×
Ad

ಸ್ವಾತಂತ್ರ್ಯ ದಿನಾಚರಣೆ : ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ

Update: 2025-08-15 21:40 IST

ಬೆಂಗಳೂರು, ಆ.15 : ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಎಪ್ಪತ್ತೊಂಬತ್ತನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಗಮನ ಸೆಳೆಯಿತು.

ಹಲವು ಜಿಲ್ಲೆ ಮತ್ತು ಗ್ರಾಮೀಣ ಭಾಗಗಳಿಂದ ಬಂದ ವಿದ್ಯಾರ್ಥಿಗಳು, ಯುವಜನರು ಹಾಗೂ ಮಹಿಳೆಯರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುವ ಮೂಲಕ ನಡೆಸಿಕೊಟ್ಟ ಸ್ವಾತಂತ್ರ್ಯ ದಿನಾಚರಣೆಯ ಸಾಂಸ್ಕೃತಿಕ ಸಂಭ್ರಮ ಹಬ್ಬದ ವಾತಾವರಣದಂತೆ ಪ್ರಜ್ವಲಗೊಂಡಿತ್ತು.

ಬೆಂಗಳೂರಿನ ಮಾನಸ ಹೊಳ್ಳ ಮತ್ತು ತಂಡವು ದೇಶ ಭಕ್ತಿಗೀತೆಯ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪದ್ಮಿನಿ ಅಚ್ಚಿ ಮತ್ತು ತಂಡದಿಂದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಮಾಡಿದ ‘ನೃತ್ಯ ರೂಪಕ’ ಪ್ರದರ್ಶನ ಪ್ರೇಕ್ಷಕರ ಮನಸೆಳೆಯಿತು. ಮೈಸೂರಿನ ಅಮ್ಮ ರಾಮಚಂದ್ರ ಮತ್ತು ತಂಡ ಜಾನಪದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು. ಉತ್ತರ ಕನ್ನಡದಿಂದ ಆಗಮಿಸಿದ್ದ ಲಿಲ್ಲಿ ಜಾಕಿ ಮತ್ತು ತಂಡವು ಮಾಡಿದ ಸಿದ್ದಿ ಕುಣಿತ ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲೆಯಿಂದ ಬಂದ ಶಿವರುದ್ರಪ್ಪ ವೀರಬಸಪ್ಪ ಬಡಿಗೇರ ಮತ್ತು ತಂಡದಿಂದ ವೀರಗಾಸೆ, ದಾವಣಗೆರೆ ಜಿಲ್ಲೆಯಿಂದ ಬಿಂದು.ಎಸ್ ಮತ್ತು ತಂಡದಿಂದ ಲಂಬಾಣಿ ನೃತ್ಯ, ವಿಜಯನಗರ ಜಿಲ್ಲೆಯ ಕೆ.ರಾಮು ಕಡ್ಡಿರಾಮಪುರ ಮತ್ತು ತಂಡದಿಂದ ಹಗಲುವೇಷ ಹಾಗೂ ಸುನೀಲ್ ಮತ್ತು ತಂಡದಿಂದ ಯಕ್ಷಗಾನ ಪ್ರದರ್ಶನವನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ. ಗಾಯತ್ರಿ, ಜಂಟಿ ಕಾರ್ಯದರ್ಶಿಗಳಾದ ಬಲವಂತರಾಯ ಪಾಟೀಲ್, ಬನಶಂಕರಿ ವಿ.ಅಂಗಡಿ ಮತ್ತು ಇಲಾಖೆಯ ಲಕ್ಷ್ಮೀದೇವಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News