ಬಾಗಲಕೋಟೆ | ʼಸನ್ಮಾನ ಬೇಡ, ಸವಲತ್ತು ಕೊಡಿʼ ; ಅಬಕಾರಿ ಸಚಿವರ ವಿರುದ್ಧ ವೇದಿಕೆಯಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿದ ವಿದ್ಯಾರ್ಥಿನಿ
ಬಾಗಲಕೋಟೆ : ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ಸ್ವಕ್ಷೇತ್ರದಲ್ಲಿ ವಿದ್ಯಾರ್ಥಿನಿಯೊಬ್ಬರು ಸಚಿವರ ವಿರುದ್ಧ ವೇದಿಕೆಯಲ್ಲಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಮುಧೋಳ ಮತಕ್ಷೇತ್ರದ ಹೆಬ್ಬಾಳ ಗ್ರಾಮದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿನಿಗೆ ಪಿಕೆಪಿಎಸ್ ಬ್ಯಾಂಕ್ ಆಡಳಿತ ಮಂಡಳಿ ವತಿಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಮಯದಲ್ಲಿ ವಿದ್ಯಾರ್ಥಿನಿ ಭಾಷಣ ಮಾಡುತ್ತಿದ್ದ ವೇಳೆ, ಉತ್ತಮ ಫಲಿತಾಂಶ ತೆಗೆದಿದ್ದರೂ ಹಾಸ್ಟೆಲ್‌ಗೆ ಆಯ್ಕೆಯಾಗದ ಹಿನ್ನಲೆ ಅಸಮಾಧಾನ ಹೂರಹಾಕಿದ್ದಾಳೆ.
ಎಸೆಸೆಲ್ಸಿಯಲ್ಲಿ ಶೇ.88ರಷ್ಟು ಅಂಕ ಪಡೆದಿರುವ ಐಶ್ವರ್ಯಾ ಪಾಯಗೊಂಡ ಎಂಬ ವಿದ್ಯಾರ್ಥಿನಿ ಹೆಚ್ಚಿನ ಅಂಕ ಪಡೆದರೂ ವಸತಿ ನಿಲಯ ಸಿಕ್ಕಿಲ್ಲ ಎಂದು ಬೇಸರದಿಂದ ಹೇಳಿದ್ದಾಳೆ.
ʼಬಿಸಿಎಂ ಹಾಸ್ಟೆಲ್‌ಗೆ ಅರ್ಜಿ ಸಲ್ಲಿಸಿದ್ದರೂ, ವಸತಿ ನಿಲಯಕ್ಕೆ ಆಯ್ಕೆ ಮಾಡಿಲ್ಲ. ನಾನು ಅತ್ಯಂತ ಬಡಕುಟುಂಬದ ಮಗಳು, ಕಷ್ಟ ಪಟ್ಟು ಓದಿ ಒಳ್ಳೆಯ ಅಂಕ ಪಡೆದಿದ್ದೇನೆ. ಆದರೂ ನನಗೆ ಹಾಸ್ಟೆಲ್ ಸೀಟ್ ಸಿಗಲಿಲ್ಲ . ಅಧಿಕಾರಿಗಳು ರಾಜಕೀಯ ನಾಯಕರ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ಹಾಸ್ಟೆಲ್ ವಿಚಾರವಾಗಿ ಅಧಿಕಾರಿಗಳನ್ನು ಕೇಳಿದರೆ, ಪರ್ಸೆಂಟೇಜ್ ಮಾಡಿದರೆ ಆಗಲ್ಲ, ತಿಮ್ಮಾಪುರ ಸಾಹೇಬ್ರು ಹೇಳಿದರೆ ಮಾತ್ರ ಆಯ್ಕೆ ಮಾಡ್ತೀವಿ ಎಂದು ಹೇಳಿದ್ದಾರೆ. ತಿಮ್ಮಾಪುರ ಸಾಹೇಬ್ರು ಆಫೀಸಿಗೆ ಹೋದರೆ ನಮ್ಮನ್ನು ಮಾತನಾಡಿಸಲೇ ಇಲ್ಲʼ ಎಂದು ವಿದ್ಯಾರ್ಥಿನಿ ಅಸಹಾಯಕತೆ ವ್ಯಕ್ತಪಡಿಸಿದ್ದಾಳೆ.
ʼಶೇ.50-55 ಮಾಡಿದವರು ಹಾಸ್ಟೆಲ್‌ಗೆ ಆಯ್ಕೆ ಆಗಿದ್ದಾರೆ. ಆದರೆ ನಾವು ಶೇ.90-95 ಮಾಡಿದದವರು ಬಸ್‌ನಲ್ಲಿ ತಿರುಗಾಡುತ್ತಿದ್ದೇವೆ. ಇಂತಹ ಕೆಟ್ಟ ರಾಜಕೀಯ ವ್ಯವಸ್ಥೆಯಲ್ಲಿ ಸಿಕ್ಕ ನಮ್ಮಂತ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆʼ ಎಂದು ವಿದ್ಯಾರ್ಥಿನಿ ಅಳಲು ತೋಡಿಕೊಂಡಿದ್ದಾಳೆ.
ʼನಮ್ಮ ಕನಸು ಕನಸಾಗಿಯೇ ಉಳಿಯುತ್ತಿದೆ. ನಮಗೆ ಸನ್ಮಾನ ಬೇಡ, ನಮಗೆ ಬೇಕಾದ ಸವಲತ್ತು ಕೊಡಿ ಸಾಕು. ನಾನು ಈ ಸನ್ಮಾನ ತಿರಸ್ಕರಿಸುತ್ತೇನೆʼ ಎಂದು ಬಹಿರಂಗ ಭಾಷಣದಲ್ಲಿ ಹೇಳಿದ್ದಾಳೆ.