ಡಿನ್ನರ್ ಪಾರ್ಟಿಗೂ, ಸಂಪುಟ ಪುನರ್ ರಚನೆಗೂ ಯಾವುದೇ ಸಂಬಂಧವಿಲ್ಲ: ಸಿಎಂ ಸಿದ್ದರಾಮಯ್ಯ
ಬಾಗಲಕೋಟೆ: ನವೆಂಬರ್ ನಲ್ಲಿ ಯಾವ ಕ್ರಾಂತಿನೂ ಇಲ್ಲ, ಭ್ರಾಂತಿನೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಬಂಡಿಗಣಿಯಲ್ಲಿ ಡಿನ್ನರ್ ಪಾರ್ಟಿ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡಿನ್ನರ್ ಪಾರ್ಟಿಗೂ, ಸಂಪುಟ ಪುನರ್ ರಚನೆಗೂ ಯಾವುದೇ ಸಂಬಂಧವಿಲ್ಲ.ನಾನು ಆಗಾಗ ಊಟ ಕೊಡ್ತಾ ಇರ್ತೀನಿ. ಊಟದಲ್ಲಿ ಏನೂ ಸ್ಪೆಷಲ್ ಇಲ್ಲ. ತಮಗೆ ಹಾಗೂ ಬಿಜೆಪಿಯವರಿಗೆ ಅದು ಸ್ಪೆಷಲ್ ಎಂದು ನಕ್ಕು ಸುಮ್ಮನಾದರು.
ಆರೆಸ್ಸೆಸ್ ಕಾರ್ಯಕ್ರಮಕ್ಕೆ ಸರ್ಕಾರಿ ಜಾಗ ಬಳಸಿಕೊಳ್ಳದಿರುವಂತೆ, ಪ್ರಿಯಾಂಕ್ ಖರ್ಗೆ ಪತ್ರ ಬರೆದ ವಿಚಾರವಾಗಿ ಮಾತನಾಡಿ, "ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಚೀಫ್ ಸೆಕ್ರೆಟರಿಗೆ ಸೂಚಿಸಿದ್ದೇನೆ. ತಮಿಳುನಾಡಿನಲ್ಲಿ ಯಾವ ರೀತಿ ಕ್ರಮ ಕೈಗೊಂಡಿದ್ದಾರೆ, ಆ ರೀತಿ ಕ್ರಮ ಕೈಗೊಳ್ಳಿ ಅಂತಾ ಪರಿಶೀಲಿಸುವಂತೆ ಸೂಚಿಸಿದ್ದೇನೆ ಎಂದರು.
ವಾಲ್ಮೀಕಿ ಸಮಾಜದವರಿಗೆ ಸಚಿವ ಸ್ಥಾನ ಕೊಡಬೇಕೆಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, "ಸರ್ಕಾರ ಅವರನ್ನು ತೆಗೆದು ಹಾಕಿಲ್ಲ. ಅವರೇ ರಾಜೀನಾಮೆ ಕೊಟ್ಟಿದ್ದಾರೆ, ಮುಂದಿನ ದಿನಗಳಲ್ಲಿ ಸಂಪುಟ ಪುನಾರಚನೆ ವೇಳೆ ಅವಕಾಶ ಕೊಡೋಣ" ಎಂದು ತಿಳಿಸಿದರು.