಲಕ ಈ ಮಡಿಲ ಮಾಧ್ಯಮಗಳು ತಮ್ಮ ರಾಷ್ಟ್ರೀಯ ನಾಯಕನ ಭೌಗೋಳಿಕ ಪ್ರಭಾವವನ್ನೇ ಸೀಮಿತಗೊಳಿಸಿಬಿಟ್ಟವು ಎಂಬುದನ್ನು ಮರೆತವು. ಚುನಾವಣಾ ಫಲಿತಾಂಶ ಪ್ರಕಟವಾದ ಮರುದಿನ ಹೆಡ್ಲೈನ್ಗಳಲ್ಲಿ ಹಿಂದಿ ಪಟ್ಟಿ, ಹಿಂದಿ ಪ್ರದೇಶ ಹಾಗೂ ಹಿಂದಿ ಹಾರ್ಟ್ ಲ್ಯಾಂಡ್ಗಳನ್ನು ಅದೆಷ್ಟು ಬಳಸಲಾಯಿತೆಂದರೆ ಅದೇ ಬಿಜೆಪಿಯ ನಿಜವಾದ ಹಾಗೂ ಅಂತಿಮ ಕೋಟೆ ಎಂಬಂತೆ ಕಂಡಿತು. ಒಂದು ಪತ್ರಿಕೆಯಂತೂ ಆ ಮೂರು ರಾಜ್ಯಗಳನ್ನು ಹಿಂದಿ ಪ್ರದೇಶಗಳು ಎಂದು ಘೋಷಿಸಿ ಹಿಂದಿ ಭಾಷೆಯ ರಾಜ್ಯಗಳಲ್ಲಿ ಬಿಜೆಪಿಗೆ 45:50 ಶೇಕಡಾ ಮತ ಸಿಕ್ಕಿದೆ ಎಂದು ದಪ್ಪಕ್ಷರಗಳಲ್ಲಿ ಪ್ರಕಟಿಸಿತು. ಪತ್ರಿಕೆಗಳ ಹೆಡ್ ಲೈನ್ ಗಳಲ್ಲಿ ಈ ಉತ್ತರ ಹಾಗೂ ದಕ್ಷಿಣ ರಾಜ್ಯಗಳೆಂಬ ವರ್ಗೀಕರಣ ನೋಡಿದರೆ ಹತ್ತು ವರ್ಷ ಕೇಂದ್ರದಲ್ಲಿ ಆಡಳಿತ ನಡೆಸಿದ ಮೇಲೂ ಪ್ರಧಾನಿ ಮೋದಿಯವರ ಪಕ್ಷ ದಕ್ಷಿಣ ಭಾರತದ ಒಂದೇ ಒಂದು ರಾಜ್ಯದಲ್ಲಿ ಆಡಳಿತ ನಡೆಸುತ್ತಿಲ್ಲ ಎಂಬುದು ಆ ಮಾಧ್ಯಮಗಳಿಗೆ ಚಿಂತೆಯ ವಿಷಯವಾಗಿ ಕಾಣುತ್ತಿಲ್ಲ. ಹಿಂದಿ ಪ್ರದೇಶಗಳಲ್ಲಿ ಬಿಜೆಪಿಯೇ ಆವರಿಸಿಕೊಂಡಿದೆ ಎಂಬುದಷ್ಟೇ ಅವರಿಗೆ ದೊಡ್ಡ ಖುಷಿ.

ಹಿಂದಿ ಭಾಷೆ, ಹಿಂದಿ ಪ್ರದೇಶಗಳ ಜೊತೆ ಇನ್ನೊಂದು ಪದ ಹೆಡ್ ಲೈನ್ ಗಳಲ್ಲಿ ಪ್ರಾಮುಖ್ಯವಾಗಿ ಜಾಗ ಪಡೆದಿದೆ. ಅದು ಹಿಂದುತ್ವ. ಹಿಂದಿ ದಿನಪತ್ರಿಕೆಗಳು ಹಾಗೂ ಚಾನೆಲ್ಗಳು ತಮ್ಮ ಹೆಡ್ ಲೈನ್ ಗಳಲ್ಲಿ ಹಲವು ರೀತಿಗಳಲ್ಲಿ ಹಿಂದುತ್ವವನ್ನು ಬಳಸಿವೆ. ಒಂದು ಪತ್ರಿಕೆ ಒಂದು ಕಡೆ ರಾಜಸ್ಥಾನದಲ್ಲಿ ಬಿಜೆಪಿಯ ಹಿಂದುತ್ವದೆದುರು ಕಾಂಗ್ರೆಸ್ ಧ್ವಂಸವಾಗಿದೆ ಎಂದು ಹೇಳಿದರೆ ಅದರ ಪಕ್ಕದಲ್ಲೇ ಹಿಂದುತ್ವ ಹಾಗೂ ವಿಕಾಸದ ರಾಜಕೀಯ ಮಾತ್ರ ಇನ್ನು ಇಲ್ಲಿ ನಡೆಯಲಿದೆ ಎಂದಿದೆ. ಜಯದ ಖುಷಿಯಲ್ಲಿ ಹಿಂದಿ ಪತ್ರಿಕೆಗಳು ಬಿಜೆಪಿ ರಾಜಕೀಯದ ಕೇಂದ್ರೀಯ ಅಂಶಗಳನ್ನೇ ಬಯಲು ಮಾಡಿ ಬಿಟ್ಟಿವೆ. ಅವುಗಳ ದೃಷ್ಟಿಯಲ್ಲಿ ಬಿಜೆಪಿಯ ರಾಜಕೀಯ ಇದೇ ಎಂದು ಅವು ಹೇಳುತ್ತಿವೆ. ಬಿಜೆಪಿ ಕೇವಲ ಹಿಂದುತ್ವ ಹಾಗೂ ಹಿಂದಿ ಪ್ರದೇಶಕ್ಕೇ ಸೀಮಿತವಾಗುವ ಬಗ್ಗೆ ಪ್ರಶ್ನೆ ಕೇಳುತ್ತಿಲ್ಲ, ಸಂದೇಹ ವ್ಯಕ್ತಪಡಿಸುತ್ತಿಲ್ಲ. ಅದರ ಬದಲಿಗೆ ಈ ಪತ್ರಿಕೆಗಳು ಹೆಮ್ಮೆಯಿಂದ ಎದೆ ಉಬ್ಬಿಸಿಕೊಂಡು ಬಿಜೆಪಿ ಬಳಿ ಹಿಂದಿಯಿದೆ, ಹಿಂದಿ ಪ್ರದೇಶವಿದೆ, ಹಾಗೂ ಹಿಂದುತ್ವವಿದೆ ಎಂದು ಹೇಳಿಕೊಳ್ಳುತ್ತಿವೆ. ಹಿಂದಿಯ ಜೊತೆಜೊತೆಗೇ ಹಿಂದುತ್ವವನ್ನೂ ಸುಲಭವಾಗಿ ನುಗ್ಗಿಸಿಬಿಡಲಾಗುತ್ತಿದೆ ಹಾಗೂ ಅದನ್ನು ಸ್ವೀಕೃತಗೊಳಿಸಲಾಗುತ್ತಿದೆ. ಈ ಪತ್ರಿಕೆಗಳು ರಾಷ್ಟ್ರೀಯತೆಯ ಹೆಸರಲ್ಲಿ ಬಿಜೆಪಿಯ ಜಯಕಾರ ಶುರು ಮಾಡಿದ್ದವು. ಈಗ ರಾಷ್ಟ್ರೀಯತೆಯ ಜಾಗದಲ್ಲಿ ಬಹಿರಂಗವಾಗಿಯೇ ಹಿಂದುತ್ವವನ್ನು ಬಳಸಲಾಗುತ್ತಿದೆ.


ಈಗ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಮಾಡಿದರೆ ತೆಲಂಗಾಣದ ಬಳಿಕ ಅವರನ್ನು ಹಾರ ಹಾಕಿ ಸ್ವಾಗತಿಸಲು ಶಿಮ್ಲಾದಲ್ಲೇ ಅವರ ಪಕ್ಷದ ಮುಖ್ಯಮಂತ್ರಿ ಸಿಗೋದು ಅಂತ ಒಬ್ಬ ಪತ್ರಕರ್ತ ಟ್ವೀಟ್ ಮಾಡಿದರು. ಆ ಲೆಕ್ಕದಲ್ಲಿ ನೋಡಿದರೆ ಪ್ರಧಾನಿ ಮೋದಿಯವರ ರಾಜಕೀಯ ಪ್ರಭಾವ ಕೇವಲ ಉತ್ತರ ಭಾರತಕ್ಕೆ ಸೀಮಿತ ಎಂದು ಹೇಳಬಹುದು ಎಂಬುದನ್ನು ಆ ಪತ್ರಕರ್ತ ಮರೆತುಬಿಟ್ಟರು. ಪ್ರಧಾನ ಮಂತ್ರಿಯಾಗಿದ್ದರೂ ಈ ಚುನಾವಣೆಯಲ್ಲಿ ಮೋದಿಯವರು ಮಿರೆರಾಂಗೆ ಚುನಾವಣಾ ಪ್ರಚಾರಕ್ಕೆ ಭೇಟಿ ನೀಡಲು ಆಗಲಿಲ್ಲ ಎಂಬುದನ್ನೂ ಆ ಪತ್ರಕರ್ತ ಮರೆತರು. ಕೆಲವು ತಿಂಗಳ ಹಿಂದೆ ಮೋದಿ ಸರಕಾರದ ಒಬ್ಬ ಸಚಿವರು ಪ್ರಧಾನಿ ಮೋದಿಯವರು ಈಶಾನ್ಯ ಭಾರತಕ್ಕೆ ಈವರೆಗೆ 60ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದಾರೆ ಎಂದು ಹೇಳಿದ್ದರು. ಆದರೆ ಅವರು ಮಿರೆರಾಂನಲ್ಲಿ ಚುನಾವಣೆ ನಡೆಯುತ್ತಿದ್ದರೂ ಅಲ್ಲಿಗೆ ಒಮ್ಮೆಯೂ ಪ್ರಚಾರಕ್ಕೆ ಯಾಕೆ ಹೋಗಲಿಲ್ಲ ಎಂದು ಯಾರೂ ಕೇಳಲಿಲ್ಲ.

2014ರಿಂದ 2024ರವರೆಗೆ ಪ್ರಧಾನಿ ನರೇಂದ್ರ ಮೋದಿಯವರ ರಾಜಕೀಯ ವರ್ಚಸ್ಸಿನ ಅವಧಿಯಾಗಿದೆ. ಆದರೆ ಈ ಹತ್ತು ವರ್ಷಗಳಲ್ಲಿ ಬಿಜೆಪಿಗೆ ದಕ್ಷಿಣ ಭಾರತದ ಯಾವ ರಾಜ್ಯಗಳಲ್ಲೂ ಸರಕಾರ ರಚಿಸಲು ಸಾಧ್ಯವಾಗಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರಕಾರವಿತ್ತು. ಆದರೆ ಮೋದಿಯವರು ಪ್ರವರ್ಧಮಾನಕ್ಕೆ ಬರುವ ಮೊದಲೇ 2007ರಲ್ಲೇ ಅಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದರು. 2018ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಲಿಲ್ಲ. ಏನೇನೋ ಸರ್ಕಸ್ ಮಾಡಿ ಸರಕಾರ ರಚಿಸಿದರೂ 2023ರ ಚುನಾವಣೆಯಲ್ಲಿ ಬಿಜೆಪಿ ಅಲ್ಲಿ ಸೋತಿತು. ಇಡೀ ದೇಶ ಮೋದಿಯವರನ್ನೇ ನೆಚ್ಚಿಕೊಂಡಿದೆ ಎಂದಾದರೆ ದಕ್ಷಿಣ ಭಾರತದಲ್ಲಿ ಅವರ ಪಕ್ಷಕ್ಕೆ ಏಕೆ ಸರಕಾರ ರಚಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಬಿಜೆಪಿ ಯೋಚಿಸಬೇಕಾಗಿದೆ. ಮೋದಿಯವರ ಮಂತ್ರಿ ಮಂಡಲದಲ್ಲಿ ನಿರ್ಮಲಾ ಸೀತಾರಾಮನ್ ಅವರು ವಿತ್ತ ಸಚಿವರಾಗಿದ್ದಾರೆ. ಆದರೆ ಅವರು ಯಡಿಯೂರಪ್ಪ ಅಥವಾ ದಿವಂಗತ ಅನಂತ್ ಕುಮಾರ್ರಂತೆ ರಾಜಕೀಯ ಪ್ರಭಾವ ಬೆಳೆಸಿಕೊಂಡಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.

ಬಿಜೆಪಿ ಹಾಗೂ ಅದರ ಸಿದ್ಧಾಂತದೊಳಗೆ ಮುಳುಗಿ ಬಿಟ್ಟಿರುವ ಮೀಡಿಯಾಗಳು ಕೇವಲ ಹಿಂದಿ ಭಾಷಿಕ ರಾಜ್ಯಗಳಲ್ಲೇ ಬಿಜೆಪಿಗೆ ಆಶ್ರಯ ಎಂದು ಮನಗಂಡಿವೆಯೇ? ಅವು ಬಿಜೆಪಿಯನ್ನು ಕೇವಲ ಹಿಂದಿ ಕನ್ನಡಕ ಇಟ್ಟುಕೊಂಡೇ ನೋಡಲಿವೆಯೇ? ಯಾವುದೇ ರಾಷ್ಟ್ರೀಯ ರಾಜಕೀಯ ಪಕ್ಷದ ಪ್ರಭಾವ ಸೀಮಿತವಾಗಿರುವ ಸಾಧ್ಯತೆ ಇದೆ. ಆದರೆ ಅದನ್ನು ಕೇವಲ ಒಂದೇ ದಿಕ್ಕು ಹಾಗೂ ಒಂದೇ ಭಾಷೆಯ ಪಕ್ಷ ಎಂಬ ದೃಷ್ಟಿಯಲ್ಲಿ ನೋಡುವುದು ಹಾಗೂ ತೋರಿಸುವುದು ಆ ಪಕ್ಷಕ್ಕೆ ಅಪಾಯಕಾರಿಯಾಗಬಹುದು. ಬಿಜೆಪಿಯೂ ಅಧಿಕೃತವಾಗಿ ಸ್ವೀಕರಿಸದ ಈ ರೀತಿಯ ನಿರೂಪಣೆಯನ್ನು ಹಿಂದಿ ಮೀಡಿಯಾಗಳು ಬೇಕೆಂದೇ ಬಿಂಬಿಸುತ್ತಿವೆ. ಹಿಂದಿ ಪತ್ರಿಕೆಗಳು ತಮ್ಮ ಮುಖಪುಟದ ಹೆಡ್ ಲೈನ್ ಗಳಲ್ಲೇ ಹಿಂದಿ ಹಾರ್ಟ್‌ಲ್ಯಾಂಡ್‌, ಹಿಂದಿ ಪ್ರದೇಶ್, ಹಿಂದಿ ಪಟ್ಟಿ ಎಂಬ ಟ್ಯಾಗ್ಲೈನ್ ಹಾಕೋದು ಬಿಜೆಪಿಯ ಭರ್ಜರಿ ಗೆಲುವನ್ನು ಸಣ್ಣದಾಗಿ ತೋರಿಸಿದಂತೆ. ಇದು ವಿಜಯದ ಸಂಭ್ರಮದಲ್ಲಿ ಸೋಲಿನ ಸುಳಿವು ತೋರಿಸಿದ ಹಾಗೆ ಆಗಿದೆ.

ಬಿಜೆಪಿ ಹಾಗೂ ಅದರ ಸಿದ್ಧಾಂತದೊಳಗೆ ಮುಳುಗಿ ಬಿಟ್ಟಿರುವ ಮೀಡಿಯಾಗಳು ಕೇವಲ ಹಿಂದಿ ಭಾಷಿಕ ರಾಜ್ಯಗಳಲ್ಲೇ ಬಿಜೆಪಿಗೆ ಆಶ್ರಯ ಎಂದು ಮನಗಂಡಿವೆಯೇ? ಅವು ಬಿಜೆಪಿಯನ್ನು ಕೇವಲ ಹಿಂದಿ ಕನ್ನಡಕ ಇಟ್ಟುಕೊಂಡೇ ನೋಡಲಿವೆಯೇ? ಯಾವುದೇ ರಾಷ್ಟ್ರೀಯ ರಾಜಕೀಯ ಪಕ್ಷದ ಪ್ರಭಾವ ಸೀಮಿತವಾಗಿರುವ ಸಾಧ್ಯತೆ ಇದೆ. ಆದರೆ ಅದನ್ನು ಕೇವಲ ಒಂದೇ ದಿಕ್ಕು ಹಾಗೂ ಒಂದೇ ಭಾಷೆಯ ಪಕ್ಷ ಎಂಬ ದೃಷ್ಟಿಯಲ್ಲಿ ನೋಡುವುದು ಹಾಗೂ ತೋರಿಸುವುದು ಆ ಪಕ್ಷಕ್ಕೆ ಅಪಾಯಕಾರಿಯಾಗಬಹುದು.

ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಮಾಡಿದರೆ ತೆಲಂಗಾಣದ ಬಳಿಕ ಅವರನ್ನು ಹಾರ ಹಾಕಿ ಸ್ವಾಗತಿಸಲು ಶಿಮ್ಲಾದಲ್ಲೇ ಅವರ ಪಕ್ಷದ ಮುಖ್ಯಮಂತ್ರಿ ಸಿಗೋದು ಅಂತ ಒಬ್ಬ ಪತ್ರಕರ್ತ ಟ್ವೀಟ್ ಮಾಡಿದರು. ಆ ಲೆಕ್ಕದಲ್ಲಿ ನೋಡಿದರೆ ಪ್ರಧಾನಿ ಮೋದಿಯವರ ರಾಜಕೀಯ ಪ್ರಭಾವ ಕೇವಲ ಉತ್ತರ ಭಾರತಕ್ಕೆ ಸೀಮಿತ ಎಂದು ಹೇಳಬಹುದು ಎಂಬುದನ್ನು ಆ ಪತ್ರಕರ್ತ ಮರೆತುಬಿಟ್ಟರು. ಪ್ರಧಾನ ಮಂತ್ರಿಯಾಗಿದ್ದರೂ ಈ ಚುನಾವಣೆಯಲ್ಲಿ ಮೋದಿಯವರು ಮಿರೆರಾಂಗೆ ಚುನಾವಣಾ ಪ್ರಚಾರಕ್ಕೆ ಭೇಟಿ ನೀಡಲು ಆಗಲಿಲ್ಲ ಎಂಬುದನ್ನೂ ಆ ಪತ್ರಕರ್ತ ಮರೆತರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ರವೀಶ್ ಕುಮಾರ್

contributor

Similar News

ಭಾವ - ವಿಕಲ್ಪ
ಕಥೆಗಾರ