×
Ad

ದೇವಾಲಯದ ವ್ಯಾಪ್ತಿಯಲ್ಲಿ ಮಾಂಸಾಹಾರ ಸೇವನೆ ನಿಷೇಧ ವಾಪಸ್ : ಹೈಕೋರ್ಟ್‌ಗೆ ಸರಕಾರ ಮಾಹಿತಿ

Update: 2025-09-10 23:28 IST

ಬೆಂಗಳೂರು, ಸೆ.10: ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಶಿವನಗೆರೆ ಗ್ರಾಮದ ಶ್ರೀ ಹೊನ್ನೇಶ್ವರಸ್ವಾಮಿ ದೇವಾಲಯದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಮಾಂಸಹಾರ ಸೇವನೆ ನಿಷೇಧಿಸಿ ಹೊರಡಿಸಲಾಗಿರುವ ನೋಟಿಸ್ ಹಿಂಪಡೆದು, ಪ್ರಾಣಿ ಬಲಿಯನ್ನು ಮಾತ್ರ ನಿರ್ಬಂಧಿಸಿ ಹೊಸದಾಗಿ ನೋಟಿಸ್ ಹೊರಡಿಸಲಾಗುವುದು ಎಂದು ಸರಕಾರ ಹೈಕೋರ್ಟ್‌ಗೆ ತಿಳಿಸಿದೆ.

ಮಾಂಸಹಾರ ಸೇವನೆ ನಿಷೇಧಿಸಿ ಬಡವನಹಳ್ಳಿ ಪೊಲೀಸ್ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ 2024ರ ಜುಲೈ 13ರಂದು ಹೊರಡಿಸಿರುವ ನೋಟಿಸ್ ಪ್ರಶ್ನಿಸಿ ಶ್ರೀಹೊನ್ನೇಶ್ವರಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಟ್ರಸ್ಟ್‌ನ ಅಧ್ಯಕ್ಷ ಜೆ.ಮಂಜುನಾಥ ಹಾಗೂ ದೇವಾಲಯದ ಗುರುಗಳಾದ ಜಿ.ಎಸ್.ರಾಮಚಂದ್ರ ಸ್ವಾಮಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಸರಕಾರದ ಪರ ನ್ಯಾಯಾವಾದಿ ಕೆ.ಪಿ.ಯಶೋಧ ಹಾಜರಾಗಿ, ದೇವಾಲಯದ 200 ಮೀಟರ್ ವ್ಯಾಪ್ತಿಯಲ್ಲಿ ಪ್ರಾಣಿವಧೆ ಹಾಗೂ ಮಾಂಸಾಹಾರ ಸೇವನೆ ನಿಷೇಧಿಸಿ ಈ ಹಿಂದೆ ಹೊರಡಿಸಲಾಗಿದ್ದ ನೋಟಿಸ್ ಹಿಂಪಡೆಯಲಾಗುವುದು. ದೇವಸ್ಥಾನದ ವ್ಯಾಪ್ತಿಯಲ್ಲಿ ಮಾಂಸಾಹಾರ ಸೇವನೆಗೆ ಯಾವುದೇ ನಿರ್ಬಂಧವಿಲ್ಲ. ಪ್ರಾಣಿ ಬಲಿಗೆ ಮಾತ್ರ ನಿಷೇಧ ಸೀಮಿತಗೊಳಿಸಿ, ಒಂದು ವಾರದೊಳಗೆ ಹೊಸದಾಗಿ ನೋಟಿಸ್ ಹೊರಡಿಸಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿ ಇತ್ಯರ್ಥಪಡಿಸಿತು.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಆರ್.ಎಸ್. ರವಿ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News