×
Ad

ಯುಎಇಯಲ್ಲಿ ಏಷ್ಯಾ ಕಪ್ ಟೂರ್ನಿ: ಸೆಪ್ಟೆಂಬರ್ 7ಕ್ಕೆ ಭಾರತ-ಪಾಕ್ ಹಣಾಹಣಿ

Update: 2025-07-02 07:55 IST

ಸಾಂದರ್ಭಿಕ ಚಿತ್ರ PC: x.com/toisports

ಬರ್ಮಿಂಗ್‌ಹ್ಯಾಂ: ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಸೆಪ್ಟೆಂಬರ್ 5ರಿಂದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಲಿದ್ದು, ಸೆಪ್ಟೆಂಬರ್ 21ರಂದು ಫೈನಲ್ ಪಂದ್ಯ ನಡೆಯಲಿದೆ.

17 ದಿನಗಳ ಟೂರ್ನಿಯ ವೇಳಾಪಟ್ಟಿ ಬಹುತೇಕ ಪೂರ್ಣಗೊಂಡಿದ್ದು, ಏಷ್ಯಾ ಕ್ರಿಕೆಟ್ ಮಂಡಳಿಯ ಆರಂಭಿಕ ವೇಳಾಪಟ್ಟಿಯ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಸೆಪ್ಟೆಂಬರ್ 7ರಂದು ನಡೆಯಲಿದೆ. ಟೂರ್ನಿಯ ಅಧಿಕೃತ ಆತಿಥ್ಯ ವಹಿಸುವ ಭಾರತ ಸೇರಿದಂತೆ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲ ರಾಷ್ಟ್ರಗಳು ಟೂರ್ನಿಯಲ್ಲಿ ಭಾಗವಹಿಸಲು ತಮ್ಮ ಸರ್ಕಾರಗಳಿಂದ ಅನುಮತಿ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ ಎಂದು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ.

ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಯುಎಇ ಟೂರ್ನಿಯಲ್ಲಿ ಭಾಗವಹಿಸಲಿದ್ದು, ಗುಂಪುಹಂತ ಮತ್ತು ಸೂಪರ್ ಫೋರ್ ವಿಧಾನದಲ್ಲಿ ಸ್ಪರ್ಧೆಗಳು ನಡೆಯಲಿವೆ. ಅಂದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಕಾಳಗವನ್ನು ಕ್ರಿಕೆಟ್ ಪ್ರೇಮಿಗಳು ಕನಿಷ್ಠ ಎರಡು ಬಾರಿ ವೀಕ್ಷಿಸಲು ಅವಕಾಶವಾಗಲಿದೆ ಎಂದು ಹೇಳಲಾಗುತ್ತಿದೆ. ಎರಡನೇ ಪಂದ್ಯ ಸೆಪ್ಟೆಂಬರ್ 14ರಂದು ನಡೆಯುವ ಸಾಧ್ಯತೆ ಇದೆ.

ಟೂರ್ನಿಯ ಪ್ರಚಾರ ಚಟುವಟಿಕೆಗಳು ಈಗಾಗಲೇ ಆರಂಭವಾಗಿದ್ದು, ಅಧಿಕೃತ ಪ್ರಸಾರ ಸಂಸ್ಥೆಯಾದ ಸೋನಿ, ಇತ್ತೀಚೆಗೆ ಟೂರ್ನಿಯ ಪೋಸ್ಟರ್ ಹಂಚಿಕೊಂಡಿದೆ. ಪಹಲ್ಗಾಮ್ ಘಟನೆ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ಏರ್ಪಟ್ಟ ಬಳಿಕ ಬಹುರಾಷ್ಟ್ರ ಟೂರ್ನಿಯಲ್ಲಿ ಎರಡೂ ದೇಶಗಳು ಭಾಗವಹಿಸುತ್ತಿರುವುದು ಇದೇ ಮೊದಲು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News