×
Ad

ʼಶಿಕ್ಷಕರ ಫ್ರೀಡಂ ಪಾರ್ಕ್ ಚಲೋ’ ಮುಂದೂಡಿಕೆ

Update: 2025-08-29 19:47 IST

ಸಚಿವ ಮಧು ಬಂಗಾರಪ್ಪ

ಬೆಂಗಳೂರು, ಆ.29 : ಶುಕ್ರವಾರದಂದು ನಗರದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ನಡೆದ ಶಿಕ್ಷಕರ ಸಭೆಯು ಯಶಸ್ವಿಯಾಗಿದ್ದು, ಸೆ.3ರಂದು ‘ಫ್ರೀಡಂ ಪಾರ್ಕ್ ಚಲೋ ಹೋರಾಟ’ವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

2017ರ ವರೆಗೆ ನೇಮಕವಾದ ಶಿಕ್ಷಕರನ್ನು 1 ರಿಂದ 7ಕ್ಕೆ ನೇಮಕವಾದ ಶಿಕ್ಷಕರೆಂದು ಪರಿಗಣಿಸಿ, ಹೊಸ ವೃಂದ ಮತ್ತು ನೇಮಕಾತಿ ನಿಯಮಗಳು, 2017ರ ನಂತರ ನೇಮಕವಾದ ಶಿಕ್ಷಕರಿಗೆ ಅನ್ವಯಿಸಬೇಕು ಹಾಗೂ ಯಾವುದೇ ಕಾರಣಕ್ಕೂ 2016ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಪೂರ್ವಾನ್ವಯ ಗೊಳಿಸಬಾರದು ಎಂದು ಶಿಕ್ಷಕರು ಒತ್ತಾಯಿಸಿದ್ದಾರೆ.

ಸೇವಾನಿರತ ಶಿಕ್ಷಕರಲ್ಲಿ ಪದವಿ ಪೂರೈಸಿದ ಎಲ್ಲರಿಗೂ ಸೇವಾ ಜೇಷ್ಠತೆಯೊಂದಿಗೆ ವೇತನ ಬಡ್ತಿ ನೀಡಿ ‘ಪದವೀಧರ ಶಿಕ್ಷಕರೆಂದು’ ಪದನಾಮೀಕರಿಸಬೇಕು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ಪೂರ್ವದಂತೆ ಮುಖ್ಯ ಗುರುಗಳ ಹಾಗೂ ಹಿರಿಯ ಮುಖ್ಯ ಗುರುಗಳ ಹುದ್ದೆಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡಬೇಕು ಎಂದು ಶಿಕ್ಷಕರು ಒತ್ತಾಯಿಸಿದ್ದಾರೆ.

ಸಭೆಯಲ್ಲಿ ಸೆ.4ರಂದು ಶಿಕ್ಷಕರ ಬೇಡಿಕೆಗಳನ್ನು ಸಚಿವ ಸಂಪುಟದಲ್ಲಿಟ್ಟು ಸಮಸ್ಯೆ ಬಗೆಹರಿಸುವುದಾಗಿ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ. ಹೀಗಾಗಿ ಸೆ.3ರಂದು ಫ್ರೀಡಂಪಾರ್ಕ್ ಚಲೋ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News