Bagalkote | ಮುಧೋಳದಲ್ಲಿ ರೈತರ ಆಕ್ರೋಶ; ಸಕ್ಕರೆ ಕಾರ್ಖಾನೆ ಬಳಿ ಕಬ್ಬು ತುಂಬಿದ್ದ ಹಲವು ಟ್ರ್ಯಾಕ್ಟರ್‌ಗಳಿಗೆ ಬೆಂಕಿ!
ಬಾಗಲಕೋಟೆ : ಜಿಲ್ಲೆಯ ಮಹಾಲಿಂಗಪುರ ಪಟ್ಟಣದ ಸಮೀಪ ಇರುವ ಗೋದಾವರಿ ಸಕ್ಕರೆ ಕಾರ್ಖಾನೆ ಬಳಿ ನಿಂತಿರುವ ಕಬ್ಬು ತುಂಬಿದ್ದ ಹಲವು ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿರುವ ಘಟನೆ ಗುರುವಾರ ಸಂಜೆ ನಡೆದಿರುವುದಾಗಿ ವರದಿಯಾಗಿದೆ.
ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆಯು ನಾಳೆಯಿಂದ ಪ್ರಾರಂಭ ಮಾಡಬೇಕು ಎಂಬ ಉದ್ದೇಶದಿಂದ ಸುಮಾರು, 150 ಟ್ರ್ಯಾಕ್ಟರ್ ಕಬ್ಬು ತುಂಬಿಸಿ ಇಡಲಾಗಿದೆ. ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯವರು ಹಿಂದಿನ ಬಾಕಿ ಹಣ ನೀಡುವ ಬಗ್ಗೆ ಚಕಾರ ಎತ್ತಿಲ್ಲ. ಮುಧೋಳ ಪಟ್ಟಣದಲ್ಲಿ ನಡೆಯುತ್ತಿರುವ ರೈತರ ಹೋರಾಟದಲ್ಲಿ ಭಾಗಿ ಆಗಿ ದರ ಘೋಷಣೆ ಮಾಡುವ ಜೊತೆಗೆ ಸಂಧಾನಕ್ಕೆ ಬರಲಿಲ್ಲ ಎಂಬುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ರೈತರು ಸಕ್ಕರೆ ಕಾರ್ಖಾನೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಆಗ ಸಾಲಾಗಿ ನಿಂತಿದ್ದ ಕಬ್ಬಿನ ಟ್ರಾಕ್ಟರ್‌ಗೆ ಕೆಲವರು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ಕಬ್ಬು ಬೆಳೆಗೆ ಏಕ ದರ ನಿಗದಿಗೊಳಿಸುವಂತೆ ಆಗ್ರಹಿಸಿ ನಡೆಯುತ್ತಿರುವ ರೈತರ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದೆ. ತಾಳ್ಮೆ ಕಳೆದುಕೊಂಡ ಕೆಲವರು, ಕಬ್ಬು ತುಂಬಿದ ಟ್ರ್ಯಾಕ್ಟರ್ ನೆಲಕ್ಕೆ ಉರುಳಿಸಿ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿ ಟನ್ ಗೆ 3,500 ರೂಗಳ ವರೆಗೆ ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಇಂದು ಸಹ ಮುಧೋಳ ಬಂದ್ ಮಾಡಲಾಗಿತ್ತು. ವಿವಿಧ ಗ್ರಾಮಗಳಿಂದ ಟ್ರ್ಯಾಕ್ಟರ್ ಮೂಲಕ ರೈತರು ಆಗಮಿಸಿ, ಬೃಹತ್ ಪ್ರತಿಭಟನೆ ನಡೆಸಿದರು. ವ್ಯಾಪಾರಸ್ಥರು ಸಹ ಅಂಗಡಿ ಮುಗ್ಗಟ್ಟು ಬಂದ್ ಮಾಡಿ, ಬೆಂಬಲ ನೀಡಿದ್ದಾರೆ.