ಮುಂದಿನ ಎರಡು ವರ್ಷಗಳಲ್ಲಿ ಐದು ಲಕ್ಷ ಸ್ವತ್ತುಗಳ ಪೋಡಿ ದುರಸ್ತಿ ಗುರಿ : ಕೃಷ್ಣ ಬೈರೇಗೌಡ
ಕಂದಾಯ ಸೇವೆಗಳ ಗ್ಯಾರಂಟಿ ಸಮರ್ಪಣಾ ಸಮಾವೇಶ
ಹೊಸಕೋಟೆ : ಪ್ರಸ್ತುತ ರಾಜ್ಯದಲ್ಲಿ 2 ಲಕ್ಷ 6 ಸಾವಿರ ಪೋಡಿ(ಒಂದು ಸರ್ವೇ ನಂಬರ್‌ನಲ್ಲಿ ಎರಡಕ್ಕಿಂತ ಹೆಚ್ಚು ಜನರ ಹೆಸರಿದ್ದರೆ ಅದನ್ನು ಪ್ರತ್ಯೇಕ ಹೆಸರು ಮಾಡುವುದು) ಪ್ರಕರಣಗಳನ್ನು ದುರಸ್ತಿ ಮಾಡಲಾಗಿದು, ಮುಂದಿನ ಎರಡು ವರ್ಷಗಳಲ್ಲಿ 5 ಲಕ್ಷ ಪೋಡಿ ದುರಸ್ತಿ ಮಾಡುವ ಗುರಿ ಹೊಂದಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಬುಧವಾರ ಹೊಸಕೋಟೆ ಟೌನ್‌ನ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸರಕಾರ ಬಂದು ಒಂದು ಸಾವಿರ ದಿನಗಳು ಪೂರೈಸಿದೆ. ಸರಕಾರದ ಸಾವಿರ ದಿನಗಳ ಕೆಲಸ ಸಮರ್ಪಣೆ ಮಾಡುವುದು ನಮ್ಮ ಉದ್ದೇಶ. ನಾವು ಏನು ಕೆಲಸ ಮಾಡಿದ್ದೇವೆ ಅದನ್ನು ನಿಮಗೆ ತೋರಿಸಬೇಕು ಎನ್ನುವ ಉದ್ದೇಶದಿಂದ ಸಮರ್ಪಣಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಇಂದಿರಾಗಾಂಧಿ, ದೇವರಾಜ ಅರಸು ಕಾಲದಲ್ಲಿ ರೈತರಿಗೆ ಮಂಜೂರು ಆಗಿದ್ದ ಜಮೀನುಗಳಗೆ ಪೋಡಿ, ಸ್ಕೆಚ್, ಕ್ರಯ, ಆಕಾರ್‌ಬಂದ್ ಆಗಿರಲಿಲ್ಲ. ದರಖಾಸ್ತು ಜಮೀನುಗಳು ಹಾಗೆ ಉಳಿದಿದ್ದವು. ದಾಖಲೆ ಇಲ್ಲ ಅಂದ್ರೆ ನೀವು ಆ ಜಮೀನು ಮೇಲೆ ಏನು ಮಾಡುವುದಕ್ಕೆ ಆಗುವುದಿಲ್ಲ, ಮಾಲಕತ್ವಕ್ಕೆ ಗ್ಯಾರಂಟಿ ಇರಲಿಲ್ಲ. ಪೋಡಿ ಮಾಡಲು ಹಿಂದಿನ ಸರಕಾರಗಳು ಆಸಕ್ತಿ ತೋರಿಸಿಲ್ಲ. ನಮ್ಮ ಸರಕಾರ ಬಂದ ಮೇಲೆ ಇಂತಹ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸರ್ವೇ, ಪೋಡಿ ದುರಸ್ತಿ, ಸ್ಕೆಚ್, ಪಹಣಿಯೊಂದಿಗೆ ಭೂ ಗ್ಯಾರಂಟಿ ತರಲಾಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ವರ್ಷ 1,238 ಪೋಡಿ ದುರಸ್ತಿ ಆಗಿತ್ತು, ಪ್ರಸ್ತುತ 4,238 ಪೋಡಿ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಅರ್ಜಿ ಕೊಡಿ, ಕಚೇರಿಗೆ ಬನ್ನಿ, ಮಧ್ಯವರ್ತಿಗಳ ಹಾವಳಿಗೆ ಅವಕಾಶ ನೀಡದೇ ಸ್ವಯಂ ಪ್ರೇರಿತರಾಗಿ ರೈತರ ಮನೆ ಬಾಗಿಲಿಗೆ ಪೋಡಿ ದುರಸ್ತಿ ಮಾಡಿಕೊಡಲಾಗಿದೆ. ಇದು ನಮ್ಮ ಗ್ಯಾರಂಟಿ ಎಂದರು.
49ಲಕ್ಷ ಖಾತೆಗಳು ಮೃತರ ಹೆಸರಿನಲ್ಲಿ ಇದೆ: ರಾಜ್ಯದಲ್ಲಿ ಮೃತರ ಹೆಸರಿನಲ್ಲಿ 49 ಲಕ್ಷ ಖಾತೆಗಳಿದ್ದವು. ಪ್ರಸ್ತುತ 13 ಲಕ್ಷ ಪೌತಿ ಖಾತೆಗಳನ್ನು ಮಾಡಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 14,000 ಪೌತಿ ಖಾತೆಗಳನ್ನು ಮಾಡಲಾಗಿದೆ. ಈ ವರ್ಷ ರಾಜ್ಯದಲ್ಲಿ 15 ಲಕ್ಷ ಪೌತಿ ಖಾತೆ ಮಾಡುವ ಗುರಿ ಹೊಂದಲಾಗಿದೆ. ನಮ್ಮ ಸರಕಾರ ಬಂದಾಗ ಆರಂಭದಲ್ಲಿ ತಹಶೀಲ್ದಾರ್, ಎಸಿ, ಡಿಸಿ ಕೋರ್ಟ್‌ಗಳಲ್ಲಿ ಸುಮಾರು 10,774 ಕೋರ್ಟ್ ಕೇಸ್‌ಗಳು ಬಾಕಿ ಉಳಿದಿದ್ದವು. ಈಗ ಕೇವಲ 488 ಬಾಕಿ ಇದೆ ಎಂದರು.
ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶದಲ್ಲಿ ಜಿಲ್ಲೆಯ 3,500 ದರಖಾಸ್ತು ಪೋಡಿ, 75 ಕಂದಾಯ ಗ್ರಾಮಗಳ ಹಕ್ಕುಪತ್ರ, 10,100 ಪೌತಿ ಖಾತೆ, 2,000 ಸಾಮಾಜಿಕ ಭದ್ರತೆಯ ಅಭಿಯಾನ ಸೇರಿ ಒಟ್ಟು 15,675 ಕಂದಾಯ ಸೇವೆಗಳ ದಾಖಲೆಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ನಾರಾಯಣಸ್ವಾಮಿ, ಎಂಎಲ್ಸಿ ರವಿ, ಪುಟ್ಟಣ್ಣ, ನೆಲಮಂಗಲ ಶಾಸಕ ಶ್ರೀನಿವಾಸ್, ದೊಡ್ಡಬಳ್ಳಾಪುರ ಮಾಜಿ ಶಾಸಕ ವೆಂಕಟರಮಣಸ್ವಾಮಿ, ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ರಾಜಣ್ಣ, ಜಿಲ್ಲಾಧಿಕಾರಿ ಡಾ.ಕೆ.ಎನ್‌ಅನುರಾಧ, ಎಡಿಸಿ ಸೈಯಿದಾ ಆಯಿಷಾ, ಹೊಸಕೋಟೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವ್ ಮೂರ್ತಿ, ಮತ್ತಿತರರು ಉಪಸ್ಥಿತರಿದ್ದರು.
75 ವರ್ಷಗಳಿಂದ ಸಾಕಷ್ಟು ರೈತರ ಭೂಮಿ ಪೋಡಿ, ಆಕಾರ್ ಬಂದ್, ಹಕ್ಕು ಪತ್ರ ಸಿಕ್ಕಿಲ್ಲ ಎಂಬ ಸಮಸ್ಯೆ ಇತ್ತು. ಇದನ್ನು ಬಗೆ ಹರಿಸುವ ನಿಟ್ಟಿನಲ್ಲಿ ನಮ್ಮ ಸರಕಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಮೂಲಕ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವಲ್ಲಿ ನಿರಂತರವಾಗಿ ಕೆಲಸ ಮಾಡಿ ಮನೆ ಮನೆಗೆ ಹಕ್ಕು ಪತ್ರ ನೀಡುವ ಕೆಲಸ ಮಾಡುತ್ತಿದ್ದಾರೆ.
-ಕೆ.ಎಚ್ ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಸಚಿವ, ಬೆಂಗಳೂರು ಗ್ರಾಮಾಂತರ
ಸರಕಾರದ ಕಾರ್ಯಕ್ರಮ, ಯೋಜನೆಗಳು ಸಮಾಜದ ಕೆಳವರ್ಗದ ಏಳಿಗೆಗಾಗಿ ಶ್ರಮಿಸುತ್ತಿದೆ. ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರು ಉಳುವವನಿಗೆ ಭೂಮಿ ಎಂದು ರೈತರ ಪರವಾಗಿ ಕ್ರಾಂತಿ ಮಾಡಿದರು. ಈಗ ಸಚಿವ ಕೃಷ್ಣ ಬೈರೇಗೌಡರು ಕಂದಾಯ ಇಲಾಖೆಯ ವತಿಯಿಂದ ಪೋಡಿ, ಪೌತಿಖಾತೆ, ಸಾಮಾಜಿಕ ಭದ್ರತಾ ಯೋಜನೆ ಹಾಗೂ ವಿವಿಧ ಯೋಜನೆಗಳ ಮೂಲಕ ಸಮಾಜದ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.
-ಶರತ್ ಬಚ್ಚೇಗೌಡ, ಶಾಸಕ, ಹೊಸಕೋಟೆ