ಕೃಷಿ ಕಲ್ಪ ಪ್ರತಿಷ್ಠಾನದ ಜೊತೆಗಿನ ತಿಳಿವಳಿಕೆ (ಎಂಒಯು) ಪತ್ರಕ್ಕೆ ರಾಜ್ಯ ಸರಕಾರ ಅಂಕಿತ
ಬೆಂಗಳೂರು : ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಗ್ರಾಮೀಣ ನಾವೀನ್ಯತೆ ಮತ್ತು ಉದ್ಯಮಶೀಲತೆ ಬಲಪಡಿಸಲು ಕಲಬುರಗಿಯಲ್ಲಿ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ನಾವೀನ್ಯತೆಗೆ ಸಂಬಂಧಿಸಿದಂತೆ ಶ್ರೇಷ್ಠತೆಯ ಕೇಂದ್ರ (ಸಿಒಇ) ಸ್ಥಾಪಿಸಲು ರಾಜ್ಯ ಸರಕಾರವು ಕೃಷಿ ಕಲ್ಪ ಫೌಂಡೇಷನ್ ಜೊತೆಗೆ ತಿಳಿವಳಿಕೆ ಒಪ್ಪಂದ (ಎಂಒಯು) ಪತ್ರಕ್ಕೆ ಸಹಿ ಹಾಕಿದೆ.
ರಾಜ್ಯ ಸರಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು, ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕೆಐಟಿಎಸ್) ಮೂಲಕ ಈ ಒಪ್ಪಂದಕ್ಕೆ ಸೋಮವಾರ ನಗರದ ಕೆಐಟಿಎಸ್ ಕಚೇರಿಯಲ್ಲಿ ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸಮ್ಮುಖದಲ್ಲಿ ಸಹಿ ಹಾಕಿದೆ.
ರಾಜ್ಯ ಸರಕಾರದ ಪರವಾಗಿ ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕೆಐಟಿಎಸ್) ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ ಮತ್ತು ಈ ಉಪಕ್ರಮದ ಅನುಷ್ಠಾನ ಪಾಲುದಾರಿಕೆ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿರುವ ಕೃಷಿ ಕಲ್ಪ ಫೌಂಡೇಷನ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಂ.ಪಾಟೀಲ್ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಕಲ್ಯಾಣ ಕರ್ನಾಟಕವು ಕೃಷಿ ಮತ್ತು ಗ್ರಾಮೀಣ ಉದ್ಯಮದಲ್ಲಿ ನಾವೀನ್ಯತೆ ಕೇಂದ್ರವಾಗಿ ಹೊರಹೊಮ್ಮಲು ಅಪಾರ ಸಾಮಥ್ರ್ಯ ಹೊಂದಿದೆ. ಸ್ಥಳೀಯ ಆರ್ಥಿಕತೆಯ ವೇಗವರ್ಧಕ ಕಾರ್ಯಕ್ರಮದಡಿ (ಎಲ್‍ಇಎಪಿ-ಲೀಪ್), ರಾಜ್ಯ ಸರಕಾರವು ಬೆಂಗಳೂರಿನಾಚೆಗೆ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಉದ್ಯಮ ಅವಕಾಶಗಳನ್ನು ಸ್ಥಳೀಯ ಸಮುದಾಯಗಳಿಗೆ ಹತ್ತಿರ ತರಲು ಬದ್ಧವಾಗಿದೆ ಎಂದು ತಿಳಿಸಿದರು.
ಕಲಬುರಗಿಯಲ್ಲಿ ಸ್ಥಾಪನೆಗೊಳ್ಳಲಿರುವ ಶ್ರೇಷ್ಠತಾ ಕೇಂದ್ರವು ರೈತರು, ನವೋದ್ಯಮಗಳು, ಸಂಶೋಧಕರು ಮತ್ತು ಯುವ ನಾವೀನ್ಯಕಾರರು ಅತ್ಯಾಧುನಿಕ ಕೃಷಿ-ತಂತ್ರಜ್ಞಾನ ಪರಿಹಾರಗಳ ಜೊತೆ ಕಾರ್ಯನಿರ್ವಹಿಸಲು, ಜೀವನೋಪಾಯ ಬಲಪಡಿಸಿಕೊಳ್ಳಲು ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆ ಉತ್ತೇಜಿಸಲು ಸದೃಢ ವೇದಿಕೆಯನ್ನು ನಿರ್ಮಾಣ ಮಾಡಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಒಪ್ಪಂದದ ಮುಖ್ಯಾಂಶಗಳು: ಕೃಷಿ ಮತ್ತು ಸಂಬಂಧಿತ ವಲಯಗಳಿಗೆ ಗ್ರಾಮೀಣ ನಾವೀನ್ಯತೆ ಮತ್ತು ತಂತ್ರಜ್ಞಾನ-ನೇತೃತ್ವದ ಪರಿಹಾರಗಳ ಮೇಲೆ ಗಮನ ಕೇಂದ್ರೀಕರಿಸಿದ ಕೃಷಿ ಮತ್ತು ಸಂಬಂಧಿತ ನಾವೀನ್ಯತೆಯ ಶ್ರೇಷ್ಠತಾ ಕೇಂದ್ರದ ಸ್ಥಾಪನೆ.
ಬೆಂಗಳೂರಿನ ಆಚೆಗೆ ಪ್ರಾದೇಶಿಕ ನಾವೀನ್ಯತೆ ವ್ಯವಸ್ಥೆ ಬಲಪಡಿಸಲು ಐದು ವರ್ಷಗಳಲ್ಲಿ 1,000 ಕೋಟಿ ರೂ. ವೆಚ್ಚದ ‘ಲೀಪ್’ ಕಾರ್ಯಕ್ರಮದ ಅಡಿಯಲ್ಲಿ ಅನುಷ್ಠಾನ. ಐದು ವರ್ಷಗಳಲ್ಲಿ 90 ಕೋಟಿ ರೂ. ವೆಚ್ಚದಲ್ಲಿ ರಾಜ್ಯದಾದ್ಯಂತ ಆರು ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸುವುದು.
ಕೃಷಿ ಕಲ್ಪ ಫೌಂಡೇಷನ್ ಅನುಷ್ಠಾನ ಪಾಲುದಾರರಾಗಿ ಕಾರ್ಯನಿರ್ವಹಣೆ. ಶ್ರೇಷ್ಠತಾ ಕೇಂದ್ರದಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತಾ ಕಾರ್ಯಕ್ರಮಗಳನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿದೆ. ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕೆಐಟಿಎಸ್) ಐದು ವರ್ಷಗಳ ಅವಧಿಯಲ್ಲಿ 16.5 ಕೋಟಿ ರೂ.ನೆರವಿನ ಮೂಲಕ ಈ ಉಪಕ್ರಮವನ್ನು ಬೆಂಬಲಿಸಲಿದೆ.
ಇದರಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ (ಕೆಕೆಆರ್‍ಡಿಬಿ) ಮೂಲ ಸೌಕರ್ಯ ಅಭಿವೃದ್ಧಿಯ 4.5 ಕೋಟಿ ರೂ. ನೆರವು ಸೇರಿದೆ. ಅತ್ಯಾಧುನಿಕ ನಾವೀನ್ಯತಾ ಮೂಲಸೌಕರ್ಯಗಳ ಅಭಿವೃದ್ಧಿಯಡಿ ಅತ್ಯಾಧುನಿಕ ಕೃಷಿ ನಾವೀನ್ಯತೆ ಪ್ರಯೋಗಾಲಯಗಳು, 3ಡಿ ಮುದ್ರಣ ಮತ್ತು ಮೂಲಮಾದರಿ ಸೌಲಭ್ಯಗಳು, ತಯಾರಕರ ಪ್ರಯೋಗಾಲಯ, ಮಾಧ್ಯಮ ಮತ್ತು ವಿಷಯ ಪ್ರಯೋಗಾಲಯ ಸ್ಥಾಪನೆ.
ಕೃಷಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (ಎಐ) ನೆರವಿನ ಕೃಷಿ, ಕೃಷಿಗಾಗಿ ಐಒಟಿ, ರೋಬೊಟಿಕ್ಸ್, ಡಿಜಿಟಲ್ ಕೃಷಿ ವೇದಿಕೆಗಳು ಮತ್ತು ದತ್ತಾಂಶ-ಆಧಾರಿತ ಕೃಷಿ ತಂತ್ರಜ್ಞಾನಗಳು ಸೇರಿದಂತೆ ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿಯ ಮೇಲೆ ಗಮನ ಕೇಂದ್ರೀಕರಣ.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ತಂತ್ರಜ್ಞಾನ ಅಳವಡಿಕೆ ಮತ್ತು ಉದ್ಯಮ ಅಭಿವೃದ್ಧಿ ಕಾರ್ಯಗತಗೊಳಿಸುವ ನವೋದ್ಯಮಗಳು, ರೈತ ಉತ್ಪಾದಕ ಸಂಸ್ಥೆಗಳು (ಎಫ್‍ಪಿಒ), ಸ್ವ-ಸಹಾಯ ಗುಂಪುಗಳು (ಎಸ್‍ಎಚ್‍ಜಿ) ಮತ್ತು ಗ್ರಾಮೀಣ ನಾವೀನ್ಯಕಾರರಿಗೆ ಬೆಂಬಲ.
ಮಾರ್ಗದರ್ಶನ ಮತ್ತು ಅನುಷ್ಠಾನದ ಮೇಲ್ವಿಚಾರಣೆ ಮಾಡಲು ಆಡಳಿತ ಮಂಡಳಿ ಮತ್ತು ಮೇಲ್ವಿಚಾರಣಾ ಸಮಿತಿಯ ರಚನೆ, ಕಲ್ಯಾಣ ಕರ್ನಾಟಕ ಪ್ರದೇಶದಾದ್ಯಂತ ಉತ್ಪನ್ನ ಸ್ಟಾರ್ಟ್‍ಅಪ್‍ಗಳು, ನಾವೀನ್ಯಕಾರರು ಮತ್ತು ಗ್ರಾಮೀಣ ಉದ್ಯಮಿಗಳಿಗೆ ಈ ಶ್ರೇಷ್ಠತಾ ಕೇಂದ್ರವು ವೇಗವರ್ಧಕವಾಗಿ ಕಾರ್ಯನಿರ್ವಹಿಸಲಿದೆ.
ಕೃಷಿ ಮೌಲ್ಯ ಸರಪಳಿಯಾದ್ಯಂತ ಸವಾಲುಗಳನ್ನು ಎದುರಿಸುವ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ನೆರವಾಗಲಿದೆ. ಕೃಷಿ ಕಲ್ಪ ಪ್ರತಿμಷ್ಠಾನವು ಈ ಕೇಂದ್ರವನ್ನು ಕಾರ್ಯಗತಗೊಳಿಸಲಿದೆ.
ಈ ಸಮಾರಂಭದಲ್ಲಿ ಸರಕಾರದ ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಮಂಜುಳಾ ಎನ್., ಕೆಐಟಿಎಸ್‍ನ ಪ್ರಧಾನ ವ್ಯವಸ್ಥಾಪಕಿ ಅಪೂರ್ವ, ಕೃಷಿ ಕಲ್ಪ ಪ್ರತಿಷ್ಠಾನದ ಗ್ರಾಮೀಣ ಉದ್ಯಮಶೀಲತೆಯ ಉಪಾಧ್ಯಕ್ಷ ಈರಣ್ಣ, ಯುವ ಉದ್ಯಮಶೀಲತೆಯ ಮುಖ್ಯಸ್ಥ ಅಭಿನಂದನ್, ಕೆಐಟಿಎಸ್ ಮತ್ತು ಕೃಷಿ ಕಲ್ಪ ಪ್ರತಿಷ್ಠಾನದ ಅಧಿಕಾರಿಗಳು ಉಪಸ್ಥಿತರಿದ್ದರು.