ಬಾಗಲಕೋಟೆ | ಭಾರಿ ಮಳೆ : ವಿವಿಧ ಬೆಳೆಗಳು ಜಲಾವೃತ
ಬಾಗಲಕೋಟೆ : ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ವಿವಿಧ ಬೆಳೆಗಳು ನೀರು ಪಾಲಾಗಿ, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಾಗಲಕೋಟೆ, ಮುಧೋಳ ಹಾಗೂ ಬಾದಾಮಿ ತಾಲೂಕುಗಳ ಸಾವಿರಾರು ಏಕರೆ ಪ್ರದೇಶಗಳಲ್ಲಿ ಬೆಳೆದ ಈರುಳ್ಳಿ ಬೆಳೆ ಸಂಪೂರ್ಣ ಜಲಾವೃತಗೊಂಡಿದ್ದು, ರೈತರು ಕಣ್ಣೀರು ಹಾಕುವಂತಾಗಿದೆ.
ಬಾಗಲಕೋಟೆ ತಾಲೂಕಿನ ಶೀಗಿಕೇರಿ, ನೀರಲಕೇರಿ, ಭಗವತಿ, ಹೊನ್ನಾಕಟ್ಟಿ ಸೇರಿ ಅನೇಕ ಗ್ರಾಮಗಳಲ್ಲಿ ಜಮೀನಿನಲ್ಲಿ ಹಾಕಿದ್ದ ಈರುಳ್ಳಿ ಬೆಳೆ ಮಳೆಯಿಂದ ಹಾನಿಗೊಳಗಾಗಿದೆ. ಮುಧೋಳ ತಾಲೂಕಿನ ಲೋಕಾಪೂರ ಹೊಬಳಿ ವ್ಯಾಪ್ತಿಯಲ್ಲಿಯೂ ಜಮೀನುಗಳಿಗೆ ಮಳಿನೀರು ನುಗ್ಗಿ ಬೆಳೆ ಹಾನಿಯಾಗಿದೆ.
ಸತತ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಬೆಳೆ ನೀರು ಪಾಲಾಗಿದ್ದು, ರೈತರಿಗೆ ಸಾಕಷ್ಟು ತೊಂದರೆ ಉಂಟಾಗಿದೆ. ಮುಧೋಳ ತಾಲೂಕಿನ ಬೊಮ್ಮನಗುದ್ನಿ, ಮೆಟಗುಡ್ಡ, ತಿಮ್ಮಾಪೂರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಬ್ಬಿನ ಜೊತೆಗೆ ಈರುಳ್ಳಿಯನ್ನೂ ಬೆಳೆಯಲಾಗಿತ್ತು. ಜಮೀನಿನಲ್ಲಿ ನೀರು ನಿಂತ ಪರಿಣಾಮ ಈರುಳ್ಳಿ ಹಾಳಾಗಿದೆ.
“ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ,” ಎಂದು ರೈತ ಬಸವರಾಜ ತಮ್ಮ ನೋವನ್ನು ಹಂಚಿಕೊಂಡರು.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನ ಹರಿಸಿ, ಹಾನಿಗೊಳಗಾದ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಧನ ನೀಡಬೇಕೆಂದು ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.